ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯೇ?
ಈ ದೇಶದ ಸರ್ವ ಸಮಸ್ಯೆಗಳಿಗೆ ರಾಜಕಾರಣಿಗಳು ಒಂದು ನಿಮಿಷದಲ್ಲಿ ಪರಿಹರಿಸಿ ಬಿಡುವ ಚಾಣಾಕ್ಷತೆಯನ್ನು ಹೊಂದಿದ್ದಾರೆ. ‘‘ನೀರುಳ್ಳಿ ದರ ನೂರು ರೂಪಾಯಿ ದಾಟಿದೆ’’ ಎಂದು ಜನರು ಬೀದಿಗಿಳಿದಾಕ್ಷಣ, ಸರಕಾರ ಹತ್ತು ಮಂದಿ ಶಂಕಿತ ಉಗ್ರರನ್ನು ಬಂಧಿಸಿ ಸಮಸ್ಯೆಯನ್ನು ನಿವಾರಿಸಿ ಬಿಡುತ್ತದೆ. ನೀರುಳ್ಳಿಯ ಬಗ್ಗೆ ಬರೆಯುತ್ತಿದ್ದ ಮಾಧ್ಯಮಗಳು, ಶಂಕಿತ ಉಗ್ರರ ಕುರಿತಂತೆ ಮುಖಪುಟದಲ್ಲಿ ದಿನಕ್ಕೊಂದು ಕಥೆ ಹೆಣೆಯುತ್ತಾ, ಜನಸಾಮಾನ್ಯರಿಗೆ ಮನರಂಜನೆಯನ್ನು ನೀಡುತ್ತದೆ. ಜನರು ನೀರುಳ್ಳಿಯನ್ನು ಮರೆತು ಉಗ್ರರ ಕುರಿತಂತೆ ಚರ್ಚೆಗಿಳಿಯುತ್ತಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ರೋಹಿತ್ ವೇಮುಲಾ ಎನ್ನುವ ದಲಿತ ವಿದ್ಯಾರ್ಥಿಯ ಬರ್ಬರ ಸಾವು ಇಡೀ ದೇಶವನ್ನು ತಲ್ಲಣಗೊಳಿಸಿದ ಹೊತ್ತಿನಲ್ಲೇ, ಏಕಾಏಕಿ ದೇಶಾದ್ಯಂತ ಮತ್ತೆ ಶಂಕಿತ ಉಗ್ರರು ಪತ್ತೆಯಾದರು. ಇವರು ಅಲ್‌ಖಾಯಿದಾದೊಂದಿಗೆ, ಐಸಿಸ್‌ನೊಂದಿಗೆ...ಇನ್ನೂ ಏನೋ ಚಿತ್ರ ವಿಚಿತ್ರ ಹೆಸರುಗಳಿರುವ ಉಗ್ರ ಸಂಘಟನೆಗಳ ಸಿಂಪಥೈಸರ್‌ಗಳು ಎಂಬ ಹಣೆಪಟ್ಟಿಯನ್ನು ಛಾಪಿಸಲಾಗಿದೆ. ಒಟ್ಟಿನಲ್ಲಿ, ಇಡೀ ದೇಶ ಜಾತೀಯತೆಯ ಉಗ್ರವಾದದ ಕುರಿತಂತೆ ತಲ್ಲಣಿಸಿ ಕೂತಿರುವಾಗ, ಅವರ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಒಂದಿಷ್ಟು ಯಶಸ್ವಿಯಾಗಿದೆ. ರೋಹಿತ್ ವೇಮುಲಾ ಸಾವನ್ನು ಬರೆಯಲು ಹಿಂದೇಟು ಹಾಕುತ್ತಿದ್ದ ಮಾಧ್ಯಮಗಳು, ಇದೀಗ ಶಂಕಿತ ಉಗ್ರರ ಕುರಿತಂತೆ ಬಣ್ಣಬಣ್ಣದ ಕತೆಗಳನ್ನು ಹೆಣೆಯುತ್ತಿವೆ. ಈ ಹಿಂದೆ ಒಬ್ಬನನ್ನು ಶಂಕಿತ ಉಗ್ರ ಎಂದು ಬಂಧಿಸಬೇಕಾದರೆ ಸ್ಫೋಟವೋ, ಇನ್ನಾವುದೋ ದುರ್ಘಟನೆಗಳು ಸಂಭವಿಸಬೇಕು. ಉದಾಹರಣೆಗೆ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ನಡೆದು ನೂರಾರು ಅಮಾಯಕರು ಮೃತಪಟ್ಟ ಬೆನ್ನಿಗೇ ಉಗ್ರರೆಂದು ಬಂಧಿಸಲ್ಪಟ್ಟವರು ಮುಸ್ಲಿಮ್ ತರುಣರು. ಮಕ್ಕಾ ಮಸೀದಿ, ಅಜ್ಮೀರ್ ಸ್ಫೋಟ, ಮಾಲೆಗಾಂವ್ ಸ್ಫೋಟಗಳಲ್ಲೂ ಇದೇ ನಡೆಯಿತು.ಮಾಧ್ಯಮಗಳು ಈ ಉಗ್ರರ ಕುರಿತಂತೆ ಅವರಿಗಿರುವ ನಂಟಿನ ಕುರಿತಂತೆ ದಿನಕ್ಕೊಂದು ಕತೆಗಳನ್ನು ಕಟ್ಟಿ ಪ್ರಕಟಿಸಿದವು. ಆದರೆ ಹೇಮಂತ್ ಕರ್ಕರೆಯವರ ತನಿಖೆಯು ಈ ದೇಶದಲ್ಲಿ ಇನ್ನೊಂದು ಉಗ್ರರ ಪಡೆಯಿರುವುದನ್ನು ಬಯಲಿಗೆಳೆಯಿತು.ಮೇಲಿನ ಸ್ಫೋಟಗಳಲ್ಲಿ ಬಂಧಿಸಲ್ಪಟ್ಟವರೆಲ್ಲ ಅಮಾಯಕರು ಎಂದು ಗುರುತಿಸಲ್ಪಟ್ಟರು.ಆದರೆ ಇಂದಿಗೂ ಅವರು ತಾವು ಮಾಡದ ತಪ್ಪಿಗೆ ಜೈಲಲ್ಲಿ ಕೊಳೆಯುತ್ತಿದ್ದಾರೆ.
ಇಂದಿನ ದಿನಗಳಲ್ಲಿ ಓರ್ವನನ್ನು ಶಂಕಿತ ಉಗ್ರ ಎಂದು ಕರೆಯಲು ಆತ ಫೇಸ್‌ಬುಕ್, ಟ್ವಿಟರ್ ಖಾತೆಗಳನ್ನು ಹೊಂದಿದ್ದರೆ ಸಾಕು.ಅದರಲ್ಲಿ ಆತ ನಿರಂತರವಾಗಿ ಮೋದಿ ವಿರೋಧಿ ಹೇಳಿಕೆಗಳನ್ನೋ ಅಥವಾ ಸಿರಿಯಾದಲ್ಲಿ ನಡೆಯುತ್ತಿರುವ ಹತ್ಯಾಕಾಂಡದ ವಿರುದ್ಧ ಹೇಳಿಕೆಗಳನ್ನೋ ನೀಡಿದರೆ ಅಧಿಕಾರಿಗಳು ಆ ಖಾತೆದಾರರನ್ನು ಹಿಂಬಾಲಿಸತೊಡಗುತ್ತಾರೆ.ಆತ ನೀಳವಾದ ಗಡ್ಡವನ್ನು ಹೊಂದಿದ್ದು, ಧಾರ್ಮಿಕನಾಗಿದ್ದರೆ ಎನ್‌ಐಎ ಅಧಿಕಾರಿಗಳಿಗೆ ಇನ್ನಷ್ಟು ಅನುಕೂಲವಾಗುತ್ತದೆ. ಅಂತಹ ನೂರಾರು ಸಾಮಾಜಿಕ ಜಾಲತಾಣಗಳ ಖಾತೆದಾರರನ್ನು ಪೊಲೀಸರು ಗುರುತಿಸಿದ್ದಾರೆ. ಮತ್ತು ಸರಕಾರ ಬಿಕ್ಕಟ್ಟುಗಳನ್ನು, ಜನರಿಂದ ಪ್ರತಿರೋಧಗಳನ್ನು ಎದುರಿಸಿದಾಗಲೆಲ್ಲ ಇಂತಹ ಖಾತೆದಾರರಿಗೆ ಐಸಿಸ್, ಅಲ್‌ಖಾಯಿದಾ ಜೊತೆ ಸಂಪರ್ಕ, ಉಗ್ರ ಸಂಘಟನೆಗಳ ಸಿಂಪಥೈಸರ್ ಎಂದು ಬಂಧಿಸಿ ವಿಚಾರಣೆಗೆ ತೊಡಗುತ್ತವೆ.ಆತ ನಿರಪರಾಧಿಯೆಂದು ನಿರೂಪಿಸಿ ಹೊರ ಬರುವಾಗ ಜನರು ಆ ಘಟನೆಯನ್ನೇ ಮರೆತಿರುತ್ತಾರೆ.ಆದರೆ ಈತ ಮಾತ್ರ ದೇಶದ್ರೋಹದ ಕಳಂಕವನ್ನು ಬದುಕಿನುದ್ದಕ್ಕೂ ಹೊತ್ತುಕೊಂಡು ತಿರುಗಬೇಕು.ಸಮಾಜ, ಕಚೇರಿ ಎಲ್ಲೆಡೆ ಸಂಶಯಪೀಡಿತನಾಗಿ ಬದುಕಬೇಕು.ಅಂತಿಮವಾಗಿ, ಈತ ನಿಜಕ್ಕೂ ಉಗ್ರವಾದಿ ಸಂಘಟನೆಗಳ ಬಲಿಪಶುವಾದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.
ಉಗ್ರವಾದದ ಹೆಸರಿನಲ್ಲಿ ಬಂಧನವಾದಾಗಲೆಲ್ಲ ಜನರಲ್ಲಿ ಅನುಮಾನಗಳು ಹುಟ್ಟುವುದಕ್ಕೆ ಕಾರಣಗಳಿವೆ.ಇಂದು ಎನ್‌ಐಎ ಸೇರಿದಂತೆ ಹಲವು ಗುಪ್ತಚರ ಇಲಾಖೆಗಳನ್ನು ಸಂಘಪರಿವಾರ ಸಂಘಟನೆಗಳು ನಿಯಂತ್ರಿಸುತ್ತಿವೆ. ಇದು ಈಗಾಗಲೇ ಮಾಧ್ಯಮಗಳಲ್ಲೂ ಚರ್ಚೆಗೆ ಒಳಗಾಗಿವೆ. ಪತ್ರಿಕೆಗಳಿಗೆ, ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಬಣ್ಣ ಬಣ್ಣದ ಉಗ್ರವಾದಿ ಕಥೆಗಳನ್ನು ಒದಗಿಸಿಕೊಡುವುದೇ ಗುಪ್ತಚರ ಇಲಾಖೆಗಳಲ್ಲಿರುವ ಸಂಘಪರಿವಾರದ ಹಿನ್ನೆಲೆಯಿರುವ ಅಧಿಕಾ ರಿಗಳು. ಹಾಗೆಯೇ ಕೇಸರಿ ಉಗ್ರ ಪಡೆಗಳ ಕುರಿತಂತೆ ಸರಕಾರ ಹೊಂದಿರುವ ಅನುಕಂಪ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಒಂದು ಸರಕಾರವೇ ಸನಾತನ ಸಂಸ್ಥೆಯಂತಹ ಉಗ್ರವಾದಿಗಳ ಪರವಾಗಿ ಸಿಂಪಥೈಸರ್ ಆಗಿರುವಾಗ, ಏನೂ ಅರಿಯದ ಯುವಕರ ಪಾಡೇನು?ಮೊತ್ತ ಮೊದಲು ಸರಕಾರ ಉಗ್ರವಾದದ ಕುರಿತಂತೆ ಹೊಂದಿರುವ ದ್ವಂದ್ವಗಳಿಂದ ಹೊರಬರಬೇಕು.
ಉಗ್ರ ಚಟುವಟಿಕೆಗಳನ್ನು ನಡೆಸುವ ಯಾವನೇ ಆಗಿದ್ದರೂ ಆತ ಯಾವ ಧರ್ಮಕ್ಕೆ ಸೇರಿದ್ದರೂ ಅವರನ್ನು ಶಿಕ್ಷೆಗೊಳಪಡಿಸಬೇಕು.ಈ ಹಿನ್ನೆಲೆಯಲ್ಲಿ ಪೊಲೀಸರು ತಮಗೆ ಸಿಕ್ಕಿದ ಮಾಹಿತಿಯ ಅನುಸಾರವಾಗಿ ತನಿಖೆ, ವಿಚಾರಣೆ ನಡೆಸುವುದು ಅತ್ಯಗತ್ಯ. ಹಾಗೆಂದು, ಟ್ವಿಟರ್, ಸಾಮಾಜಿಕ ತಾಣಗಳಲ್ಲಿ ನೀಡಿರುವ ಹೇಳಿಕೆಗಳ ಆಧಾರದಲ್ಲಿ ದೇಶದ್ರೋಹಿಗಳು, ಭಯೋತ್ಪಾದಕರು ಎಂದು ಬಂಧಿಸುವುದು ಸುಪ್ರೀಂಕೋರ್ಟ್‌ನ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರೆದ, ನೀಡಿರುವ ಹೇಳಿಕೆಗಳ ಆಧಾರದಲ್ಲಿ ಒಬ್ಬನನ್ನು ಉಗ್ರನೆಂದು ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗೆಯೇ ದಿಲ್ಲಿಯಿಂದ ಬಂದ ಅಧಿಕಾರಿಗಳು ಒಬ್ಬನನ್ನು ಬಂಧಿಸುವ ಸಂದರ್ಭದಲ್ಲಿ ಅದಕ್ಕೆ ಬೇಕಾದ ಸೂಕ್ತ ದಾಖಲೆ, ಆಧಾರಗಳನ್ನು ಆಯಾ ಸರಕಾರಕ್ಕೆ ನೀಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ, ತಮ್ಮ ತಮ್ಮ ರಾಜ್ಯಗಳಿಂದ ಯಾವುದೇ ವ್ಯಕ್ತಿಯನ್ನು ಬಂಧಿಸುವಾಗ ಅದರ ಬಗ್ಗೆ ಸೂಕ್ತ ಮಾಹಿತಿಗಳನ್ನು ನೀಡಬೇಕು ಎಂದು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಬೇಕಾಗಿದೆ. ಇಲ್ಲವಾದರೆ ಅದನ್ನು ಅಕ್ರಮ ಬಂಧನವೆಂದು ಪರಿಗಣಿಸಬೇಕು. ಇದೇ ಸಂದರ್ಭದಲ್ಲಿ ಸಾಮಾಜಿಕ ತಾಣಗಳು ಮುಕ್ತವಾಗಿದೆಯೆಂದು ಯುವಕರು ಬೇಜವಾಬ್ದಾರಿಯಿಂದ ಅವುಗಳನ್ನು ಬಳಸುವುದನ್ನೂ ಸಂಬಂಧಪಟ್ಟವರು ತಡೆಯಬೇಕಾಗಿದೆ. ಧರ್ಮ, ನಂಬಿಕೆಗಳು ನಮ್ಮ ಬದುಕನ್ನು ಎತ್ತರಕ್ಕೆ ಕೊಂಡೊಯ್ಯಬೇಕು.ಅದು ನಮ್ಮ ವ್ಯಕ್ತಿತ್ವವನ್ನು ಹಿರಿದಾಗಿಸಬೇಕು. ಯಾವುದೇ ಯುವಕರು ಧರ್ಮದ ಹೆಸರಿನಲ್ಲಿ ದಾರಿ ತಪ್ಪುತ್ತಿರುವುದು ಗಮನಕ್ಕೆ ಬಂದರೆ ತಕ್ಷಣ ಅವರನ್ನು ಸರಿದಾರಿಗೆ ತರುವುದು ಆಯಾ ಸಮಾಜದ ಹಿರಿಯರ ಹೊಣೆಗಾರಿಕೆಯಾಗಿದೆ. ಒಂದಿಬ್ಬರ ತಪ್ಪಿಗೆ ಇಡೀ ಸಮುದಾಯವೇ ಬಲಿಪಶುವಾಗಬೇಕಾದ ಇಂದಿನ ದಿನಗಳಲ್ಲಿ ಮುಸ್ಲಿಮರೊಳಗಿರುವ ಧಾರ್ಮಿಕ ಚಿಂತಕರ, ಸಾಮಾಜಿಕ ನಾಯಕರ ಹೊಣೆಗಾರಿಕೆ ತುಂಬಾ ದೊಡ್ಡದಿದೆ. ಸದ್ಯದ ಎನ್‌ಐಎ ಬಂಧನ ಇದನ್ನು ಮತ್ತೊಮ್ಮೆ ಒತ್ತಿ ಹೇಳಿದೆ.