×
Ad

ಅರುಣಾಚಲದಲ್ಲಿ ರಾಷ್ಟ್ರಪತಿ ಆಡಳಿತ ಸಂವಿಧಾನದ ಕಗ್ಗೊಲೆ: ಕೇಜ್ರಿವಾಲ್

Update: 2016-01-24 23:41 IST

ಹೊಸದಿಲ್ಲಿ,ಜ.24: ಅರುಣಾಚಲದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲು ಕೇಂದ್ರ ಸಂಪುಟ ಶಿಫಾರಸು ಮಾಡಿರುವುದಕ್ಕೆ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಈ ಕ್ರಮವು ದೇಶದ ಸಂವಿಧಾನದ ‘ಕಗ್ಗೊಲೆ’ಯಾಗಿದೆ ಎಂದವರು ಬಣ್ಣಿಸಿದ್ದಾರೆ.


‘‘ಅರುಣಾಚಲದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಕೇಂದ್ರ ಸಂಪುಟದ ಶಿಫಾರಸು ಆಘಾತಕಾರಿಯಾಗಿದೆ.ಇದೊಂದು ಗಣರಾಜ್ಯೋತ್ಸವಕ್ಕೆ ಮುಂಚಿತವಾಗಿ, ಪ್ರಜಾಪ್ರಭುತ್ವದ ಕೊಲೆಯಾಗಿದೆ. ಬಿಜೆಪಿ ಚುನಾವಣೆಯಲ್ಲಿ ಸೋಲುಂಡಿದೆ. ಇದೀಗ, ಹಿಂಬಾಗಿಲ ಮೂಲಕ ಅಧಿಕಾರ ಕಬಳಿಸುತ್ತಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಂಪುಟ ಸಭೆಯು, ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಅರುಣಾಚಲದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಿತ್ತು. ಕಳೆದ ವರ್ಷದ ಡಿಸೆಂಬರ್ 16ರಂದು ಕಾಂಗ್ರೆಸ್ ಪಕ್ಷದ 21 ಬಂಡುಕೋರ ಶಾಸಕರು, 11 ಮಂದಿ ಬಿಜೆಪಿ ಶಾಸಕರು ಹಾಗೂ ಇಬ್ಬರು ಪಕ್ಷೇತರರ ಜೊತೆ ಕೈಜೋಡಿಸಿ,ಇಟಾನಗರದ ಹೊಟೇಲೊಂದರಲ್ಲಿ ಸಭೆ ನಡೆಸಿ, ಮುಖ್ಯಮಂತ್ರಿ ನಬಮ್ ಟುಕಿ ಅವರನ್ನು ಉಚ್ಚಾಟಿಸುವ ನಿರ್ಣಯವನ್ನು ಕೈಗೊಂಡಿತ್ತು.ಅವರ ಸ್ಥಾನದಲ್ಲಿ ಬಂಡಾಯ ಕಾಂಗ್ರೆಸ್ ಶಾಸಕರೊಬ್ಬರನ್ನು ಕೂರಿಸಲು ಯತ್ನಿಸಲಾಗಿತ್ತು. ಆನಂತರ ಗೌಹಾತಿ ಹೈಕೋರ್ಟ್ ಮಧ್ಯೆ ಪ್ರವೇಶಿಸಿ, ಈ ನಿರ್ಧಾರಕ್ಕೆ ತಡೆ ಒಡ್ಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News