ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಕಾಯಕಲ್ಪವೋ ಸರ್ಜರಿಯೋ?
ದೇಶಾದ್ಯಂತ ಕ್ರಿಕೆಟ್ ಪ್ರೇಮಿಗಳು ಇಚ್ಛಿಸಿದ್ದ, ಜನಸಾಮಾನ್ಯರು ಅಪೇಕ್ಷಿಸಿದ್ದ ಕ್ರಿಕೆಟ್ ಆಟ ಮತ್ತು ಆಡಳಿತದ ಸುಧಾರಣೆ ಪ್ರಕ್ರಿಯೆ ಈಗ ಹೊಸ್ತಿಲ ಬಳಿ ಇದ್ದು, ಕ್ರಿಕೆಟ್ ನಿಯಂತ್ರಣ ಮಂಡಳಿಯ ಕದವನ್ನು ಜೋರಾಗಿ ತಟ್ಟುತ್ತಿದೆ. ನಿವೃತ್ತ ನ್ಯಾಯಮೂರ್ತಿ ಲೋಧಾ ಸಮಸ್ಯೆಯ ಆಳ, ಅಗಲ ಮತ್ತು ಉದ್ದವನ್ನು ಸರಿಯಾಗಿ ಅಳೆದು, ಸಮಸ್ಯೆಯ ಮೂಲವನ್ನು ಹುಡುಕಿ ಶೀಘ್ರ ಮತ್ತು ನಿಖರವಾದ ಪರಿಹಾರವನ್ನು ಸೂಚಿಸಿದ್ದಾರೆ. ತಮ್ಮ 159 ಪುಟಗಳ ವಿಸ್ತೃತ ವರದಿಯಲ್ಲಿ ಕ್ರಿಕೆಟ್‌ಗೆ ಹಿಡಿದ ವ್ಯಾಧಿಯನ್ನು ಸರಿಯಾಗಿ ವಿಶ್ಲೇಷಿಸಿ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲ ಸ್ವರೂಪವನ್ನು ಬದಲಾಯಿಸುವ ಸೂತ್ರಗಳನ್ನು ಸೂಚಿಸುವುದರೊಂದಿಗೆ, ದೇಶದಲ್ಲಿ ಕ್ರಿಕೆಟ್ ಆಟದ ಬೆಳವಣಿಗೆಗೆ ಹಲವಾರು ರಚನಾತ್ಮಕ ಮತ್ತು ದೂರಗಾಮಿ ಸಲಹೆಗಳನ್ನು ನೀಡಿದ್ದಾರೆ. ಈಗ ಚೆಂಡು ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಂಗಳದಲ್ಲಿದ್ದು, ಅದು ಯಾವರೀತಿಯ ನಿರ್ಣಯವನ್ನು ತೆಗೆದು ಕೊಳ್ಳುತ್ತದೆ ಎನ್ನುವುದನ್ನು ಇಡೀ ದೇಶ ಕುತೂಹಲದಿಂದ ನಿರೀಕ್ಷಿಸುತ್ತಿದೆ. ಲೋಧಾ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದ್ದರಿಂದ, ಕ್ರಿಕೆಟ್ ಮಂಡಳಿ ಈ ಶಿಫಾರಸುಗಳನ್ನು ಒಪ್ಪಲೇ ಬೇಕಾಗುತ್ತದೆ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ. ಆದರೆ ತನ್ನ ಕಾಲ ಬುಡಕ್ಕೇ ಕೊಡಲಿ ಇಟ್ಟಿರುವ, ‘ಸರಕಾರಿ ನೌಕರರು ಮತ್ತು ರಾಜಕಾರಣಿಗಳು ಆಡಳಿತ ಮಂಡಳಿಯ ಸದಸ್ಯರಾಗುವಂತಿಲ್ಲ ಮತ್ತು ಇದನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ತರಬೇಕು ಮತ್ತು ಪದಾಧಿಕಾರಿಗಳ ಗರಿಷ್ಠ ವಯಸ್ಸು 70ನ್ನು ದಾಟಬಾರದು’’ ಎನ್ನುವ ನಿಬಂಧನೆಗಳು, ನಿಯಂತ್ರಣ ಮಂಡಳಿಯ ಹಲವರ ನಿದ್ದೆಗೆಡಿಸಿದೆ.
ಭಾರತದಲ್ಲಿ ರಾಜಕೀಯ ಮತ್ತು ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಕೆಲವು ಸಾಮ್ಯತೆ ಇದೆ. ಒಂದು ಕುಟುಂಬ ರಾಜಕಾರಣವಾದರೆ, ಇನ್ನೊಂದು ಕೆಲವರ ಖಾಯಂ ಒಡ್ಡೋಲಗವಾಗಿದೆ. ದುರಂತ ವೆಂದರೆ, ಈ ಎರಡೂ ಕ್ಷೇತ್ರಗಳಲ್ಲಿ ನಿವೃತ್ತಿ ‘ಮೇಲಿನಿಂದ’ ಕರೆ ಬಂದಾಗಲೇ. ಆಟಗಾರರೂ ತಮ್ಮ ನಿರಂತರ ವೈಫಲ್ಯಕ್ಕೆ ಟೀಕೆಗಳ ಸುರಿಮಳೆ ಬಂದಾಗಲೇ ಅವರು ಪ್ಯಾಡ್ ಬಿಚ್ಚುವುದು. ಯಾರೂ ‘‘ತಾವು ಸಾಕಷ್ಟು ಆಡಿದ್ದೇವೆ.. ಬೇರೆಯವರೂ ಆಡಲಿ... ಅವರಿಗೂ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಸಿಗಲಿ’’ ಎಂದು ಕನಸಿನಲ್ಲೂ ದೊಡ್ಡತನ ತೋರಿಸುವುದಿಲ್ಲ. ಕಳೆದ ಮೂರು ದಶಕಗಳಿಂದ ಆಡಿದ ಆಟಗಾರರ ಪಟ್ಟಿ ಮತ್ತು ಕ್ರಿಕೆಟ್ ಮಂಡಳಿಯಲ್ಲಿನ ಆಡಳಿತಗಾರರ ಪಟ್ಟಿಯನ್ನು ಸೂಕ್ಷ್ಮ್ಮವಾಗಿ ಪರಿಶೀಲಿಸಿದರೆ ಈ ಸತ್ಯದ ಅರಿವಾಗದಿರದು. ಅದೇ ಮುಖಗಳು ಮುಂದಿನ ಸಾಲಿನಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಕಾಣು ತ್ತದೆೆ. ಈ ಮಂಡಳಿ ಕೆಲವರ ವೈಯಕ್ತಿಕ ಸೊತ್ತಾಗಿ ಪರಿಣಮಿಸಿದೆ. ಅವರ ಸ್ಥಳ ಅಲುಗಾಡದಂತೆ ನೀತಿ ನಿಯಮಾವಳಿಗಳನ್ನು ರಚಿಸಲಾಗಿದೆ. ಆಟಗಾರರಲ್ಲಿ ಕೆಲವಾದರೂ ಹೊಸ ತಲೆಗಳನ್ನು ಕಾಣಬಹುದು.ಆದರೆ, ಆಡಳಿತ ಮಂಡಳಿಯಲ್ಲಿ ಅವೇ ತಲೆಗಳು. ಆದರೆ, ಆಸನಗಳಷ್ಟೇ ಬೇರೆ.
ಎಪ್ಪತ್ತರ ದಶಕದಲ್ಲಿ ಆಸ್ಟ್ರೇಲಿಯಾದ ಕೆರ್ರಿ ಪ್ಯಾಕರ್ ಕ್ರಿಕೆಟ್‌ನಲ್ಲಿ ಏಕದಿನ ಪಂದ್ಯವನ್ನು ಪರಿಚಯಿಸುವ ತನಕ, ಕ್ರಿಕೆಟ್ ‘ಸಭ್ಯರ’ ಆಟವಾಗಿತ್ತು. ನಂತರ ಅದು ತನ್ನ ಶತಮಾನದ ಸಭ್ಯತೆಯನ್ನು ಕಳೆದುಕೊಂಡು ವಾಣಿಜ್ಯೀಕರಣವಾಯಿತು. ಎಲ್ಲಿ ಹಣ ಇದೆಯೋ ಅಲ್ಲಿ ರಾಜಕಾರಣಿಗಳು, ಉದ್ದಿಮೆದಾರರು, ಸೆಲೆಬ್ರಿಟಿಗಳು ಮತ್ತು ಕಾರ್ಪೊರೇಟ್ ವಕೀಲರು ಕಾಣುವುದು ಅಲಿಖಿತ ನಿಯಮ. ಅಂತೆಯೇ ಕ್ರಿಕೆಟ್ ಮಂಡಳಿ ಛ್ಝಿಜಿಠಿಛಿ ್ಚ್ಝ್ಠಚಿ ಆಗಿ ಪರಿವರ್ತಿತವಾಯಿತು. ಲಲಿತ್ ಮೋದಿಯವರ ಹೊಸ ಕ್ರಿಕೆಟ್ ಆವಿಷ್ಕಾರ ‘ಐಪಿಎಲ್’ ಬಂದ ಮೇಲೆ, ಕ್ರಿಕೆಟ್ ಪೂರ್ಣ ಬದಲಾಗಿ ಒಂದು ರೀತಿಯ ಜೂಜಾಗಿ ಪರಿಣಮಿಸಿತು.
ಕ್ರಿಕೆಟ್ ಆಟದ ಮಹಾ ದುರಂತವೆಂದರೆ, ಇದರಲ್ಲಿ ಆಟಗಾರರು, ಕೋಚ್‌ಗಳು ಹಾಗೂ ಇನ್ನಿತರ ಅಧಿಕಾರಿಗಳು ಪಡೆಯುವ ಕೋಟಿ- ಕೋಟಿ ಫೀಸು. ತಂಡಕ್ಕೆ ಸೇರಿದರೆ ಫೀಸು ಗ್ಯಾರಂಟಿ. ಇಲ್ಲಿ ಸಾಧನೆಯ ಮಾನದಂಡ ಇರುವುದಿಲ್ಲ.
ಕ್ರಿಕೆಟ್ ಆಟಗಾರರಿಗೆ ಕೊಡುವ ಫೀಸು, ಪ್ರೋತ್ಸಾಹ ಧನ, ಪಿಂಚಣಿ, ಜಾಹೀರಾತು ಮತ್ತು ಪ್ರಾಯೋಜ ಕತ್ವದ ಹಣ ಅವರ ತಲೆ ತಿರುಗಿಸುವಂತಿರುತ್ತದೆ. ಅಂತೆಯೇ ಪ್ರತಿಯೊಬ್ಬರೂ ಕ್ರಿಕೆಟ್ ಆಟಗಾರನಾಗಲು ಪ್ರಯತ್ನಿಸುತ್ತಾರೆ. ಅದಕ್ಕೂ ಮಿಗಿಲಾಗಿ ದೊರಕುವ ಸೆಲೆಬ್ರಿಟಿ ಎನ್ನುವ ಇನ್ನೊಂದು ಕಿರೀಟ ಬೇರೆ. ಇದೀಗ ಲೋಧಾ ಸಮಿತಿ ಮಾಡಿದ ಎಲ್ಲಾ ಶಿಫಾರಸುಗಳು ಅರ್ಥ ಪೂರ್ಣವಾಗಿವೆ. ಕ್ರಿಕೆಟ್ ಆಟದಲ್ಲಿ ಹೊಸಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಒಬ್ಬ ಅಟಗಾರ ಆಡಬಹುದಾದ ಎಲ್ಲ ನಮೂನೆಗಳ ಪಂದ್ಯಗಳ ಗರಿಷ್ಠ ಮಿತಿಯನ್ನು ನಿಗದಿಗೊಳಿಸಬೇಕು. ಹಾಗೆಯೇ ಅವರಿಗೆ ಕೊಡುವ ಫೀಸು ಕೂಡಾ ಸಾಧನೆಗೆ ಅನುಗುಣವಾಗಿರಬೇಕು. ಕ್ರಿಕೆಟ್‌ನಲ್ಲಿ ಗ್ರಾಮೀಣ ಪ್ರತಿಭೆಯನ್ನು ಗುರುತಿಸಲು ವಿಶೇಷ ವ್ಯವಸ್ಥೆ ಇರಬೇಕು. ಕ್ರಿಕೆಟ್‌ನಲ್ಲಿ ಆಡಲು ಕೇವಲ ದೊಡ್ಡ ನಗರದವರಿಗೆ ಮಾತ್ರ ಅವಕಾಶ ಸಿಗುತ್ತದೆ ಎನ್ನುವ ಆರೋಪಕ್ಕೆ ಅವಕಾಶ ನೀಡಬಾರದು.
ಲೋಧಾ ಸಮಿತಿಯ ಶಿಫಾರಸುಗಳು ಕ್ರಿಕೆಟ್ ಆಟ ಮತ್ತು ಆಡಳಿತವನ್ನು ಸ್ವಚ್ಛ ಗೊಳಿಸುವ ನಿಟ್ಟಿನಲ್ಲಿ ಗಮನಾರ್ಹ ಹೆಜ್ಜೆ. ಇದು ಕೇವಲ ರಾಜಕಾರಣಿಗಳನ್ನು ಮತ್ತು ಸರಕಾರಿ ನೌಕರರನ್ನು ಮಂಡಳಿಯಿಂದ ಹೊರ ಹಾಕಿದರೆ ಸಾಲದು. ದಶಕಗಳಿಂದ ಬೇರೆ-ಬೇರೆ ಹುದ್ದೆಗಳನ್ನು ಅಲಂಕರಿಸುತ್ತಾ ಕ್ರಿಕೆಟ್ ಮಂಡಳಿಯಲ್ಲಿ ಖಾಯಂ ‘‘ಸೇವೆ’’ ಮಾಡುತ್ತಾ ಆಜೀವ ಸದಸ್ಯರಾಗಿರುವವರನ್ನು ಆಧ್ಯತೆಯ ಮೇಲೆ ಹೊರಹಾಕಿ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು.