ರಜೆಯಲ್ಲಿ ತೆರಳಿದ ಹೈದರಾಬಾದ್ ವಿವಿ ಕುಲಪತಿ
ಹೈದರಾಬಾದ್,ಜ.24: ಹೈದರಾಬಾದ್ ವಿವಿಯ ಉಪಕುಲಪತಿ ಅಪ್ಪಾ ರಾವ್ ರವಿವಾರ ಅನಿರ್ದಿಷ್ಟಾವಧಿಯವರೆಗೆ ರಜೆಯ ಮೇಲೆ ತೆರಳಿದ್ದಾರೆ. ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಪೊಲೀಸರಿಗೆ ಸಲ್ಲಿಸಲಾದ ದೂರಿನಲ್ಲಿ ಅಪ್ಪಾರಾವ್ ಹೆಸರಿರುವುದರಿಂದ ಅವರ ರಾಜೀನಾಮೆಗೆ ಆಗ್ರಹಿಸಿ ಹೈದರಾಬಾದ್ ವಿವಿಯ ಏಳು ವಿದ್ಯಾರ್ಥಿಗಳು ನಿರಶನ ಆರಂಭಿಸಿರುವ ಬೆನ್ನಲ್ಲೇ ಈ ಬೆಳವಣಿಗೆಯುಂಟಾಗಿದೆ.
ಎಬಿವಿಪಿ ವಿದ್ಯಾರ್ಥಿ ಮುಖಂಡನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕಳೆದ ವರ್ಷ ಅಪ್ಪಾರಾವ್ ಅವರು ವೇಮುಲಾ ಸೇರಿದಂತೆ ನಾಲ್ವರು ದಲಿತ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದರು ಹಾಗೂ ಅವರಿಗೆ ಹಾಸ್ಟೆಲ್ ಪ್ರವೇಶ ನಿಷೇಧಿಸಿದ್ದರು. ವಿವಿಧ ವಿದ್ಯಾರ್ಥಿ ಸಂಘಟನೆಗಳು ಉಪಕುಲಪತಿ ಸ್ಥಾನಕ್ಕೆ ಅಪ್ಪಾರಾವ್ ರಾಜೀನಾಮೆಗೆ ಆಗ್ರಹಿಸಿ ಚಳವಳಿ ನಡೆಸುತ್ತಿವೆ.
ತನ್ಮಧ್ಯೆ, ವೇಮುಲಾರ ತಾಯಿ ರಾಧಿಕಾರನ್ನು ಭೇಟಿಯಾಗುವುದಾಗಿ ಹೇಳಿದ್ದ ಅಪ್ಪಾರಾವ್, ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇತರ ಇಬ್ಬರು ಪ್ರೊಫೆಸರ್‌ಗಳೊಂದಿಗೆ ರೋಹಿತ್‌ನ ತಾಯಿಯನ್ನು ಅಪ್ಪಾರಾವ್ ಭೇಟಿಯಾಗಲು ತೆರಳಿದ್ದರು. ಆದರೆ ಇತರ ನಾಲ್ವರು ದಲಿತ ವಿದ್ಯಾರ್ಥಿಗಳ ಸಮಕ್ಷಮದಲ್ಲಿ, ಕ್ಯಾಂಪಸ್ ಆವರಣದಲ್ಲಿ ಮಾತ್ರ ತನ್ನನ್ನುಭೇಟಿಯಾಗಬೇಕೆಂಬ ಶರತ್ತನ್ನು ಆಕೆ ಒಡ್ಡಿದ್ದರೆನ್ನಲಾಗಿದೆ.