ಕೇಂದ್ರ ಸರಕಾರದ ವರ್ಚಸ್ಸು ಕುಂದುತ್ತಿದೆಯೇ?
ಹೀಗೊಂದು ಚಿಂತನೆ ಚಿಂತಕರ ಚಾವಡಿಯ ಹೊರಗೂ ಕೇಳತೊಡಗಿದೆ. ಇತ್ತೀಚೆಗಿನವರೆಗೆ ಇಂತಹ ಸಂದೇಹ ರಾಜಕೀಯ ವಲಯದಲ್ಲಿ, ಆಪ್ತರ ಕೂಟದಲ್ಲಿ ಮಾತ್ರ ಕೇಳಿ ಬರುತ್ತಿದ್ದು, ಈಗ ಇದು ಸ್ವಲ್ಪ ಕೆಳಸ್ತರದಲ್ಲೂ ಕೇಳತೊಡಗಿದೆ. ಬಸ್ಸು, ಬಸ್ಸು ನಿಲ್ದಾಣ, ಹಳ್ಳಿಯ ಅರಳಿ ಕಟ್ಟೆ ಮತ್ತು ಖಾಸಗಿ ಸಮಾರಂಭಗಳಲ್ಲೂ ಇದು ಕೇಳಿಸುತ್ತಿದೆ. ಮೋದಿ ಅಧಿಕಾರದ ಚುಕ್ಕಾಣಿ ಹಿಡಿದು ಇನ್ನು ಕೆಲವೇ ತಿಂಗಳಿನಲ್ಲಿ ಎರಡು ವರ್ಷ ತುಂಬುತ್ತಿದ್ದು, ಸಾಧನೆಯನ್ನು ತೋರಿಸಲು ಮತ್ತು ಜನರ ಆಶೋತ್ತರಗಳನ್ನು ಈಡೇರಿಸಲು ಇನ್ನು ‘ಸಮಯ ಕಡಿಮೆಯಾಯಿತು’ ಎನ್ನುವಂತಿಲ್ಲ.
ಕಾಂಗ್ರೆಸ್ ಸರಕಾರದ ವೈಫಲ್ಯ, ಹಗರಣಗಳ ಸರಮಾಲೆಯಿಂದ ಬೇಸತ್ತ ಜನರು ಬದಲಾವಣೆಯನ್ನು ಬಯಸಿ ಭಾರತೀಯ ಜನತಾ ಪಕ್ಷಕ್ಕೆ ಒಂದು ಅಭೂತಪೂರ್ವ ಅವಕಾಶವನ್ನು ಕೊಟ್ಟಿದ್ದರು. ಅದು ತನ್ನ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಇನ್ನೊಂದು ಪಕ್ಷದ ಹಂಗಿನಲ್ಲಿ ಇರದಂತೆ ಸಂಪೂರ್ಣ ಬಹುಮತವನ್ನೂ ಕೊಟ್ಟಿದ್ದರು. ಆದರೂ ಅದು ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ, ಅಲ್ಲದೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಯನ್ನು ಈಡೇರಿಸಲು ಪರಿತಪಿಸುತ್ತಿದೆ.
ವೈಫಲ್ಯವನ್ನು ಜನತೆ ಎಲ್ಲೆಲ್ಲಿ ಕಾಣುತ್ತಿದೆ?
ಕಾರಣಗಳು ಏನೇ ಇರಲಿ, ಇದಕ್ಕೆ ಯಾರೇ ಹೊಣೆಗಾರರಿರಲಿ ಸಂಸತ್ತಿನ ಅಧಿವೇಶನ ಸುಗಮವಾಗಿ ನಡೆಯುತ್ತಿಲ್ಲ.ಯಾವುದೇ ಮಸೂದೆಯೂ ಸಮಗ್ರ ಚರ್ಚೆ ಆಗುತ್ತಿಲ್ಲ.ಸಂಸದರಲ್ಲಿ ತಮ್ಮ ಪಾತ್ರದ ಮತ್ತು ಕರ್ತವ್ಯದ ಗಂಭೀರತೆ ಕಾಣುತ್ತಿಲ್ಲ.ದೇಶದ ಪ್ರಗತಿಯ ಮತ್ತು ಅಭಿವೃದ್ಧ್ದಿಯ ವೇಗವನ್ನು ಮತ್ತು ದಿಕ್ಕನ್ನು ಬದಲಿಸುವ ಗೂಡ್ಸ್, ಸರ್ವೀಸ್ ಟ್ಯಾಕ್ಸ್ ಮತ್ತು ಭೂಸ್ವಾಧೀನ ಮಸೂದೆಗಳು ಪ್ರತಿಷ್ಠೆಯ ಕಾರಣವಾಗಿ ಅಂಗೀಕಾರವಾಗುತ್ತಿಲ್ಲ. ಅದಕ್ಕೆ ಸದ್ಯದಲ್ಲಿ ಅಂಗೀಕಾರದ ಮುದ್ರೆ ದೊರಕುವ ಲಕ್ಷಣಗಳೂ ಇಲ್ಲ. ಸಂತ್ತಿನಲ್ಲಿ ಸಂಸದೀಯ ಪ್ರಜಾಸತ್ತೆಗೆ ಅವಶ್ಯವಾದ ಹೊಂದಾಣಿಕೆ ವ್ಯವಸ್ಥೆ ತಳ ಕಚ್ಚಿದೆ. ಯಾವುದಾದರೂ ಕಾರಣದಿಂದ ಸಂಸತ್ತಿನ ಕಾರ್ಯಕಲಾಪ ತಡೆಯುವ ಕಾರ್ಯ ನಡೆಯುತ್ತಿದೆ. ಬಜೆಟ್ ಅಧಿವೇಶನವಾದರೂ ನಡೆಯಬಹುದೆ ಎನ್ನುವ ಸಂದೇಹ ಪ್ರಜ್ಞಾವಂತರನ್ನು ಕಾಡುತ್ತಿದೆ. ಸಂಸತ್ತು ಕಾರ್ಯ ಕಲಾಪದ ಒಂದು ದಿನದ ವೆಚ್ಚ 8 ಕೋಟಿ ರೂ.ಗಳು.
ಹಗರಣಗಳು
ಹಿಂದಿನ ಯುಪಿಎ ಸರಕಾರದಂತೆ ಮೋದಿ ಸರಕಾರ ಕೂಡಾ ಹಗರಣಗಳಿಂದ ಮುಕ್ತವಾಗಿಲ್ಲ. ಲಲಿತ ಮೋದಿ- ಸುಶ್ಮಾ ಸ್ವರಾಜ್ಯ ಪ್ರಕರಣ ಮತ್ತು ತೀರಾ ಇತ್ತೀಚೆಗಿನ ದಿಲ್ಲಿ ಕ್ರಿಕೆಟ್ ಸಂಸ್ಥೆ- ಹಣಕಾಸು ಸಚಿವ ಅರುಣ ಜೇಟ್ಲಿ ಹಗರಣ ಸರಕಾರದ ಘನತೆಗೆ ಘಾಸಿ ಮಾಡಿವೆ. ಹಗರಣ ಮುಕ್ತ ಸರಕಾರ ಮತ್ತು ಆಡಳಿತವನ್ನು ನೋಡಬೇಕೆನ್ನುವ ಜನತೆಯ ಆಶೆ ಈಡೇರಲಿಲ್ಲ. ಈ ಹಗರಣಗಳ ಸತ್ಯಾಸತ್ಯತೆ ಏನೇ ಇರಲಿ, ಇವು ಸರಕಾರದತ್ತ ‘‘ನೀವೂ ಅವರಂತೆ’’ ಎಂದುಬೊಟ್ಟು ಮಾಡಿ ತೋರಿಸುತ್ತವೆ.
ವಿದೇಶದಲ್ಲಿ ಇರುವ ಕಪ್ಪುಹಣ
ಈ ವಿಚಾರವಾಗಿ ಭಾರತೀಯ ಜನತಾ ಪಕ್ಷ ಚುನಾವಣಾ ಪೂರ್ವ ಭಾರೀ ಯುದ್ಧವನ್ನೇ ಸಾರಿತ್ತು. ವಿದೇಶದಲ್ಲಿ ಹುದುಗಿಸಿಟ್ಟಿರುವ ‘‘ಎಲ್ಲಾ ಕಪ್ಪುಹಣವನ್ನು ಭಾರತಕ್ಕೆ ತಂದೇ ತರುತ್ತೇವೆ’’ ಎಂದು ಘೋಷಣೆ ಮಾಡಿತ್ತು.ಈ ಹಣದ ಹಿಂದೆ ಯಾರೇ ಇರಲಿ ಅವರನ್ನು ಶಿಕ್ಷಿಸುವುದಾಗಿ ಹೇಳಿತ್ತು. ಮೋದಿಯವರ ಚುನಾವಣಾ ಪೂರ್ವ ಭಾಷಣಗಳನ್ನು ಉಲ್ಲೇಖಿಸಿ, ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ‘‘ಮೋದಿಯವರು ಅಧಿಕಾರ ವಹಿಸಿಕೊಂಡ 120 ದಿವಸಗಳಲ್ಲಿ ವಿದೇಶದಲ್ಲಿ ಅಡಗಿಸಿಟ್ಟಿರುವ 80 ಲಕ್ಷ ಕೋಟಿ ಕಪ್ಪುಹಣವನ್ನು ತರುವುದಾಗಿಯೂ ಮತ್ತು ಪ್ರತಿ ಭಾರತೀಯನ ಖಾತೆಗೆ 15 ಲಕ್ಷ ಜಮಾ ಕೊಡುವುದಾಗಿ ಹೇಳಿದ್ದಾರೆ’’ ಎಂದು ಆರೋಪಿ ಸಿದ್ದರು.ಡಾ. ಸುಬ್ರಹ್ಮಣ್ಯ ಸ್ವಾಮಿಯವರು ವಿದೇಶದಲ್ಲಿ ಭಾರತೀಯರು 120 ಲಕ್ಷ ಕೋಟಿ ಹಣವನ್ನು ಇಟ್ಟಿರಬಹುದು ಎಂದು ಅಂದಾಜು ಮಾಡಿದ್ದರು.ಈ ಎಲ್ಲಾ ಭರವಸೆಯ ಹೊರತಾಗಿ ಭಾರತಕ್ಕೆ ಬಂದದ್ದು 638 ಜನರಿಂದ 3770 ಕೋಟಿ ರೂ. ಗಳು ಮಾತ್ರ.
ಆದಾಯ ತೆರಿಗೆ ವಿನಾಯತಿ
ಮಧ್ಯಮ ವರ್ಗವು ಅತಿ ಹೆಚ್ಚು ನಿರೀಕ್ಷಿಸುವ ಆದಾಯ ತೆರಿಗೆ ವಿನಾಯಿತಿ ಹೆಚ್ಚಳದ ಬಗೆಗೆ ಚುನಾವಣಾ ಪೂರ್ವದಲ್ಲಿ ಭಾರೀ ಭರವಸೆಯನ್ನು ನೀಡಿತ್ತು.ಆದರೆ, ಎರಡು ವರ್ಷವಾದರೂ ಈ ನಿಟ್ಟಿನಲ್ಲಿ ಭರವಸೆಯನ್ನು ಈಡೇರಿಸಲಿಲ್ಲ. ಮತ್ತು ಅದರ ಬದಲಿಗೆ ಸ್ವಚ್ಛತಾ ತೆರಿಗೆಯನ್ನು ಹೊಸತಾಗಿ ಹೇರಿದರೆ, ಸೇವಾ ತೆರಿಗೆಯನ್ನು ಹೆಚ್ಚಿಸಿದೆ. ಸದ್ಯದಲ್ಲಿ ಕೌಶಲ್ಯ ತರಬೇತಿ ತೆರಿಗೆಯನ್ನು ಹೇರುವ ನಿರೀಕ್ಷೆ ಇದೆ. ಹಾಗೆಯೇ ಬ್ಯಾಂಕ್ ಮುದ್ದತಿ ಠೇವಣಿ ಮೇಲಿನ ಬಡ್ಡಿದರ ಇಳಿಯುತ್ತಿದ್ದು, ಜೀವಮಾನದ ಉಳಿತಾಯದ ಮೇಲಿನ ಬಡ್ಡಿ ಮೇಲೆ ಬದುಕುವ ಹಿರಿಯ ಜೀವಗಳು ತತ್ತರಿಸಿವೆ.
ತೈಲ ದರ ಇಳಿಕೆ?
ಯುಪಿಎ ಸರಕಾರವಿದ್ದಾಗ ತೈಲದ ಬೆಲೆ ಸದಾ ಏರು ಮುಖದಲ್ಲಿ ಇರುತ್ತಿತ್ತು.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿದಾಗ ಸರಕಾರ ಅನಿವಾರ್ಯವಾಗಿ ದೇಶದಲ್ಲಿ ತೈಲದ ಬೆಲೆಯನ್ನು ಏರಿಸಲೇ ಬೇಕಾಗುತ್ತಿತ್ತು.ಪ್ರತಿಬಾರಿಯೂ ತೈಲದ ಬೆಲೆ ಏರಿದಾಗ, ವಿರೋಧ ಪಕ್ಷದಲ್ಲಿದ್ದ ಭಾಜಪ ಪ್ರತಿಭಟಿಸುತ್ತಿತ್ತು. ಈಗ ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ತೈಲದ ಬೆಲೆ ಇಳಿಯುತ್ತಿದೆ. ಬ್ಯಾರೆಲ್‌ಗೆ 118 ಡಾಲರ್ ಇದ್ದ ತೈಲ ಈಗ ಸುಮಾರು 30 ಡಾಲರ್‌ಗೆ ಇಳಿದಿದೆ. ಆದರೆ ಜನತೆಗೆ ಏರಿದ ಅನುಪಾತದಂತೆ ದರ ಇಳಿಯುತ್ತಿಲ್ಲ. ಜನಸಾಮಾನ್ಯರ ಬವಣೆಗಿಂತ ತೈಲ ಮಾರಾಟ ಸಂಸ್ಥೆಯ ಮತ್ತು ಅಬಕಾರಿ ಸುಂಕದ ಹಿತಾಸಕ್ತಿಯೇ ಹೆಚ್ಚಾಯಿತೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
ಚುನಾವಣೆಯಲ್ಲಿ ಹಿನ್ನಡೆ
ದಿಲ್ಲಿ ಮತ್ತು ಬಿಹಾರದ ನಂತರ, ಬಿಜೆಪಿ ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳಲ್ಲಿ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸೋತಿದ್ದು, ಅದು ತನ್ನ ಕಾರ್ಯ ವೈಖರಿಯನ್ನು ಪುನರ್ ವಿಮರ್ಶಿಸುವ ಕಾಲ ಬಂದಿದೆ.
ಇನ್ನಾದರೂ ತನ್ನ ವರ್ಚಸ್ಸು ಕುಂದದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗಿದೆ.