ಡೊನಾಲ್ಡ್ ಸಾರ್ವಜನಿಕ ಸುರಕ್ಷತೆಗೆ ಬೆದರಿಕೆ: ಬ್ರಿಟಿಶ್ ಸಂಸದರು

Update: 2016-01-19 14:29 GMT

ಲಂಡನ್, ಜ. 19: ಬ್ರಿಟಿಶ್ ಸಂಸತ್ತಿನ ಹಲವು ಸದಸ್ಯರು ಸೋಮವಾರ ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ರನ್ನು ನಿಂದಿಸಿದರು, ದೂಷಿಸಿದರು, ಜರೆದರು ಹಾಗೂ ‘‘ಮೂರ್ಖ... ಬಫೂನ್’’ ಎಂಬುದಾಗಿ ಕರೆದರು.

ಅಷ್ಟೇ ಅಲ್ಲದೆ, ಟ್ರಂಪ್ ಒಂದು ಪಿಡುಗಾಗಿದ್ದಾರೆ ಹಾಗೂ ಅವರು ಸಾರ್ವಜನಿಕ ಸುರಕ್ಷತೆಗೆ ಬೆದರಿಕೆಯಾಗಿದ್ದಾರೆ ಎಂದು ಬಣ್ಣಿಸಿದರು!

ಆದರೆ, ಸೋಮವಾರ ನಡೆದ ಮೂರು ತಾಸುಗಳ ಅಸಾಧಾರಣ ಚರ್ಚೆಯ ಕೊನೆಯಲ್ಲಿ, ಡೊನಾಲ್ಡ್ ಟ್ರಂಪ್‌ರ ಬ್ರಿಟನ್ ಪ್ರವೇಶಕ್ಕೆ ನಿಷೇಧ ಹೇರಲು ಮುಂದಾಗಲಿಲ್ಲ.

ಅವರ ಬ್ರಿಟನ್ ಪ್ರವೇಶವನ್ನು ನಿಷೇಧಿಸುವುದು ಚರ್ಚೆಯ ವಿಷಯವಾಗಿದ್ದರೂ, ಅದು ಅವರ ಉದ್ದೇಶವಾಗಿರಲಿಲ್ಲ. ಅಲ್ಲದೆ, ಆ ಅಧಿಕಾರವೂ ಅವರಿಗಿಲ್ಲ. ವ್ಯಕ್ತಿಯೊಬ್ಬರ ಬ್ರಿಟನ್ ಪ್ರವೇಶಕ್ಕೆ ನಿಷೇಧ ಹೇರುವ ಬಗ್ಗೆ ಗೃಹ ಕಾರ್ಯದರ್ಶಿ ಮಾತ್ರ ನಿರ್ಧಾರ ತೆಗೆದುಕೊಳ್ಳಬಲ್ಲರು.

ಆದಾಗ್ಯೂ, ಅಭಿವ್ಯಕ್ತಿ ಸ್ವಾತಂತ್ರ, ರಾಜಕೀಯ ತೀವ್ರವಾದ ಮುಂತಾದ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಚರ್ಚೆಯ ವೇಳೆ ಯಾರೂ ಟ್ರಂಪ್‌ರ ಪರವಾಗಿ ಮಾತನಾಡಲಿಲ್ಲ. ಪ್ರತಿಯೊಬ್ಬರು ತಮ್ಮ ಸರದಿ ಬಂದಾಗ ಅವರನ್ನು ಖಂಡಿಸಿದರು.

ಅಮೆರಿಕಕ್ಕೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸಬೇಕು ಎಂಬ ವಿವಾದಾಸ್ಪದ ಹೇಳಿಕೆಯನ್ನು ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ನೀಡಿರುವುದನ್ನು ಸ್ಮರಿಸಬಹುದು. ಇದೇ ವಿಷಯದಲ್ಲಿ ಬ್ರಿಟಿಶ್ ಸಂಸದರು ಚರ್ಚೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News