×
Ad

ಶ್ರೀನಗರ ಬಳಿ ಯುವಕನ ಶವ ಪತ್ತೆ, ಪ್ರತಿಭಟನೆ,ಬಂದ್,ಕಲ್ಲು ತೂರಾಟ

Update: 2016-01-14 23:50 IST

 ಶ್ರೀನಗರ,ಜ.14: ಬಡ್ಗಾಂವ್ ಜಿಲ್ಲೆಯ ಪೀರಬಾಗ್ ಎಂಬಲ್ಲಿ ಗುರುವಾರ ಬೆಳಿಗ್ಗೆ ತೀವ್ರ ಗಾಯಗಳಿಂದ ಕೂಡಿದ್ದ ಯುವಕನೋರ್ವನ ಶವವು ಪತ್ತೆಯಾದ ಬಳಿಕ ಸ್ಥಳೀಯರಿಂದ ವ್ಯಾಪಕ ಪ್ರತಿಭಟನೆಗಳು ನಡೆದವು.
 ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಉವೈಸ್ ಬಶೀರ್ ಮಲಿಕ್(22) ಮಂಗಳವಾರ ಮನೆಯಿಂದ ಹೊರಹೋದವನು ಆ ಬಳಿಕ ವಾಪಸಾಗಿರಲಿಲ್ಲ. ಆತನ ತಂದೆ ಹಮ್‌ಹಮಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಗುರುವಾರ ಬೆಳಗ್ಗೆ ಮನೆ ಸಮೀಪದ ರೈಲು ಹಳಿಯ ಬಳಿ ಆತನ ಶವ ಪತ್ತೆಯಾಗಿದೆ.
ಶವದ ಕುತ್ತಿಗೆ ಮತ್ತು ಎದೆಯ ಮೇಲೆ ಗಾಯದ ಗುರುತುಗಳಿದ್ದು, ತೋಳಿನ ಮೂಳೆ ಪಲ್ಲಟಗೊಂಡಿತ್ತು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

 ಯುವಕನ ಸಾವಿನ ಸುದ್ದಿ ಹರಡುತ್ತಿದ್ದಂತೆ ಮಹಿಳೆಯರೂ ಸೇರಿದಂತೆ ಆಕ್ರೋಶಿತ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ದಿಢೀರ್ ಬಂದ್ ಕೂಡ ನಡೆಯಿತು. ಪೀರಬಾಗ್ ಶ್ರೀನಗರದ ಗಡಿಗೆ ಹೊಂದಿಕೊಂಡಿದ್ದು,ಉದ್ರಿಕ್ತರು ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೊಲೀಸ್ ಮುಖ್ಯ ಕಚೇರಿ ಕಟ್ಟಡಕ್ಕೆ ಕಲ್ಲುಗಳನ್ನು ತೂರಿದರು. ಪೊಲೀಸರೂ ಕಲ್ಲೇಟುಗಳಿಗೆ ಗುರಿಯಾಗಿದ್ದರು.
ಪೊಲೀಸರು ಅಶ್ರುವಾಯು ಪ್ರಯೋಗಿಸಿ ಜನರನ್ನು ಚದುರಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಶ್ರೀನಗರದ ಜಿಲ್ಲಾಧಿಕಾರಿಗಳು ಈ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News