ಬಶಾರ್‌ಗೆ ಆಶ್ರಯ: ನಿರ್ಧಾರಕ್ಕೆ ಕಾಲ ಪಕ್ವವಾಗಿಲ್ಲ

Update: 2016-01-12 18:22 GMT

ಮಾಸ್ಕೊ, ಜ. 12: ‘‘ಹಲವು ತಪ್ಪುಗಳನ್ನು’’ ಮಾಡಿರುವ ಸಿರಿಯದ ಅಧ್ಯಕ್ಷ ಬಶಾರ್ ಅಲ್-ಅಸಾದ್‌ರಿಗೆ ಮಾಸ್ಕೊ ಆಶ್ರಯ ನೀಡುವುದೇ ಎಂದು ಹೇಳಲು ಕಾಲ ಪಕ್ವವಾಗಿಲ್ಲ ಎಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು ಹೇಳಿದ್ದಾರೆ.
‘‘ನಾವು ಸ್ನೋಡನ್‌ಗೆ ಆಶ್ರಯ ನೀಡಿದ್ದೇವೆ. ಅದು ಅಸಾದ್‌ಗೆ ಆಶ್ರಯ ನೀಡುವುದಕ್ಕಿಂತಲೂ ಕಠಿಣ ನಿರ್ಧಾರವಾಗಿತ್ತು’’ ಎಂದು ಜರ್ಮನಿಯ ಪತ್ರಿಕೆ ‘ಬಿಲ್ಡ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.
ಅಮೆರಿಕದ ಗುಪ್ತಚರ ಮಾಹಿತಿಗಳನ್ನು ಬಹಿರಂಗಗೊಳಿಸಿದ ಆರೋಪದಲ್ಲಿ ದೇಶಭ್ರಷ್ಟರಾಗಿದ್ದ ಎಡ್ವರ್ಡ್ ಸ್ನೋಡನ್‌ಗೆ ರಶ್ಯ 2013ರಲ್ಲಿ ಆಶ್ರಯ ನೀಡಿರುವುದನ್ನು ಸ್ಮರಿಸಬಹುದು.
‘‘ಮೊದಲು, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಿರಿಯದ ಜನರಿಗೆ ಅವಕಾಶ ನೀಡಬೇಕು’’ ಎಂದು ಪುಟಿನ್ ಅಭಿಪ್ರಾಯಪಟ್ಟರು.
‘‘ಇದನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಸಿದರೆ, ಬಳಿಕ ಬಶಾರ್ ಎಲ್ಲಿಗೂ ಹೋಗಬೇಕಾಗಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಈ ವಿಷಯದಲ್ಲಿ ಅವರು ಅಧ್ಯಕ್ಷರೇ, ಅಲ್ಲವೇ ಎನ್ನುವುದು ಕೂಡ ಗಣನೆಗೆ ಬರುವುದಿಲ್ಲ’’ ಎಂದರು.
ಸುಮಾರು ಐದು ವರ್ಷಗಳಿಂದ ನಡೆಯುತ್ತಿರುವ ಆಂತರಿಕ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ, ಸಿರಿಯದ ಆಡಳಿತ ಮತ್ತು ಪ್ರತಿಪಕ್ಷವನ್ನು ಮಾತುಕತೆಯ ವೇದಿಕೆಗೆ ತರಲು ಜಾಗತಿಕ ಶಕ್ತಿಗಳು ಪ್ರಯತ್ನಿಸುತ್ತಿವೆ. ಭೀಕರ ಆಂತರಿಕ ಯುದ್ಧದಲ್ಲಿ 2.6 ಲಕ್ಷಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಅದಕ್ಕಿಂತಲೂ ಹೆಚ್ಚು ಮಂದಿ ಅಂಗವಿಕಲರಾಗಿದ್ದಾರೆ ಹಾಗೂ ಗಾಯಗೊಂಡಿದ್ದಾರೆ ಮತ್ತು ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ.
ಸಿರಿಯದ ವಿವಿಧ ಬಣಗಳ ನಡುವೆ ಜನವರಿ 25ರಿಂದ ಮಾತುಕತೆಗಳು ಆರಂಭಗೊಳ್ಳುವುದನ್ನು ವಿಶ್ವಸಂಸ್ಥೆ ಬೆಂಬಲಿತ ಯೋಜನೆಯೊಂದು ಎದುರುನೋಡುತ್ತಿದೆ. ಈ ಯೋಜನೆಯ ಪ್ರಕಾರ, ಆರು ತಿಂಗಳಲ್ಲಿ ಮಧ್ಯಾಂತರ ಸರಕಾರ ಸ್ಥಾಪನೆಯಾಗಬೇಕು ಹಾಗೂ 18 ತಿಂಗಳಲ್ಲಿ ಚುನಾವಣೆ ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News