ಜಲ್ಲಿಕಟ್ಟು ಎಂಬ ಕ್ರೂರ ಆಚರಣೆ
ತಮಿಳುನಾಡಿನಲ್ಲಿ ಹಿಂದೂಗಳ ಭಾವನೆಗಳನ್ನು ಕೆರಳಿಸಿ ಹಿಂದೂ ಓಟ್‌ಬ್ಯಾಂಕ್ ನಿರ್ಮಿಸಲು ಬಿಜೆಪಿ ಯತ್ನಿಸುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೂ ಕೂಡಾ ಚುನಾವಣಾ ರಾಜಕಾರಣಕ್ಕಾಗಿ ಜಲ್ಲಿಕಟ್ಟು ಸ್ಪರ್ಧೆ ಮುಂದುವರಿಯುವುದು ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಈ ಅನಿಷ್ಟ ಆಚರಣೆಯನ್ನು ಮುಂದುವರಿಸಿಕೊಂಡು ಹೋಗಲು ಅವರು ಪರೋಕ್ಷವಾಗಿ ಕಾರಣರಾಗಿದ್ದಾರೆ.
ರಾಜಕೀಯ ಪಕ್ಷಗಳ ಚುನಾವಣಾ ಲಾಭ ನಷ್ಟಗಳ ಲೆಕ್ಕಾಚಾರ ದೇಶದ ಶಾಂತಿ ಮತ್ತು ನೆಮ್ಮದಿಗೆ ಎಂತಹ ಧಕ್ಕೆಯನ್ನು ಉಂಟು ಮಾಡುತ್ತದೆ ಎಂಬುದು ಅಯೋಧ್ಯೆ ವಿವಾದದಿಂದ ಸ್ಪಷ್ಟವಾಗಿದೆ. ಪ್ರತಿಬಾರಿ ಚುನಾವಣೆ ಬಂದಾಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿವಾದವನ್ನು ಉಂಟು ಮಾಡಿ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಕೋಮುವಾದಿ ಶಕ್ತಿಗಳು ನಿರಂತರವಾಗಿ ಮಾಡುತ್ತಾ ಬಂದಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಈ ಕಾರಣಕ್ಕಾಗಿ ಕೋಮುಗಲಭೆ ನಡೆದು ಹಲವಾರು ಸಾವುನೋವುಗಳು ಸಂಭವಿಸಿದವು. ಈಗ ಮತ್ತೆ ಉತ್ತರಪ್ರದೇಶ ಚುನಾವಣೆ ಸಮೀಪಿಸುತ್ತಿರುವಂತೆ ಸಂಘಪರಿವಾರ ಕಲಹದ ಕಿಡಿ ಹೊತ್ತಿಸಲು ಸಿದ್ಧತೆ ನಡೆಸುತ್ತಿದೆ. ಮಂದಿರ ನಿರ್ಮಾಣದ ಸಾಮಗ್ರಿಗಳನ್ನು ಅಯೋಧ್ಯೆಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಈ ಕುರಿತು ಪ್ರಚಾರ ಆಂದೋಲನವನ್ನು ಆರಂಭಿಸಲಾಗಿದೆ. ಅಯೋಧ್ಯೆಯಲ್ಲಿ ಇಂತಹ ಹುನ್ನಾರವನ್ನು ಕೋಮುವಾದಿ ಶಕ್ತಿಗಳು ನಡೆಸಿವೆ. ಇನ್ನೊಂದೆಡೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಎಂಬ ಅಮಾನವೀಯ ಆಚರಣೆಯ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವು ಮಾಡಿದ ಕೇಂದ್ರದ ಕ್ರಮ ಆಕ್ಷೇಪಕ್ಕೆ ಗುರಿಯಾಗಿದೆ. ಈ ವಿವಾದ ನ್ಯಾಯಾಂಗದ ಅಂಗಳಕ್ಕೆ ಹೋಗಿದೆ.
ಸಂಕ್ರಾಂತಿ ಹಬ್ಬದ ವೇಳೆ ನಡೆಯುವ ಜಲ್ಲಿಕಟ್ಟು ಸ್ಪರ್ಧೆಯ ಪರಿಣಾಮವಾಗಿ 2010ರಿಂದ 2014ರ ವರೆಗೆ 4 ವರ್ಷಗಳ ಕಾಲಾವಧಿಯಲ್ಲಿ 1,100 ಜನರು ಗಾಯಗೊಂಡಿದ್ದಾರೆ. ಒಂದು ಮಗು ಸೇರಿ 17 ಮಂದಿ ಸಾವಿಗೀಡಾಗಿದ್ದಾರೆ. ಹೋರಿಗಳಿಗೆ ಮದ್ಯ ಕುಡಿಸಿ ಅವುಗಳಿಗೆ ಕತ್ತಿಯಿಂದ ತಿವಿಯಲಾಗುತ್ತದೆ. ಬಾಲವನ್ನು ಕತ್ತರಿಸಲಾಗುತ್ತದೆ. ಇವೇ ಮುಂತಾದ ಕ್ರೂರ ವರ್ತನೆಗಳು ಪ್ರಾಣಿಪ್ರಿಯರನ್ನು ಆತಂಕಕ್ಕೀಡುಮಾಡಿದ್ದವು. ಈ ಹಿನ್ನೆಲೆಯಲ್ಲಿ ಪ್ರಾಣಿ ಹಿತರಕ್ಷಣಾ ಸಂಘಗಳು ಇದನ್ನು ನಿಷೇಧಿಸಬೇಕೆಂದು ನಿರಂತರವಾಗಿ ಹೋರಾಟ ಮಾಡಿದ ಪರಿಣಾಮವಾಗಿ ಜಲ್ಲಿಕಟ್ಟಿಗೆ ನಿಷೇಧ ಹೇರಲಾಗಿತ್ತು. ಈ ಕ್ರೌರ್ಯಕ್ಕೆ ತೀವ್ರ ಆಕ್ಷೇಪ ಬಂದ ನಂತರ ಕೆಲ ನಿಬಂಧನೆಗಳೊಂದಿಗೆ ಹಿಂದಿನ ಯುಪಿಎ ಸರಕಾರ ಈ ಅಮಾನವೀಯ ಆಚರಣೆಯನ್ನು ನಿಷೇಧಿಸಿತ್ತು. ಆದರೆ ಈಗ ಎನ್‌ಡಿಎ ಸರಕಾರ ನಿರ್ಬಂಧವನ್ನು ತೆರವುಗೊಳಿಸಿದೆ. ಇದನ್ನು ಪ್ರಶ್ನಿಸಿ ಪ್ರಾಣಿದಯಾ ಸಂಘದವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಿಂದ ಸುಪ್ರೀಂ ಕೋರ್ಟ್ ಸದ್ಯಕ್ಕೆ ತಡೆ ನೀಡಿದೆ. ನಾಲ್ಕು ವರ್ಷಗಳ ಹಿಂದೆ ಜಲ್ಲಿಕಟ್ಟು ಸ್ಪರ್ಧೆಯನ್ನು ನಿಷೇಧಿಸಿದ ನಂತರ ಈ ಅಮಾನವೀಯ ಆಚರಣೆ ನಿಂತುಹೋಗಿತ್ತು. ಕಳೆದ ಎರಡು ವರ್ಷಗಳಿಂದ ಜಲ್ಲಿಕಟ್ಟು ಸ್ಪರ್ಧೆ ಇಲ್ಲದೆ ಸಂಕ್ರಾಂತಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಗಿತ್ತು. ಜಲ್ಲಿಕಟ್ಟು ಸ್ಪರ್ಧೆ ನಿಂತು ಹೋದ ನಂತರ ಅದನ್ನು ಪುನರಾರಂಭಿಸಬೇಕೆಂದು ಜನತೆ ಒತ್ತಾಯಿಸಲಿಲ್ಲ. ಆದರೆ ರಾಜಕೀಯ ಪಕ್ಷಗಳಿಗೆ ತಮ್ಮ ಸ್ವಾರ್ಥ ಸಾಧನೆಗಾಗಿ ಇದು ಬೇಕಾಗಿದೆ. ತಮಿಳುನಾಡು ಮತ್ತು ಕೇರಳಗಳಲ್ಲಿ ಈ ವರ್ಷಾಂತ್ಯದೊಳಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲುವಿನ ಬಾವುಟ ಹಾರಿಸಬೇಕೆಂದು ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಕೇರಳದಲ್ಲಿ ಪ್ರಗತಿಪರ ಸಂತ ನಾರಾಯಣ ಗುರು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿ ಅಲ್ಲಿ ಕಾರ್ಯಕ್ರಮವೊಂದನ್ನು ಬಿಜೆಪಿ ನಡೆಸಿತ್ತು. ಅದೇ ರೀತಿ ತಮಿಳುನಾಡಿನಲ್ಲಿ ಹಿಂದೂಗಳ ಭಾವನೆಗಳನ್ನು ಕೆರಳಿಸಿ ಹಿಂದೂ ಓಟ್‌ಬ್ಯಾಂಕ್ ನಿರ್ಮಿಸಲು ಬಿಜೆಪಿ ಯತ್ನಿಸುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೂ ಕೂಡಾ ಚುನಾವಣಾ ರಾಜಕಾರಣಕ್ಕಾಗಿ ಜಲ್ಲಿಕಟ್ಟು ಸ್ಪರ್ಧೆ ಮುಂದುವರಿಯುವುದು ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಈ ಅನಿಷ್ಟ ಆಚರಣೆಯನ್ನು ಮುಂದುವರಿಸಿಕೊಂಡು ಹೋಗಲು ಅವರು ಪರೋಕ್ಷವಾಗಿ ಕಾರಣರಾಗಿದ್ದಾರೆ.
ಗೋಹತ್ಯಾ ನಿಷೇಧ ಹೆಸರಿನಲ್ಲಿ ಭೂಮಿ ಮತ್ತು ಆಕಾಶ ಒಂದು ಮಾಡುವ ಕೋಮುವಾದಿ ಶಕ್ತಿಗಳು ಜಲ್ಲಿಕಟ್ಟು ಸ್ಪರ್ಧೆಯ ಹೆಸರಿನಲ್ಲಿ ಹೋರಿಗಳಿಗೆ ನೀಡುವ ಚಿತ್ರಹಿಂಸೆಯ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರದಲ್ಲಿ ಅವರದೇ ಪಕ್ಷದ ಸರಕಾರವಿದೆ. ಪ್ರಾಣಿಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ಜಲ್ಲಿಕಟ್ಟು ಸ್ಪರ್ಧೆ ನಿಷೇಧವನ್ನು ತೆರವುಗೊಳಿಸಲು ಅವಕಾಶ ನೀಡಬಾರದಿತ್ತು. ಆದರೆ ಸಂಘಪರಿವಾರಕ್ಕೆ ಗೋವಿನ ಬಗ್ಗೆ ಮಾತ್ರ ವಿಶೇಷವಾದ ಪ್ರೀತಿ ಇದೆ. ಸಂಕುಚಿತವಾದ ಚುನಾವಣಾ ರಾಜಕಾರಣಕ್ಕಾಗಿ ಜನರ ಧಾರ್ಮಿಕ ನಂಬಿಕೆಗಳನ್ನು ಕೆರಳಿಸುವ ಇಂತಹ ಸೂಕ್ಷ್ಮ ಪ್ರಶ್ನೆಗಳನ್ನು ಎತ್ತಿಕೊಂಡು ಅಮಾನವೀಯ ಆಚರಣೆಗೆ ಅವಕಾಶ ನೀಡುವುದು ಸರಕಾರಕ್ಕೆ ಶೋಭೆ ತರುವುದಿಲ್ಲ. ಸ್ವತಂತ್ರ ಭಾರತದ ಕಾನೂನಿಗೆ ವ್ಯತಿರಿಕ್ತವಾದ ಯಾವುದೇ ಆಚರಣೆಗೆ ಸರಕಾರ ಅವಕಾಶ ನೀಡಬಾರದು. ಈ ವರ್ಷಾಂತ್ಯದ ಒಳಗೆ ಕೆಲ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಉಂಟಾದ ಮುಖಭಂಗ ಇತರ ರಾಜ್ಯಗಳಲ್ಲಿ ಆಗದಂತೆ ತಪ್ಪಿಸಿಕೊಳ್ಳುವುದು ಬಿಜೆಪಿಗೆ ಬೇಕಾಗಿದೆ. ನರೇಂದ್ರ ಮೋದಿ ಅವರ ಕಳೆದ ಎರಡು ವರ್ಷಗಳ ಆಡಳಿತದಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸರಕಾರ ವಿಫಲಗೊಂಡಿದೆ. ಈ ವೈಫಲ್ಯವನ್ನು ಉಳಿಸಿಕೊಳ್ಳಲು ಇಂತಹ ಭಾವನಾತ್ಮಕ ವಿಷಯಗಳನ್ನು ಕೋಮುವಾದಿ ಶಕ್ತಿಗಳು ಕೆರಳಿಸುತ್ತಿವೆ. ಈ ಬಗ್ಗೆ ಜನ ಜಾಗೃತರಾಗಿರಬೇಕಾಗಿದೆ.