ಏಕ ಸಂಸ್ಕೃತಿಯ ಹೇರಿಕೆ: ನಮ್ಮ ಮುಂದಿರುವ ಸವಾಲು
ಕಳೆದ ಒಂದು ದಶಕದಿಂದ ಮತ್ತು ಇತ್ತೀಚಿನ ದಿನಗಳಲ್ಲಿ ಏಕಸಂಸ್ಕೃತಿಯನ್ನು ಹೇರುವ ಯತ್ನಗಳು ಬಹು ದರ್ಶನಗಳ ಸಹಬಾಳ್ವೆ ಇರುವ ಈ ದೇಶದಲ್ಲಿ ಶಕ್ತಿ ಪಡೆದುಕೊಂಡಿವೆ. ಇದು ಮೂಲತಃ ವೈದಿಕ ದರ್ಶಗಳ ಹೇರುವಿಕೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಭಾರತೀಯ ಎಂದು ಪಾನ್ ಇಂಡಿಯನ್ ಗ್ರಹಿಕೆಯಲ್ಲಿ ನಮೂದಾಗುತ್ತಿರುವ ಈ ವೈದಿಕ ದರ್ಶನಗಳು ಮೂಲತಃ ತ್ರಿಮತಸ್ಥ ಬ್ರಾಹ್ಮಣ ಸಂಪ್ರದಾಯಗಳಷ್ಟೇ. ಇವು ಎಂದೂ ಶೇ.3ರ ಗಡಿದಾಟಲಿಲ್ಲ.ಇವುಗಳು ಬ್ರಾಹ್ಮಣೇತರ ಸಮುದಾಯಗಳ ಜೊತೆ ಅರ್ಥಪೂರ್ಣ ಸಹಬಾಳ್ವೆ ಮಾಡಿದ ನಿದರ್ಶನವೂ ಇಲ್ಲ.
ಆದರೆ ವೈದಿಕೇತರ ದರ್ಶನಗಳೆಲ್ಲಾ- ಬೌದ್ಧ, ಜೈನ, ಸಿಖ್, ಶರಣ- ಮತ್ತು ಮೂಲತಃ ಹೊರಗಿನ ಮೂಲವಾಗಿಯೂ ನಮ್ಮ ನೆಲದಲ್ಲಿ ವಿಶಿಷ್ಟವಾಗಿ ಬೆರೆತ ಇಸ್ಲಾಮ್ ಮತ್ತು ಇಸಾಯಿ ಧಾರೆಗಳನ್ನು ಗಮನಿಸಿದರೆ ಇವೆಲ್ಲಾ ಜಾತಿಯನ್ನು ಮೀರಲೆತ್ನಿಸಿದ ದರ್ಶನಗಳು ಎಂಬುದು ಗಮನಾರ್ಹ. ಅಂದರೆ ಇವಕ್ಕಿರುವ ಸಾಮಾನ್ಯ ಲಕ್ಷಣವೆಂದರೆ ವೈದಿಕ ದೃಢೀಕರಣದಲ್ಲಿ ನಲುಗಿದ್ದ ಜಾತಿಗಳಿಗೆ ಬಿಡುಗಡೆ ದೊರೆಯಲು ಪ್ರತ್ಯೇಕ ಧಾರ್ಮಿಕ ಗುರುತು ಹಚ್ಚಿದ್ದು. (ಜೈನ ಧರ್ಮ ಮಾತ್ರ ವೈದಿಕ ವೈಚಾರಿಕ ಅಧೀನತೆಯಲ್ಲಿ ತನ್ನ ಗುರುತು ಮರೆಯಲು ಹೆಚ್ಚು ಉತ್ಸುಕವಾಗಿದ್ದು ಗಮನಿಸಬೇಕು. ಮೈಸೂರಿನಲ್ಲಿ ಜೈನ ಬ್ರಾಹ್ಮಣವೆಂಬ ಹಾಸ್ಟೆಲ್ ಬೇರೆ ಇದೆ..!!)
ಈ ದರ್ಶನಗಳು ತಮ್ಮ ಪ್ರಸರಣೆಗೆ ದೇಶೀಯ ಭಾಷೆಗಳನ್ನು ಬಳಸಿಕೊಂಡವು ಮತ್ತು ಇವುಗಳ ನಡಾವಳಿ, ಆಚಾರ ಮತ್ತು ಕಾಣ್ಕೆಗಳೆಲ್ಲವೂ ವೈದಿಕ ದಂಡ, ಮಾನದಂಡಗಳಿಗೆ ಎದುರಾಗಿ ರೂಪುಗೊಂಡಿತು. ಕೃಷಿ ಮೂಲ ಜನಪದ ವಿಧಿವಾದವನ್ನು ನಂಬಿಯೇ ಬದುಕುವ ನಾಗರಿಕತೆ. ಪ್ರಕೃತಿಗೆ ಅಧೀನವಾಗಿ ಅದರ ಹಂಗಿನಲ್ಲಿ ಬದುಕುವ ಅನಿವಾರ್ಯತೆಯಲ್ಲಿ, ನಮ್ಮಲ್ಲಿ ಈ ದರ್ಶನಗಳು ಕಾಯಕನಿಷ್ಠೆ, ವಿನೀತವಾಗಿರುವುದು, ಅಹಂನ ನಿರಾಕರಣೆ, ಕೃತಜ್ಞತಾ ಅರ್ಪಣೆ ಇವನ್ನೆಲ್ಲಾ ಆದ್ಯ ಮೌಲ್ಯವಾಗಿಸಿದವು. ಇವು ನಮ್ಮ ಸಮುದಾಯಗಳ ಬದುಕಿನ ನೈತಿಕ ಮಾನದಂಡಗಳು ಕೂಡಾ.ಆದ್ದರಿಂದಲೇ ಕಾಯಕ ನಿಷ್ಠೆ ಮತ್ತು ಭಕ್ತಿ ಅವಿನಾಭಾವ ಸಂಬಂಧದಲ್ಲಿ ಹೆಣೆದುಕೊಂಡ ಆದರ್ಶ ಸೃಷ್ಟಿಯಾಯಿತು.ಊಟದಂಥ ಒಂದು ಪರಿಕಲ್ಪನೆ ತೆಗೆದುಕೊಳ್ಳಿ, ಹಸು ಮತ್ತು ಗೋವಿಗೆ ಉಣಬಡಿಸುವುದನ್ನಷ್ಟೇ ವೈದಿಕ ಧರ್ಮಗಳು ಮುಖ್ಯವಾಗಿರಿಸಿದರೆ, ವೈದಿಕೇತರ ದರ್ಶನಗಳಲ್ಲಿ ದಾಸೋಹ, ದಾನದ ಪರಿಕಲ್ಪನೆಗೆ ಜಾತಿಯ ಹಂಗಿಲ್ಲ.
ಇಂತಹ ಚಾರಿತ್ರಿಕ ಹಿನ್ನೆಲೆಯ ಜೊತೆಗೆ ಆಧುನಿಕತೆಯ ಪ್ರಕ್ರಿಯೆಯೂ ಸೇರಿದ ವರ್ತಮಾನದಲ್ಲಿ ಬಲಗುಂದಬೇಕಾಗಿದ್ದ ಈ ಸಾಂಸ್ಥಿಕ ವೈದಿಕ ಧಾರ್ಮಿಕ ನೆಲೆ ಇನ್ನಷ್ಟು ಗಟ್ಟಿಯಾಗುವುದು ಹೇಗೆ ಸಾಧ್ಯವಾಯಿತು? ಪಶ್ಚಿಮದಲ್ಲಿ ಈ ಪ್ರಕ್ರಿಯೆ -ಕೈಗಾರಿಕೀಕರಣ, ವಿಜ್ಞಾನದ ಪಾರುಪತ್ಯ, ಆಧುನಿಕ ಜೀವನ ಶೈಲಿಗಳೆಲ್ಲಾ ಕ್ರಿಶ್ಚಿಯನ್ ಧರ್ಮವನ್ನು ಅಂಚಿಗೆ ತಳ್ಳಿದ ಹಿನ್ನೆಲೆಯಲ್ಲಿ ನಮ್ಮಲ್ಲೂ ಅದು ಯಾಕೆ ಆಗಲಿಲ್ಲ?.
ಇದಕ್ಕೆ ಎರಡು ಚಾರಿತ್ರಿಕ ಕಾರಣಗಳನ್ನು ನಾವು ಕಾಣಬಹುದು 1. ವಸಾಹತುಶಾಹಿ ತಂದ ಆಧುನಿಕತೆ ಮತ್ತು ಸ್ವಪ್ರಜ್ಞೆ. 2.ವೈಚಾರಿಕ ಎಡಪಂಥೀಯ ಧಾರೆಗಳು ಧರ್ಮವನ್ನೂ ಜಾತಿಯನ್ನೂ ನೆಗೋಶಿಯೇಟ್ ಮಾಡಲು ತಡವರಿಸಿದ್ದು.
ಇಂಗ್ಲೆಂಡಿನ ಒಂದು ಕಪಾಟಿನ ಕೃತಿಗಳ ತೂಕ ಇಡೀ ಭಾರತದ ಸಾರಸ್ವತ ಸೃಷ್ಟಿಗಿಲ್ಲ ಎಂದು ಮೆಕಾಲೆ ಹೇಳಿದ ಬಳಿಕ ಬಂದ ಓರಿಯಂಟಲ್ ಅಧ್ಯಯನ ಮೂಲತಃ ಸಂಸ್ಕೃತ ಕೃತಿಗಳನ್ನು ಆಧರಿಸಿದ ಕಾರಣವೇ ಅದಕ್ಕೊಂದು ಆಕರ ಸ್ಥಾನ ಲಭ್ಯವಾಯಿತು. ಅದರೊಂದಿಗೇ ಅದರ ವಾರಸುದಾರರಾಗಿದ್ದ ವೈದಿಕರಿಗೂ ಆಢ್ಯ ಸ್ಥಾನ ದೊರಕಿತು.ಈ ಬೌದ್ಧಿಕ ಯಜಮಾನಿಕೆಗೆ ಆಧುನಿಕವಾಗಿ ನಾವು ಸಾಹಿತ್ಯಿಕ ಸಾಂಸ್ಕೃತಿಕ ಎಂದು ಕರೆಯುವ ಆಯಾಮದ ಮನ್ನಣೆ ದೊರಕಿದ್ದೂ ಇದೇ ಕಾರಣಕ್ಕೆ.
19ನೆ ಶತಮಾನದಲ್ಲಿ ಪಾಶ್ಚಿಮಾತ್ಯರನ್ನು ಸೆಳೆದ ಕೃತಿಗಳಲ್ಲಿ ಭಾರತೀಯ ಭಾಷೆಗಳ ಒಂದು ಕೃತಿಯೂ ಇಲ್ಲವೆಂಬುದು ಗಮನಾರ್ಹ.ನಮ್ಮ ಪಂಪ, ತುಳಸಿ, ಕಂಬ, ಹೀಗೆ.ಈ ವಿಶಿಷ್ಟ ಸಾಂಸ್ಕೃತಿಕ ಸ್ಥಾವರ ಇಂದಿಗೂ ನಮ್ಮ ಪ್ರಜ್ಞೆಯನ್ನು ಆಳುತ್ತಿದೆ. 19-20ನೆ ಶತಮಾನದ ನಮ್ಮ ಸುಧಾರಣಾವಾದಿ ನಾಯಕರ ಬೌದ್ಧಿಕ ಪ್ರಜ್ಞೆ ಮತ್ತು ಭಾವನಾತ್ಮಕ ಹೆಮ್ಮೆಯ ಮೂಲವಿದ್ದಿದ್ದೂ ಈ ವೈದಿಕ/ ಸಂಸ್ಕೃತದ ಪಠ್ಯಗಳಲ್ಲಿ. ಆದ್ದರಿಂದಲೇ, ಶಂಕರ, ರಾಮಾನುಜ ವಿದ್ಯಾರಣ್ಯ.. ಎಂದೇ ಕಾಲು ತೊಡರಿಸಿಕೊಳ್ಳುತ್ತಿದ್ದೇವೆ.
ಪಶ್ಚಿಮದಲ್ಲಿ ವಿಜ್ಞಾನ ಧರ್ಮದ ಮುಸುಕನ್ನು ಒಡೆಯುತ್ತಾ ಬೆಳೆಯಿತು.ಆದರೆ ನಮ್ಮಲ್ಲಿ ವಿಜ್ಞಾನಾಧಾರಿತ ನಾಗರಿಕತೆಯನ್ನು ಎದುರಿಸಲು ನಮ್ಮ ಪರಂಪರೆಯ ಹೆಮ್ಮೆಯ ದ್ಯೋತಕವಾಗಿ ಧರ್ಮಪ್ರೇರಿತ ದರ್ಶನಗಳನ್ನು ಮುಂದಿಡುವುದು ರಾಷ್ಟ್ರೀಯತೆಯ ಮುಖ್ಯ ಅಸ್ತ್ರವೂ ಆಯಿತು.ಇಂದಿನ ಏಕಸಂಸ್ಕೃತಿಯ ಹೇರಿಕೆಯ ಮೂಲವಿರುವುದು 19ನೆ ಶತಮಾನದಲ್ಲಿ. ಈ ಪರಿಕಲ್ಪನೆ ಬಗ್ಗೆ ಟಾಗೋರ್ ಅಂಥವರಿಗೆ ತೀವ್ರ ಆಕ್ಷೇಪಗಳಿದ್ದವು.
ಇದರೊಂದಿಗೆ, ಆಧುನಿಕ ಭಾರತದ ವೈಚಾರಿಕ ವಿಕಾಸವನ್ನು ಗಮನಿಸಿದರೆ ಸ್ಪಷ್ಟವಾದ ಎರಡು ಧಾರೆಗಳನ್ನು ಗಮನಿಸಬಹುದು. 1. ದೈವದ ಮೇಲೆ ನಂಬಿಕೆ ಇಟ್ಟ ಆದರೆ ಸಾಮುದಾಯಿಕ ಹಿತದ ವೈಚಾರಿಕ ಚಿಂತನೆಗಳು. ಗಾಂಧಿ ಇದರ ಪ್ರಾತಿನಿಧಿಕ ಉದಾಹರಣೆ.
2. ಧರ್ಮ ನಿರಪೇಕ್ಷ ಚಿಂತನೆಯ ಸಾಮುದಾಯಿಕ ಒಳಿತಿನ ವೈಚಾರಿಕ ರೂಪಗಳು. ಸಾಮಾಜಿಕ ಆರ್ಥಿಕ ಆಯಾಮಗಳಲ್ಲಿ ಸಮುದಾಯಗಳೊಂದಿಗೆ ಅನುಸಂಧಾನ ನಡೆಸುವುದು ಈ ವೈಚಾರಿಕತೆಗೆ ಕಷ್ಟವಾಗಲಿಲ್ಲ.ಆದರೆ ಇದು ಸೋತಿದ್ದು ಎರಡು ಪ್ರಮುಖ ನೆಲೆಗಟ್ಟುಗಳಲ್ಲಿ. 1. ಧಾರ್ಮಿಕ ನಂಬಿಗೆಯನ್ನು ಒಳಗೊಳ್ಳುವ ಬಗೆ 2. ಸಾಂಸ್ಕೃತಿಕ, ಸಾಮಾಜಿಕ ಧಾರ್ಮಿಕ ರೂಪಕಗಳನ್ನು ಬಳಸುವ ಬಗೆ.
ಕೋರೆಗಾಂವ್ ಕದನವನ್ನು ಅಂಬೇಡ್ಕರ್ ಕಂಡ ರೀತಿಯನ್ನು ಗಮನಿಸಿ. ಇದಕ್ಕೆ ಸಮಾನಾಂತರವಾಗಿ ಸಾವರ್ಕರ್ ಇತಿಹಾಸದಿಂದ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುತ್ತಾ ಬಂದರು ಎಂಬುದನ್ನೂ ನಾವು ಮರೆಯಬಾರದು. ಬಲಪಂಥೀಯ ನೆಲೆಯ ಆಕ್ರಮಣವನ್ನು ಎದುರಿಸುವವರು ಯಾರೂ ಈ ರೀತಿ ನಮ್ಮ ಇತಿಹಾಸ/ ಧರ್ಮದ ರೂಪಕಗಳನ್ನು ವಿಸ್ತ್ರತವಾಗಿ ಕಟ್ಟಲೇ ಇಲ್ಲ. ಇಂದಿಗೂ ನಾವು ಮಾರ್ಕ್ಸನ ಧರ್ಮ ಎಂಬುದು ಅಫೀಮು ಎಂಬ ವಾಕ್ಯವನ್ನು ಅದರ ಸಾಂದರ್ಭಿಕತೆಯಿಂದ ಕಿತ್ತು ಬಳಸುತ್ತಿದ್ದೇವೆ.( ಮಾರ್ಕ್ಸ್‌ನ ಪೂರ್ತಿ ವಾಕ್ಯ ಹೀಗಿದೆ. "Religion is the sigh of the oppressed creature, the heart of a heartless world, and the soul of soulless conditions. It is the opium of the people".) ಮಾರ್ಕ್ಸ್ ಹೇಳಿದಾಗ ಅಫೀಮು ಎಂಬುದು ವೈದ್ಯಕೀಯ ಚಿಕಿತ್ಸೆಯಲ್ಲಿ ನೋವು ನಿವಾರಕವಾಗಿ ಬಳಸುತ್ತಿದ್ದ ಏಕೈಕ ಮೂಲ.ಭ್ರಾಮಕ ಮತ್ತು ಬರಿಸುವ ವಸ್ತು ಅಲ್ಲ. ಧರ್ಮದ ಬಗ್ಗೆ ನಮ್ಮ ಅನುಸಂಧಾನ ಈ ವಿರೋಧಾಭಾಸಗಳಿಂದ ಕೂಡಿದೆ.. ಧಾರ್ಮಿಕತೆ ವೈಚಾರಿಕತೆಗೆ ವಿರುದ್ಧ ಪ್ರಮೇಯ ಎಂಬ ಬೌದ್ಧಿಕ ಹಂಗಿನಲ್ಲಿ ನಾವಿದ್ದೇವೆ.ಇದು ನಮ್ಮ ಕೋಮು ವಿರೋಧಿ ಹೋರಾಟಗಳಲ್ಲಿ ಯಥೇಚ್ಛ ಕಾಣುತ್ತದೆ.