ವೃದ್ಧಾಪ್ಯ ನಿರ್ವಹಣೆಗೆ ಕೆಲವು ಸಲಹೆಗಳು

Update: 2016-01-15 17:58 GMT

ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ವೃದ್ಧರ ಸ್ಥಾನಮಾನ ಭದ್ರವಾಗಿತ್ತು. ಕುಟುಂಬದ ಹಿರಿಯನಿಗೆ ಎಲ್ಲರೂ ಬೆಲೆ ಕೊಡುತ್ತಿದ್ದರು. ಆತನ (ಆಕೆಯ) ಅನುಭವಭರಿತ ಅಭಿಪ್ರಾಯಗಳನ್ನು ಕೇಳಿ, ಪೂರ್ಣ ಮಾನ್ಯತೆ ಕೊಡುತ್ತಿದ್ದರು. ಮನೆಯ ಸಣ್ಣ ಮಕ್ಕಳಿಗೆ ವೃದ್ಧರೇ ಆಸರೆ. ಅವರೊಂದಿಗೆ ಆಟವಾಡಿ, ಎತ್ತಿ ಮುದ್ದಾಡಿ, ವಿದ್ಯೆ ನಡವಳಿಕೆ ಕಲಿಸಿ, ನೋಡಿಕೊಳ್ಳುವ ಗುರುತರ ಹೊಣೆ ವೃದ್ಧರದ್ದಾಗಿತ್ತು. ಇದರಿಂದ ಉಳಿದವರು ಆತಂಕವಿಲ್ಲದೆ ತಮ್ಮ ಕೆಲಸಗಳನ್ನು ನೋಡಿಕೊಳ್ಳಬಹುದಾಗಿತ್ತು. ವೃದ್ಧರಿಗೂ ಅದು ಪ್ರಿಯವಾದ ಕೆಲಸವಾಗಿತ್ತು. ಹೀಗೆ ಅವರು ಸಮಾಜದಲ್ಲಿ ಕುಟುಂಬದಲ್ಲಿ ಉಪಯುಕ್ತರಾಗಿ, ನ್ಯೂನತೆಗಳಿದ್ದರೂ, ಹೊರೆಯಾಗದೆ, ಗೌರವಾದರಗಳನ್ನು ಪಡೆಯುತ್ತಿದ್ದರು.

ಆದರೆ ಈಗ ಸಣ್ಣ ಕುಟುಂಬಗಳಾಗಿ, ತಂದೆ ತಾಯಿಗಳು ಇಬ್ಬರೂ ದುಡಿಯುವವರಾದರೆ, ಮಕ್ಕಳು ಅನಾಥರಂತಾಗುತ್ತಾರೆ. ಆಯಾಗಳೋ, ಮಕ್ಕಳನ್ನು ನೋಡಿಕೊಳ್ಳುವ ದಂಧೆ ಮಾಡುವವರೋ ಅವರನ್ನು ನೋಡಿಕೊಳ್ಳಬೇಕು. ಇನ್ನೊಂದೆಡೆ ವೃದ್ಧರು ಯಾವ ಕೆಲಸವೂ ಇಲ್ಲದೆ, ಇತರರ ಒಡನಾಟವಿಲ್ಲದೆ, ಯಾರಿಗೂ ಬೇಡವಾಗಿ ಹೊರೆಯಾಗಿ ಬಾಳಬೇಕು. ಚಿಗುರೆಲೆಗೆ ಮುದಿ ಎಲೆಯಾಸರೆ. ಮುದಿ ಎಲೆಗೆ ಚಿಗುರೆಲೆ ಆಸರೆಯಾಗುವ ಹಿಂದಿನ ವ್ಯವಸ್ಥೆ ಮತ್ತೆ ಬರಬೇಕಾಗಿದೆ.

ಮುಪ್ಪು: ಮುಂಜಾಗ್ರತೆ
ನಾವು ಮುಂಜಾಗ್ರತೆ ವಹಿಸಿದರೆ, ತಕ್ಕ ಪೂರ್ವಸಿದ್ಧತೆ ನಡೆಸಿದರೆ, ವೃದ್ಧಾಪ್ಯ ನಮಗೆ ಶಾಪವಾಗುವುದಿಲ್ಲ. ಬಾಲ್ಯ, ಯೌವನದಲ್ಲಿ ನಾವು ಸಂತೋಷಪಟ್ಟಂತೆ ಮುಪ್ಪಿನಲ್ಲೂ ಸಂತೋಷ, ಸಮಾಧಾನದಿಂದ ಇರಬಹುದು. ಕಾಯಿಲೆಗಳನ್ನು, ಅದರಲ್ಲೂ ಮಾನಸಿಕ ಕಾಯಿಲೆಗಳನ್ನು ನಿವಾರಿಸಬಹುದು. ಯೌವನದಲ್ಲಿ, ಮಧ್ಯ ವಯಸ್ಸಿನಲ್ಲಿ ಹೊಂದಾಣಿಕೆಯ ಜೀವನ ಮಾಡಿ, ಸುಖ ಸಂತೋಷಪಟ್ಟವರು, ವೃದ್ಧಾಪ್ಯದಲ್ಲೂ ಸುಖವಾಗಿರುತ್ತಾರೆ ಎಂಬ ಸತ್ಯ ನಮ್ಮೆಲ್ಲರ ಕಣ್ಣು ತೆರೆಸಬೇಕು.
1. ಮೊದಲಿಂದಲೂ ಅವ್ಯವಸ್ಥೆಯ, ಅಶಿಸ್ತಿನ ಹೊಂದಾಣಿಕೆ ಇಲ್ಲದ ಜೀವನ ನಡೆಸಿದವರು, ವೃದ್ಧಾಪ್ಯದಲ್ಲೂ ಕಷ್ಟಡುತ್ತಾರೆ. ವೃದ್ಧರು ಈ ಕೆಳಗಿನ ಅಂಶಗಳನ್ನು ಪಾಲಿಸಿ :
* ಯಾವುದೇ ಕಾರಣದಿಂದ ತಲೆಗೆ ಪೆಟ್ಟು ಬೀಳುವುದನ್ನು, ಮಿದುಳಿಗೆ ಹಾನಿಯಾಗುವುದನ್ನು
ನಿವಾರಿಸಿಕೊಳ್ಳಿ.
* ರಸ್ತೆ ಅಪಘಾತಗಳ ತಡೆಗಟ್ಟುವಿಕೆ, ಸಂಚಾರ ನಿಯಮಗಳ ಪಾಲನೆ.
* ಮದ್ದು-ಮಾದಕ ವಸ್ತುಗಳಿಂದ ದೂರವಿರು ವುದು.
* ಪೌಷ್ಟಿಕ ಸಮತೋಲನ ಆಹಾರ ಸೇವನೆ.
* ರಕ್ತ ಒತ್ತಡ, ಸಕ್ಕರೆ ಕಾಯಿಲೆ ಇದ್ದರೆ, ಕಟ್ಟುನಿಟ್ಟಾದ ಚಿಕಿತ್ಸೆ.
* ಯಾವುದೇ ಕಾಯಿಲೆ ಬಂದಾಗ ತಡಮಾಡದೆ ವೈದ್ಯಕೀಯ ನೆರವು.
2. ಮುಪ್ಪಿನ ಬಗ್ಗೆ ಸರಿಯಾದ ತಿಳುವಳಿಕೆ, ದೃಷ್ಟಿಕೋನ ಮತ್ತು ವ್ಯವಸ್ಥೆ: ಎಲ್ಲರೂ ಮುಪ್ಪಿನ ಬಗ್ಗೆೆ ಆರೋಗ್ಯಕರ ಹಾಗೂ ವಾಸ್ತವಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು, ವೃದ್ಧರನ್ನು ಗೌರವಿಸುವುದು, ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಉಪಯುಕ್ತ ಚಟುವಟಿಕೆಯಲ್ಲಿ ತೊಡಗಿಸುವುದು, ವೃದ್ಧರ - ಮಕ್ಕಳ ಒಡನಾಟ-ಪರಸ್ಪರ ಆಸರೆಯನ್ನು ಬಲಪಡಿಸುವುದು, ವೃದ್ಧರ ಸಂಘಗಳು, ಕಲ್ಯಾಣ ಸಂಸ್ಥೆಗಳನ್ನು ಸ್ಥಾಪಿಸುವುದು, ವೃದ್ಧರಿಗೆ ಹಣಕಾಸು ಇತರ ನೆರವು, ಪ್ರೀತಿ-ವಿಶ್ವಾಸ, ಮನರಂಜನೆ, ಆರೋಗ್ಯ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸುವುದು-ಇವೆಲ್ಲ ಪ್ರಾಮಾಣಿಕವಾಗಿ ನಡೆಯಬೇಕು.
3. ಜೀವನ ಮಟ್ಟದ ಸುಧಾರಣೆ, ಶಿಸ್ತು, ಅಪೇಕ್ಷ ಣೀಯ ಮೌಲ್ಯಗಳ ಅಭಿವೃದ್ಧಿ: ಜನರ ಜೀವನದಲ್ಲಿ ಶಿಸ್ತು, ಮಟ್ಟ ಸುಧಾರಿಸಿದಾಗ, ಅವರು ಬದುಕುವ ಪರಿಸರ ಮತ್ತು ರೀತಿ ಆರೋಗ್ಯ ಪೂರ್ಣವಾದಾಗ, ಮನಶ್ಶಾಂತಿಯನ್ನು ವೃದ್ಧಿಸುವ ಎಲ್ಲರೂ ಸಮಾನರಾಗಿ ಬಾಳಬೇಕೆಂಬ ಉನ್ನತ ಮೌಲ್ಯಗಳ ಅಭಿವೃದ್ಧಿಯಾದಾಗ ಮುಪ್ಪು ಕಠಿಣವಾಗುವುದಿಲ್ಲ.
ಮುಪ್ಪನ್ನು ಗೆಲ್ಲಲು ಮನುಷ್ಯ ಪ್ರಯತ್ನಪಡುತ್ತಲೇ ಇದ್ದಾನೆ. ಯೌವನ ಚಿರಕಾಲ ಇರುವಂತಹ ಸೂತ್ರಕ್ಕಾಗಿ, ವಿಧಾನಕ್ಕಾಗಿ ಅಧ್ಯಯನ ನಡೆಸುತ್ತಲೇ ಇದ್ದಾನೆ. ಈ ಪ್ರಯತ್ನದಲ್ಲಿ ಯಶಸ್ಸು ಸಿಗುವುದು ತಡವಾಗಬಹುದು. ಅಥವಾ ವಿಫಲವಾಗಲೂಬಹುದು. ಸದ್ಯಕ್ಕೆ ಅನಿವಾರ್ಯವಾದ ಮುಪ್ಪನ್ನು ಒಪ್ಪುವುದು, ಅದಕ್ಕೆ ಹೊಂದಿಕೊಂಡು ಸಮಾಧಾನದಿಂದ ಬದುಕುವುದು ನಮ್ಮ ಕೈಯಲ್ಲಿದೆ. ವೃದ್ಧರು ನೆಮ್ಮದಿಯಿಂದ ಬದುಕುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News