ಎನ್‌ಐಎ ಬಂಧನ: ಮುಂಬ್ರಾ ನಾಗರಿಕರಲ್ಲಿ ಗೊಂದಲ
ಮುಂಬ್ರಾ,ಜ.24: ಐಸಿಸ್ ಜೊತೆ ನಂಟು ಹೊಂದಿದ ಆರೋಪದಲ್ಲಿ ಕಳೆದ ವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿರುವ ಮುದಬ್ಬೀರ್ ಶೇಖ್‌ನ ಬಂಧನವು ಮುಂಬೈಯ ಉಪನಗರವಾದ ಮುಂಬ್ರಾ ಪಟ್ಟಣದ ನಾಗರಿಕರನ್ನು ಅಚ್ಚರಿಯಲ್ಲಿ ಕೆಡವಿದೆ. ಭಾರತದಲ್ಲಿ ಮುದಬ್ಬೀರ್ ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್‌ಗಾಗಿ ಯುವಕರ ನೇಮಕಾತಿಯ ಹೊಣೆ ವಹಿಸಿದ್ದನೆಂದು ಆರೋಪಿಸಲಾಗಿದೆ. ಕಳೆದ ಗುರುವಾರ ರಾತ್ರಿ ಎನ್‌ಐಎ ಹಾಗೂ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳವು ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿತ್ತು. ಐಸಿಸ್ ಜೊತೆ ನಿಕಟ ಸಂಪರ್ಕ ಹೊಂದಿದ ಆರೋಪದಲ್ಲಿ ಶೇಖ್ ಸೇರಿದಂತೆ ದೇಶಾದ್ಯಂತದ 14 ಮಂದಿ ಯುವಕರನ್ನು ಕಳೆದ ವಾರ ಬಂಧಿಸಲಾಗಿತ್ತು.
ಆದರೆ ಮುದಬ್ಬೀರ್ ಶೇಖ್ ತನ್ನ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ವಾಸವಿದ್ದ ಮುಂಬ್ರಾದ ಬಹುತೇಕ ನಿವಾಸಿಗಳಿಗೆ ಮುದಬ್ಬೀರ್ ಶೇಖ್ ಯಾವ ಕಾರಣಕ್ಕಾಗಿ ಬಂಧಿತನಾದನೆಂಬ ಬಗ್ಗೆ ಅರಿವಿರಲಿಲ್ಲ. ಮುಂಬ್ರಾದಲ್ಲಿ ಐಸಿಸ್ ಜೊತೆ ಯಾರಾದರೂ ಶಾಮೀಲಾಗಿದ್ದಾರೆಂಬುದು ನಾವು ಈತನಕ ಕೇಳಿರಲಿಲ್ಲವೆಂದು 24 ವರ್ಷದ ಸ್ಥಳೀಯ ನಿವಾಸಿ ಅಝರ್ ಮಲಿಮ್ ಹೇಳುತ್ತಾರೆ.
ಮುಂಬ್ರಾದ ಶೇ.90ರಷ್ಟು ನಿವಾಸಿಗಳು ಮುಸ್ಲಿಮರೆಂಬ ಕಾರಣಕ್ಕೆ ಇಲ್ಲಿಯ ಜನರಿಗೆ ಭಯೋತ್ಪಾದಕರ ಜೊತೆ ನಂಟಿದೆಯೆಂದು ಭಾವಿಸಕೂಡದು ಎನ್ನುತ್ತಾರವರು.
1992ರಲ್ಲಿ ಮುಂಬೈಯಲ್ಲಿ ಕೋಮುಗಲಭೆ ಭುಗಿಲೆದ್ದ ಬಳಿಕ ನಗರದ ವಿವಿಧೆಡೆಯಿಂದ ಮುಸ್ಲಿಮರು ಮುಂಬ್ರಾಕ್ಕೆ ವಲಸೆ ಬರತೊಡಗಿದರು. ಹೀಗಾಗಿ ಇಲ್ಲಿ ಅವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿತು. ಅನೇಕ ಪ್ರಕರಣಗಳಲ್ಲಿ ಇಲ್ಲಿನ ಮುಸ್ಲಿಮ್ ಯುವಕರನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳುತ್ತಿದ್ದರು. ಕೆಲವು ವರ್ಷಗಳ ಬಳಿಕ ಅವರ ಮೇಲಿನ ಆರೋಪಗಳು ಸುಳ್ಳೆಂದು ಸಾಬೀತಾಗಿ ಅವರು ಜೈಲಿನಿಂದ ಹೊರಬರುತ್ತಿದ್ದರು ಎಂದು ಮುಂಬ್ರಾದ ಮೊಬೈಲ್ ಅಂಗಡಿ ಮಾಲಕ ಸರ್ವಾರ್ ಹುಸೈನ್ ಹೇಳುತ್ತಾರೆ.
ಕೆಲವು ವರ್ಷಗಳ ಹಿಂದೆಯಷ್ಟೇ ಮುದಬ್ಬೀರ್ ಮುಂಬ್ರಾಕ್ಕೆ ಬಂದು ನೆಲೆಸಿದ್ದ. ಆತನ ಪ್ರಾಮಾಣಿಕನೆಬುಂದನ್ನು ತಾನು ಕೇಳಿದ್ದೇನೆ.ಮುಸ್ಲಿಮನೊಬ್ಬನ ವಿರುದ್ಧ ಭಯೋತ್ಪಾದನೆಯ ಸುಳ್ಳು ಆರೋಪ ಹೊರಿಸಲ್ಪಟ್ಟ ಇನ್ನೊಂದು ಪ್ರಕರಣ ಇದಾಗಿರಲೂಬಹುದೆಂದು ಆತ ಸಂದೇಹ ವ್ಯಕ್ತಪಡಿಸುತ್ತಾರೆ. ಮುದಬ್ಬೀರ್ ಓರ್ವ ಸರಳ ವ್ಯಕ್ತಿಯಾಗಿದ್ದ ಆತ ಭಯೋತ್ಪಾದಕ ಸಂಘಟನೆಯ ಜೊತೆ ನಂಟು ಹೊಂದಿದ್ದನೆಂಬುದನ್ನು ನಂಬಲು ಸಾಧ್ಯವಿಲ್ಲವೆಂದು ಆತನ ನೆರೆಹೊರೆಯಾತ ಫಿರೋಜ್ ಸೊರಾತಿಯಾ ಹೇಳುತ್ತಾರೆ.
ಆದರೆ ಮುಂಬ್ರಾದ ಇನ್ನೋರ್ವ ನಿವಾಸಿ ಅಬ್ಬಾಸ್ ಸೈಯದ್ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಬೆಂಕಿ ಇರದೆ ಹೊಗೆಯೇಳಲು ಸಾಧ್ಯವಿಲ’್ಲ. ಮುಂಬ್ರಾದಲ್ಲಿ ಎಲ್ಲ ವ್ಯಕ್ತಿಗಳನ್ನು ಬಿಟ್ಟು, ಪೊಲೀಸರು ಓರ್ವನ ಬೆನ್ನ ಹಿಂದೆ ಬಿದ್ದಿರುವುದಕ್ಕೆ ಬಲವಾದ ಕಾರಣವಿರಲೇಬೇಕು. ಇಂದು ಐಸಿಸ್ ನಮ್ಮ ಸಮುದಾಯಕ್ಕೆ ದೊಡ್ಡ ಬೆದರಿಕೆಯಾಗಿದೆ. ಆ ಗುಂಪಿನ ಸಿದ್ಧಾಂತದಿಂದ ನಮ್ಮ ಕೆಲವು ಯುವಜನರು ದಾರಿತಪ್ಪುವ ಸಾಧ್ಯತೆಯಿದೆಯೆಂದು ಆವರು ಹೇಳುತ್ತಾರೆ. ಇಂದು ಮುಸ್ಲಿಮ್ ಯುವಕರು ತಮ್ಮ ಬಿಡುವಿನ ಸಮಯವನ್ನು ಆನ್‌ಲೈನ್‌ನಲ್ಲಿ ಕಳೆಯುತ್ತಿದ್ದಾರೆ. ಅವರು ಸ್ಥಳೀಯ ಮಸೀದಿಗಳಲ್ಲಿ ಧರ್ಮಗುರುಗಳ ಬೋಧನೆಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿಲ್ಲವೆನ್ನುತ್ತಾರೆ. ಆನ್‌ಲೈನ್‌ನಲ್ಲಿ ಪ್ರಸಾರವಾಗುವ ವೀಡಿಯೊಗಳು, ಇಸ್ಲಾಮ್ ಬಗ್ಗೆ ತಪ್ಪು ಮಾಹಿತಿ ನೀಡುತ್ತವೆಯೆಂದು ಅವರು ದೂರುತ್ತಾರೆ.