×
Ad

ರಾಕೆಟ್‌ನ ಯಶಸ್ವಿ ಮರು ಬಳಕೆ: ಬಾಹ್ಯಾಕಾಶ ಯಾನ ಕ್ರಾಂತಿಯತ್ತ ಇಟ್ಟ ದೊಡ್ಡ ಹೆಜ್ಜೆ

Update: 2016-01-23 23:58 IST

ಕೇಪ್ ಕ್ಯಾನವರಲ್, ಜ. 23: ಅಮೆಝಾನ್ ಸ್ಥಾಪಕ ಜೆಫ್ ಬೆರೆಸ್‌ರ ಬಾಹ್ಯಾಕಾಶ ಪ್ರಯಾಣ ಕಂಪೆನಿ ‘ಬ್ಲೂ ಒರಿಜಿನ್’ ರಾಕೆಟೊಂದನ್ನು ಯಶಸ್ವಿಯಾಗಿ ಎರಡನೆ ಸಲ ಬಳಸಿದ್ದು, ಬಾಹ್ಯಾಕಾಶ ಯಾನದಲ್ಲಿ ಒಂದು ಮೈಲಿಗಲ್ಲಾಗಿದೆ.
ಇದು ಮರುಬಳಕೆಯ ಬೂಸ್ಟರ್‌ಗಳನ್ನು ಅಭಿವೃದ್ಧಿ ಪಡಿಸುವ ಗುರಿಯತ್ತ ಇಟ್ಟ ಒಂದು ಮಹತ್ವದ ಹೆಜ್ಜೆಯಾಗಿದೆ.

‘ನ್ಯೂ ಶೆಫರ್ಡ್’ ರಾಕೆಟ್ ಹಾಗೂ ಆರು ಪ್ರಯಾಣಿಕರನ್ನು ಒಯ್ಯಲು ರೂಪಿಸಲಾದ ಕ್ಯಾಪ್ಸೂಲ್ ಪಶ್ಚಿಮ ಟೆಕ್ಸಾಸ್‌ನ ಉಡಾವಣಾ ಸ್ಥಳವೊಂದರಿಂದ ಶುಕ್ರವಾರ ಬೆಳಗ್ಗೆ 11:22ಕ್ಕೆ ಆಕಾಶಕ್ಕೆ ನೆಗೆಯಿತು ಹಾಗೂ ನಿಮಿಷಗಳ ಬಳಿಕ ಅದೇ ಉಡಾವಣಾ ಸ್ಥಳದಲ್ಲಿ ಇಳಿಯಿತು ಎಂದು ಕಂಪೆನಿ ಹೇಳಿಕೆಯೊಂದರಲ್ಲಿ ತಿಳಿಸಿತು.
 
ಎರಡು ತಿಂಗಳ ಹಿಂದೆ ನಡೆದ ಯಶಸ್ವಿ ಪರೀಕ್ಷಾ ಹಾರಾಟ ಮತ್ತು ಭೂಸ್ಪರ್ಶ ನಡೆಸಿದ ಅದೇ ರಾಕೆಟ್ ಶುಕ್ರವಾರವೂ ಆಕಾಶಕ್ಕೆ ನೆಗೆಯಿತು ಹಾಗೂ ಆ ಮೂಲಕ ರಾಕೆಟ್‌ಗಳನ್ನು ಮರುಬಳಕೆ ಮಾಡಬಹುದು ಎನ್ನುವುದನ್ನು ಸಾಬೀತುಪಡಿಸಿತು ಎಂದು ಹಾರಾಟದ 10 ಗಂಟೆಗಳ ಬಳಿಕ ಬ್ಲೂ ಒರಿಜಿನ್‌ನ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಬೆರೆಸ್ ತಿಳಿಸಿದರು.

ಅಮೆರಿಕ, ಕ್ಯೂಬಾ ನಡುವೆ ‘ದೂರಸಂಪರ್ಕ’ ಮಾತುಕತೆ
ಹವಾನ, ಜ. 23: ದೂರಸಂಪರ್ಕ ಮತ್ತು ಇಂಟರ್ನೆಟ್ ಬಗ್ಗೆ ಅಮೆರಿಕದ ಅಧಿಕಾರಿಗಳೊಂದಿಗೆ ಎರಡು ದಿನಗಳ ಕಾಲ ಮಾತುಕತೆ ನಡೆಸಿದ್ದೇವೆ ಎಂದು ಕ್ಯೂಬಾದ ಅಧಿಕಾರಿಗಳು ಹೇಳಿದ್ದಾರೆ.

ಇಂಟರ್ನೆಟ್ಟನ್ನು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಬಳಸುವ ನಿಟ್ಟಿನಲ್ಲಿ ಇತ್ತಂಡಗಳು ಅಭಿಪ್ರಾಯ ವಿನಿಮಯ ಮಾಡಿಕೊಂಡವು ಎಂದು ಕ್ಯೂಬ ವಿದೇಶ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.

ಅಮೆರಿಕದ ದಿಗ್ಬಂಧನೆಯು ದ್ವೀಪ ರಾಷ್ಟ್ರದ ದೂರಸಂಪರ್ಕ ವ್ಯವಸ್ಥೆಯ ಮೇಲೆ ಹೊಂದಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆಯೂ ಕ್ಯೂಬಾದ ಅಧಿಕಾರಿಗಳು ದೂರಿದರು ಎಂದು ಸಚಿವಾಲಯ ಶುಕ್ರವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News