×
Ad

ಹೆಬ್ಬಾಳ ಟಿಕೆಟ್ ತಿಕ್ಕಾಟ: ಸೋತವರಾರು?

Update: 2016-01-27 23:45 IST

ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳು ಘೋಷಣೆಯಾದ ಬೆನ್ನಿಗೇ, ಹೆಬ್ಬಾಳ ಕ್ಷೇತ್ರಕ್ಕೆ ಅಭ್ಯರ್ಥಿ ಯಾರಾಗಬೇಕು ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್‌ನೊಳಗೇ ಸ್ಪರ್ಧೆ ನಡೆದಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಹೆಬ್ಬಾಳ ಕ್ಷೇತ್ರ ಚುನಾವಣೆಗೆ ಮುನ್ನವೇ ಸುದ್ದಿಯಾಗುವುದಕ್ಕೆ ಮುಖ್ಯ ಕಾರಣ, ಇಲ್ಲಿ ಪಕ್ಷದ ಹಿರಿಯ ನಾಯಕ ಜಾಫರ್ ಶರೀಫ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಸುವಲ್ಲಿ ಪೈಪೋಟಿಗಿಳಿದದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಅವರ ಆಪ್ತ ಭೈರತಿ ಸುರೇಶ್ ಟಿಕೆಟ್‌ಗಾಗಿ ತುದಿಗಾಲಲ್ಲಿ ನಿಂತಿದ್ದರೆ, ಇತ್ತ ಜಾಫರ್ ಶರೀಫ್ ಅವರು ತನ್ನ ಮೊಮ್ಮಗನಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದು ಕೂತಿದ್ದರು. ಕಾಂಗ್ರೆಸ್ ಪಕ್ಷ ತನ್ನೊಳಗಿನ ಶತ್ರುಗಳನ್ನು ಗೆದ್ದು, ಬಳಿಕ ಹೊರಗಿನ ಶತ್ರುಗಳನ್ನು ಗೆಲ್ಲಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಸಿದ್ದರಾಮಯ್ಯ ಮತ್ತು ಜಾಫರ್ ಶರೀಫ್ ತಿಕ್ಕಾಟದಲ್ಲಿ ಶತ್ರುವಿನ ಶತ್ರು ಮಿತ್ರ ಎಂಬ ಆಧಾರದಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರು ಜಾಫರ್ ಶರೀಫ್ ಅವರ ಪರವಾಗಿ ನಿಂತದ್ದು ಸುಳ್ಳಲ್ಲ. ಸಿದ್ದರಾಮಯ್ಯ ಅವರನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲದವರೆಲ್ಲ ಅವರ ಅಭ್ಯರ್ಥಿಯ ವಿರುದ್ಧ ಒಳಗೊಳಗೆ ಕೆಲಸ ಮಾಡಿದ ಪರಿಣಾಮ ಕೊನೆಗೂ ಜಾಫರ್ ಶರೀಫ್ ಮೊಮ್ಮಗ ಟಿಕೆಟ್‌ಗೆ ಅರ್ಹ ಎಂದು ಘೋಷಿಸಲಾಯಿತು.
 ಇಷ್ಟಕ್ಕೂ ಈ ಸ್ಪರ್ಧೆಯಲ್ಲಿ ನಿಜಕ್ಕೂ ಗೆದ್ದವರಾರು? ಈ ಪ್ರಶ್ನೆಗೆ ಉತ್ತರ ಕಷ್ಟ. ಯಾಕೆಂದರೆ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದ ಇಬ್ಬರೂ ಅಭ್ಯರ್ಥಿಗಳು ನಿರ್ಣಾಯಕ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಕೈ ಕೊಟ್ಟವರು. ಈಗಾಗಲೇ ವಿಧಾನ ಪರಿಷತ್ ಸದಸ್ಯರಾಗಿರುವ ಭೈರತಿ ಸುರೇಶ್ ಅವರನ್ನು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿಸಲು ಸಿದ್ದರಾಮಯ್ಯ ಅವರಿಗೆ ವೈಯಕ್ತಿಕ ಕಾರಣಗಳಿತ್ತೇ ಹೊರತು ಅದರಲ್ಲಿ ಕಾಂಗ್ರೆಸ್ ಹಿತಾಸಕ್ತಿಯಿದ್ದಿರಲಿಲ್ಲ. ಭೈರತಿ ಸುರೇಶ್ ಅವರು ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಗಾವಲಾಗಿ ನಿಂತವರು. ಅವರ ರಾಜಕೀಯ ಅಗತ್ಯಕ್ಕೆ ಪೂರಕವಾಗಿ ಆರ್ಥಿಕ ಬೆಂಬಲವಾಗಿ ನಿಂತವರು. ಭೈರತಿ ಸುರೇಶ್ ಕುರಿತಂತೆ ಸಣ್ಣ ಪುಟ್ಟ ಋಣಗಳು ಸಿದ್ದರಾಮಯ್ಯ ಅವರಿಗಿತ್ತು. ಆದರೆ ಇದೇ ಭೈರತಿ ಸುರೇಶ್, ತನ್ನ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ಗೆ ದ್ರೋಹ ಬಗೆದಿದ್ದರು ಎನ್ನುವುದನ್ನು ಅಷ್ಟು ಸುಲಭದಲ್ಲಿ ಮರೆಯುವುದಕ್ಕಾಗುವುದಿಲ್ಲ. ಕಾಂಗ್ರೆಸ್ ಪರವಾಗಿದ್ದ ಅಲ್ಪಸಂಖ್ಯಾತರಲ್ಲಿ ಬಹಳಷ್ಟು ಮಂದಿ ಕಾಂಗ್ರೆಸ್‌ನಿಂದ ದೂರವಾಗಲು ಈ ಭೈರತಿ ಸುರೇಶ್ ಕಾರಣವಾಗಿದ್ದರು. 2012ರಲ್ಲಿ ವಿಧಾನಪರಿಷತ್ ಚುನಾವಣೆ ನಡೆದಾಗ, ಇಕ್ಬಾಲ್ ಅಹ್ಮದ್ ಸರಡಗಿ ಅವರು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್‌ನ ಬೆಂಬಲ ಪಡೆದು ಭೈರತಿ ಸುರೇಶ್ ಸ್ವತಂತ್ರ ಅಭ್ಯರ್ಥಿಯಾಗಿ ನಿಂತರು. ಮಾತ್ರವಲ್ಲ, ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣವಾದರು. ಇಕ್ಬಾಲ್ ಅಹ್ಮದ್ ಅವರು ಮುಸ್ಲಿಮ್ ಅಭ್ಯರ್ಥಿಯಾದ ಕಾರಣಕ್ಕಾಗಿಯೇ ಅವರನ್ನು ಸೋಲಿಸಲಾಯಿತು ಎನ್ನುವ ಪ್ರಚಾರ ಬಳಿಕ ಕಾಂಗ್ರೆಸ್‌ನೊಳಗೆ ನಡೆದಿತ್ತು. ಇಂತಹ ಹಿನ್ನೆಲೆಯಿರುವ ಭೈರತಿ ಸುರೇಶ್ ಅವರಿಗೇ ಟಿಕೆಟ್ ನೀಡಬೇಕು ಎನ್ನುವ ಸಿದ್ದರಾಮಯ್ಯರ ಹಟ, ಹಲವರ ಪ್ರಶ್ನೆಗೊಳಗಾದುದಂತೂ ಸತ್ಯ. ಈ ಸಂದರ್ಭದಲ್ಲೇ ಇನ್ನೊಬ್ಬ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ವಿರೋಧಿಗಳು ತಮ್ಮ ರಾಜಕೀಯ ಆಟವನ್ನಾಡಿ ಮುಖ್ಯಮಂತ್ರಿಗೆ ಮುಖಭಂಗ ಮಾಡುವಲ್ಲಿ ಯಶಸ್ವಿಯಾದರು.

 ಇನ್ನು ಜಾಫರ್ ಶರೀಫ್ ಅವರು ಬೆಂಬಲಿಸುತ್ತಿರುವ ಅಭ್ಯರ್ಥಿಯಾದರೂ ಕಾಂಗ್ರೆಸ್‌ನ ಹಿತಾಸಕ್ತಿಗೆ ಪೂರಕವಾಗಿದ್ದಾರೆಯೇ ಎಂದರೆ ಅದೂ ಇಲ್ಲ. ಜಾಫರ್ ಶರೀಫ್‌ನ ಮೊಮ್ಮಗನಾಗಿರುವುದು ಒಬ್ಬ ವ್ಯಕ್ತಿಯ ಅರ್ಹತೆ ಎಂದಾದರೆ ಖಂಡಿತವಾಗಿಯೂ ರೆಹಮಾನ್ ಶರೀಫ್ ಟಿಕೆಟ್‌ಗೆ ಅರ್ಹರಾಗಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಆದರೆ ಜಾಫರ್ ಶರೀಫ್ ಮೊಮ್ಮಗ ಎನ್ನುವುದು ಹೊರತು ಪಡಿಸಿದರೆ, ಇನ್ನಾವ ವಿಶೇಷ ಅರ್ಹತೆಯೂ ಅವರಿಗಿದ್ದಿರಲಿಲ್ಲ ಎನ್ನುವುದು ಅಷ್ಟೇ ಕಹಿಯಾದ ಸತ್ಯ. ಇಷ್ಟಕ್ಕೂ ಜಾಫರ್ ಶರೀಫ್ ಅವರು ಕಾಂಗ್ರೆಸ್‌ನೊಳಗೆ ಈ ಹಿಂದಿನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ತನಗೆ ಟಿಕೆಟ್ ಸಿಗಲಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ಮುಂದಾಗಿದ್ದವರು ಶರೀಫ್. ಅಷ್ಟೇ ಅಲ್ಲ, ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ತನ್ನಿಂದ ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟನ್ನೂ ಮಾಡಿದ್ದರು. ತಾನು ಸೋಲಿಸಿದ ಅಭ್ಯರ್ಥಿ ಒಬ್ಬ ಅಲ್ಪಸಂಖ್ಯಾತ ಎನ್ನುವ ಪ್ರಜ್ಞೆ ಅಂದು ಜಾಫರ್ ಶರೀಫ್ ಅವರಿಗೆ ಇರಲಿಲ್ಲ. ಇದೀಗ ಅಲ್ಪಸಂಖ್ಯಾತರ ಹೆಸರಲ್ಲಿ ‘ತನ್ನ ಮೊಮ್ಮಗನಿಗೆ ಟಿಕೆಟ್ ಸಿಗಬೇಕು’ ಎಂದು ಹೈಕಮಾಂಡನ್ನು ಒತ್ತಾಯಿಸಿರುವ ಜಾಫರ್ ಶರೀಫ್, ಅಲ್ಪಸಂಖ್ಯಾತರಿಗೆ ಕೊಟ್ಟ ಕೊಡುಗೆಗಳೇನು ಎಂದು ಕೇಳಿದರೆ ಉತ್ತರಗಳಿಗೆ ತಡಕಾಡಬೇಕಾಗುತ್ತದೆ. ಒಂದು ರೀತಿಯಲ್ಲಿ ತನ್ನ ಮೊಮ್ಮಕ್ಕಳು ರಾಜಕೀಯವಾಗಿ ಬೆಳೆಯುವುದಕ್ಕಾಗಿ ಅವರು ಅಲ್ಪಸಂಖ್ಯಾತರನ್ನು ಬಳಸಿಕೊಂಡಿದ್ದಾರೆ ಎನ್ನುವುದಷ್ಟೇ ಇಲ್ಲಿ ಮುಖ್ಯವಾಗುತ್ತದೆ. ಹಾಗೆ ನೋಡಿದರೆ ಅಲ್ಪಸಂಖ್ಯಾತರಲ್ಲೇ ಹಲವು ತರುಣರು, ಯೋಗ್ಯರು ಕಾಂಗ್ರೆಸ್‌ನಲ್ಲಿದ್ದರು. ಆದರೆ ಅವರ ಪರವಾಗಿ ರಾಜಕೀಯ ಮಾಡುವ ಹಿರಿಯರಿರಲಿಲ್ಲ ಅಷ್ಟೇ. ಕನಿಷ್ಠ ಸಿದ್ದರಾಮಯ್ಯ ಅವರಾದರೂ ಶರೀಫ್ ಮೊಮ್ಮಗನ ವಿರುದ್ಧ ಇನ್ನೊಬ್ಬ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಮುಂದಿಟ್ಟು ಮುತ್ಸದ್ದಿತನವನ್ನು ಪ್ರದರ್ಶಿಸಬಹುದಿತ್ತು. ಹೆಬ್ಬಾಳದಲ್ಲಿ ನಾಳೆ ಜಾಫರ್ ಶರೀಫ್ ಅಭ್ಯರ್ಥಿ ಕಾಂಗ್ರೆಸ್‌ನಿಂದ ಗೆಲ್ಲುತ್ತಾರೆಯೋ ಸೋಲುತ್ತಾರೆಯೋ ಎನ್ನುವುದು ಆನಂತರದ ವಿಷಯ. ಆದರೆ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯುವ ವಿಷಯದಲ್ಲಿ ಗೆದ್ದದ್ದು ಯಾರು ಎನ್ನುವುದು ಸ್ಪಷ್ಟವಿಲ್ಲ. ಆದರೆ ಉಭಯ ಅಭ್ಯರ್ಥಿಗಳಲ್ಲಿ ಯಾರೇ ಟಿಕೆಟ್ ಪಡೆದಿದ್ದರೂ, ಅದರಿಂದ ಸೋತದ್ದು ಕಾಂಗ್ರೆಸ್ ಎಂದು ಹೇಳುವಲ್ಲಿ ಎರಡು ಮಾತಿಲ್ಲ. ಇಬ್ಬರಲ್ಲಿ ಯಾರು ಟಿಕೆಟನ್ನು ತನ್ನದಾಗಿಸಿಕೊಂಡಿದ್ದರೂ ಕಾಂಗ್ರೆಸ್ ಪಾಲಿಗೆ ಅದರಿಂದ ದೊಡ್ಡ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ಒಟ್ಟಿನಲ್ಲಿ, ಕಾಂಗ್ರೆಸ್ ಪಕ್ಷ ಹೇಗೆ ಇನ್ನೂ ಸ್ವಜನ ಪಕ್ಷಪಾತದ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿದೆ ಎನ್ನುವುದಕ್ಕೆ ಜಾಫರ್ ಶರೀಫ್ ಮತ್ತು ಸಿದ್ದರಾಮಯ್ಯ ಅವರ ಟಿಕೆಟ್ ತಿಕ್ಕಾಟ ಅತ್ಯುತ್ತಮ ಉದಾಹರಣೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News