ಪಠಾಣ್‌ಕೋಟ್ ದಾಳಿ ಭಾರತದಿಂದ ಹೊಸ ಪುರಾವೆ: ಪಾಕ್ ಪ್ರಧಾನಿ
ಲಂಡನ್, ಜ. 25: ಪಠಾಣ್‌ಕೋಟ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಭಾರತ ಹೊಸ ಪುರಾವೆಗಳನ್ನು ಒದಗಿಸಿದೆ ಹಾಗೂ ಪಾತಕಿಗಳನ್ನು ಕಾನೂನಿನ ಕಟಕಟೆಗೆ ತರುವುದಕ್ಕಾಗಿ ತನ್ನ ದೇಶವು ಪುರಾವೆಗಳನ್ನು ಪರಿಶೀಲಿಸುತ್ತಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಇಂದು ಹೇಳಿದ್ದಾರೆ.
‘‘ಭಾರತ ನೀಡಿದ ಪುರಾವೆಗಳನ್ನು ನಾವು ಅಡಗಿಸಿಡಬಹುದಾಗಿತ್ತು ಅಥವಾ ನಿರ್ಲಕ್ಷಿಸಿಬಿಡಬಹುದಾಗಿತ್ತು. ಆದರೆ, ಪುರಾವೆಗಳನ್ನು ಪಡೆದಿದ್ದೇವೆ ಎಂಬುದಾಗಿ ನಾವು ಹೇಳುತ್ತಿದ್ದೇವೆ’’ ಎಂದು ಅವರು ನುಡಿದರು.
‘‘ಭಾರತ ನೀಡಿದ ಪುರಾವೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಪರಿಶೀಲನೆ ಮುಗಿದ ಬಳಿಕ ನಾವು ತನಿಖೆಯನ್ನು ಚುರುಕುಗೊಳಿಸುತ್ತೇವೆ. ಅದರ ಜೊತೆಗೇ ನಾವು ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದೇವೆ. ತಂಡವು ಭಾರತಕ್ಕೆ ಹೋಗಿ ಹೆಚ್ಚಿನ ಪುರಾವೆಯನ್ನು ಸಂಗ್ರಹಿಸಲಿದೆ’’ ಎಂದು ಲಂಡನ್‌ನಲ್ಲಿ ಶರೀಫ್ ತಿಳಿಸಿದರು.
ಡಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸಿದ ಬಳಿಕ ಸ್ವದೇಶಕ್ಕೆ ಹಿಂದಿರುಗುವ ಮಾರ್ಗದಲ್ಲಿ ಅವರು ಲಂಡನ್‌ನಲ್ಲಿ ಇಳಿದರು.