×
Ad

ಇಸ್ತಾಂಬುಲ್‌ನಲ್ಲಿ ಸ್ಫೋಟ: 10 ಸಾವು

Update: 2016-01-12 23:55 IST

ಇಸ್ತಾಂಬುಲ್, ಜ. 12: ಟರ್ಕಿಯ ಪ್ರಮುಖ ನಗರ ಇಸ್ತಾಂಬುಲ್‌ನ ಪ್ರವಾಸಿ ಆಕರ್ಷಣೆಯ ಜಿಲ್ಲೆಯೊಂದರಲ್ಲಿ ಮಂಗಳವಾರ ಸ್ಫೋಟವೊಂದು ಸಂಭವಿಸಿದ್ದು, ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ತಾಂಬುಲ್‌ನ ಗವರ್ನರ್ ಕಚೇರಿ ಹೇಳಿದೆ.
ಸುಲ್ತಾನ್‌ಅಹ್ಮದ್ ಜಿಲ್ಲೆಯಲ್ಲಿ ನಡೆದ ಸ್ಫೋಟದ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಆತ್ಮಹತ್ಯಾ ಬಾಂಬರ್ ಓರ್ವ ಸ್ಫೋಟ ನಡೆಸಿರುವ ಸಾಧ್ಯತೆಯಿದೆ ಎಂದು ಸರಕಾರಿ ಒಡೆತನದ ಟಿಆರ್‌ಟಿ ಟೆಲಿವಿಶನ್ ವರದಿ ಮಾಡಿದೆ.
ಐತಿಹಾಸಿಕ ನೀಲಿ ಮಸೀದಿಯಿಂದ ಸುಮಾರು 25 ಮೀಟರ್ ಅಂತರದಲ್ಲಿ ಸ್ಫೋಟ ಸಂಭವಿಸಿತು ಹಾಗೂ ಅದರ ಸದ್ದು ಸುತ್ತಲಿನ ವಿವಿಧ ನಗರಗಳಲ್ಲಿ ಪ್ರತಿಧ್ವನಿಸಿತು ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದರು.
ಎರಡನೆ ಸ್ಫೋಟ ಸಂಭವಿಸುವ ಭೀತಿಯ ಹಿನ್ನೆಲೆಯಲ್ಲಿ ಸ್ಫೋಟ ಸಂಭವಿಸಿದ ಸ್ಥಳವನ್ನು ಭದ್ರತಾ ಪಡೆಗಳು ತಕ್ಷಣ ಮುಚ್ಚಿದವು ಹಾಗೂ ಜನರ ಓಡಾಟವನ್ನು ನಿರ್ಬಂಧಿಸಲಾಯಿತ್ಠು. ಪೊಲೀಸ್ ಹೆಲಿಕಾಪ್ಟರೊಂದು ಸ್ಫೋಟ ಸ್ಥಳದಲ್ಲಿ ಹಾರಾಡಿತು.
ಇಸ್ತಾಂಬುಲ್ ಅತ್ಯಂತ ಪ್ರವಾಸಿ ಆಕರ್ಷಣೆಯ ಸ್ಥಳವೆಂದರೆ ಸುಲ್ತಾನಹ್ಮೆಟ್. ಅಲ್ಲಿ ಟಾಪ್‌ಕಾಪಿ ಅರಮನೆ ಮತ್ತು ಹಘಿಯ ಸೋಫಿಯ ವಸ್ತುಸಂಗ್ರಹಾಲಯವಿದೆ.

ಸಿರಿಯದ ಆತ್ಮಹತ್ಯಾ ಬಾಂಬರ್: ಟರ್ಕಿ ಅಧ್ಯಕ್ಷ
ಇಸ್ತಾಂಬುಲ್‌ನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯ ಸ್ಥಳದಲ್ಲಿ ಬಾಂಬ್ ಸ್ಫೋಟ ನಡೆಸಿರುವುದು ಸಿರಿಯದ ಓರ್ವ ಆತ್ಮಹತ್ಯಾ ಬಾಂಬರ್ ಎಂಬುದಾಗಿ ನಂಬಲಾಗಿದೆ ಎಂದು ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೊಗಾನ್ ಹೇಳಿದರು.
ನೀಲಿ ಮಸೀದಿಯ ಸಮೀಪ ನಡೆದ ಸ್ಫೋಟದ ಹಿಂದೆ ಐಸಿಸ್ ಭಯೋತ್ಪಾದಕರು ಇರುವ ಸಾಧ್ಯತೆ ದಟ್ಟವಾಗಿದೆ ಎಂದು ಟರ್ಕಿಯ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
‘‘ಇಸ್ತಾಂಬುಲ್‌ನಲ್ಲಿ ನಡೆದ ಭಯೋತ್ಪಾದಕ ಘಟನೆಯನ್ನು ನಾನು ಖಂಡಿಸುತ್ತೇನೆ. ವಿದೇಶೀಯರು ಮತ್ತು ಟರ್ಕಿ ರಾಷ್ಟ್ರೀಯರು ಸೇರಿದಂತೆ 10 ಮಂದಿ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ’’ ಎಂದು ರಾಜಧಾನಿ ಅಂಕಾರದಲ್ಲಿ ನಡೆದ ಟರ್ಕಿ ರಾಯಭಾರಿಗಳ ಸಭೆಯೊಂದರಲ್ಲಿ ಎರ್ಡೊಗಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News