×
Ad

ಹೆಲ್ಮೆಟ್ ರಹಿತ ಪಯಣ: ದುಬಾರಿ ದಂಡ

Update: 2016-01-08 23:25 IST

ಹೆಲ್ಮೆಟ್ ಹೊಂದಿರದ ಸಹ ಸವಾರನಿಗೆ 100 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಅತ್ಯಂತ ಸಣ್ಣ ದಂಡ. ಅದೇ ಅಪಘಾತವಾಗಿ ಸಂಭವಿಸುವ ದುರಂತಕ್ಕೆ ಹೋಲಿಸಿದರೆ ಈ ನೂರು ರೂಪಾಯಿ ಏನೇನೂ ಅಲ್ಲ. ಒಂದು ವೇಳೆ ಹೆಲ್ಮೆಟ್ ಇಲ್ಲದೆ ಮೃತಪಟ್ಟರೆ, ಆತ ಅದಕ್ಕಾಗಿ ತೆತ್ತ ಬೆಲೆ ಎಷ್ಟು ದುಬಾರಿಯದಾಗಿರುತ್ತದೆ ಎನ್ನುವುದನ್ನೊಮ್ಮೆ ನಾವು ಯೋಚಿಸೋಣ. ಬರೇ ಇವನಷ್ಟೇ ಅಲ್ಲ, ತಪ್ಪು ಮಾಡದ ಆತ ತಂದೆ ತಾಯಿ, ಪತ್ನಿ, ಮಕ್ಕಳೂ ಕೂಡ ದಂಡ ತೆರಬೇಕಾಗುತ್ತದೆ. ಒಂದು ಬಾರಿ ಈತ ಮಾಡಿದ ತಪ್ಪಿಗೆ ಆತನ ಕುಟುಂಬ ಜೀವನ ಪೂರ್ತಿ ದಂಡ ತೆರುತ್ತಲೇ ಇರಬೇಕಾಗುತ್ತದೆ. ಇದಕ್ಕಿಂತ ಆತ ಹೆಲ್ಮೆಟ್ ಧರಿಸುವುದೇ ವಾಸಿಯಲ್ಲವೇ?

ನವಾಹನಗಳಿಗೆ ಸ್ಪೀಡ್ ಗವರ್ನರ್ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಆಗಾಗ ಚರ್ಚೆಯ ಕೇಂದ್ರ ಬಿಂದುವಾಗುತ್ತದೆ. ಲಾರಿ, ಬಸ್‌ಗಳಿಗೆ ಸ್ಪೀಡ್‌ಗವರ್ನರ್ ಹಾಕುವ ಸರಕಾರದ ಪ್ರಯತ್ನ ಕೊನೆಗೂ ಯಶಸ್ವಿಯಾಗಲೇ ಇಲ್ಲ. ಯಾಕೆಂದರೆ ಇದು ಕೇವಲ ರಾಜ್ಯ ಸರಕಾರವಷ್ಟೇ ನಿರ್ಧರಿಸುವ ವಿಷಯವಲ್ಲ. ಅಂತಾರಾಜ್ಯದಲ್ಲಿ ಓಡಾಡುವ ಘನ ವಾಹನಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಸ್ಪೀಡ್‌ಗವರ್ನರ್ ಕೇವಲ ರಾಜ್ಯದೊಳಗಿನ ವಾಹನಗಳಿಗಷ್ಟೇ ಸೀಮಿತವಾದರೆ, ಹೊರಗಿನಿಂದ ಬರುವ ವಾಹನಗಳ ವೇಗವನ್ನು ತಡೆಯುವುದು ಹೇಗೆ? ಎಂಬ ಪ್ರಶ್ನೆಯೂ ಎದುರಾಗುತ್ತದೆ.

ಇಂದು ರಸ್ತೆಗಳು ರಣರಂಗಕ್ಕಿಂತ ಭೀಕರವಾಗಿವೆ. ಒಂದೆಡೆ ಘನವಾಹನಗಳ ವೇಗ, ಮಗದೊಂದೆಡೆ ದ್ವಿಚಕ್ರ ವಾಹನ ಸವಾರರ ಬೇಜವಾಬ್ದಾರಿ ಇವೆರಡೂ ಕಾರಣಗಳಿಂದ ಪ್ರತಿ ದಿನ ರಸ್ತೆಗಳಲ್ಲಿ ರಕ್ತ ಹರಿಯುತ್ತಿವೆ. ಅಪಘಾತಗಳಲ್ಲಿ ಈ ಎರಡು ವರ್ಗಗಳ ಕೊಡುಗೆ ದೊಡ್ಡದಿದೆ. ಇದರಿಂದಾಗಿ ಅಕಾರಣವಾಗಿ ಅಮಾಯಕರೂ ತಮ್ಮ ಪ್ರಾಣವನ್ನು ತೆರುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಘನವಾಹನಗಳಿಗೂ, ದ್ವಿಚಕ್ರ ಸವಾರರಿಗೂ ಕಡಿವಾಣ ಹಾಕುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಈ ನಿಟ್ಟಿನಲ್ಲಿ ಘನವಾಹನಗಳಿಗೆ ಸ್ಪೀಡ್ ಗವರ್ನರ್‌ನ್ನು ಅಳವಡಿಸುವುದು ರಾಷ್ಟ್ರ ವ್ಯಾಪಿಯಾಗಿ ನಡೆಯಬೇಕು. ಇದೇ ಸಂದರ್ಭದಲ್ಲಿ ದ್ವಿಚಕ್ರವಾಹನಗಳಲ್ಲಿ ಕೂರುವ ಸಹ ಸವಾರನೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎನ್ನುವ ಕಾನೂನು ಇದೀಗ ಚರ್ಚೆಯಲ್ಲಿದೆ. ಇದರ ಹಿಂದೆ ಹೆಲ್ಮೆಟ್ ಕಂಪೆನಿಗಳ ಲಾಬಿ ಕೆಲಸ ಮಾಡಿದೆ ಎಂದೂ ಆರೋಪಿಸಲಾಗುತ್ತಿದೆ. ಆದರೆ ಇದರಲ್ಲಿ ಎಷ್ಟು ನಿಜ ಇದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇದೇ ಸಂದರ್ಭದಲ್ಲಿ, ಸಹ ಸವಾರರಿಗೆ ಹೆಲ್ಮೆಟ್ ಅಗತ್ಯವಿದೆಯೇ? ಎನ್ನುವ ಪ್ರಶ್ನೆಗೆ ನಾವು ಉತ್ತರ ಕಂಡು ಕೊಳ್ಳ ಬೇಕಾಗಿದೆ. ಅಗತ್ಯವೆಂದಾದರೆ, ನಾವು ಇನ್ನಿತರ ನೆಪಗಳನ್ನು ಮುಂದೊಡ್ಡಿ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವಂತಿಲ್ಲ. ದ್ವಿಚಕ್ರ ವಾಹನವನ್ನು ಚಲಾಯಿಸುವವನಿಗೆ ಹೆಲ್ಮೆಟ್ ಈಗಾಗಲೇ ಕಡ್ಡಾಯವಾಗಿದೆ. ಮತ್ತು ಅದರಲ್ಲಿ ಯಾರಿಗೂ ಆಕ್ಷೇಪಗಳೂ ಇಲ್ಲ. ಯಾವುದೇ ಅಪಘಾತದ ಸಂದರ್ಭದಲ್ಲಿ, ತಲೆಗೆ ಆಘಾತವಾಗುವುದರಿಂದ ಹೆಲ್ಮೆಟ್ ರಕ್ಷಿಸುತ್ತದೆ. ದ್ವಿಚಕ್ರವಾಹನಗಳಲ್ಲಿ ಅಪಘಾತದ ಸಾಧ್ಯತೆ ಅತ್ಯಧಿಕ. ಮತ್ತು ಆ ಅಪಘಾತದಲ್ಲಿ ನೇರವಾಗಿ ತಲೆಯೇ ಮೊದಲ ಬಲಿಪಶು.

ಅತ್ಯಂತ ಸೂಕ್ಷ್ಮವಾಗಿರುವ ಭಾಗ ಇದಾಗಿರುವುದರಿಂದ, ಹೆಲ್ಮೆಟ್ ತಲೆಯನ್ನು ರಕ್ಷಿಸುವ ಮೂಲಕ ಅವರ ಜೀವವನ್ನು ರಕ್ಷಿಸುತ್ತದೆ. ಕೈ ಕಾಲು ಮುರಿದರೂ ಅದನ್ನು ಸರಿಪಡಿಸಬಹುದು. ತಲೆಗೆ ಗಂಭೀರ ಏಟಾದಲ್ಲಿ, ಆತ ಜೀವಚ್ಛವವಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೆಲ್ಮೆಟ್‌ಗಳು ಈಗಾಗಲೇ ಲಕ್ಷಾಂತರ ಜನರ ಪ್ರಾಣವನ್ನು ಕಾಪಾಡಿದೆ. ಇನ್ನು ಸಹಸವಾರರ ಪ್ರಶ್ನೆ. ಅಪಘಾತ ಸಂಭವಿಸಿದರೆ ಚಾಲಕನಿಗೆ ಎಷ್ಟು ಅಪಾಯವಿದೆಯೋ ಅಷ್ಟೇ ಅಪಾಯ ಸಹಸವಾರನಿಗಿದೆ. ಅಥವಾ ಚಾಲಕನಿಗಿಂತಲೂ ಹೆಚ್ಚು ಅಪಾಯ ಸಹ ಸವಾರನಿಗಿದೆ ಎನ್ನುವುದು ತಜ್ಞರ ಅಭಿಪ್ರಾಯ. ಅನೇಕ ಅಪಘಾತಗಳಲ್ಲಿ ಚಾಲಕರು ಬದುಕುಳಿಯುತ್ತಾರೆ. ಆದರೆ ಸಹಸವಾರ ಮೃತಪಡುತ್ತಾನೆ. ಇದಕ್ಕೆ ಮುಖ್ಯ ಕಾರಣ, ಚಾಲಕ ಹೆಲ್ಮೆಟ್ ಧರಿಸಿರುತ್ತಾನೆ. ಆದರೆ ಸಹ ಸವಾರನಿಗೆ ಆ ಹೆಲ್ಮೆಟ್ ಕಡ್ಡಾಯವಿಲ್ಲ. ಹೆಲ್ಮೆಟ್ ಜೀವರಕ್ಷಕ ಕಾರಣಕ್ಕೆ ಧರಿಸುವುದು ಹೌದು ಎಂದಾದರೆ, ಸಹ ಸವಾರನಿಗೂ ಹೆಲ್ಮೆಟ್‌ನ್ನು ಕಡ್ಡಾಯ ಮಾಡಬೇಕಾಗುತ್ತದೆ. ಸಮಸ್ಯೆ ಇನ್ನೊಂದು ಹೆಲ್ಮೆಟ್‌ನ್ನು ಯಾರು ಹೊಂದಿರಬೇಕು? ಎನ್ನುವುದು. ಅದು ಬೈಕ್‌ನಲ್ಲಿ ಕೂರುವ ಸಹಸವಾರನ ಸಮಸ್ಯೆ. ಅದನ್ನು ಪರಿಹರಿಸಿಕೊಳ್ಳಬೇಕಾದ ಹೊಣೆಯೂ ಆತನದೇ. ಬೈಕ್ ಚಾಲಕನಿಗೆ ಸಹ ಸವಾರನನ್ನು ಕೂರಿಸಿಕೊಂಡು ಹೋಗುವುದು ಅನಿವಾರ್ಯ ಎಂದಾದರೆ, ಬೈಕ್ ಸವಾರನೇ ಎರಡು ಹೆಲ್ಮೆಟ್‌ಗಳನ್ನು ಹೊಂದುವುದು ಅಗತ್ಯವಾಗುತ್ತದೆ. ಸಂದರ್ಭ ಬಂದಾಗ ಅದನ್ನು ಸಹಸವಾರನಿಗೆ ನೀಡಬಹುದು. ಅಥವಾ ಸಹ ಸವಾರನನ್ನು ಬೈಕ್‌ನಲ್ಲಿ ಏರಿಸದೇ ಒಬ್ಬನೇ ಹೋಗುವುದು ಅವನ ಪಾಲಿಗೆ ಹೆಚ್ಚು ಒಳಿತು. ಇಲ್ಲವಾದರೆ, ತನ್ನ ತಲೆಯನ್ನು ಉಳಿಸಿಕೊಂಡು, ಪಕ್ಕದಲ್ಲಿರುವವನನ್ನು ಮರಣದ ಕಡೆಗೆ ಎಳೆದೊಯ್ದ ಪಾಪ ಸವಾರನನ್ನು ಸುತ್ತಿಕೊಳ್ಳುತ್ತದೆ. ಯಾವುದೇ ಅಪಘಾತದಲ್ಲಿ ಸಹ ಸವಾರ, ತಲೆಗೆ ಏಟಾಗಿ ಮೃತಪಟ್ಟರೆ ಅದರ ಹೊಣೆಯನ್ನು ಸಂಪೂರ್ಣ ಚಾಲಕನೇ ಹೊರಬೇಕಾಗುತ್ತದೆ. ಆದುದರಿಂದ ಒಂದೋ ತಾನೇ ಎರಡು ಹೆಲ್ಮೆಟ್‌ಗಳನ್ನು ಹೊಂದಿರಬೇಕು. ಅಥವಾ ಹೆಲ್ಮೆಟ್ ಇರುವ ಸವಾರನನ್ನಷ್ಟೇ ದ್ವಿಚಕ್ರದಲ್ಲಿ ಏರಿಸಿಕೊಳ್ಳಬೇಕು.

 ಹೆಲ್ಮೆಟ್ ಹೊಂದಿರದ ಸಹ ಸವಾರನಿಗೆ 100 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಅತ್ಯಂತ ಸಣ್ಣ ದಂಡ. ಅದೇ ಅಪಘಾತವಾಗಿ ಸಂಭವಿಸುವ ದುರಂತಕ್ಕೆ ಹೋಲಿಸಿದರೆ ಈ ನೂರು ರೂಪಾಯಿ ಏನೇನೂ ಅಲ್ಲ. ಒಂದು ವೇಳೆ ಹೆಲ್ಮೆಟ್ ಇಲ್ಲದೆ ಮೃತಪಟ್ಟರೆ, ಆತ ಅದಕ್ಕಾಗಿ ತೆತ್ತ ಬೆಲೆ ಎಷ್ಟು ದುಬಾರಿಯದಾಗಿರುತ್ತದೆ ಎನ್ನುವುದನ್ನೊಮ್ಮೆ ನಾವು ಯೋಚಿಸೋಣ. ಬರೇ ಇವನಷ್ಟೇ ಅಲ್ಲ, ತಪ್ಪು ಮಾಡದ ಆತ ತಂದೆ ತಾಯಿ, ಪತ್ನಿ, ಮಕ್ಕಳೂ ಕೂಡ ದಂಡ ತೆರಬೇಕಾಗುತ್ತದೆ. ಒಂದು ಬಾರಿ ಈತ ಮಾಡಿದ ತಪ್ಪಿಗೆ ಆತನ ಕುಟುಂಬ ಜೀವನ ಪೂರ್ತಿ ದಂಡ ತೆರುತ್ತಲೇ ಇರಬೇಕಾಗುತ್ತದೆ.

ಇದಕ್ಕಿಂತ ಆತ ಹೆಲ್ಮೆಟ್ ಧರಿಸುವುದೇ ವಾಸಿಯಲ್ಲವೇ? ಇಂದು ದ್ವಿಚಕ್ರ ವಾಹನಗಳನ್ನು ಬಳಸುವವರಲ್ಲಿ ವಿದ್ಯಾರ್ಥಿಗಳು, ಹದಿಹರೆಯದ ಯುವಕರೇ ಅಧಿಕ. ಅವರ ಪ್ರಾಯ, ಉನ್ಮಾದಗಳೇ ಹೆಚ್ಚಿನ ದುರಂತಕ್ಕೆ ಮೂಲ ಕಾರಣವಾಗಿದೆ. ದ್ವಿಚಕ್ರ ವಾಹನ ಅಪಘಾತಗಳಿಗೆ ಯುವಕರೇ ಅಧಿಕ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಇಂದು ಇದೇ ವರ್ಗದಿಂದ, ಹೆಲ್ಮೆಟ್ ಕುರಿತಂತೆ ಆಕ್ಷೇಪಗಳು ಕೇಳಿ ಬರುತ್ತಿವೆ. ಅವರನ್ನು ಸುಶಿಕ್ಷಿತರನ್ನಾಗಿಸುವ ಅಗತ್ಯವಿದೆ. ಪ್ರತಿ ಪೋಷಕರು ಈ ಹೊಣೆಯನ್ನು ಹೊತ್ತುಕೊಳ್ಳಬೇಕಾಗಿದೆ. ಹೆಲ್ಮೆಟ್‌ಗಳು ಅವರ ಪ್ರಾಣ ಮಿತ್ರ ಎನ್ನುವುದನ್ನು ಅವರಿಗೆ ಅರ್ಥ ಮಾಡಿಸಿದ ಬಳಿಕವೇ ಅವರಿಗೆ ಬೈಕ್‌ಗಳನ್ನು, ದ್ವಿಚಕ್ರವಾಹನಗಳನ್ನು ಪೋಷಕರು ಕೊಡಿಸಬೇಕು. ಇಲ್ಲವಾದರೆ, ತಮ್ಮ ಮಕ್ಕಳನ್ನು ಕೊಂದ ಪಾಪವನ್ನು ತಾವೇ ಹೊತ್ತುಕೊಳ್ಳಬೇಕಾದ ದುರ್ಬರ ಸನ್ನಿವೇಶಕ್ಕೆ ಮುಖಾಮುಖಿಯಾಗಬೇಕಾದ ಸಂದರ್ಭ ಬರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News