×
Ad

ಎಸ್ಸಿ-ಎಸ್ಟಿ ಉದ್ಯೋಗಿಗಳ ಭಡ್ತಿ ತೀರ್ಪಿನಲ್ಲಿ ಪ್ರಮಾದ: ಒಪ್ಪಿಕೊಂಡ ಸುಪ್ರೀಂ

Update: 2016-01-09 00:04 IST


 ಹೊಸದಿಲ್ಲಿ,ಜ.8: ಬ್ಯಾಂಕ್‌ಗಳಲ್ಲಿ ಮಾಸಿಕ 5,700 ರೂ.ಗಿಂತ ಕಡಿಮೆ ವೇತನದ ಗ್ರೂಪ್‌ಎ ಹುದ್ದೆಗಳಲ್ಲಿ ಎಸ್‌ಸಿ/ಎಸ್‌ಟಿ ಶ್ರೇಣಿಯ ಉದ್ಯೋಗಿಗಳಿಗೆ ವಿಸ್ತರಿಸಲಾದ ಭಡ್ತಿ ಮೀಸಲಾತಿ ಸೌಲಭ್ಯಗಳಿಗೆ ಸಂಬಂಧಿಸಿ ಕಳೆದ ವರ್ಷ ನೀಡಲಾದ ತೀರ್ಪಿನಲ್ಲಿ ಲೋಪವಿರುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ.
ತಪ್ಪಾಗಿರುವ ತೀರ್ಪಿನ ಪ್ಯಾರಾಗಳನ್ನು ತೆಗೆದುಹಾಕುವಂತೆ, ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ್ ಹಾಗೂ ಎ.ಕೆ.ಸಿಕ್ರಿ ಅವರನ್ನೊಳಗೊಂಡ ನ್ಯಾಯಪೀಠವು ತಿಳಿಸಿದೆ.
ಸುಪ್ರೀಂಕೋರ್ಟ್ ಕಳೆದ ವರ್ಷ ನೀಡಿದ ತೀರ್ಪಿನಲ್ಲಿ ಎಸ್‌ಸಿ/ಎಸ್‌ಟಿ ಉದ್ಯೋಗಿಗಳಿಗೆ ಭಡ್ತಿಯಲ್ಲಿ ಮೀಸಲಾತಿಯನ್ನು ನೀಡುವುದಕ್ಕೆ ಅವಕಾಶವಿದೆಯೆಂದು ಅಭಿಪ್ರಾಯಿಸಿತ್ತು. ಆದರೆ ತೀರ್ಪಿನ ಕಾರ್ಯಕಾರಿ ಭಾಗದಲ್ಲಿ ಮಾತ್ರ 5,700ಕ್ಕಿಂತ ಕಡಿಮೆ ವೇತನದ ಉದ್ಯೋಗಿಗಳಿಗೆ ಮೀಸಲಾತಿಯ ಸೌಲಭ್ಯವಿಲ್ಲವೆಂದು ವ್ಯತಿರಿಕ್ತ ಅಭಿಪ್ರಾಯವನ್ನು ನೀಡಿದ್ದು ಗೊಂದಲಕ್ಕೆ ಕಾರಣವಾಗಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ಇಂದು ಈ ಬಗ್ಗೆ ಸ್ಪಷ್ಟೀಕರಣ ನೀಡಿದ ನ್ಯಾಯಪೀಠವು 5,700ಕ್ಕಿಂತ ಕಡಿಮೆ ವೇತನದ ಉದ್ಯೋಗಿಗಳಿಗೆ ಭಡ್ತಿಗಾಗಿ ಮೀಸಲಾತಿಯ ಸೌಲಭ್ಯವಿಲ್ಲ. ಆದರೆ ಇಂತಹ ಪ್ರಕರಣಗಳಲ್ಲಿ ರಿಯಾಯಿತಿಯನ್ನು ನೀಡಲು ಅವಕಾಶವಿದೆಯೆಂದು ಅದು ಹೇಳಿದೆ. ಕಳೆದ ವರ್ಷದ ಜನವರಿ 9ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ, ಸರಕಾರವು ಎಸ್‌ಸಿ/ ಎಸ್‌ಟಿ ಶ್ರೇಣಿಯ ನೌಕರರಿಗೆ ಭಡ್ತಿಯಲ್ಲೂ ಮೀಸಲಾತಿ ನೀಡುವುದಕ್ಕೆ ಸಂವಿಧಾನವು ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಬಗ್ಗೆ ನಿಯಮವನ್ನು ರೂಪಿಸುವಂತೆ ಸರಕಾರಕ್ಕೆ ಆದೇಶಿಸಲು ನ್ಯಾಯಾಲಯಗಳಿಗೆ ಸಾಧ್ಯವಿಲ್ಲವೆಂದು ತಿಳಿಸಿತ್ತು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News