ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ

Update: 2016-01-14 18:34 GMT

ಡುಪಿಯ ಮಠಗಳಲ್ಲಿರುವ ಕೈಷಿಯತ್ತು ಪ್ರಕಾರ ಕೃಷ್ಣನ ವಿಗ್ರಹದ ಪ್ರತಿಷ್ಠಾಪನೆಯಾದುದು 1238ರಲ್ಲಿ. ‘ಶಿವಳ್ಳಿ’ ಎಂಬ ಹೆಸರು ಬಂದಿರುವುದು ಅನಂತೇಶ್ವರ ದೇವಸ್ಥಾನದಿಂದ. ಶಂಕರಾಚಾರ್ಯರ ಶಿಷ್ಯ ಹಸ್ತಾಮಲಕ ಆಚಾರ್ಯನು 15 ಅಂಗುಲದ ವೇಣುಗೋಪಾಲನ ವಿಗ್ರಹವನ್ನು ಸ್ಥಾಪಿಸಿರುವುದು ‘ಶಂಕರವಿಜಯ’ (ಪು.206)ದಲ್ಲಿ ಉಲ್ಲೇಖಗೊಂಡಿದೆ. ಕೃಷ್ಣಮಠಕ್ಕೆ ಪ್ರವೇಶ ಮಾಡುತ್ತಲೆ ಪೂರ್ವಮುಖವಾಗಿ ಸಣ್ಣ ಗುಡಿಯಲ್ಲಿ ಇದನ್ನು ಸ್ಥಾಪಿಸಲಾಗಿತ್ತು. ಕುಂಜಿತ್ತಾಯ ಮನೆತನಕ್ಕೆ ಆರಾಧ್ಯವಾದ ಈ ವೇಣುಗೋಪಾಲ ‘ತೈಲಕೃಷ್ಣ’ನೆಂದು ಹೆಸರುವಾಸಿಯಾಗಿದ್ದ. ಆಚಾರ್ಯ ಮಧ್ವರು ಈಗಿನ 18 ಅಂಗುಲದ ಕೃಷ್ಣವಿಗ್ರಹವನ್ನು ಪಶ್ಚಿಮ ಮುಖವಾಗಿ ನಿಲ್ಲಿಸಿದ್ದರು. ಈ ಘಟನೆಯ ನಂತರ ತೈಲಕೃಷ್ಣನಿಗೆ ಪೂಜೆಯಿರಲಿಲ್ಲ; ಇದೀಗ ಈ ತೈಲಕೃಷ್ಣ ಕಂಗಿಮಠದಲ್ಲಿದ್ದಾನೆ.

ಆಚಾರ್ಯ ಮಧ್ವರು ಕೃಷ್ಣನನ್ನು ಪಶ್ಚಿಮಮುಖವಾಗಿಯೇ ಪ್ರತಿಷ್ಠಾಪಿಸುವುದು ಅನಿವಾರ್ಯವಾಗಿತ್ತು. ಏಕೆಂದರೆ, ಇದು ಒಂದು ಮಠ (ಉಡುಪಿಯ ಅಷ್ಟಮಠಗಳ ಗರ್ಭಗುಡಿ ಪಶ್ಚಿಮಮುಖಿಯಾಗಿಯೇ ಇರುವುದು). ಅದಕ್ಕಿಂತ ಹೆಚ್ಚಾಗಿ ಕೃಷ್ಣಮಠದ ಪೂರ್ವದಲ್ಲಿ ಮಧ್ವಸರೋವರ ವಿರುವುದರಿಂದ ತೀರ್ಥಮಂಟಪಕ್ಕೆ ಸ್ಥಳ ಸಂಕೋಚವಾಗುತ್ತಿತ್ತು.ಅನಂತೇಶ್ವರ ದೇವಳಕ್ಕೆ ಸೇರಿದ ಜಾಗದಲ್ಲಿ ಪಶ್ಚಿಮಮುಖವಾಗಿಯೇ ಕೃಷ್ಣಮಠವನ್ನು ಕಟ್ಟಲಾಯಿತು. ದೇವರ ವಿಷಯವಾದುದರಿಂದ ಆ ಕಾಲದಲ್ಲಿ ಯಾರೂ ವಿರೋಧ ವ್ಯಕ್ತಪಡಿಸುವಂತಿರಲಿಲ.್ಲ

1394ರ ಶಾಸನದಲ್ಲಿ ಶಿವಳ್ಳಿಯನ್ನು ವಾರಣಾಸಿಯಷ್ಟೇ ಪವಿತ್ರವೆಂದು ಸಂಭಾವಿಸಲಾಗಿದೆ. ಪ್ರಸಿದ್ಧ ಚರಿತ್ರಕಾರ, ನಾಣ್ಯಶಾಸ್ತ್ರಜ್ಞ ಡಿ.ಎಂ.ಮುಕುಂದ ಪ್ರಭುಗಳು ಉಡುಪಿಯ ಕೃಷ್ಣನ ಪ್ರತಿಮೆ ಗೋವೆಯ ಗೋರೆಗಾಂನ ಕವಲೇಶ್ವರ ದೇವಾಲಯದ ಅಂಗಳದಲ್ಲಿ ಬಿದ್ದಿರುವ ಭಿನ್ನವಿಗ್ರಹವನ್ನು ಆಶ್ಚರ್ಯಕರವಾಗಿ ಹೋಲುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. 1614ರ ಎರಡು ಶಾಸನಗಳಲ್ಲಿ ಕೊಂಕಣವರ್ಗದ ಬ್ರಾಹ್ಮಣರು ಕೃಷ್ಣನಿಗೆ ದತ್ತಿ ಬಿಟ್ಟಿರುವುದು ಆಕಸ್ಮಿಕವಲ್ಲ ಎಂದೆನಿಸುತ್ತದೆ. 16ನೆ ಶತಮಾನದ ಉತ್ತರಾರ್ಧದಲ್ಲಿ ಕನಕದಾಸನು ಉಡುಪಿಗೆ ಬಂದಿದ್ದು, ಸ್ವತಃ ಕವಿಯಾಗಿದ್ದ ವಾದಿರಾಜನು ಆತನಿಗೆ ಕೃಷ್ಣದರ್ಶನ ಮಾಡಿಸುವಂತಿರಲಿಲ್ಲವಾದರೂ ಕನಕನ ಕುರಿತು ಪ್ರೀತಿ ಗೌರವಗಳಿದ್ದುದರಿಂದ ರಾತ್ರಿ ಹೊತ್ತು ಇದೀಗ ಕನಕನ ಕಿಂಡಿ ಇರುವ ಜಾಗದಲ್ಲಿ ಗೋಡೆಯ ಇಟ್ಟಿಗೆಯನ್ನು ತೆಗೆಸಿ ಕೃಷ್ಣನ ದರ್ಶನ ಮಾಡಿಸಿರಬೇಕು. ಕನಕನ ಕಿಂಡಿಯ ಉತ್ತರ ಭಾಗದಲ್ಲಿ ಕನಕ ಗಂಜಿ ಬೇಯಿಸಿದ ಜಾಗ ‘ಗಂಜಿಕಿಂಡಿ’ ಎಂದೇ ಹೆಸರಾಗಿದೆ. ಕನಕ ಉಡುಪಿಗೆ ಬಂದು ಹೋದ ನೆನಪಿನಲ್ಲಿ ಕೃಷ್ಣನಿಗೆ ಬೆಳ್ಳಿಯ ಕರಟದಲ್ಲಿ ಗಂಜಿಯನ್ನು ನೈವೇದ್ಯವಾಗಿಡಲಾಗುತ್ತಿದೆ.

ಮಾಸ್ತಿ ಅವರ ’ಕನಕಣ್ಣ’ ಎಂಬ ನಾಟಕದಲ್ಲಿ ಕನಕ ಪುರಂದರದಾಸನಿಗೆ ಹೇಳುವ ಒಂದು ಮಾತು : ವಾದಿರಾಜ ಕಿಂಡಿ ಕೊರೆಸಿ ಉತ್ಸವ ಮೂರ್ತಿಯನ್ನು ಗೋಡೆಯ ಕಡೆ ಕಿಂಡಿಯತ್ತ ಮುಖಮಾಡಿ ದೇವರ ದರ್ಶನ ಮಾಡಿಸಿದರು (ಪು.43). ಆ ಕಾಲದಲ್ಲಿ ಕುರುಬರಿಗೆ ಕೃಷ್ಣಮಠಕ್ಕೆ ಪ್ರವೇಶವಿಲ್ಲವಾಗಿದ್ದು, ಸಾಂಪ್ರದಾಯಿಕ ಬ್ರಾಹ್ಮಣರು ಮಲಗಿದ ಮೇಲೆ ವಾದಿರಾಜರು ಇಟ್ಟಿಗೆ ತೆಗೆಸಿರಬೇಕು.ಕುರುಬ ಕನಕನಿಗೆ ಕೃಷ್ಣನ ದರ್ಶನ ಮಾಡಿಸಿದ ಹಾಗೂ ಆಯಿತು; ದೇವಸ್ಥಾನದ ಪಾವಿತ್ರವೂ ಉಳಿಯಿತು.ಹೊರಗೆ ಕನಕನ ಕಿಂಡಿ; ಒಳಗೆ ಕೃಷ್ಣನ ಹುಂಡಿ; ವೈದಿಕಶಾಹಿ ಸಹಸ್ರಾರು ವರ್ಷಗಳಿಂದ ನಡೆಸುತ್ತ ಬಂದ ತಂತ್ರಗಾರಿಕೆ ಇದು.

1934ರಲ್ಲಿ ಮಹಾತ್ಮ ಗಾಂಧಿ ಉಡುಪಿಗೆ ಬಂದಿದ್ದರು.ಅವರು ಪರಿಶಿಷ್ಟ ಜಾತಿಯವರಿಗೆ ಪ್ರವೇಶ ನೀಡದ ದೇವಾಲಯಗಳಿಗೆ ಪ್ರವೇಶಿಸುತ್ತಿರಲಿಲ್ಲ.ಹಾಗಾಗಿ ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಿ ಮುಂದೆ ಹೋದರು. ರಾಷ್ಟ್ರಪತಿ ಜೈಲ್‌ಸಿಂಗ್ ಉಡುಪಿಗೆ ಬಂದಾಗ ಕನಕನಿಗೇಕೆ ಕೃಷ್ಣಮಠದೊಳಗೆ ಜಾಗ ಕೊಟ್ಟಿಲ್ಲ ಎಂದು ಆಕ್ಷೇಪಿಸಿದ್ದರು.ಕನಕನ ಕಿಂಡಿಯ ಎದುರು ಪಶ್ಚಿಮದಲ್ಲಿ ಕನಕನ ವಿಗ್ರಹ ಮತ್ತು ಗುಡಿಯನ್ನು ಕೊಡುಗೈ ದಾನಿ ಮಧ್ವರಾಜರು ನಿರ್ಮಿಸಿದ್ದರು.ಮೊದಲು ಕನಕನೆದುರು ನಂದಾದೀಪವಿತ್ತು; ಪೂಜೆಯೂ ಇತ್ತು.ಈಗ ಅದೇನೂ ಇಲ್ಲ.ಕೃಷ್ಣನಿಗೆ ಹಾಕಿದ ಹಾರದ ‘ನಿರ್ಮಾಲ್ಯ’ ಕನಕನ ಕೊರಳಿಗೆ ಹಾಕಲಾಗುತ್ತದೆ. ಕಾಗಿನೆಲೆ ಮಠದ ಯತಿಗಳು ಪೂಜೆಗೆ ಅವಕಾಶ ನೀಡಲು ಯಾಚಿಸಿದರೂ ಅಷ್ಟಮಠಗಳು - ಅವುಗಳಲ್ಲೂ ವರ್ಚಸ್ವಿ ಯತಿ ಪೇಜಾವರ ಶ್ರೀ ಕೂಡ - ಅನುಮತಿ ನೀಡಿಲ್ಲ ಎನ್ನುವುದು ಖೇದಕರ.

2004ರಲ್ಲಿ 45 ಲಕ್ಷ ರೂ.ವೆಚ್ಚದಲ್ಲಿ ಕನಕ ಗೋಪುರವನ್ನು ನವೀಕರಿಸಿ ನಿರ್ಮಿಸಲಾಯಿತು.ಆಗ ನಾನು ಪತ್ರಿಕೆಗಳಲ್ಲಿ ಪ್ರಾಯೋಗಿಕ ಸಲಹೆಯೊಂದನ್ನು ನೀಡಿದೆ. ದೇವರನ್ನಾದರೂ ಎದುರಿನಿಂದ ನೋಡೋಣ; ಹಿಂಬದಿಯಿಂದ ಸಂದರ್ಶಿಸುವುದು ಬೇಡ - ಎಂದು.ಅಲ್ಲದೆ, ಅಷ್ಟು ದುಬಾರಿ ವೆಚ್ಚದ ಬದಲು ಮಳೆ ಬಿಸಿಲಿನಿಂದ ಭಕ್ತರಿಗೆ ರಕ್ಷಣೆ ನೀಡುವ ಸಾಮಾನ್ಯ ಗೋಪುರ ಸಾಕಿತ್ತು.ಜೊತೆಗೆ ಕನಕನ ಕಿಂಡಿಯ ಜಾಗದಲ್ಲಿ ಬಾಗಿಲು ಮಾಡಿ ಅದಕ್ಕೆ ‘ಕನಕ ದ್ವಾರ’ ಎಂದು ನಾಮಕರಣ ಮಾಡಿದರೆ ಉಡುಪಿಯೊಂದಿಗೆ ಕನಕನ ಹೆಸರು ಅಜರಾಮರವಾಗಿ ಉಳಿಯಬಲ್ಲುದು. ಹೀಗೆ ಮಾಡುವುದು ಉತ್ಸವಾದಿ ಸಂದರ್ಭಗಳಲ್ಲಿ ನೂಕುನುಗ್ಗಲನ್ನು ನಿಯಂತ್ರಿಸಲು, ಕಾನೂನು ವ್ಯವಸ್ಥೆ ಕಾಪಾಡಲು ಅನುವಾಗುತ್ತಿತ್ತು. ಏಕೆಂದರೆ, ಶೀರೂರು ಮಠದೆದುರು ಅಂದರೆ ಕನಕನ ಕಿಂಡಿಯ ಪಶ್ಚಿಮದಲ್ಲಿ ಧಾರಾಳ ಸ್ಥಳಾವಕಾಶವಿದ್ದು ಅಲ್ಲಿಂದ ಪ್ರವೇಶ, ಈಗಿನ ಪ್ರವೇಶದ್ವಾರದಿಂದ ನಿರ್ಗಮನಕ್ಕೆ ಅವಕಾಶ ನೀಡಿದಲ್ಲಿ ಭಕ್ತರಿಗೂ ಕಾನೂನು ಪಾಲಕರಿಗೂ ಅನುಕೂಲ; ವ್ಯಾವಹಾರಿಕವಾಗಿ ವಿವೇಕದ ಕ್ರಮವಾಗುತ್ತಿತ್ತು.ಇದೀಗ ಹನ್ನೆರಡು ವರ್ಷಗಳ ನಂತರವೂ ಕಾನೂನು ಪಾಲಕರಾಗಲಿ, ಮಠೀಯ ಶಕ್ತಿಗಳಾಗಲಿ, ಆಡಳಿತಾಧಿಕಾರಿಗಳಾಗಲಿ ಈ ನಿಟ್ಟಿನಲ್ಲಿ ಮುಂದಡಿಯಿಡುವ ವಿವೇಚನೆ ಹೊಂದಿಲ್ಲ.

‘ಕನಕನ ಕಿಂಡಿಯೂ ಕೃಷ್ಣನ ಹುಂಡಿಯೂ, ಎಂಬ ನನ್ನ ಕಿರುಗ್ರಂಥದಲ್ಲಿ ಶಾಸನಾಧಾರದಿಂದ ಉಡುಪಿಯಲ್ಲಿ ಶೈವ - ಮಾಧ್ವ್ವರ ನಡುವಣ ಸಂಘರ್ಷ ಮಧ್ವಾಚಾರ್ಯರ ಕಾಲದಿಂದ ವಾದಿರಾಜರ ಕಾಲದವರೆಗೂ ಮುಂದುವರಿದುದ್ದನ್ನು ನಿರೂಪಿಸಿದ್ದೆ. ನಾನು ತರ್ಕಬದ್ಧವಾಗಿ ಪ್ರಸ್ತಾಪಿಸಿದ್ದ ಅಂಶಗಳಿಗೆ ಕೆಲವೇ ತಿಂಗಳಲ್ಲಿ ದೊರೆತ ಶಾಸನ ಸಮರ್ಥನೆ ನೀಡಿತ್ತು.ಆದರೆ ಆ ಶಾಸನವನ್ನು ಓದಿದ ಚರಿತ್ರಕಾರರು ಮಠೀಯ ಶಕ್ತಿಗಳಿಗೆ ನೋವಾಗಬಾರದೆಂಬ ಉದ್ದೇಶದಿಂದ ಶಾಸನದ ಪೂರ್ಣಪಾಠವನ್ನು ಪ್ರಕಟಿಸದೆ ಸುರಕ್ಷಿತ ಮಾರ್ಗವನ್ನನುಸರಿಸಿ ಸಾರಾಂಶವನ್ನು ಖಾಸಗಿ ಪತ್ರಿಕೆಯೊಂದರಲ್ಲಿ ಪ್ರಕಟಿಸಿದರು.ಅವರು ಉಡುಪಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದರು.ತಾನು ಶೋಧಿಸಿದ ಸತ್ಯವನ್ನು ಜನತೆಗೆ ತಿಳಿಸುವ ಬದ್ಧತೆಯಿಲ್ಲದ ತಥಾಕಥಿತ ವಿದ್ವಾಂಸರು, ಶೋಧಕರು ನಮ್ಮ ನಡುವೆ ಇರುತ್ತಾರೆನ್ನುವುದಕ್ಕೆ ಇದೊಂದು ನಿದರ್ಶನ.

1613ರ ಶಾಸನವೊಂದರಲ್ಲಿ ವಾದಿರಾಜರ ಶಿಷ್ಯ ವೇದವೇದ್ಯ ತೀರ್ಥರ ಪರ್ಯಾಯ ಕಾಲದಲ್ಲಿ ಕೃಷ್ಣನ ವಿಗ್ರಹ ಚಲನೆಯಾದ ಉಲ್ಲೇಖವಿದೆ. ತೀರ್ಥಮಂಟಪದೆದುರು ಎರಡು ನೆಲೆಯಲ್ಲಿ ತಾಮ್ರದ ಹೊದಿಕೆ ಹಾಕಲಾಯಿತು.ಬಹುಶಃ ಇದೇ ಸಂದರ್ಭದಲ್ಲಿ ಈಗಿನ ಕನಕನ ಕಿಂಡಿಗೂ ಅಂತಿಮ ಸ್ಪರ್ಶ ನೀಡಲಾಗಿರಬೇಕು.

ಹರಿದಾಸರಲ್ಲೊಬ್ಬ ಗೋಪಾಲದಾಸ.ಮೆಕ್ಕೆಜೋಳದಿಂದ ಬಕ್ರಿ ಮಾಡಿ ದೇವರಿಗೆ ಸಮರ್ಪಿಸಿ ತಿನ್ನುತ್ತಿದ್ದ. ಅಹನ್ಯಹನಿ ಬದುಕುತ್ತಿದ್ದ ದಾಸರೆಲ್ಲಿ ?ಧನಕನಕಾದಿ ಅಷ್ಟೈಶ್ವರ್ಯಗಳ ಬೆನ್ನ ಹತ್ತುತ್ತಿರುವ ಇಂದಿನ ಸನ್ಯಾಸಿಗಳೆಲ್ಲಿ?ಉಡುಪಿ ಹಾಜಿ ಅಬ್ದುಲ್ಲಾರ ಊರು.ಪ್ರತೀ ದಿನ ಬೆಳಗ್ಗೆ ಕೃಷ್ಣನನ್ನು ದರ್ಶನ ಮಾಡಿ ನಂತರ ನಮಾಜಿಗೆ ಹೋಗುತ್ತಿದ್ದ ಈ ಮಹಾನ್ ಚೇತನ, ಉಡುಪಿಯೇ ಏಕೆ, ಇಂಡಿಯಾದ ಕೋಮು ಸೌಹಾರ್ದಕ್ಕೆ ಚಿರಂತನ ಪ್ರತೀಕ.ಉಡುಪಿಯ ಲಕ್ಷದೀಪದ ವೇಳೆ ಮಳೆ ಬಂದು ದೀಪಗಳೆಲ್ಲಾ ಆರಿದಾಗ ಕರ್ಪೂರ ತರಿಸಿ ದೀಪಗಳನ್ನು ಮತ್ತೆ ಬೆಳಗಿಸಿದಾತ.ಉಡುಪಿಯ ಬಡಗುಪೇಟೆಯ ಅಂಗಡಿ ಮುಂಗಟ್ಟುಗಳೆಲ್ಲಾ ಅವರ ಪ್ರೇರಣೆಯಿಂದ ರೂಪುಗೊಂಡವು. ಕಾರ್ಪೊರೇಶನ್ ಬ್ಯಾಂಕ್ ಸ್ಥಾಪಕ.ಸರಕಾರಿ ಹೆರಿಗೆ-ಮಕ್ಕಳ ಆಸ್ಪತ್ರೆಗೆ ಭೂಮಿ ದಾನ ಮಾಡಿದವರು.ಉಡುಪಿಯ ಖಾಸಗಿ ಟಿ.ವಿ. ವಾಹಿನಿಯೊಂದು ತನ್ನ ಸುದ್ದಿ ಬಿತ್ತರಿಸುವ ಮೊದಲು ಇವರ ಭಾವಚಿತ್ರವನ್ನು ಪ್ರದರ್ಶಿಸದೆ ಪ್ರಚಾರಪ್ರಿಯ ಇಬ್ಬಂದಿ ನಿಲುವಿನ ಸನ್ಯಾಸಿಯ ಚಿತ್ರವನ್ನು ಪ್ರದರ್ಶಿಸುತ್ತಾ ಬಂದಿದೆ. ನೆನಪುಗಳಲ್ಲೂ ಆಯ್ಕೆ ಬೇಕೇ?ಈ ಆಯ್ಕೆ ಜನಪರವೂ ಪ್ರಗತಿಪರವೂ ಆಗಿರಬಾರದೇಕೆ?

‘ಹಣವೇ ನಿನ್ನ ಗುಣವೇನೆಂದು ಬಣ್ಣಿಸುವೆ ?ಅಂಧನಿಗಾದರೂ ಮಗಳ ಕೊಡಿಸುವೆ’ ಎಂಬ ವಾದಿರಾಜರ ಕವಿತೆಯ ಸಾಲು ನೆನಪಾಗುವಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News