ಕಡಲಗರ್ಭದಿಂದ ಎಚ್ಚರಿಕೆಯ ಗಂಟೆ
ಮನುಷ್ಯರಷ್ಟೇ ಕೋಮುಗಲಭೆ, ಜಾತಿಗಲಭೆ, ವರ್ಗಸಂಘರ್ಷ ಇತ್ಯಾದಿಗಳ ಮೂಲಕ ಹೊಡೆದಾಡಿಕೊಂಡು ಸಾಯುತ್ತಾರೆ. ಪ್ರಾಣಿಗಳು, ಪಕ್ಷಿಗಳು, ಜಲಚರಗಳು ಹೀಗೆ ಪರಸ್ಪರ ಹೊಡೆದಾಡಿಕೊಂಡು ಸಾಯುವುದಿಲ್ಲ. ಇಲ್ಲವಾದರೆ, ಇತ್ತೀಚೆಗೆ ತಮಿಳು ನಾಡಿನ ತೂತ್ತುಕುಡಿ ಸಮುದ್ರತೀರದಲ್ಲಿ ತೇಲಿ ಬಂದ ನೂರಾರು ಬೃಹತ್ ತಿಮಿಂಗಿಲಗಳ ಸಾವಿಗೆ ಯಾವುದೋ ಒಂದು ಗಲಭೆಯನ್ನು ಹೊಣೆ ಮಾಡಿ ಮನುಷ್ಯರು ತಮ್ಮ ಹೊಣೆಯಿಂದ ಪಾರಾಗಬಹುದಿತ್ತು. ಸರಕಾರವೂ ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ. ಕೋಮುಗಲಭೆಗಳಲ್ಲಿ, ಜಾತಿ ಗಲಭೆಗಳಲ್ಲಿ ನಡೆಯುವ ಸಾಮೂಹಿಕ ಸಾವುನೋವುಗಳು ಅಪರಾಧಗಳಲ್ಲವಾದ್ದರಿಂದ, ಕಡಲಿನ ಒಳಗೂ ಅಂತಹದೇನಾದರೂ ಸಂಭವಿಸಿ, ನೂರಾರು ಬೃಹತ್ ತಿಮಿಂಗಿಲಗಳು ಮೃತಪಟ್ಟು ದಡ ಸೇರುತ್ತಿವೆ ಎಂದು ನಾವು ಸುಮ್ಮನಿರಬಹುದಿತ್ತು. ಆದರೆ ಮೆದುಳು ಇರುವ ಮನುಷ್ಯನ ರಾಜಕೀಯ, ದ್ವೇಷ, ಅಸಹನೆ ಕಡಲಿನಾಳದಲ್ಲಿರುವ ಜಲಚರಗಳಿಗೆ ಗೊತ್ತಿಲ್ಲದಿರುವುದರಿಂದ ಈ ಘಟನೆಯನ್ನು ನಾವು ಗಂಭೀರವಾಗಿ ಸ್ವೀಕರಿಸಬೇಕಾಗಿದೆ. ರಾಶಿ ರಾಶಿ ಬೃಹತ್ ತಿಮಿಂಗಿಲಗಳು ಕಡಲಿನೊಳಗೆ ಮೃತಪಟ್ಟರೆ ಅದಕ್ಕೂ ನಮಗೂ ಏನು ಸಂಬಂಧ ಎಂದು ಕೇಳುವಂತಿಲ್ಲ.
ಯಾಕೆಂದರೆ, ಕಡಲಿನೊಳಗಿರುವ ವಿದ್ಯಮಾನಗಳಿಗೂ, ಮನುಷ್ಯನ ಬದುಕಿಗೂ ನೇರ ಸಂಬಂಧವಿದೆ. ಕಡಲು ಮುನಿದರೆ ಏನಾಗಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ಸುನಾಮಿ ಮಾಡಿದ ಅನಾಹುತಗಳು ನಮ್ಮ ಮುಂದಿವೆ. ಊರಿಗೆ ಊರೇ ಸರ್ವನಾಶವಾಯಿತು. ಸಾವಿರಾರು ಜನರು ಅದರಿಂದ ಪ್ರಾಣ ಕಳೆದುಕೊಳ್ಳಬೇಕಾಯಿತು. ಕಡಲಿನಲ್ಲಿ ನಡೆಯುವ ವೈಪರೀತ್ಯಕ್ಕೂ, ಭೂಮಿಯಲ್ಲಿರುವ ಮನುಷ್ಯನಿಗೂ ನೇರ ಸಂಬಂಧವಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಸಾಕು. ಸಮುದ್ರದಲ್ಲಿ ಏರುಪೇರು ನಡೆಯುತ್ತಿರುವುದು ಈಗಾಗಲೇ ಕರಾವಳಿಯ ಮೀನುಗಾರರಲ್ಲಿ ಆತಂಕವನ್ನು ಮೂಡಿಸಿದೆ. ಈ ಮೊದಲು ಕಡಲ ತಡಿಯಲ್ಲೇ ಸಿಗುತ್ತಿದ್ದ ಜನಪ್ರಿಯ ಮೀನುಗಳನ್ನು ಹುಡುಕುತ್ತಾ ಇನ್ನಷ್ಟು ಆಳಕ್ಕೆ ಇಳಿಯಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.
ಹೆಚ್ಚು ಹೆಚ್ಚು ಮೀನುಗಳನ್ನು ಹಿಡಿಯುವ ದುರಾಸೆಯಲ್ಲಿ ಆಧುನಿಕ ಯಂತ್ರಗಳನ್ನು, ಅತ್ಯಾಧುನಿಕ ಬಲೆಗಳನ್ನು ಬಳಸುತ್ತಾ, ಮೀನುಗಾರಿಕೆ ತನ್ನ ಸಾಂಪ್ರದಾಯಿಕತೆಯನ್ನು ಸಂಪೂರ್ಣ ಕಳೆದುಕೊಂಡಿದೆ. ಈ ಹಿಂದೆಲ್ಲ, ಮೊಗವೀರರು ಅಥವಾ ಸಾಂಪ್ರದಾಯಿಕ ಮೀನುಗಾರರು ಕಡಲನ್ನು ಅಪಾರವಾಗಿ ಗೌರವಿಸುತ್ತಿದ್ದರು. ಕಡಲನ್ನು ಪ್ರೀತಿಸುತ್ತಿದ್ದರು. ಕಡಲು ಅವರಿಗೆ ಹಣದೋಚುವ ನಿಧಿಯಾಗಿರಲಿಲ್ಲ. ಅವರ ಬದುಕನ್ನು ಪೊರೆಯುವ ತಾಯಿಯಾಗಿತ್ತು. ಆದುದರಿಂದಲೇ, ಅವರ ಪ್ರಕಾರ ಕಡಲಿಗೂ ವಿಶ್ರಾಂತಿಯಿತ್ತು. ಮೀನುಗಳು ಮೊಟ್ಟೆಯನ್ನು ಹೊಂದಿರುವ ಋತುಮಾನದಲ್ಲಿ ಅವರು ಕಡಲಿಗೆ ಇಳಿಯುತ್ತಿರಲಿಲ್ಲ. ಯಾಕೆಂದರೆ ಆ ಸಂದರ್ಭದಲ್ಲಿ ಮೀನುಗಳನ್ನು ಹಣದಾಸೆಯಿಂದ ಹಿಡಿದರೆ ಹೊಸದಾಗಿ ಸಂತಾನೋತ್ಪತ್ತಿ ಸಾಧ್ಯವಾಗುವುದಿಲ್ಲ. ಇದರಿಂದ ಮೀನಿನ ಸಂಖ್ಯೆ ತೀವ್ರವಾಗಿ ಇಳಿಮುಖವಾಗುವ ಭಯ ಅವರಿಗಿತ್ತು. ಆದರೆ ಇಂದು ಕಡಲಿಗೆ ವಿಶ್ರಾಂತಿಯಿಲ್ಲ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಮೀನಿನ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗುತ್ತಿದೆ. ಇನ್ನೊಂದೆಡೆ ಕಡಲನ್ನು ಕೈಗಾರಿಕೋದ್ಯಮಗಳು ತ್ಯಾಜ್ಯವನ್ನು ಸುರಿಯುವ ಕಸದ ಬುಟ್ಟಿಯಾಗಿ ಭಾವಿಸಿವೆ. ಈ ತ್ಯಾಜ್ಯಗಳಿಂದ ಕಡಲಿನಲ್ಲಿರುವ ಜಲಚರಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಎಳ್ಳಷ್ಟು ಕಾಳಜಿಯನ್ನು ಕೈಗಾರಿಕೆಗಳು ವ್ಯಕ್ತಪಡಿಸಿಲ್ಲ. ಪರಿಸರವಾದಿಗಳು ಇಂದು ದೇಶದ್ರೋಹಿಗಳಾಗಿ ಗುರುತಿಸಲ್ಪಡುತ್ತಿದ್ದಾರೆ. ಅಭಿವೃದ್ಧಿ ವಿರೋಧಿಗಳೆಂದು ಅವರ ಧ್ವನಿಯನ್ನು ದಮನಿಸುವ ಕಾರ್ಯ ನಡೆಯುತ್ತಿದೆ. ಹಾಗೆಯೇ ಅಪಾರ ಪ್ರಮಾಣದ ತೈಲಗಳೂ, ರಾಸಾಯನಿಕ ಪದಾರ್ಥಗಳು ಪ್ರತಿದಿನ ಕಡಲ ಒಡಲನ್ನು ಸೇರುತ್ತಲೇ ಇವೆ. ಹಡಗಿನ ಅವಶೇಷಗಳು, ಅದರಲ್ಲಿರುವ ರಾಸಾಯನಿಕಗಳೂ ಕಡಲ ಗರ್ಭವನ್ನು ಪ್ರವೇಶಿಸುತ್ತಿವೆ. ಇವೆಲ್ಲವೂ ಅಂತಿಮವಾಗಿ ಜಲಚರಗಳು, ಮೀನುಗಳ ಮೇಲೆ ಅಪಾರ ದುಷ್ಪರಿಣಾಮಗಳನ್ನು ಬೀರುತ್ತಿವೆ. ಈ ಎಲ್ಲ ಕಾರಣಗಳಿಂದ ತಿಮಿಂಗಿಲಗಳ ಮಾರಣ ಹೋಮವನ್ನು ಪ್ರಕೃತಿಯ ಸಹಜಕ್ರಿಯೆಯೆಂದು ಸುಮ್ಮನಿರುವಂತಿಲ್ಲ. ಮನುಷ್ಯನ ಹಸ್ತಕ್ಷೇಪ ಒಂದಲ್ಲ ಒಂದು ರೀತಿಯಲ್ಲಿ ಈ ಮಾರಣ ಹೋಮದ ಮೇಲೆ ತನ್ನ ಪರಿಣಾಮವನ್ನು ಬೀರಿದೆ. ದೈತ್ಯ ತಿಮಿಂಗಿಲಗಳು ಆತ್ಮಹತ್ಯೆ ಮಾಡುವ ರೀತಿಯಲ್ಲಿ ಬೃಹತ್ ಸಂಖ್ಯೆಗಳಲ್ಲಿ ಬಂದು ದಡವನ್ನು ಸೇರುವುದು ಈ ಹಿಂದೆಯೂ ನಡೆದಿದೆ. ಬೇರೆ ಬೇರೆ ದೇಶಗಳಲ್ಲಿ ಇಂತಹ ಘಟನೆಗಳು ನಡೆದು ಪರಿಸರ ತಜ್ಞರನ್ನು ಚಿಂತೆಗೆ ಕೆಡವಿತ್ತು. ಭಾರತದ ಕಡಲ ಕಿನಾರೆಯಲ್ಲಿ ಈ ರೀತಿ ಸಂಭವಿಸಿರುವುದು ಮೂರನೆಯ ಬಾರಿ. 1852ರಲ್ಲಿ ಕೊಲ್ಕತಾ ಸಮೀಪ ಇದು ನಡೆದಿತ್ತು. ಆ ಬಳಿಕ 70ರ ದಶಕದಲ್ಲಿ 147 ತಿಮಿಂಗಿಲಗಳು ಕಡಲ ಕಿನಾರೆಗೆ ಬಂದಿದ್ದವು. ಇದೀಗ ಮೂರನೆಯ ಬಾರಿ ಇಂತಹ ದುರಂತ ಕಡಲಗರ್ಭದಲ್ಲಿ ನಡೆದಿದೆ. ಈ ಬಾರಿ ಸುಮಾರು ನೂರಕ್ಕೂ ಅಧಿಕ ಬೃಹತ್ ತಿಮಿಂಗಿಲಗಳು ದಡ ಸೇರಿದ್ದರೆ, ಅವುಗಳ ಜೊತೆಗೆ ಅಸಂಖ್ಯ ಅಸ್ತಿಪಂಜರಗಳೂ ದಡಕ್ಕೆ ಅಪ್ಪಳಿಸಿವೆ. ಕೆಲವು ವಿಜ್ಞಾನಿಗಳು ಇದು ಆಗಾಗ ಸಂಭವಿಸುವುದರಿಂದ ಆಕಸ್ಮಿಕ ಎನ್ನುತ್ತಾರೆ. ಆದರೆ ಹೆಚ್ಚಿನ ವಿಜ್ಞಾನಿಗಳು ಈ ದುರಂತಕ್ಕೂ, ಹವಾಮಾನ ಬದಲಾವಣೆಗೂ ಸಂಬಂಧವನ್ನು ಕಲ್ಪಿಸಿದ್ದಾರೆ. ಕಡಲು ಕಲ್ಮಶಗೊಂಡು ತಿಮಿಂಗಿಲಗಳು ಸತ್ತಿದ್ದರೆ, ಉಳಿದ ಜಲಚರಗಳೂ ಇವುಗಳ ಜೊತೆ ಸಾಯಬೇಕಾಗಿತ್ತು. ಆದರೆ ಅಂತಹದು ಸಂಭವಿಸಿಲ್ಲ ಎನ್ನುವ ವಾದವೂ ಇದೆ. ಅದೇನೇ ಇರಲಿ, ಕಡಲೊಳಗಿನ ಸಹಜ ಜೀವನಕ್ಕೆ ಮನುಷ್ಯನ ಹಸ್ತಕ್ಷೇಪ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದುದರಿಂದ ತಿಮಿಂಗಿಲಗಳ ದುರಂತಕ್ಕೆ ಕಾರಣ ಹುಡುಕುವುದು ಅತ್ಯಗತ್ಯವಾಗಿದೆ. ತಿಮಿಂಗಿಲಗಳ ದುರಂತಕ್ಕೆ ಕಾರಣ ಹುಡುಕುವ ಮೂಲಕ, ಭವಿಷ್ಯದಲ್ಲಿ ಮನುಕುಲವನ್ನು ಎದುರುಗೊಳ್ಳಲಿರುವ ದುರಂತವೊಂದನ್ನು ತಡೆಯಬಹುದಾಗಿದೆ. ಆದುದರಿಂದ, ಭಾರತ ಸರಕಾರ ಇಲ್ಲಿನ ವಿಜ್ಞಾನಿಗಳು ಈ ತಿಮಿಂಗಿಲಗಳ ಸಾಮೂಹಿಕ ಸಾವನ್ನು ಕಡಲು ನೀಡಿದ ಎಚ್ಚರಿಕೆಯ ಗಂಟೆ ಎಂದು ತಿಳಿದುಕೊಂಡು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.