ಹೆಲ್ಮೆಟ್‌ಗಿಂತ ತಲೆ ಅಗ್ಗವಾಯಿತೇ?
ಒಂದು ಸಣ್ಣ ಮೊಬೈಲ್ ತೆಗೆದುಕೊಂಡ ಬೆನ್ನಿಗೇ ನಮ್ಮ ಯುವಕರು ಅದರ ರಕ್ಷಣೆಗೆ ಬೇಕಾದ ಕವಚ, ಸ್ಕ್ರೀನ್ ಗಾರ್ಡ್ ಇತ್ಯಾದಿಗಳಿಗೆ ವೆಚ್ಚ ಮಾಡುತ್ತಾರೆ. ಆದರೆ ತನ್ನದೇ ತಲೆಯ ಬಗ್ಗೆ ಅವರು ಕಾಳಜಿವಹಿಸುವ ಸಂದರ್ಭದಲ್ಲಿ ಸಾವಿರ ನೆಪಗಳನ್ನು ಹುಡುಕುತ್ತಾರೆ. ತಮ್ಮ ತಲೆ, ಮೆದುಳು, ಪ್ರಾಣ ಹೆಲ್ಮೆಟ್‌ಗಿಂತಲೂ ಅಗ್ಗವೇನೋ ಎಂಬಂತೆ ವರ್ತಿಸುತ್ತಾರೆ. ಇದು ನಿಜಕ್ಕೂ ಅಪಾಯಕಾರಿಯಾದ ಬೆಳವಣಿಗೆ. ಇಂತಹ ಮನಃಸ್ಥಿತಿಗೆ ಕೆಲವು ರಾಜಕೀಯ ಪಕ್ಷಗಳು ಬಹಿರಂಗವಾಗಿ ಬೆಂಬಲ ನೀಡುತ್ತಿರುವುದು, ತಮ್ಮದೇ ಮನೆಯ ಯುವಕರನ್ನು ಅಪಾಯಕ್ಕೆ ತಳ್ಳಿದಂತೆ. ಆದುದರಿಂದ ಯಾವ ಕಾರಣಕ್ಕೂ ಹಿಂಬದಿ ಸವಾರನಿಗೆ ಹೆಲ್ಮೆಟ್ ಕಡ್ಡಾಯ ನಿಯಮದಿಂದ ಸರಕಾರ ಹಿಂದೆ ಸರಿಯಬಾರದು.
ಮ ಂಗಳವಾರದಿಂದ ಹೆಲ್ಮೆಟ್ ಕಡ್ಡಾಯ ಜಾರಿಗೊಂಡಿದೆ. 12 ವರ್ಷ ಮೇಲ್ಟಟ್ಟ ಎಲ್ಲರೂ ಬೈಕ್‌ನಲ್ಲಿ ಹೆಲ್ಮೆಟ್‌ನ್ನು ಕಡ್ಡಾಯವಾಗಿ ಧರಿಸಬೇಕು ಎನ್ನುವ ನಿಯಮಕ್ಕೆ ಚಾಲನೆ ದೊರಕಿದೆ. ಆದರೆ ಮೊದಲ ದಿನ ಇದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಬಹುಶಃ ಈ ನಿಯಮದ ವಿರುದ್ಧ ಹಲವು ಆಕ್ಷೇಪಗಳು ವ್ಯಕ್ತವಾಗುತ್ತಿರುವುದರಿಂದ ಸರಕಾರ ಇದನ್ನು ಹಿಂದಕ್ಕೆ ತೆಗೆದುಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲೇ ಬೈಕ್ ಸವಾರರು ಸಮಯ ಕಳೆದಂತಿದೆ. ಬೈಕ್ ಸವಾರರೇ ಹೆಲ್ಮೆಟ್ ಇಲ್ಲದೆ ಪಾರಾಗುತ್ತಿರುವುದರಿಂದ ಸಹ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎನ್ನುವುದೇ ಹಾಸ್ಯಾಸ್ಪದ ಎನ್ನಿಸಿರಬಹುದು. ಕಳೆದ ಒಂದು ತಿಂಗಳಿನಿಂದ ತೀವ್ರವಾಗಿ ಪ್ರಚಾರದಲ್ಲಿದ್ದರೂ ಜನರು ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದಂತೆಯೇ ವರ್ತಿಸಿದ್ದಾರೆ. ಸಂಚಾರಿ ಪೊಲೀಸರೂ ಈ ಬಗ್ಗೆ ಜನರನ್ನು ಜಾಗೃತಗೊಳಿಸುವಲ್ಲಿ ವಿಫಲರಾಗಿರುವುದೇ ಜನರ ನೀರಸ ಪ್ರತಿಕ್ರಿಯೆಗೆ ಕಾರಣವಾಗಿರಬಹುದು. ಇದೇ ಸಂದರ್ಭದಲ್ಲಿ ಕೆಲವು ರಾಜಕೀಯ ನಾಯಕರು ಈ ಹೆಲ್ಮೆಟ್ ಕಡ್ಡಾಯದ ವಿರುದ್ಧ ಬೀದಿಯಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ‘ಹೆಲ್ಮೆಟ್ ಕಡ್ಡಾಯದ ಹಿಂದೆ’ ಹೆಲ್ಮೆಟ್ ಕಂಪೆನಿಗಳ ಲಾಬಿ ಕೆಲಸ ಮಾಡಿದೆ ಎಂದು ಇವರು ಆರೋಪಿಸುತ್ತಿದ್ದಾರೆ. ಜನರಿಗೆ ಸರಕಾರ ಅನಗತ್ಯವಾಗಿ ತೊಂದರೆ ನೀಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಸರಿ. ಹೆಲ್ಮೆಟ್ ಲಾಬಿಯ ಕಾರಣದಿಂದಲೇ ಈ ನಿಯಮ ಜಾರಿಗೆ ಬಂದಿದೆ ಎಂದಿಟ್ಟುಕ್ಕೊಳ್ಳೋಣ. ಅಂತಹ ಆರೋಪಗಳನ್ನು ಮಾಡುವವರು ಅದಕ್ಕೆ ಸ್ಪಷ್ಟವಾದ ದಾಖಲೆಗಳನ್ನು ನೀಡಬೇಕಾಗುತ್ತದೆ. ಅಷ್ಟೇ ಅಲ್ಲ, ಯಾವ ಕಾರಣಕ್ಕಾಗಿ ಈ ನಿಯಮವನ್ನು ಜಾರಿಗೊಳಿಸಬಾರದು ಎನ್ನುವುದನ್ನೂ ವಿವರಿಸಬೇಕಾಗುತ್ತದೆ. ‘ಜನರಿಗೆ ತೊಂದರೆಯಾಗುತ್ತದೆ, ಎರಡೆರಡು ಹೆಲ್ಮೆಟ್‌ಗಳನ್ನು ಹೊಂದುವುದು ವೈಜ್ಞಾನಿಕವಲ್ಲ...’’ ಎಂಬಿತ್ಯಾದಿ ಹೇಳಿಕೆಗಳಿಂದ ಹೆಲ್ಮೆಟ್ ಧರಿಸುವುದರಿಂದ ಜನರನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಹಾಗೆ ನೋಡಿದರೆ, ಜನರ ಹಿತಾಸಕ್ತಿಗಾಗಿ ಸರಕಾರ ಮಾಡಿರುವ ಎಲ್ಲ ಕಾಯ್ದೆಗಳು ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯನ್ನು ಕೊಟ್ಟೇ ಕೊಡುತ್ತವೆ. ಆದರೆ ಒಟ್ಟು ಸಮಾಜದ ಹಿತಾಸಕ್ತಿಯಿಂದ ಇದನ್ನು ಜಾರಿಗೆ ತರಬೇಕಾಗುತ್ತದೆ. ರಸ್ತೆಗಳು ಇಂದು ರಣರಂಗವಾಗಿ ಪರಿವರ್ತನೆಗೊಂಡಿವೆ. ಯಾವುದೇ ಯುದ್ಧಭೂಮಿಯಲ್ಲಿ ಸಾಯುವವರಿಗಿಂತ ಅಧಿಕ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳಿಂದ ಜನರು ಮೃತ ಪಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳ ಪಾಲು ಬಹುದೊಡ್ಡದಿವೆ. ಅಪಘಾತವಾದರೆ ಇವರು ನೇರವಾಗಿ ರಸ್ತೆಗೆ ಎಸೆಯಲ್ಪಡುವ ಸಂದರ್ಭ ಹೆಚ್ಚಿರುವುದೇ ಇದಕ್ಕೆ ಕಾರಣ. ಈ ಸಂದರ್ಭದಲ್ಲಿ ನೇರವಾಗಿ ರಸ್ತೆಗೆ ತಲೆ ಅಪ್ಪಳಿಸಿದ ಕಾರಣದಿಂದಲೇ ಹೆಚ್ಚು ಜೀವಹಾನಿಯುಂಟಾಗುತ್ತದೆ. ಇದರಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಂದು ಯುವಕರ ಕೈಯಲ್ಲಿ ಅದರಲ್ಲೂ ವಿದ್ಯಾರ್ಥಿಗಳ ಕೈಯಲ್ಲಿ ದ್ವಿಚಕ್ರ ವಾಹನ ಹೆಚ್ಚುತ್ತಿವೆ. ರಸ್ತೆಯ ಯಾವ ನಿಯಮಗಳನ್ನೂ ಪಾಲಿಸದೆ ಅಶಿಸ್ತಿನಿಂದ, ಅತಿ ವೇಗವಾಗಿ ಇವರು ಪ್ರಯಾಣಿಸುವ ಕಾರಣದಿಂದ ಸಾವು ನೋವುಗಳು ಸಂಭವಿಸುತ್ತಿವೆ. ದ್ವಿಚಕ್ರ ವಾಹನಗಳಲ್ಲಿ ಮರಣಕ್ಕೀಡಾಗುವವರ ವಯಸ್ಸನ್ನು ಕಲೆ ಹಾಕಿದರೆ ಅವರಲ್ಲಿ 25 ವರ್ಷದ ಒಳಗಿನ ಯುವಕರೇ ಅಧಿಕ. ಬದುಕಿ ಸಮಾಜವನ್ನು ಕಟ್ಟಬೇಕಾದ ಈ ಎಳೆಯ ತರುಣರು ಅನ್ಯಾಯವಾಗಿ ರಸ್ತೆಯಲ್ಲಿ ತಮ್ಮ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದರೆ ಅದಕ್ಕೆ ಪರೋಕ್ಷವಾಗಿ ಸರಕಾರವೂ ಹೊಣೆಯಾಗುತ್ತದೆ. ಈಗಾಗಲೇ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ ನಿಜ. ಆದರೆ ಬೈಕ್ ಸವಾರರಿಗೆ ಎಷ್ಟು ಅಪಾಯವಿದೆಯೋ, ಅಷ್ಟೇ ಪ್ರಾಣಾಪಾಯ ಹಿಂಬದಿಯ ಸವಾರನಿಗೂ ಇದೆ. ಚಾಲಕ ಹೆಲ್ಮೆಟ್ ಧರಿಸುವುದರಿಂದ ಹಿಂಬದಿ ಸವಾರ ಅಪಾಯದಿಂದ ಪಾರಾದಂತಾಗುವುದಿಲ್ಲ. ಒಂದು ವೇಳೆ ಹಿಂಬದಿಯ ಸವಾರನಿಗೆ ಹೆಲ್ಮೆಟ್ ಅಗತ್ಯವಿಲ್ಲವಾದರೆ ಸವಾರನಿಗೆ ಯಾಕೆ ಹೆಲ್ಮೆಟ್ ಕಡ್ಡಾಯ ಮಾಡಬೇಕು? ಇಬ್ಬರು ಎದುರಿಸುವ ಅಪಾಯ ಒಂದೇ ತಾನೆ. ಇದೇ ಸಂದರ್ಭದಲ್ಲಿ ಸಹ ಸವಾರನಿಗೆ ಹೆಲ್ಮೆಟ್ ಯಾರು ಕೊಳ್ಳಬೇಕು? ಅದನ್ನು ಹೇಗೆ ಇಟ್ಟುಕೊಳ್ಳಬೇಕು? ಎಂಬಿತ್ಯಾದಿ ಸಮಸ್ಯೆಗಳನ್ನು ಕೆಲವರು ಮುಂದಿಡುತ್ತಾರೆ. ಒಬ್ಬ ಬೈಕ್ ಚಾಲಕ, ಸಹ ಸವಾರನನ್ನು ಕರೆದೊಯ್ಯುತ್ತಾನೆ ಎಂದರೆ ಅವರ ಪ್ರಾಣದ ಹೊಣೆಗಾರಿಕೆಯೂ ಬೈಕ್ ಮಾಲಕನದೇ ಆಗಿದೆ. ಸಹ ಸವಾರನಲ್ಲಿ ಹೆಲ್ಮೆಟ್ ಇಲ್ಲದೇ ಇದ್ದರೆ ಅವನನ್ನು ಏರಿಸಿಕೊಳ್ಳದೇ ಇರುವುದೇ ಇದಕ್ಕೆ ಪರಿಹಾರ. ಇದೇ ಸಂದರ್ಭದಲ್ಲಿ, ಕಳಪೆ ರಸ್ತೆಗಳನ್ನು ತೋರಿಸಿ ಹೆಲ್ಮೆಟ್‌ನ್ನು ಕೆಲವರು ನಿರಾಕರಿಸುತ್ತಿದ್ದಾರೆ. ನೀವು ರಸ್ತೆಯನ್ನು ದುರಸ್ತಿಗೊಳಿಸಿ ಬಳಿಕ ನಾವು ಹೆಲ್ಮೆಟ್ ಧರಿಸುತ್ತೇವೆ ಎನ್ನುವುದು ಇವರ ವಾದ. ಒಂದು ತಪ್ಪಿಗೆ ಇನ್ನೊಂದು ತಪ್ಪು ಉತ್ತರವಲ್ಲ. ಎರಡು ತಪ್ಪುಗಳು ಒಟ್ಟು ಸೇರಿದರೆ ಅಪಾಯ ಇನ್ನಷ್ಟು ಹೆಚ್ಚುತ್ತದೆ. ಯಾವ ತಪ್ಪನ್ನ ಸುಲಭವಾಗಿ ಸರಿಪಡಿಸಲಾಗುತ್ತದೆಯೋ ಅದನ್ನು ಮೊದಲು ತಿದ್ದಿಕೊಳ್ಳುವುದು ಒಳ್ಳೆಯದು. ಒಂದು ಸಣ್ಣ ಮೊಬೈಲ್ ತೆಗೆದುಕೊಂಡ ಬೆನ್ನಿಗೇ ನಮ್ಮ ಯುವಕರು ಅದರ ರಕ್ಷಣೆಗೆ ಬೇಕಾದ ಕವಚ, ಸ್ಕ್ರೀನ್ ಗಾರ್ಡ್ ಇತ್ಯಾದಿಗಳಿಗೆ ವೆಚ್ಚ ಮಾಡುತ್ತಾರೆ. ಆದರೆ ತನ್ನದೇ ತಲೆಯ ಬಗ್ಗೆ ಅವರು ಕಾಳಜಿವಹಿಸುವ ಸಂದರ್ಭದಲ್ಲಿ ಸಾವಿರ ನೆಪಗಳನ್ನು ಹುಡುಕುತ್ತಾರೆ. ತಮ್ಮ ತಲೆ, ಮೆದುಳು, ಪ್ರಾಣ ಹೆಲ್ಮೆಟ್‌ಗಿಂತಲೂ ಅಗ್ಗವೇನೋ ಎಂಬಂತೆ ವರ್ತಿಸುತ್ತಾರೆ. ಇದು ನಿಜಕ್ಕೂ ಅಪಾಯಕಾರಿಯಾದ ಬೆಳವಣಿಗೆ. ಇಂತಹ ಮನಃಸ್ಥಿತಿಗೆ ಕೆಲವು ರಾಜಕೀಯ ಪಕ್ಷಗಳು ಬಹಿರಂಗವಾಗಿ ಬೆಂಬಲ ನೀಡುತ್ತಿರುವುದು, ತಮ್ಮದೇ ಮನೆಯ ಯುವಕರನ್ನು ಅಪಾಯಕ್ಕೆ ತಳ್ಳಿದಂತೆ. ಆದುದರಿಂದ ಯಾವ ಕಾರಣಕ್ಕೂ ಹಿಂಬದಿ ಸವಾರನಿಗೆ ಹೆಲ್ಮೆಟ್ ಕಡ್ಡಾಯ ನಿಯಮದಿಂದ ಸರಕಾರ ಹಿಂದೆ ಸರಿಯಬಾರದು. ಈಗಾಗಲೇ ಸೂಚನೆ ನೀಡಿದಂತೆ, ಜ.20ರ ನಂತರ ಹೆಲ್ಮೆಟ್ ಧರಿಸದ ಹಿಂಬದಿ ಸವಾರರಿಗೆ ಯಾವ ದಾಕ್ಷಿಣ್ಯವೂ ಇಲ್ಲದೆ ದಂಡ ವಿಧಿಸಬೇಕು.