×
Ad

ಅಭಿವೃದ್ಧಿಗೆ ಬಲಿಯಾದ ಕೆರೆಗಳು

Update: 2016-01-11 23:07 IST

ಇಂದು ಸರಕಾರ, ಕೆರೆಗಳ ಹೂಳನ್ನು ಎತ್ತುವ ಮಾತನ್ನಾಡುತ್ತಿವೆ. ಅದಕ್ಕಾಗಿ ಯೋಜನೆಗಳನ್ನು ರೂಪಿಸುವುದಕ್ಕೂ ಹೊರಟಿದೆ. ಕೆರೆಗಳೇ ಇಲ್ಲವೆಂದಾದ ಮೇಲೆ ಕೆರೆಗಳ ಹೂಳನ್ನು ಎತ್ತುವ ಪ್ರಶ್ನೆ ಎಲ್ಲಿ ಬಂತು? ಇಂದು ಕೆರೆಗಳ ಹೂಳನ್ನೆತ್ತ ಬೇಕಾಗಿರುವುದಲ್ಲ ಕೆರೆಗಳ ಮೇಲೆ ಮುಗಿಲೆತ್ತರ ನಿಂತಿರುವ ಕಟ್ಟಡಗಳನ್ನೇ ಎತ್ತಬೇಕಾಗಿದೆ. ಇರುವ ಕೆರೆಗಳನ್ನೇ ನಿರ್ಲಕ್ಷಿಸಿರುವ ಸರಕಾರ, ಕೆರೆಗಳ ಮೇಲೆ ನಿಂತಿರುವ ಕಟ್ಟಡಗಳ ತಂಟೆಗೆ ಹೋಗುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟ ಸಾಧ್ಯ. ಕೆರೆಗಳನ್ನು ಒತ್ತುವರಿ ಮಾಡಿಕೊಂಡವರು ಎರಡೆರಡು ದ್ರೋಹಗಳನ್ನು ಎಸಗಿದ್ದಾರೆ. ಒಂದು ಸಾರ್ವಜನಿಕ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡು ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಂಡಿರುವುದು. ಮಗದೊಂದು, ಜೀವದ ಒರತೆಗೆ ಕಾರಣವಾಗುವ ಕೆರೆಗಳನ್ನು ನಾಶ ಮಾಡಿರುವುದು. ‘‘ಆ

 ನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ’ ಎನ್ನುವುದು ಶತಮಾನಗಳ ಹಿಂದಿನಷ್ಟು ಹಳೆಯ ಗಾದೆ ಮಾತು. ಗ್ರಾಮೀಣ ಜನರು ಈ ಗಾದೆಯನ್ನು ಜೀವನ ವೌಲ್ಯವಾಗಿ ಪಾಲಿಸಿಕೊಂಡು ಬಂದಿದ್ದಾರೆ. ಅವರ ಆತ್ಮಗೌರವ, ಅವರು ಕಾಪಾಡಿಕೊಂಡು ಬಂದ ವ್ಯಕ್ತಿತ್ವವನ್ನು ಇದು ಎತ್ತಿ ಹಿಡಿಯುತ್ತದೆ. ವಸ್ತುವಿನ ಗಾತ್ರ, ಬೆಲೆ ಎಷ್ಟೇ ಇರಲಿ, ಕದಿಯುವುದು ತಪ್ಪು ಎಂದ ಮೇಲೆ ಅದು ಸಣ್ಣದಾದರೂ, ದೊಡ್ಡದಾದರೂ ಕಳ್ಳತನವೇ. ಅವನು ಕಳ್ಳನೇ ಆಗಿರುತ್ತಾನೆ ಎನ್ನುವುದನ್ನು ಮೇಲಿನ ಗಾದೆ ವ್ಯಾಖ್ಯಾನಿಸುತ್ತದೆ. ಇದೇ ಸಂದರ್ಭದಲ್ಲಿ ಝೆನ್ ಮಾತೊಂದಿದೆ. ‘ಅಡಿಕೆ ಕದ್ದವ ಕಳ್ಳ, ಭೂಮಿ ಕದ್ದವ ಅರಸ’. ಇದೊಂದು ವ್ಯಂಗ್ಯ ಮಾತು. ಭೂಮಿ ಸರ್ವರಿಗೆ ಸೇರಿದ ಸೊತ್ತು. ಎಲ್ಲರೂ ಅದನ್ನು ಸಮಾನವಾಗಿ ಹಂಚಿಕೊಂಡು ಬಳಸಬೇಕು. ಆದರೆ ದುರದೃಷ್ಟವೆಂದರೆ, ಇಲ್ಲಿ ಅಡಿಕೆಯಂತಹ ಸಣ್ಣ ವಸ್ತುವನ್ನು ಕದ್ದವನು ಕಳ್ಳನಾಗುತ್ತಾನೆ. ಆದರೆ ಭೂಮಿಯನ್ನು ಕದ್ದವನನ್ನು ಅರಸನೆಂದೋ, ಜಮೀನ್ದಾರನೆಂದೋ, ಕಾರ್ಪೊರೇಟ್ ದೊರೆಗಳೆಂದೋ ಸಮಾಜ ಗೌರವಿಸುತ್ತದೆ. ಆಧುನಿಕ ದಿನಗಳನ್ನು ಈ ಗಾದೆ ಅರ್ಥಪೂರ್ಣವಾಗಿ ವ್ಯಾಖ್ಯಾನಿಸುತ್ತದೆ. ಅಡಿಕೆ ಕದ್ದವ ಜೈಲು ಸೇರುತ್ತಾನೆ. ಭೂಮಿ ಕದ್ದವನು ಐಷಾರಾಮಿ ಬಂಗಲೆಗಳಲ್ಲಿ, ವಿಧಾನಸೌಧಗಳಲ್ಲಿ, ಸಂಸತ್ತಿನಲ್ಲಿ ನಾಯಕನಾಗಿ ಮೆರೆಯುತ್ತಾನೆ. ಹೀಗೆ ಭೂಮಿ ಕದ್ದು ದೊರೆಗಳೆನಿಸಿಕೊಂಡವರ ಜಾತಕವನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಸದನ ಸಮಿತಿ ಬಿಡುಗಡೆ ಮಾಡಿತು. ಒಂದಾನೊಂದು ಕಾಲದಲ್ಲಿ ಬೆಂಗಳೂರು ಕೆರೆಗಳ ಆವಾಸಸ್ಥಾನವಾಗಿತ್ತು ಎನ್ನುತ್ತದೆ ದಾಖಲೆಗಳು. ಒಂದು ಕಾಲವನ್ನು ಪಕ್ಕಕ್ಕಿಟ್ಟು ಇಂದಿನ ಕಾಲವನ್ನೇ ತೆಗೆದುಕೊಳ್ಳೋಣ. ಸದ್ಯ ಒಂದು ಸಣ್ಣ ಮಳೆ ಬಂದರೆ ಅದನ್ನು ತಾಳಿಕೊಳ್ಳುವಂತಹ ಸ್ಥಿತಿಯಲ್ಲಿ ಬೆಂಗಳೂರು ಇಲ್ಲ. ನೀರು ಹರಿಯುವುದಕ್ಕೆ ಸೂಕ್ತ ಚರಂಡಿಯೇ ಇಲ್ಲ. ಹಾಗೆಂದರೆ ಇಲ್ಲಿ ಚರಂಡಿ, ಕಾಲುವೆಗಳು ಇರಲೇ ಇಲ್ಲ ಎಂದಲ್ಲ. ಅವುಗಳ ಮೇಲೆ ಬೃಹತ್ ಕಟ್ಟಡಗಳು ನಿಂತಿವೆ. ಎಷ್ಟು ಸಾಧ್ಯವೋ, ಅಷ್ಟರ ಮಟ್ಟಿಗೆ ನಮ್ಮ ಚರಂಡಿ, ಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ. ಈ ಕಾರಣದಿಂದಲೇ ನೀರು ಹರಿಯುವ ಸಾಮರ್ಥ್ಯಗಳನ್ನು ನಮ್ಮ ಚರಂಡಿ ಕಾಲುವೆಗಳು ಕಳೆದುಕೊಂಡು, ಬೆಂಗಳೂರು ದೊಡ್ಡ ಮಳೆಗೆ ಭಾರೀ ಪ್ರವಾಹವನ್ನೇ ಎದುರಿಸಬೇಕಾಗುತ್ತದೆ. ಚರಂಡಿಯನ್ನೇ ನುಂಗಿದವರು ಒಂದಾನೊಂದು ಕಾಲದ ಕೆರೆಗಳ ಜಾಗವನ್ನು ಬಿಟ್ಟಾರೆ? ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸರಕಾರದ ವಿವಿಧ ಇಲಾಖೆಗಳು, ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿಗಳು ಸೇರಿ ಹತ್ತು ಸಾವಿರಕ್ಕೂ ಅಧಿಕ ಹೆಕ್ಟೇರ್ ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿವೆ. ಕೆರೆಗಳ ಒತ್ತುವರಿ ಮತ್ತು ಸಂರಕ್ಷಣೆ ಸದನ ಸಮಿತಿ ಈ ಅಂಶವನ್ನು ಬಹಿರಂಗ ಪಡಿಸಿವೆ.ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಒಟ್ಟು ಒಂದೂವರೆ ಸಾವಿರದಷ್ಟು ಕೆರೆ ಭೂಮಿಯಿದ್ದು, ಆ ಪೈಕಿ ರಾಜ್ಯ ಸರಕಾರದ ವಿವಿಧ ಇಲಾಖೆಗಳೇ 3,287 ಎಕರೆ ಭೂಮಿಯನ್ನು ಒತ್ತುವರಿ ಮಾಡಿದೆ ಎಂಬ ಆಘಾತಕಾರಿ ಅಂಶವನ್ನು ಸಮಿತಿ ಬಹಿರಂಗಪಡಿಸಿದೆ. ಸರಕಾರದ ಇಲಾಖೆಗಳು ಕೆರೆಗಳ ಭೂಮಿಯ ಮೇಲೆ ನಿಂತಿವೆ ಎಂದ ಮೇಲೆ ಉಳಿದ ಖಾಸಗಿ ಕಂಪೆನಿಗಳು ಯಾವ ಪ್ರಮಾಣದಲ್ಲಿ ಒತ್ತುವರಿ ಮಾಡಿಕೊಂಡಿರಬಹುದು? ಅಂದಾಜು ಪ್ರಕಾರ 7, 185 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ಮಾಡಿಕೊಂಡವರೆಲ್ಲ ಕಳ್ಳ, ಮೋಸಗಾರರಾಗಿ ಸಮಾಜದಲ್ಲಿ ಗುರುತಿಸಲ್ಪಡುತ್ತಿಲ್ಲ. ಅವರೆಲ್ಲ ಬೃಹತ್ ಕಾರ್ಪೊರೇಟ್ ಕಂಪೆನಿಗಳಾಗಿ ಗುರುತಿಸಲ್ಪಡುತ್ತಿದ್ದಾರೆ. ಆದರ್ಶ ಡೆವಲಪರ್ಸ್‌, ಪ್ರೆಸ್ಟೀಜ್ ಗ್ರೂಪ್, ಒಬೆರಾಯ್, ಡಿಎಸ್ ಮಾಕ್ಸ್, ಆರ್‌ಎನ್‌ಎಸ್ ಮೋಟಾರ್ಸ್‌...ಸಹಿತ ಬೇರೆ ಬೇರೆ ಬಿಲ್ಡರ್‌ಗಳು ಈ ನಾಡಿನ ವಿಶಾಲ ಕೆರೆಗಳ ಮೇಲೆ ಗೋರಿಗಲ್ಲುಗಳಂತೆ ತಮ್ಮ ಕಟ್ಟಡಗಳನ್ನು ನಿಲ್ಲಿಸಿದ್ದಾರೆ.
 ಬೆಂಗಳೂರು ತನ್ನಲ್ಲಿರುವ ಕೆರೆಗಳನ್ನು ಕಾಪಾಡಿಕೊಂಡಿದ್ದರೆ ಇಂದು ಕುಡಿಯುವ ನೀರಿಗಾಗಿ ಹೊರ ಜಿಲ್ಲೆಗಳತ್ತ ಮುಖಮಾಡಬೇಕಾಗಿರಲಿಲ್ಲ. ಬೆಂಗಳೂರಿನ ಕೆರೆಗಳ ನೀರೇ ಬೆಂಗಳೂರಿನ ಜನರನ್ನು ಪೊರೆಯುತ್ತಿತ್ತೇನೋ. ಬೆಂಗಳೂರಿನ ಅಂತರ್ಜಲವೂ ಕುಸಿಯುತ್ತಿರಲಿಲ್ಲ. ಇಂದು ಸರಕಾರ, ಕೆರೆಗಳ ಹೂಳನ್ನು ಎತ್ತುವ ಮಾತನ್ನಾಡುತ್ತಿವೆ. ಅದಕ್ಕಾಗಿ ಯೋಜನೆಗಳನ್ನು ರೂಪಿಸುವುದಕ್ಕೂ ಹೊರಟಿದೆ. ಕೆರೆಗಳೇ ಇಲ್ಲವೆಂದಾದ ಮೇಲೆ ಕೆರೆಗಳ ಹೂಳನ್ನು ಎತ್ತುವ ಪ್ರಶ್ನೆ ಎಲ್ಲಿ ಬಂತು? ಇಂದು ಕೆರೆಗಳ ಹೂಳನ್ನೆತ್ತ ಬೇಕಾಗಿರುವುದಲ್ಲ ಕೆರೆಗಳ ಮೇಲೆ ಮುಗಿಲೆತ್ತರ ನಿಂತಿರುವ ಕಟ್ಟಡಗಳನ್ನೇ ಎತ್ತಬೇಕಾಗಿದೆ. ಇರುವ ಕೆರೆಗಳನ್ನೇ ನಿರ್ಲಕ್ಷಿಸಿರುವ ಸರಕಾರ, ಕೆರೆಗಳ ಮೇಲೆ ನಿಂತಿರುವ ಕಟ್ಟಡಗಳ ತಂಟೆಗೆ ಹೋಗುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟ ಸಾಧ್ಯ. ಕೆರೆಗಳನ್ನು ಒತ್ತುವರಿ ಮಾಡಿಕೊಂಡವರು ಎರಡೆರಡು ದ್ರೋಹಗಳನ್ನು ಎಸಗಿದ್ದಾರೆ. ಒಂದು ಸಾರ್ವಜನಿಕ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡು ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಂಡಿರುವುದು. ಮಗದೊಂದು, ಜೀವದ ಒರತೆಗೆ ಕಾರಣವಾಗುವ ಕೆರೆಗಳನ್ನು ನಾಶ ಮಾಡಿರುವುದು. ಇದರಿಂದಾಗಿಯೇ ಬೆಂಗಳೂರು ನೀರಿಗಾಗಿ ಹಪಹಪಿಸುವ ಸ್ಥಿತಿಗೆ ಬಂದು ನಿಂತಿದೆ. ಸರಕಾರ ಮನಸ್ಸು ಮಾಡಿದರೆ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು. ಅವರ ಆಸ್ತಿಯನ್ನೂ ಮುಟ್ಟುಗೋಲು ಹಾಕಬಹುದು. ಆದರೆ ಇದರ ಹಿಂದಿರುವ ಬೃಹತ್ ಕುಳಗಳನ್ನು ಸರಕಾರ ಎದುರು ಹಾಕಿಕೊಳ್ಳುವಷ್ಟು ನಿಷ್ಠುರವಾಗಿದೆ ಮತ್ತು ಜನಪರವಾಗಿದೆ ಎಂದು ನಾವು ಭಾವಿಸುವುದು ಕಷ್ಟ. ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿದ ರೈತರ ವಿರುದ್ಧ ಕ್ರಮ ಕೈಗೊಳ್ಳಲು ಉತ್ಸುಕವಾಗಿರುವ ಸರಕಾರ, ಈ ಕಾರ್ಪೊರೇಟ್ ಶಕ್ತಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದರ ಬಗ್ಗೆ ನಾಡಿನ ಜನರು ಆಸಕ್ತರಾಗಿದ್ದಾರೆ.
ಅಂತೆಯೇ ಕನಿಷ್ಠ ಅಳಿದುಳಿದ ಕೆರೆಗಳನ್ನು ಉಳಿಸುವ ಕಡೆಗೆ ಸರಕಾರ ಮನ ಮಾಡಬೇಕು. ಕೇವಲ ಬೆಂಗಳೂರು ಮಾತ್ರವಲ್ಲ, ರಾಜ್ಯಾದ್ಯಂತ ಇರುವ ವಿಶಾಲ ಕೆರೆಗಳನ್ನು ಗುರುತಿಸಿ ಅದನ್ನು ವಶ ಪಡಿಸಿಕೊಂಡು ಅದಕ್ಕೆ ಮರುಜೀವ ಕೊಟ್ಟರೆ, ಭವಿಷ್ಯದಲ್ಲಿ ನೀರಿನ ಸಮಸ್ಯೆಯನ್ನು ಸಣ್ಣ ಮಟ್ಟಿನಲ್ಲಾದರೂ ಪರಿಹರಿಸಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೋಳಿವಾಡ ನೇತೃತ್ವದಲ್ಲಿ ನೀಡಿರುವ ವರದಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News