×
Ad

ಸಿರಿಯ: ಶಾಂತಿ ಮಾತುಕತೆಗೆ ಅಸ್ಥಿರ ಆರಂಭ; ಬದ್ಧತೆ, ಆಸಕ್ತಿ ತೋರದ ಉಭಯ ಬಣಗಳು

Update: 2016-02-01 23:49 IST

ಜಿನೇವ (ಸ್ವಿಝರ್‌ಲ್ಯಾಂಡ್), ಫೆ. 1: ಸಿರಿಯದಲ್ಲಿ ಸಂಘರ್ಷ ಉಲ್ಬಣಗೊಳ್ಳುತ್ತಿರುವಂತೆಯೇ, ಸ್ವಿಝರ್‌ಲ್ಯಾಂಡ್‌ನ ಜಿನೇವದಲ್ಲಿ ಶಾಂತಿ ಮಾತುಕತೆಗಳು ಅಸ್ಥಿರ ನೆಲೆಯಲ್ಲಿ ಆರಂಭಗೊಂಡಿವೆ.
ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಸ್ಟಾಫನ್ ಡಿ ಮಿಸ್ತುರ ಸಿರಿಯದ ಅಧ್ಯಕ್ಷ ಬಶರ್ ಅಲ್-ಅಸದ್‌ರ ಪ್ರತಿನಿಧಿಗಳು ಮತ್ತು ಪ್ರತಿಪಕ್ಷಗಳ ಪ್ರತಿನಿಧಿಗಳೊಂದಿಗೆ ರವಿವಾರ ಪ್ರತ್ಯೇಕ ಮಾತುಕತೆಗಳನ್ನು ನಡೆಸಿದರು.
ಶಾಂತಿ ಮಾತುಕತೆಯ ಫಲಿತಾಂಶದ ಬಗ್ಗೆ ‘‘ಆಶಾವಾದಿ’’ಯಾಗಿರುವುದಾಗಿ ಹಾಗೂ ‘‘ಛಲ’’ ಹೊಂದಿರುವುದಾಗಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಹೇಳಿದರು. ಆದರೆ, ಯುದ್ಧ ನಿರತ ಬಣಗಳ ಹೇಳಿಕೆಗಳು ಸಂಘರ್ಷ ಪೀಡಿತ ದೇಶದ ವಾಸ್ತವ ಸ್ಥಿತಿಗತಿಗಳು ಮತ್ತು ಶಾಂತಿ ಸ್ಥಾಪನೆಗೆ ಎದುರಾಗಬಹುದಾದ ಸವಾಲುಗಳನ್ನು ತೆರೆದಿಟ್ಟಿವೆ.
ಪ್ರತಿಪಕ್ಷಗಳ ನಿಯೋಗ ಮನಸ್ಸಿಲ್ಲದ ಮನಸ್ಸಿನಿಂದ ಶನಿವಾರ ತಡವಾಗಿ ಜಿನೇವಕ್ಕೆ ಆಗಮಿಸಿತು ಹಾಗೂ ಅಸದ್‌ರ ‘‘ಅಪರಾಧಗಳು’’ ನಿಲ್ಲದಿದ್ದರೆ ವಾಪಸಾಗುವುದಾಗಿ ಬೆದರಿಕೆ ಹಾಕಿತು.
ಮುತ್ತಿಗೆಗೊಳಗಾದ ಪಟ್ಟಣಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಲಕ್ಷಾಂತರ ಜನರಿಗೆ ಮಾನವೀಯ ನೆರವು ತಲುಪಲು ಅವಕಾಶ ನೀಡಬೇಕು, ನಾಗರಿಕರ ಮೇಲೆ ನಡೆಸಲಾಗುತ್ತಿರುವ ಬಾಂಬ್ ದಾಳಿಯನ್ನು ನಿಲ್ಲಿಸಬೇಕು ಹಾಗೂ ನೂರಾರು ಕೈದಿಗಳನ್ನು ಬಿಡುಗಡೆ ಮಾಡಬೇಕು ಎನ್ನುವುದು ಪ್ರತಿಪಕ್ಷಗಳ ನಿಯೋಗದ ಬೇಡಿಕೆಯಾಗಿದೆ.
ಪ್ರತಿಪಕ್ಷಗಳಿಗೆ ಬದ್ಧತೆಯಿಲ್ಲ: ಬಶರ್ ಪ್ರತಿನಿಧಿ
ಆದರೆ, ಈ ಶಾಂತಿ ಮಾತುಕತೆಗಳನ್ನು ಪ್ರತಿಪಕ್ಷಗಳು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಸಿರಿಯದ ಪ್ರಧಾನ ಸಂಧಾನಕಾರ ಬಶರ್ ಅಲ್-ಜಾಫರಿ ಆರೋಪಿಸಿದ್ದಾರೆ.
‘‘ಎದುರು ಬಣದಿಂದ ಯಾರು ಬಂದಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ಸಂಧಾನಕಾರರ ಅಂತಿಮ ಪಟ್ಟಿಯೊಂದನ್ನೂ ಅವರು ಹೊಂದಿಲ್ಲ’’ ಎಂದು ಕಿಕ್ಕಿರಿದ ಪತ್ರಿಕಾಗೋಷ್ಠಿಯೊಂದರಲ್ಲಿ ಅವರು ಹೇಳಿದರು.

ಅದೇ ವೇಳೆ, ವಾಶಿಂಗ್ಟನ್‌ನಿಂದ ಹೇಳಿಕೆಯೊಂದನ್ನು ನೀಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ, ಅವಕಾಶವನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತೆ ಉಭಯ ಬಣಗಳಿಗೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News