ಮುಪ್ಪು: ನಿರ್ವಹಣೆ ಹೇಗೆ?

Update: 2016-01-08 18:01 GMT

ಮುಪ್ಪು ಬಂದಾಗ ಅದನ್ನು ಒಪ್ಪಿಕೊಂಡು, ಇತಿಮಿತಿಗಳನ್ನು ಅರ್ಥ ಮಾಡಿಕೊಂಡು, ಜೀವನ ಶೈಲಿಯನ್ನು ಚಟುವಟಿಕೆಗಳನ್ನು ವ್ಯವಸ್ಥಿತಗೊಳಿಸುವ ವಾಸ್ತವಿಕ ದೃಷ್ಟಿ ಅಪೇಕ್ಷಣಿಯ. ಹಾಗೂ ಈ ವಾಸ್ತವಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪೂರ್ವ ಸಿದ್ಧತೆಯಿಂದ ಮುಪ್ಪನ್ನು ಸ್ವಾಗತಿಸುವುದರಿಂದ, ಅದು ಹೆದರಿಸುವ ಶತ್ರುವಾಗದೆ, ಸಮಾಧಾನ ಕೊಡುವ ಮಿತ್ರನಾಗುತ್ತದೆ.


ಭಾಗ-3

 ವ್ಯಕ್ತಿಗೆ ಮುಪ್ಪುಬಂದಾಗ ಆತ ಅದಕ್ಕೆ ತೋರುವ ಪ್ರತಿಕ್ರಿಯೆ ಮುಂದಿನ ಪರಿಸ್ಥಿತಿ, ಪರಿಣಾಮಗಳಿಗೆ ದಿಕ್ಸೂಚಿಯಾಗಬಲ್ಲದು. ಕೆಲವರು ಮುಪ್ಪನ್ನು ನಿರಾಕರಿಸುತ್ತಾರೆ. ತಮಗೆ ವಯಸ್ಸಾಗುತ್ತಿದೆ ಎಂದು ಒಪ್ಪುವುದಿಲ್ಲ. ತಮ್ಮ ನ್ಯೂನತೆಗಳನ್ನು ಗಮನಿಸದೆ, ಮುಂಚಿನ ಹರೆಯದ ಸಾಮರ್ಥ್ಯವಿದೆಯೆಂದು ಭ್ರಮಿಸಿ, ವಿವಿಧ ತೊಂದರೆಗಳಿಗೆ ತುತ್ತಾಗುತ್ತಾರೆ. ನಿಜಸ್ಥಿತಿಯನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಇವರು ಹೀಗೆ ಮಾಡಲು ಕಾರಣ, ಮುಪ್ಪಿನ ಬಗ್ಗೆ ಇರುವ ಅವ್ಯಕ್ತ ಭಯ. ಇನ್ನು ಕೆಲವರು ಅತಿಯಾದ ಆದರದಿಂದ ಮುಪ್ಪನ್ನು ಸ್ವಾಗತಿಸುತ್ತಾರೆ. ವೃದ್ಧಾಪ್ಯದ ಬಗ್ಗೆ ಜಂಬಕೊಚ್ಚುತ್ತಾರೆ. ನಮ್ಮ ಅನುಭವ, ಕೌಶಲಗಳು, ಬುದ್ಧಿವಂತಿಕೆ ನಿಮಗೆಲ್ಲಿ ಬರಬೇಕು? ಎಂದು ಚಿಕ್ಕವರನ್ನು ಗೇಲಿ ಮಾಡುತ್ತಾರೆ. ವಯಸ್ಸಿನ ಬಲದಿಂದ ತಾವು ಹೇಳಿದ್ದು, ಮಾಡಿದ್ದು ಪರಿಪೂರ್ಣ ಎಂದು ವಾದಿಸುತ್ತಾರೆ. ತಮ್ಮ ನ್ಯೂನತೆಗಳನ್ನು ಮರೆ ಮಾಡುತ್ತಾರೆ ಅಥವಾ ಉದಾಸೀನ ಮಾಡುತ್ತಾರೆ. ಚಿಕ್ಕವರೊಂದಿಗೆ ದ್ವೇಷ ಕಟ್ಟಿಕೊಳ್ಳುತ್ತಾರೆ. ಕಾಯಿಲೆಯಿಂದಲೋ, ನ್ಯೂನತೆಯಿಂದಲೋ ತೀರ ಅಸಹಾಯಕರಾದಾಗ ಅತೀವ ದುಃಖ, ನಿರಾಶೆಗೀಡಾಗುತ್ತಾರೆ. ಮತ್ತೆ ಕೆಲವರು ತಮ್ಮ ನ್ಯೂನತೆ, ದುರ್ಬಲ ಸ್ಥಿತಿಗೆ ಇತರರನ್ನು, ವ್ಯವಸ್ಥೆಯನ್ನು, ಅದೃಷ್ಟವನ್ನು ದೂರುತ್ತಾರೆ. ಹೀಗೆ ಮುಪ್ಪಿನ ಬಗ್ಗೆ ಅವಾಸ್ತವಿಕ ದೃಷ್ಟಿ ಇಟ್ಟುಕೊಳ್ಳುವುದು ಕ್ಷೇಮವಲ್ಲ. ಮುಪ್ಪು ಬಂದಾಗ ಅದನ್ನು ಒಪ್ಪಿಕೊಂಡು, ಇತಿಮಿತಿಗಳನ್ನು ಅರ್ಥ ಮಾಡಿಕೊಂಡು, ಜೀವನ ಶೈಲಿಯನ್ನು ಚಟುವಟಿಕೆಗಳನ್ನು ವ್ಯವಸ್ಥಿತಗೊಳಿಸುವ ವಾಸ್ತವಿಕ ದೃಷ್ಟಿ ಅಪೇಕ್ಷಣಿಯ. ಹಾಗೂ ಈ ವಾಸ್ತವಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪೂರ್ವ ಸಿದ್ಧತೆಯಿಂದ ಮುಪ್ಪನ್ನು ಸ್ವಾಗತಿಸುವುದರಿಂದ, ಅದು ಹೆದರಿಸುವ ಶತ್ರುವಾಗದೆ, ಸಮಾಧಾನ ಕೊಡುವ ಮಿತ್ರನಾಗುತ್ತದೆ.
ಕುಟುಂಬದ ದೃಷ್ಟಿಕೋನ :
ವೃದ್ಧಾಪ್ಯಕ್ಕೆ ಕಾಲಿಡುವ ವ್ಯಕ್ತಿಯ ಬಗ್ಗೆ ಮನೆಯವರ ಪ್ರತಿಕ್ರಿಯೆ ಹಾಗೂ ಆತನನ್ನು ಅವರೆಲ್ಲ ಹೇಗೆ ಕಾಣುತ್ತಾರೆ ಎನ್ನುವುದರ ಮೇಲೆ ಆತನ ಹೊಂದಾಣಿಕೆ ನಿರ್ಧಾರವಾಗುತ್ತದೆ. ಮುದುಕರನ್ನು ಅನುಪಯುಕ್ತ, ನಮಗೆ ಹೊರೆ ಎಂದು ಮನೆಯವರು ಆತನನ್ನು ತಿರಸ್ಕರಿಸಿದರೆ ಅಥವಾ ಕೈಲಾಗದವ ಆತನನ್ನು ಮಗುವಿನಂತೆ ನೋಡಿಕೊಳ್ಳೋಣ ಎಂದು ಅತಿ ಉಪಚಾರ ಮಾಡಿದರೆ, ವ್ಯಕ್ತಿ ಆರೋಗ್ಯಕರ ಹೊಂದಾಣಿಕೆ ಸಾಧಿಸಲಾರ. ಆದ್ದರಿಂದ ಕುಟುಂಬ ದವರೂ ವಾಸ್ತವಿಕ ದೃಷ್ಟಿಯಿಂದ ಅವರನ್ನು ಕಂಡು, ಆತ/ಆಕೆಯ ಇತಿಮಿತಿಗಳನ್ನು ಅರಿತುಕೊಂಡು ಅವರು ಆದಷ್ಟು ಸ್ವತಂತ್ರನಾಗಿ, ಸ್ವಾವಲಂಬಿಯಾಗಿ ಬಾಳಲು ಅವಕಾಶ ಮಾಡಿಕೊಡಬೇಕು. ಮನೆಯಲ್ಲಿ ಆತನಿಗೆ ಸ್ಥಾನಮಾನವನ್ನು ನೀಡಿ, ಆತನ ಅಳಿದುಳಿದ ಸಾಮರ್ಥ್ಯಗಳ ಪೂರ್ಣ ಪ್ರಯೋಜನವನ್ನು ಪಡೆಯಬೇಕು.
 ಸಮಾಜದ ದೃಷ್ಟಿಕೋನ
ಯಾವ ಸಮಾಜದಲ್ಲಿ ಅಥವಾ ಸಂಸ್ಕೃತಿಯಲ್ಲಿ ವೃದ್ಧರಿಗೆ ಸ್ಥಾನಮಾನಗಳು, ಮಾನ್ಯತೆ ಮರ್ಯಾದೆಗಳು, ಸಹಾಯ ಸೌಲಭ್ಯಗಳು ಇವೆಯೋ, ಅಲ್ಲಿ ವೃದ್ಧರು ಹಲವಾರು ನ್ಯೂನತೆಗಳಿದ್ದಾಗ್ಯೂ, ಸಂತೋಷವಾಗಿರುತ್ತಾರೆ.
ವ್ಯಕ್ತಿಯ ಆರೋಗ್ಯ ಸ್ಥಿತಿ:
ವ್ಯಕ್ತಿ ಎಷ್ಟು ಆರೋಗ್ಯವಾಗಿದ್ದಾನೆ ಎಂಬುದು, ಆತ ಮುಪ್ಪುಬಂದಾಗ ಎಷ್ಟರ ಮಟ್ಟಿಗೆ ಹೊಸ ಸ್ಥಿತಿಗೆ ಹೊಂದಿಕೊಳ್ಳಬಲ್ಲ ಎಂಬುದನ್ನು ನಿರ್ಧರಿಸುತ್ತದೆ. ವಾಸಿಯಾಗದ, ದೀರ್ಘಕಾಲ ಕಾಯಿಲೆಗೆ ಒಳಗಾದ ವ್ಯಕ್ತಿ ಸಹಜವಾಗಿ, ವಯಸ್ಸಾದಾಗ ಹೊಂದಿಕೊಳ್ಳಲಾಗದೆ ಹೆಚ್ಚು ನರಳುತ್ತಾನೆ.

ಮುಪ್ಪುಮತ್ತು ಸಾಮಾಜಿಕ ಬದಲಾವಣೆ
ಯಾವುದೇ ಸಮಾಜದಲ್ಲಿ, ವೃದ್ಧರು ಎದುರಿಸ ಬೇಕಾಗಿ ಬರುವ ಸಮಸ್ಯೆಗಳು ಹಲವಾರು. ಇವರ ದೈಹಿಕ, ಮಾನಸಿಕ ಆರೋಗ್ಯವನ್ನು ನಿರ್ಧರಿಸುತ್ತವೆ.
1. ನಿರುದ್ಯೋಗ, ಹಣಕಾಸಿನ ತೊಂದರೆಗಳು:
ವೃದ್ಧಾಪ್ಯ ಕಾಲಿಡುವ ಮೊದಲೇ, ನಿರು ದ್ಯೋಗ ವ್ಯಕ್ತಿಯನ್ನು ಕಾಡುತ್ತದೆ. 55 ಅಥವಾ 58ವರ್ಷಕ್ಕೆ, ಉದ್ಯೋಗದಲ್ಲಿರುವ ವ್ಯಕ್ತಿ ನಿವೃತ್ತ ನಾಗಿ ನಿರುದ್ಯೋಗಿಯಾಗುತ್ತಾನೆ. ನಿವೃತ್ತಿಯಾಗದ ವೃತ್ತಿಗಳಲ್ಲಿರುವವರು ಹಲವು ಕಾರಣದಿಂದ, ಮಾಡುವ ವೃತ್ತಿಯನ್ನು ಬಿಡುತ್ತಾರೆ. 1971ರ ಜನಗಣತಿಯಂತೆ ಶೇ. 43ರಷ್ಟು ವೃದ್ಧರು ಮಾತ್ರ ಒಂದಲ್ಲ ಒಂದು ಕೆಲಸ (ಮನೆಗೆಲಸ ಸೇರಿ) ದಲ್ಲಿದ್ದರು. ಉಳಿದವರಿಗೆ ಕೆಲಸವಿರಲಿಲ್ಲ. ಇದರಿಂದ ವೃದ್ಧರ ಆದಾಯ ಕಡಿಮೆಯಾಗುತ್ತದೆ ಅಥವಾ ನಿಂತೇ ಹೋಗುತ್ತದೆ. ಸಂಪಾದಿಸದ ವ್ಯಕ್ತಿಗೆ ಬಹಳ ನೋವುಂಟು ಮಾಡುತ್ತದೆ. ಅದುವರೆಗೆ ಸಂಪಾದಿಸಿ, ಮನೆಯ ಯಜಮಾನನಾಗಿ ಮೆರೆದವನಿಗೆ, ದಿನ ಖರ್ಚಿಗೆ, ಮಕ್ಕಳನ್ನು ಕೇಳಬೇಕಾದರೆ, ಆಗುವ ಯಾತನೆ ಅವರ್ಣನೀಯ. ಅವಿಭಕ್ತ ಕುಟುಂಬಗಳು ಕ್ಷೀಣಿಸುತ್ತಿರುವ ನಮ್ಮ ಸಮಾಜದಲ್ಲಿ ವೃದ್ಧರು ಬೀದಿಪಾಲಾಗುತ್ತಿದ್ದಾರೆ, ಅನಾಥರಾಗುತ್ತಿದ್ದಾರೆ.
2. ಒಂಟಿತನ:
ಮುಪ್ಪಿನಲ್ಲಿ ಜೀವನ ಸಂಗಾತಿಯನ್ನು ಕಳೆದುಕೊಂಡ ವೃದ್ಧ ವಿಧುರ ಅಥವಾ ವಿಧವೆಯರ ಸಂಖ್ಯೆ ಅಪರಿಮಿತ. 1971ರ ಅಂಕಿ ಅಂಶಗಳ ಪ್ರಕಾರ, 60ರಷ್ಟು ಮೇಲ್ಪಟ್ಟ ವೃದ್ಧ ಮಹಿಳೆಯರಲ್ಲಿ ಶೇಕಡಾ 62 ರಿಂದ 82ರವರೆಗೆ ವಿಧವೆಯರಿದ್ದರು ಎಂದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತದೆ. ಜೊತೆಗೆ ದೈಹಿಕ ಹಾಗೂ ಮಾನಸಿಕ ಬದಲಾವಣೆ, ಇತಿ ಮಿತಿಗಳಿಂದ ಅವರಿಗೆ ಯುವ ಜನಾಂಗದ ಹೊಸ ವಿಚಾರಗಳು, ದೃಷ್ಟಿಕೋನಗಳು ಅರ್ಥವಾಗದೆ, ಹೊಂದಿಕೊಳ್ಳಲಾಗುವುದಿಲ್ಲ. ಅವರೊಂದಿಗೆ ಸ್ಪರ್ಧಿಸುವ ಮಾತಂತೂ ದೂರವೇ ಉಳಿಯುತ್ತದೆ. ವೃದ್ಧರ ಬದಲಾಗದ ನಿಲುವು, ಹಠಮಾರಿತನವನ್ನು ಕಂಡು ಉಳಿದವರು ಅವರಿಂದ ದೂರವಾಗುತ್ತಾರೆ. ತಮ್ಮ ಜೊತೆ ವಯಸ್ಸಿನವರು ಒಬ್ಬೊಬ್ಬರಾಗಿ ದುರ್ಬಲರಾಗುತ್ತಾ ಹೊರಗಡೆ ಬರದೆ ಅಥವಾ ಸತ್ತು ಮರೆಯಾಗುವುದರಿಂದ ಜೊತೆಗಾರರಿಲ್ಲದೆ ವೃದ್ಧರು ಒಂಟಿಯಾಗುತ್ತಾರೆ.

Similar News