ಸುಭಾಷ್‌ರನ್ನು ಯುದ್ಧಾಪರಾಧಿ ಎಂದ ‘ನೆಹರೂ ಪತ್ರ’ ನಕಲಿ

Update: 2016-01-24 18:42 GMT

ಇತಿಹಾಸಕಾರರಿಂದ ಖಂಡನೆ

ಹೊಸದಿಲ್ಲಿ, ಜ.24: ಸ್ವಾತಂತ್ರ ಸೇನಾನಿ ಸುಭಾಶ್ಚಂದ್ರ ಬೋಸ್ ಅವರನ್ನು ಯುದ್ಧಾಪರಾಧಿ ಎಂದು ಬಣ್ಣಿಸಿ ಜವಾಹರಲಾಲ್ ನೆಹರೂ ಬರೆದಿದ್ದಾರೆಂದು ಹೇಳಲಾದ ಪತ್ರವು ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವಂತೆಯೇ, ಆ ಪತ್ರವು ನಕಲಿ ಎಂದು ಇದೀಗ ದೃಢಪಟ್ಟಿದೆ.

ಸುಭಾಶ್ಚಂದ್ರ ಅವರನ್ನು ಯುದ್ಧಾಪರಾಧಿ ಎಂದು ನೆಹರೂ ಯಾವುದೇ ಪತ್ರದಲ್ಲಿ ಉಲ್ಲೇಖಿಸಿಲ್ಲ. ಬದಲಾಗಿ ಆ ಪದವನ್ನು ಪುಕ್ಕಟೆ ಪ್ರಚಾರ ಬಯಸಿದ್ದ ಸಾಕ್ಷಿದಾರರೊಬ್ಬರು 1970ರಲ್ಲಿ ಖೋಸ್ಲಾ ಆಯೋಗದ ಮುಂದೆ ಹೇಳಿಕೆ ನೀಡಿದ ಸಂದರ್ಭದಲ್ಲಿ ಬಳಸಿದ್ದರೆಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ತಿಳಿಸಿದ್ದಾರೆ.

ಖ್ಯಾತ ಇತಿಹಾಸಕಾರ ಪ್ಯಾಟ್ರಿಕ್ ಫ್ರೆಂಚ್ ಕೂಡಾ ನೆಹರೂ ಅವರು ಬೋಸ್‌ರನ್ನು ಯುದ್ಧಾಪರಾಧಿ ಎಂದು ಕರೆದಿದ್ದರೆಂಬುದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

ಆದಿತ್ಯ ಕೌಲ್‌ರಂತಹ ಖ್ಯಾತ ಪತ್ರಕರ್ತರು ನಕಲಿ ಪತ್ರವನ್ನು ನಿಜವೆಂದು ಭಾವಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಕ್ಷವೆುಯಾಚಿಸಿದ್ದಾರೆ.ಇನ್ನೋರ್ವ ಪತ್ರಕರ್ತ ರಾಹುಲ್ ಕನ್ವಲ್, ‘ನೆಹರೂ ಪತ್ರ’ದ ಬಗ್ಗೆ ವರದಿ ಮಾಡಿದ್ದ ತನ್ನ ಫೇಸ್‌ಬುಕ್ ಪೋಸ್ಟನ್ನು ಅಳಿಸಿಹಾಕಿದ್ದಾರೆ.

ಇಂಡಿಯಾಟುಡೇ ಪತ್ರಿಕೆಯೂ ಟ್ವಿಟರ್‌ನಲ್ಲಿ ಪ್ರಕಟಿಸಿದ್ದ ಈ ಪತ್ರದ ಕುರಿತ ವರದಿಯನ್ನು ತೆಗೆದುಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News