×
Ad

ಆಸ್ಟ್ರೇಲಿಯ: ಕಾಡ್ಗಿಚ್ಚು ನಿಯಂತ್ರಣಕ್ಕೆ

Update: 2016-01-11 23:57 IST

ಪರ್ತ್, ಜ. 11: ಆಸ್ಟ್ರೇಲಿಯದ ವೆಸ್ಟರ್ನ್ ಆಸ್ಟ್ರೇಲಿಯ ರಾಜ್ಯದಲ್ಲಿ ವ್ಯಾಪಿಸಿದ್ದ ಕಾಡ್ಗಿಚ್ಚನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಸೋಮವಾರ ಯಶಸ್ವಿಯಾಗಿದ್ದಾರೆ. ತಂಪು ವಾತಾವರಣ ಹಾಗೂ ಕಡಿಮೆಯಾದ ಗಾಳಿಯ ವೇಗದ ಹಿನ್ನೆಲೆಯಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು.
ಬೆಂಕಿ ಈಗಾಗಲೇ ಇಬ್ಬರನ್ನು ಬಲಿತೆಗೆದುಕೊಂಡಿದೆ ಹಾಗೂ 143 ಮನೆಗಳನ್ನು ಸುಟ್ಟಿದೆ.
 ಆರು ದಿನಗಳ ಹಿಂದೆ ಮಿಂಚು ಬಡಿದಾಗ ಹೊತ್ತಿಕೊಂಡ ಬೆಂಕಿ 1,75,000 ಎಕರೆ ಅರಣ್ಯವನ್ನು ಸುಟ್ಟುಹಾಕಿದೆ.
‘‘ಇಂದಿನ ಹವಾಮಾನ ಸ್ಥಿತಿ ಅನುಕೂಲಕರವಾಗಿತ್ತು. ಇದೇ ಪರಿಸ್ಥಿತಿ ಕಳೆದ 24 ಗಂಟೆಗಳ ಅವಧಿಯಿಂದಲೂ ನೆಲೆಸಿತ್ತು. ಹಾಗಾಗಿ, ಬೆಂಕಿಯನ್ನು ನಂದಿಸಲು ನಮಗೆ ಸಾಧ್ಯವಾಯಿತು’’ ಎಂದು ವೆಸ್ಟರ್ನ್ ಆಸ್ಟ್ರೇಲಿಯ ತುರ್ತು ಸೇವೆಗಳ ಸಚಿವ ಜೋ ಫ್ರಾನ್ಸಿಸ್ ‘ನ್ಯಾಶನಲ್ ರೇಡಿಯೊ’ಗೆ ತಿಳಿಸಿದರು.

ಮೆಕ್ಸಿಕೊ ಮಾದಕ ದ್ರವ್ಯ ಪಾತಕಿ ಮರು ಸೆರೆ ಮೆಕ್ಸಿಕೊ ಸಿಟಿ, ಜ. 11: ಮರುಸೆರೆಯಾದ ಬೃಹತ್ ಮಾದಕ ದ್ರವ್ಯಗಳ ವ್ಯಾಪಾರಿ ಜೋಕ್ವಿನ್ ‘‘ಎಲ್ ಚಾಪೊ’’ ಗಝ್ಮನ್‌ನನ್ನು ಅಮೆರಿಕ್ಕಕೆ ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಮೆಕ್ಸಿಕೊದ ಅಧಿಕಾರಿಗಳು ರವಿವಾರ ಔಪಚಾರಿಕವಾಗಿ ಆರಂಭಿಸಿದ್ದಾರೆ.
ಶುಕ್ರವಾರ ಆತನನ್ನು ಪುನಃ ಸೆರೆಹಿಡಿಯಲಾಗಿದ್ದು ಅತಿ ಭದ್ರತೆಯ ಅಲ್ಟಿಪಲಾನೊ ಸೆರೆಮನೆಯಲ್ಲಿ ಇಡಲಾಗಿದೆ. ಇದೇ ಸೆರೆಮನೆಯಿಂದ ಆತ ಆರು ತಿಂಗಳ ಹಿಂದೆ ಸುರಂಗ ಮಾರ್ಗದ ಮೂಲಕ ತಪ್ಪಿಸಿಕೊಂಡಿದ್ದನು.
ಆತ ಅಮೆರಿಕದಲ್ಲಿ ವಿಚಾರಣೆಗೆ ಬೇಕಾಗಿದ್ದಾನೆ ಎಂಬುದನ್ನು ಗಝ್ಮನ್‌ಗೆ ತಿಳಿಸಲಾಗಿದೆ ಎಂದು ಅಟಾರ್ನಿ ಜನರಲ್ ಕಚೇರಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಗಡಿಪಾರು ಪ್ರಕ್ರಿಯೆಯನ್ನು ಪ್ರಶ್ನಿಸಿ ಈಗಾಗಲೇ ಆರು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿ ಪರ ವಕೀಲ ಜುವಾನ್ ಪಾಬ್ಲೊ ಬಡಿಲೊ ಹೇಳಿದ್ದಾರೆ.
ಮಾದಕ ದ್ಯವ್ಯ ವ್ಯಾಪಾರಿಯ ಗಡಿಪಾರಿಗೆ ಕನಿಷ್ಠ ಆರು ತಿಂಗಳು ಹಿಡಿಯಬಹುದು ಎಂಬುದಾಗಿ ಅಟಾರ್ನಿ ಜನರಲ್‌ರ ಕಚೇರಿ ಹೇಳಿದೆ. ಆದಾಗ್ಯೂ, ಆರೋಪಿ ಪರ ವಕೀಲರು ಸಲ್ಲಿಸುವ ಮೇಲ್ಮನವಿಗಳ ಆಧಾರದಲ್ಲಿ ಈ ಅವಧಿ ಇನ್ನಷ್ಟು ವಿಸ್ತರಣೆಗೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News