×
Ad

ಶೇ.100 ಪ್ರಾಥಮಿಕ ಶಿಕ್ಷಣ ಸಾಧಿಸಿದ ಮೊದಲ ರಾಜ್ಯ ಕೇರಳ

Update: 2016-01-13 00:02 IST

ತಿರುವನಂತಪುರ, ಜ.12: ಕೇರಳವು ಸಾಧಿಸಿರುವ ಶೇ.100 ಪ್ರಾಥಮಿಕ ಶಿಕ್ಷಣ ಸ್ಥಾನಮಾನವನ್ನು ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಬುಧವಾರ ಇಲ್ಲಿ ಅಧಿಕೃತವಾಗಿ ಘೋಷಿಸಲಿದ್ದಾರೆ.

ಕೇರಳವು ಸಂಪೂರ್ಣ ಪ್ರಾಥಮಿಕ ಶಿಕ್ಷಣ ಸಾಧಿಸಿದ ದೇಶದ ಮೊದಲ ರಾಜ್ಯವೆನಿಸಿದೆ. ಇದನ್ನು ಪ್ರಾಥಮಿಕ ಶಿಕ್ಷಣದೊಂದಿಗೆ ಸರಿಸಮವಾಗಿ ರಾಜ್ಯ ಸಾಕ್ಷರತಾ ಅಭಿಯಾನ ‘ಅತುಲ್ಯಂ’ನ ಮೂಲಕ ಸಾಧಿಸಲಾಗಿದೆ. ಸಮಾನ ಗುಣದ ಕಾರ್ಯಕ್ರಮಗಳು ಭಾರೀ ಯಶಸ್ವಿಯೆಂದು ಸಾಬೀತಾಗಿದೆ. ರಾಜ್ಯದಲ್ಲಿ ಸಂಪೂರ್ಣ ಪ್ಲಸ್-ಟೂ ಶಿಕ್ಷಣವನ್ನು ಸಾಧಿಸುವುದು ಅಂತಿಮ ಗುರಿಯಾಗಿದೆಯೆಂದು ಕೇರಳದ ಶಿಕ್ಷಣ ಸಚಿವ ಪಿ.ಕೆ. ಅಬ್ದುರಬ್ಬ್ ಸೋಮವಾರ ಹೇಳಿದ್ದಾರೆ.
ಕೇರಳ ವಿಶ್ವವಿದ್ಯಾನಿಲಯದ ಸೆನೆಟ್‌ಹಾಲ್‌ನಲ್ಲಿ ನಡೆಯಲಿರುವ ಸಮಾರಂಭವೊಂದರಲ್ಲಿ ಘೋಷಣೆಯನ್ನು ಮಾಡಲಾಗುವುದು.

ಸರಕಾರದ 3ನೆ ವರ್ಷದ ಅಂಗವಾಗಿ, ಅಭಿಯಾನ 676ರ ಭಾಗವಾಗಿ ರಾಜ್ಯಾದ್ಯಂತ 2ನೆ ಹಂತದ ‘ಅತುಲ್ಯಂ’ ಕಾರ್ಯಕ್ರಮ ನಡೆಸಲಾಗಿತ್ತು. ವಿವಿಧ ಕಾರಣಗಳಿಂದಾಗಿ ಪ್ರಾಥಮಿಕ ಶಿಕ್ಷಣ ಪಡೆಯಲು ಸಾಧ್ಯವಾಗದವರಿಗೆ 4ನೆ ತರಗತಿಗೆ ಸಮಾನವಾದ ಶಿಕ್ಷಣಾರ್ಹತೆ ಪಡೆಯಲು ಈ ಕಾರ್ಯಕ್ರಮ ಅವಕಾಶ ಒದಗಿಸುತ್ತದೆ.

15ರಿಂದ 50ರವರೆಗಿನ ವಯೋಮಾನ ದವರು ಇದರ ಫಲಾನುಭವಿಗಳಾಗಿರುತ್ತಾರೆ. ಸಾಮಾಜಿಕ ನ್ಯಾಯ ಇಲಾಖೆಯ ಅಧಿನದಲ್ಲಿ ಅಂಗನವಾಡಿಗಳಿಂದ ಸಿದ್ಧಗೊಂಡ ಕುಟುಂಬ ದಾಖಲೆಗಳ ಮೂಲಕ ಫಲಾನುಭವಿಗಳನ್ನು ಗುರುತಿಸಲಾಗಿದೆ. ಮುಂದುವರಿಕೆ ಶಿಕ್ಷಣ ಯೋಜನೆಯ ಅಧಿಕಾರಿಗಳು ನಡೆಸಿದ ವಾರ್ಡ್ ಮಟ್ಟದ ಸಮೀಕ್ಷೆಯಿಂದಲೂ ಫಲಾನುಭವಿಗಳನ್ನು ಆರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News