ದ.ಏಶ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಕಿಡ್ನಿಯನ್ನೇ ಮಾರಾಟಕ್ಕಿಟ್ಟ ಆಟಗಾರ !
ಹಣದ ಕೊರತೆ ಎದುರಿಸುತ್ತಿರುವ ಚಿನ್ನದ ಪದಕ ವಿಜೇತ
ಮುಂಬೈ,ಜ.12: ಫೆಬ್ರವರಿಯಲ್ಲಿ ನಡೆಯಲಿರುವ ದಕ್ಷಿಣ ಏಶ್ಯ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು, ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತದ ಸ್ಕ್ವಾಷ್ ಆಟಗಾರನೊಬ್ಬ, ಹಣಕ್ಕಾಗಿ ತನ್ನ ಮೂತ್ರಪಿಂಡವನ್ನೇ ಮಾರಾಟಕ್ಕಿಟ್ಟಿರುವ ಆಘಾತಕಾರಿ ಸುದ್ದಿಯೊಂದು ಇದೀಗ ಬೆಳಕಿಗೆ ಬಂದಿದೆ.
23ರ ಹರೆಯದ ರವಿದೀಕ್ಷಿತ್, ಗುವಾಹತಿ ಹಾಗೂ ಶಿಲ್ಲಾಂಗ್‌ಗಳಲ್ಲಿ ಫೆಬ್ರವರಿ 5-16ರವರೆಗೆ ನಡೆಯಲಿರುವ ದಕ್ಷಿಣ ಏಶ್ಯ ಗೇಮ್ಸ್‌ನಲ್ಲಿ ಭಾರತೀಯ ತಂಡದ ಸದಸ್ಯರಲ್ಲೊಬ್ಬರಾಗಿದ್ದಾರೆ. ಪ್ರಾಯೋಜಕರ ಕೊರತೆಯಿಂದಾಗಿ ತೀವ್ರ ಆರ್ಥಿಕ ಮುಗ್ಗಟ್ಟನ್ನೆದುರಿಸುತ್ತಿರುವ ಅವರು, ತನ್ನ ಮೂತ್ರಪಿಂಡವೊಂದನ್ನು 8 ಲಕ್ಷ ರೂ.ಗೆ ಮಾರಾಟ ಮಾಡುವುದಾಗಿ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಕಟಿಸಿದ್ದರು. ಆ ಬಳಿಕ ತನ್ನ ಈ ನಿರ್ಧಾರದಿಂದ ವಿವಾದ ಉಂಟಾಗಿರುವುದಕ್ಕಾಗಿ ಅವರು ಕ್ಷಮೆಯಾಚಿಸಿದ್ದಾರೆ.
ತನ್ನ ಕುಟುಂಬಿಕರನ್ನು ಹಾಗೂ ಸ್ನೇಹಿತರಿಗೆ ನೋವುಂಟು ಮಾಡಲು ತಾನು ಬಯಸುವುದಿಲ್ಲವೆಂದು ಅವರು ತಿಳಿಸಿದ್ದಾರೆ. ರವಿ 2010ರ ಏಶ್ಯನ್ ಜೂನಿಯರ್ ಚಾಂಪ್ಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. ರವಿದೀಕ್ಷಿತ್‌ರ ತಂದೆ, ಧಾಮ್‌ಪುರ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದಾರೆ. ತನ್ನ ತಂದೆ ಸ್ಕ್ವಾಷ್ ತರಬೇತಿಗಾಗಿ ಈ ಹಿಂದೆ ಹಣದ ನೆರವು ಒದಗಿಸಿದ್ದರು. ಆದರೆ ಈಗ ಅದು ಸಾಕಾಗದೆ, ತನ್ನನ್ನು ತೀವ್ರ ಆರ್ಥಿಕ ಸಂಕಷ್ಟ ಕಾಡುತ್ತಿದೆಯೆಂದು ರವಿ ಹೇಳಿದ್ದರು.
‘‘ ದಕ್ಷಿಣ ಏಶ್ಯ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ನನಗೆ ಕನಿಷ್ಠ 1 ಲಕ್ಷ ರೂ. ಅಗತ್ಯವಿದೆ. ಆದರೆ ನನಗೆ ಯಾವುದೇ ಪ್ರಾಯೋಜಕರು ದೊರೆತಿಲ್ಲ. ಹೀಗಾಗಿ ನಾನು 8 ಲಕ್ಷ ರೂ.ಗೆ ನನ್ನ ಕಿಡ್ನಿಯನ್ನು ಮಾರಾಟ ಮಾಡಲು ಬಯಸಿದ್ದೇನೆ. ಇದರಿಂದಾಗಿ ನಾನು ಈ ವರ್ಷ ಇತರ ಟೂರ್ನಮೆಂಟ್‌ಗಳಲ್ಲಿಯೂ ಪಾಲ್ಗೊಳ್ಳಬಹುದಾಗಿದೆಯೆಂದು ಅವರು ಹೇಳಿದ್ದಾರೆ. ಭಾರತದಲ್ಲಿ ಹಣಕ್ಕಾಗಿ ಅಂಗಾಂಗ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ.
ಆದರೆ ಈ ಬಗ್ಗೆ ಮಾಧ್ಯಮಗಳು, ಭಾರತೀಯ ಸ್ಕ್ವಾಷ್ ರ್ಯಾಕೆಟ್ಸ್ ಫೆಡರೇಶನ್‌ನ್ನು ಸಂಪರ್ಕಿಸಿದಾಗ, ಅದು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಭಾರತದಲ್ಲಿ ಸ್ಕ್ವಾಷ್‌ನಂತಹ ಕ್ರೀಡೆಗಳಿಗೆ ಪ್ರೋತ್ಸಾಹದ ತೀವ್ರ ಕೊರತೆಯಿದೆ. ಕ್ರೀಡೆಗಳಿಗೆ ಜಾಹೀರಾತುಗಳ ಮೂಲಕ ದೊರೆಯುವ ಆದಾಯದ ಶೇ.90ರಷ್ಟು ಭಾಗವು, ಕ್ರಿಕೆಟ್‌ನ ಪಾಲಾಗುತ್ತಿದೆಯೆಂದು ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ರವಿ ಪ್ರಸ್ತುತ ಚೆನ್ನೈನಲ್ಲಿದ್ದು, ಆತನ ಜೊತೆ ತಾನು ದೂರವಾಣಿಯಲ್ಲಿ ಮಾತನಾಡಿರುವುದಾಗಿ , ತಂದೆ ರಾಮಕೈಲಾಶ್ ತಿಳಿಸಿದ್ದಾರೆ. ಕಿಡ್ನಿ ಮಾರಾಟಕ್ಕೆ ಮುಂದಾಗದಂತೆ ಆತನ ತಾಯಿ ಹಾಗೂ ತಾನು ತಿಳಿಹೇಳಿರುವುದಾಗಿ ಅವರು ತಿಳಿಸಿದ್ದಾರೆ. ‘‘ನಾವೆಲ್ಲಾ ಒಟ್ಟಾಗಿ ಸೇರಿ, ಬಿಕ್ಕಟ್ಟಿನಿಂದ ಪಾರಾಗುವ ಬಗ್ಗೆ ಚರ್ಚಿಸಲಿದ್ದೇವೆ. ಕಿಡ್ನಿ ಮಾರಾಟದಂತಹ ಕೃತ್ಯಕ್ಕೆ ಮುಂದಾದಲ್ಲಿ, ಆತ ತನ್ನ ಬದುಕು ಹಾಗೂ ವೃತ್ತಿಗಳೆರಡನ್ನೂ ಹಾಳು ಮಾಡಿಕೊಳ್ಳಲಿದ್ದಾನೆ’’ ಎಂದು ರಾಮ್‌ಕೈಲಾಶ್ ಆತಂಕ ವ್ಯಕ್ತಪಡಿಸಿದ್ದಾರೆ.ಈ ನಡುವೆ ರವಿದೀಕ್ಷಿತ್‌ಗೆ ಕೆಲವು ರಾಜಕಾರಣಿಗಳು ನೆರವಿನ ಭರವಸೆ ನೀಡಿದ್ದಾರೆ. ಉತ್ತರಪ್ರದೇಶ ಸಚಿವ ಮೂಲ್‌ಚಂದ್ ಚೌಹಾಣ್ ಅವರು, ಈ ವಿಷಯವನ್ನು ಉತ್ತರಪ್ರದೇಶ ಮುಖ್ಯಮಂತ್ರಿಯ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.