×
Ad

ಮಾಂಸಾಹಾರ ಹಿಂಸೆಯೇ?

Update: 2016-01-17 23:04 IST

ಜಲ್ಲಿಕಟ್ಟು ಮತ್ತೆ ಚರ್ಚೆಯಲ್ಲಿದೆ. ತಮಿಳು ನಾಡಿನ ಜನರಿಗೆ ಅದೊಂದು ಮನರಂಜನಾ ಕ್ರೀಡೆ. ಮುಖ್ಯವಾಗಿ ಅದು ಗ್ರಾಮೀಣ ಕ್ರೀಡೆಯೂ ಆಗಿರುವುದರಿಂದ ಮತ್ತು ಅದಕ್ಕೆ ಅದರದೇ ಸಾಂಸ್ಕೃತಿಕ ಹಿನ್ನೆಲೆ ಇರುವುದರಿಂದ ಕೆಲವರು ಜಲ್ಲಿಕಟ್ಟು ಮುಂದುವರಿಯಬೇಕು ಎನ್ನುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಜಲ್ಲಿಕಟ್ಟು ಸಂದರ್ಭದಲ್ಲಿ ಎತ್ತನ್ನು ಅತ್ಯಂತ ಬರ್ಬರವಾಗಿ ಹಿಂಸೆಗೊಳಪಡಿಸಲಾಗುತ್ತದೆ. ಕಂಬಳದಲ್ಲಿ ಕೋಣಕ್ಕೆ ಬೆತ್ತದಿಂದ ಬಡಿಯುವುದಕ್ಕಿಂತಲೂ ಜೋರಾಗಿ ಅದಕ್ಕೆ ಹಿಂಸೆ ನೀಡಲಾಗುತ್ತದೆ ಎನ್ನುವುದು ಒಂದು ವಾದ. ಇದೇ ಸಂದರ್ಭದಲ್ಲಿ, ಗೋ ಹತ್ಯೆ ಒಂದು ಸಮುದಾಯದ ಭಾವನೆಗಳಿಗೆ ನೋವು ತರುತ್ತದೆ ಎಂಬ ಕಾರಣವೊಡ್ಡಿ ಅವುಗಳ ನಿಷೇಧಕ್ಕೆ ಯತ್ನಿಸುತ್ತಿರುವ ಅಥವಾ ಆ ಮೂಲಕ ತಮ್ಮ ರಾಜಕೀಯ ಆಟವನ್ನು ಆಡುತ್ತಿರುವ ಬಿಜೆಪಿ, ಜಲ್ಲಿಕಟ್ಟುವಿಗೆ ಅನುಮತಿ ನೀಡಿದೆ. ತಮಿಳುನಾಡಿನಲ್ಲಿ ಚುನಾವಣೆಯ ದೃಷ್ಟಿಯನ್ನಿಟ್ಟುಕೊಂಡು ಕೇಂದ್ರ ಈ ತೀರ್ಮಾನಕ್ಕೆ ಬಂದಿದೆ ಎನ್ನುವುದು ರಾಜಕೀಯ ಪಂಡಿತರ ಅಭಿಮತ. ಒಂದೆಡೆ ಗೋಮಾತೆಯನ್ನು ದೇವರೆಂದು ಕರೆಯುತ್ತಲೇ ಮಗದೊಂದೆಡೆ ಪ್ರಾಣಿ ಹಿಂಸೆಗೆ ಕೇಂದ್ರ ಸರಕಾರ ಅನುಮತಿ ನೀಡುವುದು ಅದರ ಇಬ್ಬಗೆ ನೀತಿಯನ್ನು ಬಹಿರಂಗಪಡಿಸುತ್ತದೆ ಎಂದು ಕೇಂದ್ರದ ವಿರುದ್ಧ ಸಾಕಷ್ಟು ಟೀಕೆಗಳೂ ಹೊರ ಬಿದ್ದವು. ಆದರೆ ಇದೇ ಸಂದರ್ಭದಲ್ಲಿ ಬಿಜೆಪಿಯವರು ತಮ್ಮ ರಕ್ಷಣೆಗೆ ಮತ್ತೆ ಬಕ್ರೀದ್ ಹಬ್ಬದ ದಿನ ನಡೆಯುವ ಗೋ ಹತ್ಯೆ ಅಥವಾ ಪ್ರಾಣಿ ಹತ್ಯೆಯನ್ನು ಗುರಾಣಿಯಾಗಿ ಬಳಸಿಕೊಂಡಿದ್ದಾರೆ. ಜಲ್ಲಿಕಟ್ಟು ನಿಷೇಧ ಮಾಡಲೇ ಬೇಕೆಂದಾದರೆ ಬಕ್ರೀದ್ ಹಬ್ಬದ ದಿನ ನಡೆಯುವ ಗೋಹತ್ಯೆ ಅಥವಾ ಪ್ರಾಣಿ ಹತ್ಯೆಯೂ ನಿಲ್ಲಬೇಕು ಎಂದು ಕೆಲವು ಸಂಘಪರಿವಾರದ ಲೇಖಕರು ವಾದಕ್ಕಿಳಿದಿದ್ದಾರೆ. ಜಲ್ಲಿಕಟ್ಟು ವಿರೋಧಿಗಳನ್ನು ತಕ್ಷಣಕ್ಕೆ ಬಾಯಿ ಮುಚ್ಚಿಸುವುದಕ್ಕಾಗಿ ಮತ್ತು ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಅವರು ಬಕ್ರೀದ್ ಸಂದರ್ಭದ ಪ್ರಾಣಿ ಹತ್ಯೆಯ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಜಲ್ಲಿಕಟ್ಟಿನಿಂದ ಪ್ರಾಣಿ ಹಿಂಸೆಯಾಗುತ್ತದೆಯಾದರೆ ಬಕ್ರೀದ್ ಹಬ್ಬದ ಹೆಸರಲ್ಲಿ ಸಾವಿರಾರು ಎತ್ತುಗಳನ್ನು ಹತ್ಯೆ ಮಾಡುತ್ತಾರಲ್ಲ ಅದನ್ನು ತಡೆಯಬೇಡವೇ ಎಂಬುದಾಗಿ ಲೇಖಕರು ಕೇಳುತ್ತಿದ್ದಾರೆ.


ಪ್ರಾಣಿ ಬಲಿಗೂ, ಬಕ್ರೀದ್ ಹಬ್ಬದ ದಿನ ನಡೆಯುವ ಪ್ರಾಣಿ ಬಲಿಗೂ ಒಂದು ಮುಖ್ಯ ವ್ಯತ್ಯಾಸವಿದೆ. ಅಂದು ಕೇವಲ ದೇವರಿಗಾಗಿಯೋ, ಧರ್ಮಕ್ಕಾಗಿಯೋ, ಅಥವಾ ಮನರಂಜನೆಗಾಗಿಯೋ ಪ್ರಾಣಿಗಳನ್ನು ಹತ್ಯೆ ಮಾಡಲಾಗುವುದಿಲ್ಲ. ಮಾಂಸವನ್ನು ಮನೆಮನೆಗೆ ದಾನ ಮಾಡುವುದಕ್ಕಾಗಿ ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ. ಈ ದೇಶದ ಬಹುಸಂಖ್ಯಾತ ಜನರು ಗೋಮಾಂಸವನ್ನು ಸೇವಿಸುವವರೇ ಆಗಿದ್ದಾರೆ. ಮುಸ್ಲಿಮರು ಅಂದು ಗೋವುಗಳನ್ನೇ ಹತ್ಯೆ ಮಾಡಬೇಕೆಂದೇನೂ ಇಲ್ಲ. ಅಂದು ಗೋವುಗಳನ್ನು ಹತ್ಯೆ ಮಾಡುವುದಕ್ಕೆ ಮುಖ್ಯ ಕಾರಣ ಹೆಚ್ಚು ಮನೆಗೆ ಮಾಂಸಗಳನ್ನು ದಾನ ಮಾಡಬಹುದು ಎಂದಾಗಿದೆ. ಆಡಿನ ಮಾಂಸ ಬಹಳ ದುಬಾರಿಯಾಗಿರುವುದರಿಂದ ಮತ್ತು ಅದರ ಮಾಂಸವನ್ನು ಹೆಚ್ಚು ಬಡವರ ಮನೆಗಳಿಗೆ ಒದಗಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಷ್ಟೇ ಗೋಮಾಂಸವನ್ನು ದಾನ ನೀಡುವುದಕ್ಕೆ ಬಳಸುತ್ತಾರೆ. ಮುಸ್ಲಿಮರು ಹಬ್ಬದ ದಿನ ಆಹಾರಕ್ಕಾಗಿ ಮಾಂಸಾಹಾರ ಪದಾರ್ಥಗಳನ್ನು ಬಳಸುವುದರಿಂದ, ಎಲ್ಲರೂ ಮನೆಯಲ್ಲಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡಬೇಕು ಎನ್ನುವ ಮೂಲ ಉದ್ದೇಶದಲ್ಲಿ ಬಕ್ರೀದ್ ಸಂದರ್ಭ ಗೋಮಾಂಸವನ್ನು ವಿತರಿಸಲಾಗುತ್ತದೆ. ಇಲ್ಲಿ ದೇವರಿಗೆ ರಕ್ತಾಭಿಷೇಕವೋ ಅಥವಾ ಇನ್ನಿತರ ಧಾರ್ಮಿಕ ಆಚರಣೆಗೆ ಬೆಲೆಯೇ ಇಲ್ಲ. ದೇವರಿಗೆ ಸಲ್ಲುವುದು, ಅವರು ನೀಡಿದ ದಾನ ಮಾತ್ರ. ಆದುದರಿಂದ ಭಾರತೀಯ ಕಲ್ಪನೆಯ ಪ್ರಾಣಿಬಲಿಗೂ ಇದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಇದೇ ಸಂದರ್ಭದಲ್ಲಿ ಆಹಾರಕ್ಕಾಗಿ ಪ್ರಾಣಿಯನ್ನು ಕೊಲ್ಲಬಹುದಾದರೆ, ಜಲ್ಲಿಕಟ್ಟಿಗಾಗಿ ಯಾಕೆ ಕೊಲ್ಲಬಾರದು ಎನ್ನುವ ತರ್ಕವನ್ನು ಮುಂದಿಟ್ಟವರೂ ಇದ್ದಾರೆ.


ಮನುಷ್ಯ ಮೂಲಭೂತವಾಗಿ ಸಸ್ಯ ಮತ್ತು ಮಾಂಸಾಹಾರದ ಮೂಲಕ ರೂಪುಗೊಂಡಿದ್ದಾನೆ. ಆತನ ಮೆದುಳಿನ ಬೆಳವಣಿಗೆಗಳಲ್ಲಿ ಮಾಂಸಾಹಾರದ ಪಾತ್ರವೇ ಬಹುದೊಡ್ಡದು ಎಂದು ವೈದ್ಯಕೀಯ ಸಂಶೋಧನೆಗಳು ಹೇಳುತ್ತವೆ. ಒಂದು ಕಾಲದಲ್ಲಿ ಮೊಸಳೆಗಳನ್ನೂ ತನ್ನ ಆಹಾರವಾಗಿ ಬಳಸಿಕೊಂಡು ಜೀವ ಉಳಿಸಿಕೊಂಡು ಬೆಳೆದು ಬಂದವನು ಮನುಷ್ಯ. ಆಹಾರಕ್ಕಾಗಿ ಮೀನು, ಮಾಂಸ, ಕೋಳಿ, ಆಡು, ಎತ್ತು, ಕೋಣ, ಕಾಡೆಮ್ಮೆ ಎಲ್ಲವನ್ನೂ ಮನುಷ್ಯ ತಲೆ ತಲಾಂತರಗಳಿಂದ ಬಳಸಿಕೊಂಡು ಬಂದಿದ್ದಾನೆ. ಇದಕ್ಕೆ ಧರ್ಮ ಗ್ರಂಥಗಳೂ ಸಾಕ್ಷಿಯಾಗಿರುವುದರಿಂದ, ಆಹಾರ ಬಳಕೆಯೆನ್ನುವುದು ಧರ್ಮಾತೀತವಾದುದು. ಮತ್ತು ಅದು ಹಸಿವು ಕೇಂದ್ರಿತವಾದುದು. ಗೋವು ಈ ದೇಶದಲ್ಲಿ ಪ್ರಾಧಾನ್ಯತೆಯನ್ನು ಪಡೆದದ್ದು ಅರ್ಥಶಾಸ್ತ್ರದ ಕಾರಣಕ್ಕಾಗಿಯೇ ಹೊರತು, ಧರ್ಮಶಾಸ್ತ್ರದ ಕಾರಣಕ್ಕಾಗಿಯಲ್ಲ. ಹಾಲುಕೊಡದ ಗೋವುಗಳನ್ನು ಆಹಾರಕ್ಕಾಗಿ, ಮಾಂಸಕ್ಕಾಗಿ ಬಳಸುವುದರಿಂದ ಗೋಉದ್ಯಮದ ಅಭಿವೃದ್ಧಿಗೆ ಕಾರಣವಾಯಿತು. ಇಷ್ಟೇ ಅಲ್ಲ ಆಹಾರದ ಕೊರತೆಯಿಂದ ನರಳುತ್ತಿರುವ, ಅಪೌಷ್ಟಿಕತೆಯಿಂದ ಬಳಲುತ್ತಿರುವ ದೇಶದಲ್ಲಿ ಗೋಮಾಂಸವನ್ನು ನಿಷೇಧಿಸಬೇಕು ಎಂದು ಒತ್ತಾಯಿಸುವುದೇ ಅತಿ ದೊಡ್ಡ ವ್ಯಂಗ್ಯ. ಆಹಾರಕ್ಕಾಗಿ ಪ್ರಾಣಿ ಹತ್ಯೆ ಮಾಡುವುದು ಹಿಂಸೆಯಲ್ಲ. ಹಸಿವಿನಿಂದ ಆಹಾರವಿಲ್ಲದೆ ಪ್ರತಿ ದಿನ ಸಾವಿರಾರು ಮಕ್ಕಳು ವಿಶ್ವದಲ್ಲಿ ಸಾಯುತ್ತಿದ್ದಾರೆ ಅದು ಹಿಂಸೆ. ‘ಕೊಂದ ಪಾಪ ತಿಂದು ಪರಿಹಾರ’ ಎನ್ನುವ ಗಾದೆಯೇ ಆಹಾರಕ್ಕಾಗಿ ಮನುಷ್ಯ ಇತರ ಜೀವಿಗಳನ್ನು ಬಳಸುವುದು ತಪ್ಪಲ್ಲ ಎನ್ನುವುದನ್ನು ಒತ್ತಿ ಹೇಳುತ್ತದೆ. ಹೀಗಿರುವಾಗ ಮನರಂಜನೆಗಾಗಿ ಒಂದು ಪ್ರಾಣಿಯನ್ನು ಹಿಂಸಿಸುವುದಕ್ಕೂ, ಆಹಾರಕ್ಕಾಗಿ ಒಂದು ಪ್ರಾಣಿಯನ್ನು ಬಳಸುವುದಕ್ಕೂ ವ್ಯತ್ಯಾಸವಿದೆ ಎನ್ನುವುದನ್ನು ಈ ಲೇಖಕರಿಗೆ ತಿಳಿಸಿಕೊಡುವವರು ಯಾರು?


ಇವರ ವಾದ ಹೇಗಿದೆಯೆಂದರೆ, ಇತ್ತೀಚೆಗೆ ನೂರಾರು ತಿಮಿಂಗಿಲಗಳು ಚೆನ್ನೈ ಸಮುದ್ರ ತೀರದಲ್ಲಿ ಮೃತವಾದವು. ಇದು ಪರಿಸರ ವೈಪರೀತ್ಯದ ಚರ್ಚೆಗೆ ಕಾರಣವಾದವು. ಈ ಸಂದರ್ಭದಲ್ಲಿ ‘ಹಾಗಾದರೆ ಪ್ರತಿ ದಿನ ಲಕ್ಷಾಂತರ ಮೀನನ್ನು ಕೊಂದು ತಿನ್ನುತ್ತಿರುವುದು ಸರಿಯೇ?’’ ಎಂದು ಕೇಳಿದಂತಾಯಿತು. ಪ್ರಾಣಿಗಳನ್ನು ಮನರಂಜನೆಗಾಗಿ ಮಾತ್ರವಲ್ಲ, ಯಾವುದೇ ಕಾರಣಕ್ಕಾಗಿ ಹಿಂಸಿಸುವುದು ತಪ್ಪು. ಹಿಂಸೆಯಿಂದ ನಮ್ಮ ಮನಸ್ಸಿಗೆ ರಂಜನೆ ಸಿಗುತ್ತದೆ ಎನ್ನುವುದು ಮನುಷ್ಯನ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ಇದೇ ಸಂದರ್ಭದಲ್ಲಿ, ಕಸಾಯಿ ಖಾನೆಗೆ ಗೋವುಗಳನ್ನು ಸಾಗಿಸುವವರು ಅತ್ಯಂತ ಬರ್ಬರ ರೀತಿಯಲ್ಲಿ ಸಾಗಿಸುವುದು ಹಲವು ಸಂದರ್ಭಗಳಲ್ಲಿ ಬಯಲಾಗಿದೆ. ಅದು ಎಲ್ಲ ರೀತಿಯಲ್ಲೂ ಅಪರಾಧವಾಗಿದೆ. ಕೋಳಿಯನ್ನು ಕೊಂದು ತಿನ್ನುವುದು ಹಿಂಸೆಯಲ್ಲ, ಕೋಳಿಯ ಸಾಗಾಟ ಮತ್ತು ಒಂದು ಪುಟ್ಟ ಗೂಡಲ್ಲಿ ನೂರಕ್ಕೂ ಅಧಿಕ ಕೋಳಿಗಳನ್ನು ತುರುಕಿಸಿ ಅದನ್ನು ಸಾಗಾಟ ಮಾಡುವುದು ಹಿಂಸೆ ಮತ್ತು ಅಪರಾಧ. ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಹೊಡೆದಾಡಿಸುವುದು, ಜೂಜಾಡುವುದು ಹಿಂಸೆ ಮತ್ತು ಅಪರಾಧ. ಆದರೆ ಕೋಳಿಯನ್ನು ಆಹಾರಕ್ಕಾಗಿ ಸಾಯಿಸುವುದು ಮನುಷ್ಯನ ಆಹಾರ ಕ್ರಮಕ್ಕೆ ಪೂರಕವಾದುದು.


ಹಾಗೆ ನೋಡಿದರೆ ಜಲ್ಲಿಕಟ್ಟು ಮಾತ್ರವಲ್ಲ, ಬಾಕ್ಸಿಂಗ್ ಹೆಸರಿನಲ್ಲಿ ಮನುಷ್ಯ ಮನುಷ್ಯರನ್ನು ಹೊಡೆದಾಡಿಸಿಕೊಂಡು ರಂಜನೆ ಪಡೆಯುವುದೂ ಹಿಂಸೆ. ಬಾಕ್ಸಿಂಗ್‌ನ ಮಾರಕ ಹೊಡೆತಕ್ಕೆ ಹಲವು ಕ್ರೀಡಾಳುಗಳು ಮೃತಪಟ್ಟಿದ್ದಾರೆ. ಮನ ರಂಜಿಸಲು ಹಿಂಸೆಯನ್ನು ಬಳಸುವುದು ತಪ್ಪು ಎಂದಾದರೆ, ಜಲ್ಲಿಕಟ್ಟೂ ತಪ್ಪು. ಹಾಗೆಯೇ ಬಾಕ್ಸಿಂಗ್ ಕೂಡಾ ತಪ್ಪು. ಸರಕಾರ ಈ ನಿಟ್ಟಿನಲ್ಲಿ ತನ್ನ ದೃಷ್ಟಿಯನ್ನು ಇನ್ನಷ್ಟು ವಿಶಾಲಗೊಳಿಸಬೇಕಾದ ಅಗತ್ಯವಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News