ಆಹಾರ ದಾಸ್ತಾನು ಕೊರತೆ:ದೇಶಕ್ಕೆ ಕಾದಿದೆ ಆಪತ್ತು
ಒಂದು ದೇಶದ ಸಾರ್ವಭೌಮತೆ ಉಳಿಯುವುದು, ಗಟ್ಟಿಗೊಳ್ಳುವುದು ಶಸ್ತ್ರಾಸ್ತ್ರ ಸಂಗ್ರಹದಿಂದ ಅಲ್ಲ. ಯಾವುದೇ ಒಂದು ದೇಶ ಆಹಾರಭದ್ರತೆಯಲ್ಲಿ ಹೆಚ್ಚು ಹೆಚ್ಚು ಸ್ವಾವಲಂಬಿಯಾಗುತ್ತಾ ಹೋದಂತೆ ಅದು ತನ್ನ ಸಾರ್ವಭೌಮತೆಯನ್ನು ಉಳಿಸಿಕೊಳ್ಳುತ್ತಾ ಹೋಗುತ್ತದೆ. ಯಾವಾಗ ಒಂದು ದೇಶ, ತನಗೆ ಅಗತ್ಯವಿರುವ ಆಹಾರಕ್ಕಾಗಿ ಇತರ ದೇಶಗಳನ್ನು ಅವಲಂಬಿಸುತ್ತಾ ಹೋಗುತ್ತದೆಯೋ, ಅದಕ್ಕಾಗಿ ತನ್ನ ಸಾರ್ವಭೌಮತೆಯನ್ನು ಬಲಿಕೊಡುತ್ತಾ ಹೋಗಬೇಕಾಗುತ್ತದೆ. ಇಂದು ಶತ್ರುಗಳು ಗಡಿಯಲ್ಲಿ ನೇರವಾಗಿ ದಾಳಿ ನಡೆಸಿ, ದೇಶದ ಆಡಳಿತವನ್ನು ಕೈವಶ ಮಾಡಿಕೊಳ್ಳದೆ, ಬೇರೆ ಬೇರೆ ಆರ್ಥಿಕ ತಂತ್ರಗಳ ಮೂಲಕ, ದೇಶದ ಸಾರ್ವಭೌಮತೆಯ ಮೇಲೆ ಹಿಡಿತ ಸಾಧಿಸುತ್ತಾ ಹೋಗುತ್ತಿದ್ದಾರೆ. ಭಾರತ ಅತಿ ದೊಡ್ಡ ಕೃಷಿ ಪ್ರಧಾನ ದೇಶವಾಗಿದೆ. ಇಲ್ಲಿಯ ಜನಸಂಖ್ಯೆಯೂ, ಭೂಪ್ರದೇಶವೂ ಅತ್ಯಂತ ವಿಸ್ತಾರವಾದುದು. ಕೃಷಿಗೆ ಪೂರಕವಾದುದು. ಕೃಷಿಕರು ಈ ದೇಶದ ಬೆನ್ನೆಲುಬು ಎನ್ನುವುದನ್ನು ನಾವು ಒಂದು ಆದರ್ಶ ವಾಕ್ಯವಾಗಿ ಆಡುತ್ತಾ ಬಂದಿದ್ದೇವೆ. ಎಲ್ಲಿಯವರೆಗೆ ಮನುಷ್ಯ ಹಸಿವಾದಾಗ ಆಹಾರವನ್ನೇ ಸೇವಿಸುತ್ತಿರುತ್ತಾನೋ, ಅಲ್ಲಿಯವರೆಗೆ ಎಲ್ಲ ದೇಶಗಳ ಬೆನ್ನೆಲುಬು ಕೃಷಿಯೇ ಆಗಿರುತ್ತದೆ. ಭಾರತವಂತೂ ಕೃಷಿಯನ್ನೇ ನಂಬಿಕೊಂಡು ಬಂದಿರುವ ದೇಶ. ಆದರೆ ಇದೀಗ ಮೋದಿಯ ಮೇಕಿಂಗ್ ಇಂಡಿಯಾದ ಕಾಲ. ಬೇರೆ ಬೇರೆ ಬೃಹತ್ ಉದ್ಯಮಗಳನ್ನು ‘ಬನ್ನಿ ಬನ್ನಿ’ ಎಂದು ಕೈಕಾಲು ಹಿಡಿದು ಕರೆಯುತ್ತಿದ್ದಾರೆ. ಬಂಡವಾಳ ಹೂಡಿಕೆ ದೇಶಕ್ಕೆ ಅತ್ಯಗತ್ಯವಾಗಿದೆ. ಅದುವೇ ದೇಶದ ಅಭಿವೃದ್ಧಿಯ ಮಾನದಂಡವೂ ಆಗಿದೆ. ಆದರೆ ಇದೇ ಸಂದರ್ಭದಲ್ಲಿ ದೇಶದ ಕೃಷಿ ಭೂಮಿ ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಾ ಹೋಗುತ್ತಿದೆ. ಒಂದೆಡೆ ಕೃಷಿ ಭೂಮಿಗಳನ್ನು ಸೆಝ್, ಬೃಹತ್ ಕೈಗಾರಿಕೆಗಳಿಗಾಗಿ ಒತ್ತುವರಿ ಮಾಡಲಾಗುತ್ತಿದೆ. ಮಗದೊಂದೆಡೆ ಸಾಲ ಸೋಲದಿಂದ ಸೋತ ರೈತರೇ ಕೃಷಿ ಭೂಮಿಯನ್ನು ಮಾರಿ ನಗರ ಸೇರುತ್ತಿದ್ದಾರೆ. ಇನ್ನೊಂದೆಡೆ, ಕೃಷಿ ಭೂಮಿಯಲ್ಲಿ ಬೃಹತ್ ಕಟ್ಟಡಗಳು ತಲೆಯೆತ್ತುತ್ತಿವೆ. ಪ್ರತಿ ವರ್ಷ ಕೃಷಿ ಉತ್ಪಾದನೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಇದರ ಪರಿಣಾಮ ದೇಶ ಆಹಾರ ಅಭದ್ರತೆಯತ್ತ ಸಾಗುತ್ತಿದೆ. ಇವೆಲ್ಲವುಗಳ ನಡುವೆ, ಬೃಹತ್ ಕಂಪೆನಿಗಳು ರೈತರು ಬೆಳೆಯುವ ಬೀಜಗಳ ಮೇಲೆಯೇ ಹಕ್ಕು ಸಾಧಿಸುತ್ತಿವೆ. ಬಿತ್ತುವ ಬೀಜದ ಮೇಲೆಯೇ ಅಧಿಕಾರವನ್ನು ಕೃಷಿಕರು ಕಳೆದುಕೊಳ್ಳುತ್ತಿದ್ದಾರೆ.
ಇವೆಲ್ಲದರ ಫಲವೆನ್ನುವಂತೆ ದೇಶದಲ್ಲಿ ಆಹಾರ ಧಾನ್ಯಗಳ ಆಮದು ತೀವ್ರವಾಗುತ್ತಿವೆ ಎನ್ನುವ ವರದಿಯೊಂದು ಹೊರ ಬಿದ್ದಿದೆ. ಈ ಬಗ್ಗೆ ಹಲವು ತಜ್ಞರು, ಆರ್ಥಿಕ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ಭಾರತ ಮೆಕ್ಕೆ ಜೋಳವನ್ನು ಆಮದು ಮಾಡಿಕೊಳ್ಳುವಂತಹ ಸ್ಥಿತಿಗೆ ಬಂದಿದೆ. ಕಳೆದ ಹದಿನಾರು ವರ್ಷಗಳ ಬಳಿಕ, ಇದೇ ಮೊದಲ ಬಾರಿಗೆ ಮೆಕ್ಕೆಜೋಳವನ್ನು ಸರಕಾರ ಆಮದು ಮಾಡಿಕೊಂಡಿದೆ. ಇದರ ಜೊತೆ ಜೊತೆಗೇ ತೈಲ ಧಾನ್ಯಗಳ ಉತ್ಪಾದನೆಯೂ ಕುಸಿಯುತ್ತಿದೆ ಮತ್ತು ಇದರ ಆಮದಿನಲ್ಲೂ ಏರಿಕೆಯಾಗುತ್ತಿದೆ ಎಂದು ಅಧಿಕಾರಿಗಳು, ತಜ್ಞರು ಹೇಳಿದ್ದಾರೆ. ಸದ್ಯಕ್ಕೆ ಗೋಧಿ ಮತ್ತು ಸಕ್ಕರೆ ಗೋದಾಮಿನಲ್ಲಿ ಸಾಕಷ್ಟು ಇವೆಯಾದರೂ, ವರ್ಷದಿಂದ ವರ್ಷಕ್ಕೆ ಈ ದಾಸ್ತಾನು ಇಳಿಕೆಯಾಗುತ್ತಿದೆ ಎಂಬ ಅಂಶವೂ ಬಹಿರಂಗವಾಗಿದೆ. ಅಷ್ಟೇ ಅಲ್ಲ, ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಹಲವು ಪ್ರಮುಖ ಆಹಾರ ಸರಕುಗಳನ್ನು ಆಮದು ಮಾಡಿಕೊಳ್ಳುವಂತಹ ಪರಿಸ್ಥಿತಿ ಬರಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಪರಿಹಾರವನ್ನು ಕಂಡು ಹಿಡಿಯಲು ಮೋದಿ ನೇತೃತ್ವದಲ್ಲಿ ನಡೆದ ಸಭೆ ವಿಫಲವಾಗಿದೆ. ಭಾರತದಲ್ಲಿ ಆಹಾರ ಅಭದ್ರತೆ ಎದುರಾದರೆ, ಇಡೀ ದೇಶದ ಅರ್ಥವ್ಯವಸ್ಥೆಯನ್ನೇ ಅದು ಏರು ಪೇರುಗೊಳಿಸಲಿರುವುದಂತೂ ಸತ್ಯ. ನರೇಂದ್ರ ಮೋದಿಯವರು ಪದೇ ಪದೇ ಎರಡನೆ ಹಸಿರು ಕ್ರಾಂತಿಯಾಗಬೇಕು ಎಂದು ಘೋಷಿಸುತ್ತಲೇ ಇದ್ದಾರೆ. ಆದರೆ ನಡೆಯುತ್ತಿರುವುದು ರೈತರ ಮಾರಣಹೋಮ. ಬರೇ ಭಾಷಣದ ಮೂಲಕವೇ ಅವರು ಕ್ರಾಂತಿಯನ್ನು ಮಾಡಲು ಹೊರಟಿದ್ದಾರೆ. ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಸಂಪೂರ್ಣ ವಿಫಲವಾಗಿದ್ದಾರೆ.
ಮುಖ್ಯವಾಗಿ ಕೃಷಿಯ ಎರಡನೆ ಕ್ರಾಂತಿ ನಡೆಯಬೇಕಾದರೆ, ಕೃಷಿಕರಿಗೆ ಸರಕಾರ ಪೂರಕವಾಗಿರಬೇಕು. ಆದರೆ ಸದ್ಯಕ್ಕೆ ದೇಶದ ಆರ್ಥಿಕ ನೀತಿಗಳೆಲ್ಲ ರೈತರ ಹಿತಾಸಕ್ತಿಗೆ ವಿರುದ್ಧವಾಗಿವೆ. ಮತ್ತು ಕೈಗಾರಿಕೆ, ಬೃಹತ್ ಉದ್ಯಮಗಳಿಗೆ ಸಹಕಾರಿಯಾಗಿವೆ. ರೈತರ ಸಬ್ಸಿಡಿಗಳನ್ನು ಕಿತ್ತುಕೊಳ್ಳಲಾಗಿದೆ. ಗೊಬ್ಬರ, ಬೀಜಕ್ಕಾಗಿ ರೈತರು ಬೀದಿಗಿಳಿಯುವಂತಹ, ಪೊಲೀಸರ ಲಾಠಿ ಏಟನ್ನು ತಿನ್ನುವಂತಹ ವಾತಾವರಣ ದೇಶದಲ್ಲಿದೆ. ಎಲ್ಲ ಅಡೆತಡೆಗಳನ್ನು ದಾಟಿ ರೈತ ಬೆಳೆ ಬೆಳೆದರೆ ಅದಕ್ಕೆ ಸೂಕ್ತವಾದ ಮಾರುಕಟ್ಟೆಯೇ ಇಲ್ಲ. ಬೆಳೆಯುವುದು ರೈತ. ಆದರೆ ಅದರ ಲಾಭವನ್ನು ಪಡೆಯುವುದು ಮಧ್ಯವರ್ತಿಗಳು. ಇಂತಹ ವಾತಾವರಣದಲ್ಲಿ ಹಸಿರು ಕ್ರಾಂತಿ ನಡೆಯುವುದು ಸಾಧ್ಯವೇ? ಫಲವತ್ತಾದ ಭೂಮಿ, ಅದಕ್ಕೆ ಪೂರಕವಾಗಿ ನೀರು ಇತ್ಯಾದಿಗಳಿಲ್ಲದೆ ಹಸಿರುಕ್ರಾಂತಿ ನಡೆಸುವುದಾದರೂ ಹೇಗೆ? ಇಂದು ಬೇಸಿಗೆ ಬಂದಾಕ್ಷಣ ನದಿ ನೀರು ಮುಟ್ಟದಂತೆ ರೈತರಿಗೆ ಸರಕಾರ ಆದೇಶ ನೀಡುತ್ತದೆ. ಆದರೆ ಇದೇ ವೇಳೆ ಬೃಹತ್ ಕೈಗಾರಿಕೆಗಳು ಯಥೇಚ್ಛವಾಗಿ ನೀರನ್ನು ಬಳಸುತ್ತವೆ. ಈ ದೇಶದ ಕಾನೂನಿನ ಪ್ರಕಾರ ಮೊದಲು ಕುಡಿಯುವುದಕ್ಕೆ, ಆ ಬಳಿಕ ಕೃಷಿಗೆ ನೀರನ್ನು ಒದಗಿಸಬೇಕು. ಇಷ್ಟಾದ ಬಳಿಕವಷ್ಟೇ ಕೈಗಾರಿಕೆಗಳಿಗೆ ನೀರನ್ನು ಒದಗಿಸಬೇಕು. ಆದರೆ ಕುಡಿಯುವ ನೀರನ್ನೇ ಸರಕಾರ ಕೈಗಾರಿಕೆಗಳಿಗೆ ಒದಗಿಸಿ ಕೊಡುತ್ತಿವೆ. ಪೆಪ್ಸಿ, ಕೋಲಾಗಳು ಅಂತರ್ಜಲವನ್ನೇ ಹೀರಿ ತೆಗೆಯುತ್ತಿರುವ ಸಂದರ್ಭದಲ್ಲಿ, ಮೋದಿಯವರ ಹಸಿರುಕ್ರಾಂತಿ ಕೇವಲ ಭ್ರಾಂತಿಯಷ್ಟೇ. ಈ ದೇಶದ ಹಿತಾಸಕ್ತಿಯನ್ನು, ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ಆಹಾರ ಅಭದ್ರತೆಯ ಕುರಿತಂತೆ ಸರಕಾರ ಗಂಭೀರವಾಗಿ ಯೋಚಿಸಬೇಕಾಗಿದೆ. ವರ್ಷದಿಂದ ವರ್ಷಕ್ಕೆ ಖಾಲಿಯಾಗುತ್ತಿರುವ ಗೋದಾಮನ್ನು ಆಮದಿನ ಮೂಲಕ ತುಂಬಿಸುತ್ತಾ ಹೋದರೆ, ಅದು ದೇಶವನ್ನು ಪರಾವಲಂಬಿಯಾಗಿಸುತ್ತಾ ಹೋಗುತ್ತದೆ. ನಾವೇ ನಮ್ಮದೇಶದ ಸಾರ್ವಭೌಮತೆಯನ್ನು ಪರಕೀಯರ ಕೈಗೆ ಕೊಟ್ಟಂತಾಗುತ್ತದೆ. ಇನ್ನಾದರೂ ಸರಕಾರ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಕಡೆಗೆ ಮನ ಮಾಡಬೇಕು. ಮೋದಿಯವರು ತಮ್ಮ ವಿದೇಶ ಪ್ರಯಾಣಗಳಿಗೆ ಪೂರ್ಣ ವಿರಾಮ ಹಾಡಿ, ಈ ದೇಶದ ಕೃಷಿ ಭಾಗಗಳ ಕಡೆಗೆ ಪ್ರವಾಸ ಹೊರಡಬೇಕು.