ಮತ್ತೆ ಚೇತರಿಸಿಕೊಳ್ಳುವುದೇ ಜೆಡಿಎಸ್?
ದೇವೇಗೌಡರು ತಮ್ಮನ್ನು ‘ಮಣ್ಣಿನ ಮಗ’ ಎಂದು ಕರೆದುಕೊಂಡರು. ಆದರೆ, ಅದು ರೈತರ ಪಕ್ಷವೂ ಆಗಲಿಲ್ಲ, ಕಾರ್ಮಿಕರ ಪಕ್ಷವೂ ಆಗಲಿಲ್ಲ, ಮಧ್ಯಮ ವರ್ಗದವರ ಪಕ್ಷವೂ ಆಗಲಿಲ್ಲ. ಕೊನೆಗೆ ಒಕ್ಕಲಿಗರೂ ಪೂರ್ಣವಾಗಿ ಅದರ ಕೈ ಹಿಡಿಯಲಿಲ್ಲ. ‘ಏಕೆ ಹೀಗಾಯ್ತು?’ ಜೆಡಿಎಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾತ್ಯತೀತ ಟ್ಯಾಗ್ ಬಗ್ಗೆಯೂ ಮರು ಚಿಂತಿಸಬೇಕಿದೆ.
► ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26 ಬಂತೆಂದರೆ ಹುಬ್ಬಳ್ಳಿ ಜನರಿಗೆ ಆತಂಕ ಶುರುವಾಗುತ್ತಿತ್ತು. ಈದ್ಗಾ ಮೈದಾನದ ಬಳಿ ಹಿಂದೂ-ಮುಸ್ಲಿಮ್ ಘರ್ಷಣೆ ನಡೆಯುತಿತ್ತು. ರಾಷ್ಟ್ರಧ್ವಜ ಹಾರಿಸಲು ಸಂಘ ಪರಿವಾರ ಪ್ರಯತ್ನಿಸುತ್ತಿತ್ತು. ಅಂಜುಮನ್ ಇಸ್ಲಾಮ್ ಸಂಸ್ಥೆ ಪ್ರತಿರೋಧ ತೋರುತ್ತಿತ್ತು. 1992ರಲ್ಲಿ ವಿವಾದ ಉತ್ಕಟ ಸ್ಥಿತಿ ತಲುಪಿತ್ತು. 94ರ ಆಗಸ್ಟ್ 15ರಂದು ನಡೆದ ಹಿಂಸಾಚಾರಕ್ಕೆ ನಾಲ್ವರು ಬಲಿಯಾದರು. ಎಚ್.ಡಿ. ದೇವೇಗೌಡರ ಜನತಾ ದಳ ಸರಕಾರ 95ರ ಆಗಸ್ಟ್ 15ರಂದು ಅಂಜುಮನ್ ಸಂಸ್ಥೆ ಪದಾಧಿಕಾರಿಗಳ ಮನವೊಲಿಸಿ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಡುವಂತೆ ಮಾಡಿತು. ಸಮಸ್ಯೆ ಪರಿಹಾರವಾಯಿತು. ಈ ವಿವಾದವೇ ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ನಾಂದಿಯಾಯಿತು.
► ಒಮ್ಮೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಮಾತನಾಡುತ್ತಿದ್ದಾಗ, ‘ಕೃಷ್ಣಾ ಮೇಲ್ದಂಡೆ ಯೋಜನೆ’ ವಿಷಯ ಪ್ರಸ್ತಾಪವಾಯಿತು. ‘‘ಯುಕೆಪಿ ತುಂಡು ಗುತ್ತಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿದೆ ನಿಜವೇ?’’ ಎಂದು ಕೇಳಿದೆ. ತುಂಡು ಗುತ್ತಿಗೆ ಕಾಮಗಾರಿ ನಡೆದಿದ್ದು ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ. ‘‘ಅಕ್ರಮ ಆರೋಪ ಸುಳ್ಳು. ಹೆಚ್ಚೆಂದರೆ ಅಲ್ಪಸ್ವಲ್ಪ ಪಾರ್ಟಿ ಫಂಡ್ ಬಂದಿರಬಹುದು. ತುಂಡು ಗುತ್ತಿಗೆ ಕೊಡದಿದ್ದರೆ ಯೋಜನೆಯೇ ಪೂರ್ಣಗೊಳ್ಳುತ್ತಿರಲಿಲ್ಲ’’ ಎಂದರು ಬೊಮ್ಮಾಯಿ. ಈ ಚರ್ಚೆ ನಡೆದಾಗ ಅವರು ಬಿಜೆಪಿ ಸರಕಾರದಲ್ಲಿ ನೀರಾವರಿ ಸಚಿವರಾಗಿದ್ದರು.
► 2000ನೇ ಇಸವಿ. ಧಾರವಾಡ ಜಿಲ್ಲೆಯ ನವಲೂರು ಗ್ರಾಮದ ರೈತನೊಬ್ಬ ಸಾಲದ ಶೂಲಕ್ಕೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡರು. ಹೊಲದಲ್ಲಿ ಬೆಳೆದ ಆಲೂಗೆಡ್ಡೆ ಕೈ ಕೊಟ್ಟಿತ್ತು. ಸಾಲ ತೀರಿಸಲು ಎತ್ತು ಮಾರಿ ಬೇಸತ್ತಿದ್ದರು. ಈ ಸುದ್ದಿ ಹೊರ ದೇಶಗಳಲ್ಲೂ ಸದ್ದು ಮಾಡಿತ್ತು. ಬಿಬಿಸಿ ಪತ್ರಕರ್ತರೂ ಧಾರವಾಡಕ್ಕೆ ಬಂದಿದ್ದರು. ದೇವೇಗೌಡರೂ ರೈತನ ಮನೆಗೆ ಭೇಟಿ ಕೊಟ್ಟಿದ್ದರು. ತಮ್ಮ ಜೇಬಿನಿಂದ 25 ಸಾವಿರ ರೂಪಾಯಿ ತೆಗೆದು ಮೃತನ ಕುಟುಂಬಕ್ಕೆ ಕೊಟ್ಟರು. ಆಗವರು ಅಧಿಕಾರದಲ್ಲಿ ಇರಲಿಲ್ಲ.
ದೇವೇಗೌಡರ ವ್ಯಕ್ತಿತ್ವ, ಬದ್ಧತೆ, ಅಂತಃಕರಣ ಮತ್ತು ನಾಯಕತ್ವದ ಗುಣ ಅರಿಯಲು ಈ ಮೂರು ಪ್ರಸಂಗಗಳೇ ಸಾಕು. ಕೃಷಿ, ನೀರಾವರಿ ಮತ್ತು ಲೋಕೋಪಯೋಗಿ ಕ್ಷೇತ್ರಗಳಲ್ಲಿ ಅವರು ಚಾಂಪಿಯನ್. ಅವರನ್ನು ಸರಿಗಟ್ಟುವ ಇನ್ನೊಬ್ಬ ನಾಯಕನಿಲ್ಲ. ರಾಜ್ಯದ ಹಿತಾಸಕ್ತಿ ಪ್ರಶ್ನೆ ಬಂದಾಗ ರಾಜಿ ಇಲ್ಲ. ರಾಜಕೀಯ ಲಾಭ-ನಷ್ಟದ ವಿಚಾರದಲ್ಲಿ ಅವರ ದಾರಿಯೇ ಬೇರೆ. ಸ್ವಾರ್ಥಿ ಮತ್ತು ಅವಕಾಶವಾದಿ. ಮಕ್ಕಳ ವಿಷಯದಲ್ಲಂತೂ ‘ಧೃತರಾಷ್ಟ್ರ’.
ದೇವೇಗೌಡರು ಮುಖ್ಯಮಂತ್ರಿ ಆಗಿದ್ದು ಬರೀ 16 ತಿಂಗಳು. ಮುಖ್ಯಮಂತ್ರಿ ಆಗುವುದಕ್ಕೆ ಭಾರೀ ಹೋರಾಟ ಮಾಡಿದ್ದರು. ಪ್ರಧಾನಿ ಹುದ್ದೆ ಅನಾಯಾಸವಾಗಿ ಬಂದಿತ್ತು. ಅದೂ ಹೆಚ್ಚು ಕಾಲ ಉಳಿಯಲಿಲ್ಲ. 10 ತಿಂಗಳಲ್ಲಿ ಅಧಿಕಾರ ಹೋಯಿತು. ಆಗಿನ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ಜತೆ ಸ್ವಲ್ಪ ಹೊಂದಾಣಿಕೆಯಿಂದ ಹೋಗಿದ್ದರೂ ಸರಕಾರ ಉಳಿಯುತ್ತಿತ್ತು.
ಹಾಸನದ ಹೊಳೆನರಸೀಪುರದಲ್ಲಿ ತಳಮಟ್ಟದಿಂದ ರಾಜಕೀಯ ಪ್ರವೇಶಿಸಿದ ದೇವೇಗೌಡರು ಪ್ರಧಾನಿ ಆಗಿದ್ದು ಆಕಸ್ಮಿಕ, ಅದೃಷ್ಟ. ಕನಸು-ಮನಸ್ಸಿನಲ್ಲೂ ಇಂಥ ಅವಕಾಶ ಬರಬಹುದು ಎಂದು ಅವರು ಎಣಿಸಿರಲಿಲ್ಲ. ಈಗದು ಇತಿಹಾಸ. ರಾಜೀನಾಮೆಗೆ ಮೊದಲು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ, ‘‘ಫೀನಿಕ್ಸ್‌ನಂತೆ ಧೂಳಿನಿಂದ ಎದ್ದು ಬರುವೆ’’ ಎಂದು ಹೇಳಿದ್ದು ನಿಜವಾಗಲಿಲ್ಲ. ಆದರೂ ಛಲ ಬಿಟ್ಟಿಲ್ಲ. ರಾಜಕಾರಣದಿಂದ ದೂರ ಸರಿದಿಲ್ಲ. ಈಗಲೂ ಜೆಡಿಎಸ್‌ನ ‘ಬ್ರ್ಯಾಂಡ್ ಅಂಬಾಸಿಡರ್’. ಇಳಿ ವಯಸ್ಸಲ್ಲೂ ರಾಜಕೀಯ ಸಮಾವೇಶಗಳಲ್ಲಿ ಭಾಗಿ. ಅವರದು ದೈತ್ಯ ಶಕ್ತಿ.
ಈ ವಿವರಗಳು ಪ್ರಾಸಂಗಿಕ ಅಷ್ಟೇ. ವಾಸ್ತವವಾಗಿ ಜನತಾದಳ (ಜಾತ್ಯತೀತ) ಪಕ್ಷ ಕುರಿತಾದ ವಿಶ್ಲೇಷಣೆ ಇದು. ಜೆಡಿಎಸ್‌ಗೀಗ 25ರ ಪ್ರಾಯ. ಸ್ಥಾಪನೆ ಆಗಿದ್ದು 99ರಲ್ಲಾದರೂ, ನೋಂದಣಿ ಆಗಿದ್ದು 2000ದ ನವೆಂಬರ್‌ನಲ್ಲಿ. ಅನೇಕ ಏಳುಬೀಳು ಕಂಡಿದೆ. ಅಧಿಕಾರಕ್ಕಾಗಿ ಆಗಾಗ ಮಗ್ಗಲು ಬದಲಿಸಿದೆ. ಎರಡು ಸಲ ಕಾಂಗ್ರೆಸ್, ಒಂದು ಸಲ ಬಿಜೆಪಿ ಬೆಂಬಲದಲ್ಲಿ ರಾಜ್ಯದಲ್ಲಿ ಸರಕಾರ ಮಾಡಿದೆ. ಈಗ ಎನ್‌ಡಿಎ ಪಾಲುದಾರ ಪಕ್ಷ. ಜಾರ್ಜ್ ಫೆರ್ನಾಂಡಿಸ್, ಶರದ್ ಯಾದವ್ ಮತ್ತು ಜೆ.ಎಚ್. ಪಟೇಲರು ಎನ್‌ಡಿಎ ಬೆಂಬಲಿಸಿದ್ದನ್ನು ಪ್ರತಿಭಟಿಸಿ ದೇವೇಗೌಡರು ಜನತಾ ದಳ ತೊರೆದು ಜೆಡಿಎಸ್ ಕಟ್ಟಿದ್ದರು.
ಯಾವ ಪಕ್ಷ ಸಿದ್ಧಾಂತ ವಿರೋಧಿಸಿದ್ದರೋ ಅದರ ಜತೆ ದೇವೇಗೌಡರು ಸಖ್ಯ ಬೆಳೆಸಿದ್ದಾರೆ. ಇದು ವಿಪರ್ಯಾಸ. ಪಕ್ಷದ ಹೆಸರಿನ ಮುಂದೆ ‘ಜಾತ್ಯತೀತ’ ಟ್ಯಾಗ್ ಇದ್ದರೂ ರಾಜಕೀಯ ಲಾಭಕ್ಕಾಗಿ ‘ಹಿಂದುತ್ವ’ ರಾಜಕಾರಣ ಬೆಂಬಲಿಸಿದ್ದಾರೆ. ಮೋದಿ ಅವರನ್ನು ಫ್ಯಾಶಿಸ್ಟ್, ಕೋಮುವಾದಿ, ‘ಬಂಡವಾಳಶಾಹಿ ದುಷ್ಟಕೂಟ’ದ (ಕ್ರೋನಿ ಕ್ಯಾಪಿಟಲಿಸಂ) ಎಂದು ಟೀಕೆ ಮಾಡುತ್ತಿದ್ದ ಗೌಡರೀಗ ಅವರನ್ನು ಹೊಗಳುತ್ತಿದ್ದಾರೆ. ರಾಜ್ಯಸಭೆಯಲ್ಲಿ ಮೊನ್ನೆ ಪ್ರಧಾನಿ ಪರ ಬ್ಯಾಟ್ ಮಾಡಿದ್ದಾರೆ. ಕೃಷಿ ಉತ್ಪನ್ನಗಳ ಬೆಂಬಲ ಬೆಲೆ, ಹಣದುಬ್ಬರ, ರೂಪಾಯಿ ಬೆಲೆ ಕುಸಿತ ಮತ್ತಿತರ ವಿಷಯ ಕುರಿತು ಮಾಜಿ ಪ್ರಧಾನಿ ಚಕಾರ ಎತ್ತಿಲ್ಲ. ಜನರ ಸಮಸ್ಯೆಗಳ ಬಗ್ಗೆ ದನಿ ಎತ್ತದ ನಾಯಕರನ್ನು ಇತಿಹಾಸ ಕ್ಷಮಿಸುವುದಿಲ್ಲ.
ಜೆಡಿಎಸ್ ನಾಯಕರಿಟ್ಟ ತಪ್ಪು ಹೆಜ್ಜೆ, ಕೈಗೊಂಡ ತಪ್ಪು ನಿರ್ಧಾರಗಳಿಂದ ಚುನಾವಣೆಯಿಂದ ಚುನಾವಣೆಗೆ ಜೆಡಿಎಸ್ ಗ್ರಾಫ್ ಇಳಿಮುಖವಾಗುತ್ತಿದೆ.
ಯಡಿಯೂರಪ್ಪ ಅವರಿಗೆ 2008ರಲ್ಲಿ ಆಡಳಿತ ನಡೆಸಲು ಬಿಡಲಿಲ್ಲ. ‘ಆಡಿದ ಮಾತಿನಂತೆ ನಡೆಯಲಿಲ್ಲ’ ಎಂಬ ಕಳಂಕವೇ ಜೆಡಿಎಸ್ ನೆಲ ಕಚ್ಚಲು ಕಾರಣವಾಯಿತು. ಹಿಂದಿನ ಚುನಾವಣೆಯ ಸೋಲು ಹೀನಾಯ. ಅದರ ಪಾಲು ಬರೀ 19 ಸ್ಥಾನ.
ಜೆಡಿಎಸ್ ಹಳೇ ಮೈಸೂರು ಭಾಗ ಅದರಲ್ಲೂ ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಗಳಿಗೇ ಸೀಮಿತ ಎನ್ನುವ ಹಣೆಪಟ್ಟಿ ಕಳಚಿಕೊಂಡು ಹೊರಬರಲು ಸಾಧ್ಯವಾಗಿಲ್ಲ. ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕದಲ್ಲಿ ನೆಲೆ ವಿಸ್ತರಿಸಲು ಸೋತಿದೆ. ಆ ಕಡೆ ನಾಯಕತ್ವ ಬೆಳೆಸಲಿಲ್ಲ. ಕಡೇ ಪಕ್ಷ ಯುಕೆಪಿ ಕುರಿತು ಮಾತನಾಡಿದ್ದರೂ ಸಾಕಿತ್ತು. ಪಕ್ಷ ಕಟ್ಟಬಹುದಿತ್ತು. ಯಾವುದೇ ಪಕ್ಷ ಒಂದು ಜಾತಿ-ಧರ್ಮ ಅವಲಂಬಿಸಿ ರಾಜಕಾರಣ ಮಾಡಲಾಗದು. ಎಲ್ಲ ಜಾತಿ-ಧರ್ಮ ಒಳಗೊಳ್ಳಬೇಕು. ಮೊದಲು ಗೌಡರನ್ನು ಮುಸ್ಲಿಮರು ನಂಬಿದ್ದರು. ಬಿಜೆಪಿ ಜತೆ ಸೇರಿದ್ದರಿಂದ ಮುಸ್ಲಿಮರು ದೂರ ಸರಿದರು. ಜೆಡಿಎಸ್ ವರಿಷ್ಠ ಮನಸ್ಸು ಮಾಡಿದ್ದರೆ ಹಿಂದುಳಿದ, ಅತೀ ಹಿಂದುಳಿದ ವರ್ಗ, ದಲಿತ ಸಮಾಜಗಳನ್ನು ಒಗ್ಗೂಡಿಸಬಹುದಿತ್ತು. ಈ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಅಂಥ ಚಿಂತನೆಯೂ ಅವರಿಗಿದ್ದಂತೆ ಕಾಣಲಿಲ್ಲ.
‘ದೇವೇಗೌಡರು ಒಬಿಸಿ ನಾಯಕ’ ಎಂದೇ ಲಾಲು ಪ್ರಸಾದ್, ಮುಲಾಯಂ ಸಿಂಗ್ ಪ್ರಧಾನಿ ಹುದ್ದೆಗೆ ಅವರನ್ನು ಬೆಂಬಲಿಸಿದ್ದು. ಅವರ ಹೆಸರನ್ನು ಜ್ಯೋತಿ ಬಸು ಸೂಚಿಸಿದ್ದು. ಈ ಪ್ರಭಾವ ಬಳಸಿ ಬಲಿಷ್ಠವಾಗಿ ಪಕ್ಷ ಕಟ್ಟಬಹುದಿತ್ತು. ಅದ್ಯಾಕೊ ಹಾಗೆ ಮಾಡಲಿಲ್ಲ. ಹಳೇ ಮೈಸೂರು ಜಿಲ್ಲೆಗಳಲ್ಲೂ ಅದರ ಶಕ್ತಿ ಕ್ಷೀಣಿಸಿದೆ. ಒಕ್ಕಲಿಗರ ಕೋಟೆಗೂ ಕಾಂಗ್ರೆಸ್ ಮತ್ತು ಬಿಜೆಪಿ ಲಗ್ಗೆ ಹಾಕಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿದು ರುಜುವಾತಾಗಿದೆ. ಜೆಡಿಎಸ್ ‘ಕುಟುಂಬ ಕೇಂದ್ರಿತ’ವಾಗಿದೆ. ‘ಬೇರೆ ಜಾತಿಗಳ ನಾಯಕರು ಹೋಗಲಿ, ಅವರದೇ ಜಾತಿ ನಾಯಕರನ್ನು ಬೆಳೆಸಲಿಲ್ಲ’ ಎಂಬ ಅಪವಾದ ಗೌಡರ ಮೇಲಿದೆ. ಈ ಕಾರಣಕ್ಕೆ ಬಹಳಷ್ಟು ನಾಯಕರು ಜೆಡಿಎಸ್ ತೊರೆದಿದ್ದಾರೆ. ಇಷ್ಟೇ ಹೇಳಿದರೆ ಪೂರ್ಣ ಸತ್ಯವಾಗುವುದಿಲ್ಲ. ಅರ್ಧ ಸತ್ಯವಾಗುತ್ತದೆ. ಅವರು ಬೆಳೆಸಿದ ಅನೇಕ ನಾಯಕರೂ ಗೌಡರಿಗೆ ಕೈಕೊಟ್ಟು ಹೋಗಿದ್ದಾರೆ.
ದೇವೇಗೌಡರು 1994ರಲ್ಲಿ ಮುಖ್ಯಮಂತ್ರಿ ಆದಾಗ ಜನತಾದಳ 115 ಸ್ಥಾನ ಗೆದ್ದಿತ್ತು. 1999ರಲ್ಲಿ ಮೊದಲ ಬಾರಿಗೆ ಜೆಡಿಎಸ್ ಚುನಾವಣೆ ಎದುರಿಸಿದಾಗ ಗೆಲುವು ಸಾಧ್ಯವಾಗಿದ್ದು ಬರೀ 10 ಕ್ಷೇತ್ರಗಳಲ್ಲಿ. ಅದಕ್ಕೆ ಬಿದ್ದ ಶೇಕಡಾವಾರು ಮತಗಳು 10.42. ಜೆಡಿಯುಗೆ ಸಿಕ್ಕಿದ್ದ ಸ್ಥಾನ 18. ಜನತಾದಳ ಹೋಳಾಗದಿದ್ದರೆ ರಾಜ್ಯದ ರಾಜಕೀಯ ಚಿತ್ರಣ ಬೇರೆಯಾಗಿರುತ್ತಿತ್ತೇನೋ
2004ರ ಚುನಾವಣೆಯಲ್ಲಿ ಜೆಡಿಎಸ್ ಕೊಂಚ ಚೇತರಿಸಿಕೊಂಡರೂ ಸರಕಾರ ರಚಿಸುವಷ್ಟು ಸೀಟುಗಳು ಬರಲಿಲ್ಲ. ಆಗ ದೇವೇಗೌಡರು ನೋಡಿದ್ದು ಕಾಂಗ್ರೆಸ್ ಕಡೆ. 58 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿತ್ತು. 65 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಅಲ್ಪ ಬಹುಮತಕ್ಕೆ 113 ಸ್ಥಾನ ಬೇಕು. ಎರಡು ಪಕ್ಷಗಳು ಸೇರಿ ಸರಕಾರ ಮಾಡಿದವು. ಧರಂಸಿಂಗ್ ಮುಖ್ಯಮಂತ್ರಿ ಆದರು. ಸಿಂಗ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಬಂಡಾಯವೆದ್ದು, ಸರಕಾರ ಕೆಡವಿದರು. ಬಿಜೆಪಿಯ ಯಡಿಯೂರಪ್ಪನವರ ಜತೆಗೂಡಿ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ರಚಿಸಿ, ಅವರೇ ಮುಖ್ಯಮಂತ್ರಿಯಾದರು.
ಯಡಿಯೂರಪ್ಪನವರ ಜತೆ ಸೇರುವ ತಪ್ಪನ್ನು ಕುಮಾರಸ್ವಾಮಿ ಅವರು ಮಾಡದಿದ್ದರೆ ಬಿಜೆಪಿ ಇಷ್ಟು ಪ್ರಬಲವಾಗುತ್ತಿರಲಿಲ್ಲ. ಜೆಡಿಎಸ್ ದುರ್ಬಲವಾಗುತ್ತಿರಲಿಲ್ಲ. ತಮಿಳುನಾಡಿನ ಡಿಎಂಕೆ, ಪಶ್ಚಿಮ ಬಂಗಾಳದ ಟಿಎಂಸಿ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಂತೆ ಬಲಿಷ್ಠ ಪ್ರಾದೇಶಿಕ ಪಕ್ಷ ಆಗಬಹುದಿತ್ತು. ಅಂಥದೊಂದು ಅವಕಾಶ ಕಳೆದು ಹೋಯಿತು. 2028ಕ್ಕೆ ಜೆಡಿಎಸ್ ತನ್ನ ನೆಲೆಯನ್ನು ಮರಳಿ ಸ್ಥಾಪಿಸದಿದ್ದರೆ ಕಥೆ ಮುಗಿದಂತೆ. 2028ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರವನ್ನು ಅಧಿಕಾರಕ್ಕೆ ತರುವುದಾಗಿ ದೇವೇಗೌಡರು ರಾಜ್ಯಸಭೆಯಲ್ಲಿ ಶಪಥ ಮಾಡಿದ್ದಾರೆ. ಈ ನಿಟ್ಟಿನಲ್ಲಿ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಕಿತ್ತಾಟದ ಲಾಭ ಪಡೆಯಲು ತಂತ್ರ ರೂಪಿಸಬೇಕು. ಬಿಜೆಪಿ ಮೇಲೂ ನಿಗಾ ಇಡಬೇಕಿದೆ. ಏಕೆಂದರೆ, ಪ್ರಾದೇಶಿಕ ಪಕ್ಷಗಳ ‘ಬಂಡವಾಳ’ದಲ್ಲಿ ಅದು ಬೆಳೆಯುತ್ತಿದೆ. ಬಂಡವಾಳ ನಷ್ಟವಾದರೆ ಕಷ್ಟ. ಈ ವಾಸ್ತವ ದೇವೇಗೌಡರಿಗೂ ಗೊತ್ತಿದೆ.
2018ರಲ್ಲೂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ಜೆಡಿಎಸ್ ಬೆಂಬಲಿಸುವುದು ಕಾಂಗ್ರೆಸ್ ನಾಯಕರಿಗೆ ಅನಿವಾರ್ಯವಾಗಿತ್ತು. ಆದರೆ, ಸರಕಾರ ದೀರ್ಘ ಕಾಲ ಬಾಳಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಮಿತ್ರ ಪಕ್ಷಗಳ ಜತೆ ನಡೆದುಕೊಂಡ ರೀತಿಯಲ್ಲೇ ಅವರೂ ವರ್ತಿಸಿದರು. ಕಾಂಗ್ರೆಸ್ ನಾಯಕರ ಸಲಹೆ, ಸೂಚನೆ-ಬೇಡಿಕೆಗಳಿಗೆ ಕಿವಿಗೊಡಲಿಲ್ಲ. ಸರಕಾರ ಬೀಳಿಸಲು ಕೈ ನಾಯಕರು ತೆರೆಮರೆಯಲ್ಲಿ ಪಿತೂರಿ ಮಾಡಿದರು. ಜೆಡಿಎಸ್ ಮತ್ತು ಕಾಂಗ್ರೆಸ್‌ನ 17 ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದರು. ದೇವೇಗೌಡರ ಮನೆ ಬಾಗಿಲಿಗೇ ಹೋಗಿ ದುಂಬಾಲು ಬಿದ್ದು ಬೆಂಬಲಿಸಿದವರೇ ಕುಮಾರಸ್ವಾಮಿ ಕಾಲೆಳೆದರು. ನಿತ್ಯ ಕಿರುಕುಳ ಕೊಟ್ಟರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹೊರ ಜಗತ್ತಿನ ದೃಷ್ಟಿಯಲ್ಲಿ ಒಂದಾಗಿದ್ದರೇ ವಿನಾ, ಒಳಗೊಳಗೇ ಕುದಿಯುತ್ತಿದ್ದರು. ಪರಸ್ಪರ ನಂಬಿಕೆ-ವಿಶ್ವಾಸವಿರಲಿಲ್ಲ. ಎಲ್ಲರೂ ಲಾಭ ಮತ್ತು ನಷ್ಟವನ್ನೇ ಲೆಕ್ಕ ಹಾಕಿದರು. ಪಕ್ಷ ಮತ್ತು ಸರಕಾರದಿಂದ ತಮಗೇನು ಲಾಭ ಎಂದು ಯೋಚನೆ ಮಾಡಿದರೇ ಹೊರತು ತಮ್ಮಿಂದ ಪಕ್ಷಕ್ಕೆ ಎಷ್ಟು ಲಾಭ ಎಂದು ನೋಡಲಿಲ್ಲ. ಈ ಪ್ರವೃತ್ತಿ ಕಾಂಗ್ರೆಸ್ ನಾಯಕರಲ್ಲಿ ಹೆಚ್ಚು. ಇದು ಆ ಪಕ್ಷದ ಬೆಳವಣಿಗೆಗೂ ಅಡ್ಡಿಯಾಗಿದೆ.
ಒಂದು ಮಾತನ್ನು ಇಲ್ಲಿ ಹೇಳಲೇಬೇಕು. ದೇವೇಗೌಡರು ಮಾಡಲಾಗದ್ದನ್ನು ಕುಮಾರಸ್ವಾಮಿ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ‘ಗ್ರಾಮ ವಾಸ್ತವ್ಯ’ದ ಮೂಲಕ ಸರಕಾರವನ್ನು ಜನರ ಮನೆ ಬಾಗಿಲಿಗೇ ಕೊಂಡೊಯ್ದಿದ್ದಾರೆ. ದುಃಖ-ದುಮ್ಮಾನ ಕೇಳಿದ್ದಾರೆ. ಅದರಿಂದಾಗಿ ಎಷ್ಟು ಪ್ರಯೋಜನವಾಯಿತು ಎನ್ನುವುದು ಬೇರೆ ಮಾತು. ಮುಖ್ಯಮಂತ್ರಿ ಸಾಮಾನ್ಯರ ಮನೆಯಲ್ಲಿ ವಾಸ್ತವ್ಯ ಹೂಡಿದ್ದೇ ಸಕಾರಾತ್ಮಕ ನಿಲುವು. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಕ್ರಿಯೆ. ಕೆಲವರು ಇದನ್ನು ‘ಢೋಂಗಿ ರಾಜಕಾರಣ’ ಎಂದು ಕರೆಯಬಹುದು. ಎಲ್ಲವೂ ಅವರವರ ಭಾವಕ್ಕೆ ಸಂಬಂಧಪಟ್ಟಿದ್ದು.
ದೇವೇಗೌಡರು ತಮ್ಮನ್ನು ‘ಮಣ್ಣಿನ ಮಗ’ ಎಂದು ಕರೆದುಕೊಂಡರು. ಆದರೆ, ಅದು ರೈತರ ಪಕ್ಷವೂ ಆಗಲಿಲ್ಲ, ಕಾರ್ಮಿಕರ ಪಕ್ಷವೂ ಆಗಲಿಲ್ಲ, ಮಧ್ಯಮ ವರ್ಗದವರ ಪಕ್ಷವೂ ಆಗಲಿಲ್ಲ. ಕೊನೆಗೆ ಒಕ್ಕಲಿಗರೂ ಪೂರ್ಣವಾಗಿ ಅದರ ಕೈ ಹಿಡಿಯಲಿಲ್ಲ. ‘ಏಕೆ ಹೀಗಾಯ್ತು?’ ಜೆಡಿಎಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾತ್ಯತೀತ ಟ್ಯಾಗ್ ಬಗ್ಗೆಯೂ ಮರು ಚಿಂತಿಸಬೇಕಿದೆ.