ತೊಂದರೆಯೆಂದರೆ...
ಸಾಮಾನ್ಯವಾಗಿ ಮನುಷ್ಯನು ತನಗಾಗುವ ತೊಂದರೆಗಳ ಕುರಿತು ಕೊರಗುತ್ತಾನೆ, ವಿಷಾದಿಸುತ್ತಾನೆ ಇಲ್ಲವೇ ಸಿಟ್ಟಿಗೇಳುತ್ತಾನೆ. ಅನೇಕರಿಗೆ ಒಂದೇ ರೀತಿಯ ತೊಂದರೆಯಾದಾಗ ಹಾಗೆ ತೊಂದರೆಗೊಳಗಾದವರೆಲ್ಲ ಒಟ್ಟಾಗುವುದುಂಟು; ಅಥವಾ ಅವರ ಪೈಕಿ ಕೆಲವರು ಹೋರಾಡಿದರೆ ಇನ್ನುಳಿದವರು ಈ ಹೋರಾಟದ ಲಾಭ ಪಡೆಯುತ್ತಾರೆ. ಇಲ್ಲವೇ ತಮ್ಮ ತೊಂದರೆ ಪರಿಹಾರವಾದೀತೆಂದು ಆಶಿಸುತ್ತ ಫಲಶ್ರುತಿಯ ಲಾಭವನ್ನು ಕಾಯುತ್ತ ಕೂರುತ್ತಾರೆ. ಈ ತೊಂದರೆಗಳೆಲ್ಲ ಸಹಜವೇ ಎಂದು ಸುಮ್ಮನಿರುವವರೂ ಇದ್ದಾರೆ. ರಸ್ತೆ ಹದಗೆಟ್ಟರೆ, ನೀರು ಬಾರದಿದ್ದರೆ, ವಿದ್ಯುತ್ ಕೈಕೊಟ್ಟರೆ ಗೊಣಗಿ ಸುಮ್ಮನಿರುವ ವರ್ಗ ಒಂದಾದರೆ, ಗೊಣಗುತ್ತ ಯಾರಾದರೂ ಏನಾದರೂ ಮಾಡಿ ಎಂದು ಇತರರನ್ನು ಛೂ ಬಿಡುವ ವರ್ಗ ಇನ್ನೊಂದು; ತೊಂದರೆಯ ಪರಿಹಾರಕ್ಕೆ ಕೈ ಹಚ್ಚುವ ಮಂದಿ ಕೆಲವೇ ಜನ. ಅವರ ಸಮಯ, ಪರಿಶ್ರಮದ ಲಾಭ ಇತರರಿಗೆ.
ಇವರಲ್ಲಿ ಯಾರು ಸರಿ, ಯಾರು ತಪ್ಪು ಎಂದು ನಿರ್ಣಯಿಸುವುದು ನನ್ನ ಉದ್ದೇಶವಲ್ಲ. ತಾತ್ವಿಕವಾಗಿ, ಸೈದ್ಧಾಂತಿಕವಾಗಿ ಇವುಗಳಲ್ಲಿ ಯಾವೊಂದು ದೃಷ್ಟಿಕೋನದ ಪರವಾಗಲಿ ವಿರೋಧವಾಗಲಿ ವಾದವನ್ನು ಮಂಡಿಸ ಬಹುದು. ತಲೆ ಇದ್ದರೆ ತಲೆನೋವು ಹೇಗೆ ಸಹಜವೋ ಹಾಗೆಯೇ ಮನುಷ್ಯನಾಗಿ ಹುಟ್ಟಿದ ಮೇಲೆ ರೋಗರುಜಿನಗಳ ಹಾಗೆ, ಕೌಟುಂಬಿಕ ಸಮಸ್ಯೆಗಳ ಹಾಗೆ, ಸಾಮಾಜಿಕ ಸಮಸ್ಯೆಗಳೂ ಸಹಜವೇ ಅಲ್ಲವೇ? ಆದ್ದರಿಂದ ಇವುಗಳನ್ನು ಸಹಿಸುವುದನ್ನು ಕಲಿಯಬೇಕು, ನಂತರ ಈ ಸಹನೆಯೇ ರೂಢಿಯಾಗಿ ಯಾವ ತೊಂದರೆಯೂ ತೊಂದರೆಯೆಂದು ಅನ್ನಿಸಲಾರದು. ಇದು ಒಂದು ಹಂತದ ಪ್ರತಿಕ್ರಿಯೆ. ಇನ್ನೊಂದು ದಿಕ್ಕಿನಿಂದ ಯೋಚಿಸುವುದಾದರೆ ತೊಂದರೆಗಳು ತಮ್ಮಲ್ಲೇ ಪರಿಹಾರವನ್ನು ಅಳವಡಿಸಿಕೊಂಡಿರುತ್ತವೆಂದು ಹೇಳಬಹುದು. ಆದ್ದರಿಂದ ಅವು ತಾವಾಗಿ ಕಾಲಕ್ರಮೇಣ ಪರಿಹಾರವಾ ಗುತ್ತವೆ; ಇಲ್ಲವೇ ಯಾವನಾದರೊಬ್ಬ ಮಹಾನುಭಾವ ನಿಶ್ಚಿತ ಉದ್ದೇಶದ ಸಾಧನೆಗಾಗಿ ಅವತಾರವೆತ್ತಿ ಬರುತ್ತಾನೆ; ಈ ಬಗ್ಗಡವನ್ನೆಲ್ಲ ತೆಗೆದು ಸಮಸ್ಯೆಗಳ ಕೊಳವನ್ನು ತಿಳಿಗೊಳಿಸುತ್ತಾನೆ ಎಂದು ಕಾಯುತ್ತ ಕೂರಬಹುದು. ಇಲ್ಲಿಯೂ ಸಹನೆಗೆ ಕಾಲಮಿತಿಯಿರುತ್ತದೆ. ಪರಿಹಾರವಾಗದಿದ್ದರೆ ನಿರಾಶೆಯಿಂದ ಪರಿತಪಿಸಬೇಕಾಗುತ್ತದೆ.
ಮತ್ತೂ ಒಂದು ದಿಕ್ಕಿನಿಂದ ವಾದಿಸುವುದಾದರೆ - ಸಮಸ್ಯೆಗಳ ಪರಿಹಾರಕ್ಕಾಗಿ ಇನ್ನೊಬ್ಬರನ್ನು ಕಾಯುತ್ತ ಕೂರುವುದರಲ್ಲಿ ಅರ್ಥವಿಲ್ಲ. ನಾವೇ ಮಂದಿಯನ್ನು ಸಂಘಟಿಸಬೇಕು. ಯಾರೂ ಬರದಿದ್ದರೆ ನಾವೇ ಹೋರಾಡಬೇಕು. ಒಂದೋ ಮಹಾತ್ಮರಾಗುವುದು; ಇಲ್ಲವೇ ಹುತಾತ್ಮರಾಗುವುದು. ಯಶಸ್ಸು ಅಥವಾ ವೈಫಲ್ಯ. ಗೆಲುವಿನ ರೂವಾರಿಯಾಗಿ ಉಳಿಯುವುದು; ಅಥವಾ ದುರಂತ ನಾಯಕನಾಗಿ ಅಳಿಯುವುದು.
ಒಂದು ಕಾಲದಲ್ಲಿ ಒಳ್ಳೆಯವರದ್ದೇ ಒಂದು ವರ್ಗ; ಕೆಟ್ಟವರದ್ದೇ ಇನ್ನೊಂದು ವರ್ಗ ಎಂಬ ಕಪ್ಪು-ಬಿಳುಪು ಭಿನ್ನತೆ ಇತ್ತೇನೋ? ಗೊತ್ತಿಲ್ಲ. ಹೆಸರಿಸಬಹುದಾದ ಪುರಾಣ, ನೆನಪಿಸಬಹುದಾದ ಚರಿತ್ರೆಗಳಲ್ಲಿ ಎಲ್ಲಾ ತರಹದ ಜನರೂ ಇದ್ದರು. ತೊಂದರೆ ಕೊಡುವವರೂ ತೊಂದರೆಗೆ ಒಳಗಾಗು ವವರೂ ಇದ್ದರು. ಕತೆ-ಕಾವ್ಯ ಬರೆಯುವವರು, ಚರಿತ್ರೆಯನ್ನು ನಿರೂಪಿಸು ವವರು, ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಒಳ್ಳೆಯ ಹಾಗೂ ಕೆಟ್ಟ ವೌಲ್ಯಗಳನ್ನು ಕಟ್ಟಿಕೊಟ್ಟರು. ಆದರೂ ಸಮುದ್ರ ಮಥನದ ರಾಜಕೀಯದಲ್ಲಿ ರಾಕ್ಷಸರನ್ನು ಒಂದು ಕಡೆ, ದೇವತೆಗಳನ್ನು ಇನ್ನೊಂದು ಕಡೆಗಿಟ್ಟರು. ರಾಕ್ಷಸರ ಸಂಖ್ಯೆ ಭಾರೀ ದೊಡ್ಡ ಪ್ರಮಾಣದಲ್ಲಿದ್ದಂತೆ ಕಾಣಿಸುತ್ತದೆ. ಬಹುಮತ ಯಾವಾಗಲೂ ರಾಕ್ಷಸರದ್ದೇ. ಮೂವತ್ತಮೂರು ಕೋಟಿ ದೇವತೆಗಳೆದುರು ಅರುವತ್ತಾರು ಕೋಟಿ ದಾನವರು; ಅಥವಾ ಆಗಿನ ಸಮಕಾಲೀನ ಸಾಮಾಜಿಕ ವೌಲ್ಯಗಳಡಿ ಕೆಟ್ಟವರು ಅನ್ನಿಸಿಕೊಂಡವರದ್ದು. ಮಹಾಭಾರತ ಕಾಲದ ರಾಜಕೀಯದಲ್ಲಿ ಪಾಂಡವರು ಐವರು ಮತ್ತು ಅವರ ಸೇನೆ ಏಳು ಅಕ್ಷೋಹಿಣಿಯಾದರೆ, ಕೌರವರು ನೂರು ಮತ್ತು ಅವರ ಸೇನೆ ಹನ್ನೊಂದು ಅಕ್ಷೋಹಿಣಿ! ಈಗಿನ ರಾಜಕೀಯ ಪರಿಸ್ಥಿತಿ ಬೇರೆ: ಎಲ್ಲಾ ಪಕ್ಷಗಳಲ್ಲೂ ದೇವತೆಗಳೂ ರಾಕ್ಷಸರೂ ಇದ್ದಾರೆ. ಇಲ್ಲೂ ನನಗೊಂದು ಅಚ್ಚರಿ: ಅಮೃತವು ದೇವತೆಗಳಿಗೆ ಸಿಕ್ಕಿದರೂ ದೇವತೆಗಳ ತಳಿ ಅಭಿವೃದ್ಧಿಯಾದಂತಿಲ್ಲ. ಭಗವಂತ ಎಷ್ಟು ಸಲ ಅವತಾರವೆತ್ತಿ ಬಂದು ರಾಕ್ಷಸರನ್ನು ಅರ್ಥಾತ್ ದುಷ್ಟರನ್ನು ನಾಶಪಡಿಸಿದರೂ ರಾಕ್ಷಸರು ಎಲ್ಲ ಕಾಲಗಳಲ್ಲಿ ಇದ್ದೇ ಇರುತ್ತಾರೆ. ಭಗವಂತ ಆಗಾಗ ಬರುತ್ತಲೇ ಇರುತ್ತಾನೆ. ಹೀಗಾಗಿ ದಶಾವತಾರ ಸಿನೆಮಾ ಇನ್ನೊಂದು ತಲೆಮಾರಿಗೆ ಶತಾವತಾರವಾದರೆ ತಪ್ಪೇನಿಲ್ಲ. ಧರ್ಮಗ್ಲಾನಿಯಾದಾಗೆಲ್ಲ ನಮ್ಮ ದೇಶದಲ್ಲೇ ಭಗವಂತ ಅವತಾರವೆತ್ತುತ್ತಿದ್ದಾನೆಂದರೆ ಇಲ್ಲೇ ಹೆಚ್ಚು ಪಾಪಿಗಳಿದ್ದಾರೆಂದು ಅರ್ಥವೇ? ಒಂದು ರೀತಿಯಲ್ಲಿ ಇದೂ ಸರಿ. ತೊಂದರೆಯೆಂಬುದು ಸದಾ ಈ ಜಗತ್ತಿನಲ್ಲಿರಬೇಕು ಎಂದು ದೈವಸಂಕಲ್ಪವಿದ್ದಂತಿದೆ. ಎಲ್ಲ ದುಷ್ಟರೂ ಶಾಶ್ವತ ವಾಗಿ ನಾಶ ಹೊಂದಿದರೆ ಭಗವಂತನಿಗೇನು ಕೆಲಸ? ‘ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ’ ಎಂಬ ಭಗವಂತನ ನುಡಿಗೆ ಏನು ಅರ್ಥ ಉಳಿದೀತು? ಆದ್ದರಿಂದ ದೇವರು ಮತ್ತು ದುಷ್ಟರು ಒಂದು ಒಳ ಒಪ್ಪಂದ ಮಾಡಿಕೊಂಡಂತೆ ದುಷ್ಟರು ಹುಟ್ಟುತ್ತಲೇ ಇರಬೇಕು, ದೇವರು ಅವತಾರವೆತ್ತುತ್ತಲೇ ಇರಬೇಕು, ದುಷ್ಟರು ಸಾಯಬೇಕು, ಅವತಾರ ಸಮಾಪ್ತಿಯಾಗಲೇಬೇಕು. ಈ ಚಕ್ರ ಮುಂದುವರಿಯಬೇಕು.
ರಾವಣನು ಸೀತಾಪಹರಣ ಮಾಡಿದರೆ, ವಾಲಿ ರುಮೆಯನ್ನು ಇಟ್ಟುಕೊಂಡರೆ, ಕೌರವರು ಪಾಂಡವರನ್ನು ಕಾಡಿಗೆ ಅಟ್ಟಿದರೆ ತಪ್ಪೆಂದರು; ಇಲ್ಲವೇ ತಪ್ಪೆಂಬುದನ್ನು ನಿರೂಪಿಸಿದರು. ಆದರೆ ದೇವೇಂದ್ರ ಅಹಲ್ಯೆಯನ್ನು ವಂಚಿಸಿಯೂ ದೇವೇಂದ್ರನೇ ಆಗಿ ಉಳಿದದ್ದು, ರಾಮನು ಗರ್ಭಿಣಿ ಸೀತಾಮಾತೆಯನ್ನು ಕಾಡಿಗಟ್ಟಿದ್ದು, ವಿಷ್ಣು ತುಳಸಿಯ ಪಾತಿವ್ರತ್ಯವನ್ನು ಕೆಡಿಸಿದ್ದು, ಮಾಧವನ ರಾಧಾ ವಿಲಾಸ ಇಂತಹವನ್ನು ಇತ್ಯಾತ್ಮಕ ವೌಲ್ಯವೆಂಬಂತೆ ಪ್ರತಿಪಾದಿಸಿದರು. ಚರಿತ್ರೆಯಲ್ಲೂ ಅಷ್ಟೇ: ನಮ್ಮ ದೇಶ ಇನ್ನೊಂದು ದೇಶವನ್ನು ಸೋಲಿಸಿದರೆ, ಸ್ವಾಧೀನಪಡಿಸಿದರೆ ಅದು ವಿಜಯ. ಅದನ್ನೇ ಇನ್ನೊಂದು ದೇಶ ನಮಗೆ ಮಾಡಿದರೆ ಅದು ದೌರ್ಜನ್ಯ. ತೊಂದರೆಯ ನಿರೂಪಣೆ ಹೆಚ್ಚುಕಡಿಮೆ ಇದೇ ಸೂತ್ರದಲ್ಲಿರುತ್ತದೆ. ಆದರೆ ತೊಂದರೆಕೊಡುವವನೇ ದೊಡ್ಡವನು ಎಂದು ನನಗನ್ನಿಸತೊಡಗಿದೆ. ದಾನಕೊಡುವವನು ದೊಡ್ಡವನು, ಸ್ವೀಕರಿಸುವವನು ಸಣ್ಣವನು ಎಂಬ ಅಭಿಪ್ರಾಯವಿದೆ. ನಶ್ಯವನ್ನು ಕೊಡುವಾಗ ಮಾತ್ರ ಕೊಡುವವನ ಕೈ ಕೆಳಗಿರುತ್ತದಂತೆ; ಪಡೆದವವನ ಕೈ ಮೇಲಿರುತ್ತದಂತೆ. ರಾಮ ಅವತರಿಸಿದ್ದು ರಾವಣನನ್ನು ಕೊಲ್ಲಲು ಎಂದಾದರೆ ರಾವಣನೇ ದೊಡ್ಡವನು. ದೇವರೇ ಬರಬೇಕಾಯಿತು ಅವನ ಸಮಾಪ್ತಿಗೆ ಎಂದರ್ಥ. ಎಂದಿಗೂ ಅಷ್ಟೇ: ತೊಂದರೆ ಕೊಡುವವನ, ಕೊಡುವವರ ವಠಾರದ ಬಗ್ಗೆ ಆಡಳಿತದವರ ಅನುಕಂಪ ಹೆಚ್ಚು. ಸಜ್ಜನರನ್ನು ಅಯ್ಯೋ ಪಾಪ! ಎಂದು ಹೇಳಿ ನಡೆವವರ ಸಂಖ್ಯೆ ಹೆಚ್ಚು. ಉಪಕಾರ ಮಾಡಿದವನನ್ನು ಮರೆತರೂ ತೊಂದರೆ ಕೊಟ್ಟವನನ್ನು ಮಾತ್ರ ಮರೆಯಲಾರೆವು. ಬ್ಯಾಂಕಿನಿಂದ ಸಾಲ ಪಡೆದು ಕ್ಲಪ್ತ ಸಮಯಕ್ಕೆ ಬಡಿ ್ಡಸಹಿತ ಮರುಪಾವತಿಸಿದವನಿಗೆ ಯಾವ ರಿಯಾಯಿತಿ-ವಿನಾಯಿತಿಯೂ ಇಲ್ಲ. ಅದೇನಿದ್ದರೂ ಹಣ ಮರುಪಾವತಿಸದೇ ಇದ್ದವನಿಗೆ. ಅಸಲಾದರೂ ಕೊಡಿ ಎಂಬ ಅಹವಾಲಿನೊಂದಿಗೆ ಆತನೊಂದಿಗೆ ರಾಜೀ ಸೂತ್ರ. ಏನೂ ಮಾಡದಿರು ವುದಕ್ಕಿಂತ ಕೇಡು ಮಾಡುವುದು ಲೇಸು ಎಂಬರ್ಥದ ಉಕ್ತಿಯೊಂದು ಆಂಗ್ಲ ಭಾಷೆಯಲ್ಲಿದೆ. ಹೀಗೆ ತೊಂದರೆ ನೀಡುವುದು ಅಸ್ತಿತ್ವದ ಸಂಕೇತವಾಗುತ್ತದೆ. ಬೇಂದ್ರೆಯವರ ಕಾವ್ಯವನ್ನು ಅಣಕಿಸಿ ಬರೆದು ತೊಂದರೆ ಕೊಟ್ಟರು ಒಂದೇ, ಕೊಡದಿದ್ದರು ಒಂದೇ ಎಂದು ಸ್ಥಿತಪ್ರಜ್ಞರು ಅನ್ನಬಹುದು; ಅವರನ್ನು ಕ್ಷಮಿಸೋಣ.
ಬಹಳ ಸಲ ಮನುಷ್ಯ ತನಗೆ ಇತರರಿಂದಾಗುವ ತೊಂದರೆಗಳನ್ನು ಮಾತ್ರ ತೊಂದರೆಗಳೆಂದು ಹೇಳುತ್ತಾನೆ; ತನ್ನಿಂದ ಇತರರಿಗಾಗುವ ತೊಂದರೆಯನ್ನು ಅಲಕ್ಷಿಸುತ್ತಾನೆ. ನಮ್ಮ ಹರಿದಿನಗಳಲ್ಲಿ ಮೈಕಾಸುರನನ್ನು ಅಹರ್ನಿಶಿ ಆರ್ಭಟಿಸಲು ಅನುವು ಮಾಡಿಕೊಡುತ್ತೇವೆ; ಇತರರು ಸ್ವರವೇರಿಸಿದಾಗ ಅದನ್ನು ಹರಟೆಯೆಂದೋ ರಗಳೆಯೆಂದೋ ಕಾಟವೆಂದೋ ಹೇಳುತ್ತೇವೆ. (ಹರಟೆ, ರಗಳೆ ಇವೆಲ್ಲ ಸಾಹಿತ್ಯ ಸಂದರ್ಭಗಳಲ್ಲಿ ಬೇರೆಯೇ ಅರ್ಥವನ್ನು ನೀಡುತ್ತವೆ ಅಲ್ಲವೇ?) ಇನ್ನೊಬ್ಬರ ವಾಹನದ ಹಾರ್ನ್ ನಮ್ಮ ನಿದ್ದೆಗೆಡಿಸುತ್ತದೆ. ನಮ್ಮ ವಾಹನದ ಹಾರ್ನೂ ಹೀಗೆಯೇ ಸದ್ದು ಮಾಡಿದಾಗ ಅದು ಒಂದು ಸಾರ್ಥಕ ಉದ್ದೇಶವೆಂಬಂತೆ ಬಿಂಬಿಸುತ್ತೇವೆ.
ನಮ್ಮ ಮುದುಕರನ್ನು ಗಮನಿಸಿ. ಅವರಿಗೆ ಇಡೀ ಜೀವಮಾನದಲ್ಲಿ ಇಲ್ಲದ ಕುತೂಹಲ, ಸಂಶಯ, ವೃದ್ಧಾಪ್ಯದಲ್ಲಿ ಹುಟ್ಟಿಕೊಳ್ಳುತ್ತದೆ. ಅವರನ್ನು ಕಾರಿನಲ್ಲೋ ಬಸ್ಸಿನಲ್ಲೋ ಕರೆದುಕೊಂಡು ಹೋಗಿ: ಕಣ್ಣಿಗೆ ಬಿದ್ದ ಎಲ್ಲರನ್ನೂ ಎಲ್ಲವನ್ನೂ ಇದು ಯಾರು? ಅದು ಏನು? ಎಂದು ಕೇಳುತ್ತಾರೆ. ನೀವು ಎಷ್ಟು ಮತ್ತು ಏನು ಉತ್ತರ ಕೊಟ್ಟರೂ ಅವರಿಗೆ ತೃಪ್ತಿಯಾಗುವುದಿಲ್ಲ. ಮತ್ತೊಂದು ಪ್ರಶ್ನೆ ನಿಮಗೆ ಎದುರಾಗುತ್ತದೆ. ಹಾಗೆಯೇ ಅವರ ಶ್ರವಣ ಶಕ್ತಿ ಕಡಿಮೆಯಾದರಂತೂ ಸಮೀಪದಲ್ಲಿ ಯಾರು ಏನು ಮಾತನಾಡಿದರೂ ತನ್ನ ಕುರಿತೇ ಮಾತನಾಡಿದ್ದೆಂಬಂತೆ ವರ್ತಿಸುತ್ತಾರೆ. ತಮ್ಮಿಂದ ಇತರರಿಗೆ ತೊಂದರೆಯಾಗಬಾರದೆಂದು ಜಾಗ್ರತೆ ವಹಿಸುವವರು ಇತರರಿಗಿಂತ ಹೆಚ್ಚು ತೊಂದರೆ ನೀಡುತ್ತಾರೆ. ನಮ್ಮ ಮನೆಗೆ ಬಂದ ವೃದ್ಧರೊಬ್ಬರು ರಾತ್ರಿ ಬಾತ್ ರೂಮಿಗೆ ಹೋಗಬೇಕಾಗಿ ಬಂದಾಗ ಯಾರಿಗೂ ತೊಂದರೆಯಾಗಬಾರದೆಂದು ಒಬ್ಬರೇ ಹೋಗಿ ಮೆಟ್ಟಲಿನಲ್ಲಿ ಉರುಳಿ ಬಿದ್ದು ಮೂರುವಾರ ಆಸ್ಪತ್ರೆಯಲ್ಲಿರಬೇಕಾಗಿ ಬಂದಿತು. ನಮಗೆ ಹೇಳಬಹುದಿತ್ತಲ್ಲ? ಎಂದರೆ ಅವರು ಯಾಕೆ ಇನ್ನೊಬ್ಬರಿಗೆ ತೊಂದರೆ? ಎಂದು ಹೇಳಿದರು. ತೊಂದರೆ ಕೊಟ್ಟಿದ್ದರೆ ಇಷ್ಟೊಂದು ತೊಂದರೆಯಾಗುತ್ತಿರಲಿಲ್ಲ ಎಂದು ಯಾರಿಗೂ ಅನಿಸಿರಬೇಕು.ಈಗಿನ ತಲೆಮಾರಿನಲ್ಲಂತೂ ತೊಂದರೆ ನೀಡುವುದಕ್ಕೇ ಬದುಕುತ್ತೇವೇನೋ ಎಂಬಂತೆ ಯುವಜನ ವರ್ತಿಸುತ್ತಾರೆ. ಬೆಳಗ್ಗೆ ಆಫೀಸಿಗೆ ಬರುವವರು ಬಾಗಿಲಿ ನಲ್ಲಿ ಪ್ರವೇಶಿಸುವಾಗಲೇ ಎಕ್ಸ್ಯೂಸ್ ಮಿ ಎಂದು ಹೇಳಿ ನಂತರ ಗುಡ್ ಮಾರ್ನಿಂಗ್ ಎನ್ನುತ್ತಾರೆ. ಒಬ್ಬನೇ ಕುಳಿತವನೂ ಕೆಮ್ಮಬೇಕಾದರೆ ಎಕ್ಸ್ಯೂಸ್ ಮಿ ಎನ್ನುತ್ತಾನೆ. ಇವರು ಏನು ತಪ್ಪು ಮಾಡಿದರೋ ಇವರನ್ನೆಲ್ಲ ಯಾರು ಯಾಕೆ ಕ್ಷಮಿಸಬೇಕೋ ಗೊತ್ತಿಲ್ಲ. ಆದರೆ ಈ ಯುವಕರ ಮತ್ತು ಮುದುಕರ ಪ್ರವೃತ್ತಿಯನ್ನು ತಲೆಮಾರಿನ ಅಂತರದಲ್ಲೇ ಪರಿಗಣಿಸಬೇಕೇನೋ? ಆಗ ಯಾವುದು ಸರಿ, ಯಾವುದು ತಪ್ಪು ಎಂಬ ಗೋಜಲು ಪರಿಹಾರವಾದೀತು.
ನೂರೆಂಟು ನಿದರ್ಶನಗಳು ದಿನನಿತ್ಯ ಮತ್ತು ದಿನದುದ್ದಕ್ಕೂ ಕಣ್ಣೆದುರು ಸರಿಯುತ್ತವೆ. ಆದರೆ ಇವು ನಮ್ಮ ಅನುಕೂಲ-ಅನನುಕೂಲಗಳಿಗನುಗುಣವಾಗಿಯಷ್ಟೇ ನಿರೂಪಿತಗೊಳ್ಳುತ್ತವೆ. ಎಲ್ಲರೂ ಸಮದರ್ಶಿಗಳಾಗಬೇಕೆಂದು ನಿರೀಕ್ಷಿಸುವುದು ತಪ್ಪು. ಆದರೆ ಒಳ್ಳೆಯದಾಗಲಿ ಎಂದೂ ಎಲ್ಲರೂ ಒಳ್ಳೆಯವರಾಗಲಿ ಎಂದು ಆಶಿಸುವುದು ತಪ್ಪಲ್ಲ. ತನಗಾಗುವ ತೊಂದರೆ ಮತ್ತು ತಾನೆಸಗುವ ತೊಂದರೆ ಇವೆರಡರನ್ನೂ ಹೋಲಿಸುತ್ತ ಬದುಕಿದರೆ ವೈಯಕ್ತಿಕ ಬದುಕು ಸಾರ್ವಜನಿಕವಾಗಿ ಸಹ್ಯವಾದೀತು. ವ್ಯಕ್ತಿ ಸಾಮಾಜಿಕನಾಗುವುದೆಂದರೆ ಇದೇ ಇರಬಹುದು.