ಸಿರಿಯ ಮಕ್ಕಳ ಶಿಕ್ಷಣಕ್ಕಾಗಿ 140 ಕೋಟಿ ಡಾಲರ್ ಸಂಗ್ರಹ ಗುರಿ ಮಲಾಲಾ
ಲಂಡನ್, ಫೆ. 1: ಸಿರಿಯದ ನಿರಾಶ್ರಿತ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಈ ವರ್ಷ 140 ಕೋಟಿ ಡಾಲರ್ ನೀಡುವಂತೆ ಲಂಡನ್‌ನಲ್ಲಿ ಗುರುವಾರ ನಡೆಯಲಿರುವ ಸಮ್ಮೇಳನವೊಂದರಲ್ಲಿ ವಿಶ್ವ ನಾಯಕರ ಮನವೊಲಿಸುವುದಾಗಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಝಾಯಿ ಹೇಳಿದ್ದಾರೆ.
‘‘ಸಿರಿಯ ಮತ್ತು ಆ ವಲಯಕ್ಕೆ ಬೆಂಬಲ ನೀಡುವುದ’’ಕ್ಕೆ ಸಂಬಂಧಿಸಿದ ಸಮ್ಮೇಳನದಲ್ಲಿ ಭಾಗವಹಿಸಲು ಸರಕಾರಗಳ ಮುಖ್ಯಸ್ಥರು ಮತ್ತು ದೇಶಗಳ ಸಚಿವರು ಲಂಡನ್‌ನಲ್ಲಿ ಒಟ್ಟು ಸೇರಲಿದ್ದಾರೆ. ಸಿರಿಯದ ಆಂತರಿಕ ಸಂಘರ್ಷದಿಂದ ಉದ್ಭವಿಸಿದ ಮಾನವೀಯ ಬಿಕ್ಕಟ್ಟುಗಳನ್ನು ನಿಭಾಯಿಸುವ ತಂತ್ರೋಪಾಯಗಳ ಬಗ್ಗೆ ಚರ್ಚಿಸಲು ಸಮ್ಮೇಳವನ್ನು ಏರ್ಪಡಿಸಲಾಗಿದೆ.
ಜೋರ್ಡಾನ್, ಲೆಬನಾನ್ ಮತ್ತು ಮಧ್ಯ ಪ್ರಾಚ್ಯದ ಇತರ ದೇಶಗಳ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ ಸುಮಾರು 7 ಲಕ್ಷ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ ಎಂದು ‘ಮಲಾಲಾ ಫಂಡ್’ ಬಿಡುಗಡೆ ಮಾಡಿದ ವರದಿಯೊಂದು ತಿಳಿಸಿದೆ. ಮಲಾಲಾ ಫಂಡ್ ಶೈಕ್ಷಣಿಕ ಆವಶ್ಯಕತೆಗಳಿಗಾಗಿ ಹಣ ಸಂಗ್ರಹಿಸುತ್ತದೆ ಹಾಗೂ ಅಭಿಯಾನ ನಡೆಸುತ್ತದೆ.