×
Ad

ಹೆಣ್ಣು ಭ್ರೂಣ ಹತ್ಯಾಕಾಂಡಕ್ಕೆ ಮೇನಕಾಗಾಂಧಿಯ ಹೊಸ ಯೋಜನೆ

Update: 2016-02-04 23:04 IST

ಪ್ರಾಣಿ, ಪಕ್ಷಿಗಳ ಪರವಾಗಿ ಧ್ವನಿಯೆತ್ತುತ್ತಾ ಬಂದಿರುವ ಕೇಂದ್ರ ಸಚಿವೆ, ಇಂದಿರಾಗಾಂಧಿಯ ಸೊಸೆ ಮೇನಕಾ ಗಾಂಧಿ ಈ ದೇಶದ ಮನುಷ್ಯರ ಪರವಾಗಿ ಮಾತನಾಡಿದ್ದು ಕಡಿಮೆ. ಹಿಂಸೆಯೆಂದರೆ ಪ್ರಾಣಿಗಳಿಗೆ ಮಾತ್ರ ಸಂಬಂಧಿಸಿದ್ದು ಎಂದು ಭಾವಿಸಿರುವ ಮೇನಕಾ, ಮನುಷ್ಯರ ಮೇಲೆ ನಡೆಯುವ ಹಿಂಸೆಯನ್ನು ಅಹಿಂಸೆಯ ಭಾಗ ಎಂದು ತಿಳಿದುಕೊಂಡು ಆಚರಿಸಿಕೊಂಡು ಬರುತ್ತಿರುವವರು. ಈ ದೇಶದ ಕೋಮುಗಲಭೆಗಳಲ್ಲಿ ಸಾಯುತ್ತಿರುವ ಅಮಾಯಕರ ಕುರಿತಂತೆ ಎಳ್ಳಷ್ಟು ಕಾಳಜಿಯನ್ನು ವ್ಯಕ್ತಪಡಿಸದ ಮೇನಕಾ, ತನ್ನ ಮಗ ವರುಣ್‌ಗಾಂಧಿ ಹಿಂಸೆಯ ಬೆಂಕಿಯನ್ನು ಹಚ್ಚುವಂತಹ ಮಾತುಗಳನ್ನಾಡುತ್ತಿರುವಾಗ ಈ ತಾಯಿ, ಕರಡಿ, ಬೆಕ್ಕು, ನಾಯಿಗಳಿಗೆ ಆಗುತ್ತಿರುವ ಅನ್ಯಾಯಗಳ ಕುರಿತಂತೆ ಮಾತನಾಡುತ್ತಿದ್ದವರು. ತನ್ನ ಮಗನಿಗೆ ಅಹಿಂಸೆಯನ್ನು ಮನದಟ್ಟು ಮಾಡಿಕೊಡುವಲ್ಲಿ ವಿಫಲರಾಗಿರುವ ಮೇನಕಾಗಾಂಧಿ, ಪ್ರಾಣಿಗಳ ಮೇಲೆ ತೋರಿಸುವ ದಯೆಯೇ ಅತ್ಯಂತ ಹಾಸ್ಯಾಸ್ಪದವಾದುದು. ಇವರ ಪರಿಸರವಾದ, ಪ್ರಾಣಿದಯೆಯ ಹಿಂದಿರುವ ಅಪ್ರಬುದ್ಧತೆ, ಅವಿವೇಕ ಈಗಾಗಲೇ ಸಾಕಷ್ಟು ಚರ್ಚೆಗೊಳಗಾಗಿವೆ. ಇದೀಗ ಅವರ ವಕ್ರದೃಷ್ಟಿ ಈ ದೇಶದ ಮಹಿಳೆಯರ ಮೇಲೆ ಬಿದ್ದಿದೆ. ಸ್ವತಃ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಮೇನಕಾ ಗಾಂಧಿ ಹೆಣ್ಣು ಭ್ರೂಣ ಹತ್ಯೆಗೊಂದು ಉಪಾಯವನ್ನು ಕಂಡು ಹಿಡಿದಿದ್ದು, ಅದನ್ನು ಅನುಷ್ಠಾನಕ್ಕೆ ತರಲು ಮುಂದಾಗಿದ್ದಾರೆ. ಅವರ ಪ್ರಕಾರ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು, ಎಲ್ಲ ಗರ್ಭಿಣಿಯರು ಗರ್ಭದಲ್ಲಿರುವ ಮಗು ಹೆಣ್ಣೋ, ಗಂಡೋ ಎನ್ನುವುದನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕಂತೆ. ಮತ್ತು ಗರ್ಭದಲ್ಲಿರುವ ಮಗು ಯಾವುದು ಎನ್ನುವುದನ್ನು ಗುರುತಿಸಿ, ಅದನ್ನು ವೈದ್ಯರು ದಾಖಲು ಪಡಿಸಬೇಕು ಮತ್ತು ಅದರ ರಕ್ಷಣೆಯ ಹೊಣೆ ಪಾಲಕರು ಮತ್ತು ವೈದ್ಯರದಂತೆ. ಲಿಂಗತಪಾಸಣೆ ಅಪರಾಧ ಎನ್ನುವ ಕಾನೂನನ್ನು ತೆಗೆದು ಹಾಕಿ, ಲಿಂಗ ತಪಾಸಣೆಯನ್ನು ಕಡ್ಡಾಯ ಮಾಡಬೇಕು ಎನ್ನುವುದು ಮೇನಕಾಗಾಂಧಿಯ ಸಲಹೆ. ಮೇನಕಾ ಗಾಂಧಿಯ ಈ ಸಲಹೆಗೆ ದೇಶದ ಮಹಿಳಾ ಸಮುದಾಯವೇ ಬೆಚ್ಚಿ ಬಿದ್ದಿದೆ. ನಿಜಕ್ಕೂ ಇದು ಮಹಿಳೆಯರನ್ನು ಉಳಿಸುವುದಕ್ಕಾಗಿರುವ ಸಲಹೆಯೋ, ಮಹಿಳಾ ಭ್ರೂಣ ಹತ್ಯಾಕಾಂಡಕ್ಕೆ ಅವರು ನೀಡಿರುವ ಹಸಿರು ನಿಶಾನೆಯೋ ಎಂದು ಅನುಮಾನ ಜನರಲ್ಲಿ ಹುಟ್ಟಿಕೊಂಡಿದೆ. ಮೇನಕಾ ಗಾಂಧಿ ಅಧಿಕಾರದಲ್ಲಿರದೇ ಇದ್ದಿದ್ದರೆ ಈ ಸಲಹೆಯನ್ನು ಕಸದ ಬುಟ್ಟಿಗೆ ಹಾಕಿ ಬಿಡಬಹುದಿತ್ತು. ಆದರೆ ಆಕೆ, ಈ ದೇಶದ ಮಹಿಳೆ ಮತ್ತು ಕುಟುಂಬ ಕಲ್ಯಾಣ ಖಾತೆಯಂತಹ ಮಹತ್ವದ ಹುದ್ದೆಯಲ್ಲಿದ್ದುಕೊಂಡು ಈ ಮಾತನ್ನಾಡಿದ್ದಾರೆ. ಲಿಂಗಪತ್ತೆ ಕಡ್ಡಾಯ ಗೊಳಿಸುವ ಕುರಿತಂತೆ ಆಲೋಚನೆಗಳಿವೆ ಎಂಬ ಮಾತುಗಳನ್ನಾಡಿರುವುದು, ಅಪಾಯ ತೀರಾ ಹತ್ತಿರದಲ್ಲಿದೆ ಎನ್ನುವುದರ ಸೂಚನೆಯಾಗಿದೆ. ಮೇನಕಾಗಾಂಧಿಯ ಯೋಜನೆಯ ಪ್ರಕಾರ ಗರ್ಭಿಣಿ, ವೈದ್ಯಕೀಯ ಕೇಂದ್ರದಲ್ಲಿ ಲಿಂಗತಪಾಸಣೆಯನ್ನು ಮಾಡಬೇಕು ಮತ್ತು ಮಗು ಗಂಡೋ, ಹೆಣ್ಣೋ ಎನ್ನುವುದನ್ನು ದಾಖಲಿಸಬೇಕು. ಇದಾದ ಬಳಿಕ ಆ ಮಗು ಹುಟ್ಟಿದ ಬಗ್ಗೆ, ಅದರ ಆರೋಗ್ಯ ಇತ್ಯಾದಿಗಳ ಬಗ್ಗೆ ವೈದ್ಯರು ಗಮನಿಸುತ್ತಿರಬೇಕು. ಇದು ಎಷ್ಟು ಅವಿವೇಕದ ಯೋಜನೆಯೆಂದರೆ, ಹೆಣ್ಣು ಭ್ರೂಣವನ್ನು ಕೊಲ್ಲುವುದಕ್ಕೆ ಸ್ವತಃ ಸರಕಾರವೇ ಅವಕಾಶ ಮಾಡಿಕೊಡುವುದಕ್ಕೆ ಹೊರಟಿದೆ. ಈ ಯೋಜನೆ ಮೇನಕಾ ಅವರ ಬುದ್ಧಿಮಟ್ಟಕ್ಕೆ ಪೂರಕವಾಗಿದೆಯಾದರೂ, ದೇಶದ ಮಹಿಳೆಯರ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿದೆ.
 
ಲಿಂಗ ತಪಾಸಣೆ ಅಪರಾಧವಾಗಿದ್ದರೂ, ಗುಟ್ಟಾಗಿ ತಪಾಸಣೆಗೈಯುವ ಕಾರ್ಯ ನಡೆಯುತ್ತಲೇ ಇದೆ. ಹೆಣ್ಣು ಭ್ರೂಣವನ್ನು ಕೊಂದು ಹಾಕುವ ಕೆಲಸವೂ ಗುಟ್ಟಾಗಿ ನಡೆಯುತ್ತಿದೆ. ಇವೆಲ್ಲವೂ ನಡೆಯುತ್ತಿರುವುದು ವೈದ್ಯರ ಸಹಕಾರದಿಂದ ಎನ್ನುವುದು ಅತ್ಯಂತ ಆತಂಕಕಾರಿ ಅಂಶವಾಗಿದೆ. ಆದರೆ ಹೀಗೆ ತಪಾಸಣೆ ಮಾಡುವವರ ಸಂಖ್ಯೆ ತೀರಾ ಕಡಿಮೆ. ಇದೀಗ ಸರಕಾರವೇ ಲಿಂಗ ತಪಾಸಣೆಗೆ ಅವಕಾಶ ಕೊಟ್ಟಿತು ಅಥವಾ ಕಡ್ಡಾಯ ಲಿಂಗ ತಪಾಸಣೆ ಮಾಡಲು ಆದೇಶ ನೀಡಿತು ಎಂದಿಟ್ಟುಕೊಳ್ಳೋಣ. ತನ್ನ ಹೊಟ್ಟೆಯಲ್ಲಿರುವ ಮಗು ಹೆಣ್ಣು ಎನ್ನುವುದು ಮೊದಲೇ ಗೊತ್ತಾಗಿ ಬಿಟ್ಟರೆ, ಗಂಡು ಮಕ್ಕಳ ಆಸೆಯಲ್ಲಿರುವ ಸ್ವಾರ್ಥಿಗಳು ಆಕೆಗೆ ನೀಡುವ ಮಾನಸಿಕ ದೌರ್ಜನ್ಯವನ್ನು ತಡೆಯಲು ಸರಕಾರದ ಬಳಿ ಯಾವ ಅಸ್ತ್ರವಿದೆ? ಹೆಣ್ಣು ಮಗುವನ್ನು ಹೊತ್ತ ಗರ್ಭಿಣಿಯ ಕುರಿತಂತೆ ಅನಾಸ್ಥೆಯನ್ನು ತೋರಿಸುವ ಸಾಧ್ಯತೆಯಿದೆ. ಸ್ವತಃ ತಾಯಿಯೇ ತನ್ನ ಗರ್ಭದಲ್ಲಿರುವ ಮಗುವಿನ ಬಗ್ಗೆ ಆಸಕ್ತಿಕಳೆದುಕೊಳ್ಳುವ ಸಾಧ್ಯತೆಯಿದೆ. ಅಥವಾ, ವೈದ್ಯರನ್ನು ಅಕ್ರಮವಾಗಿ ಬಳಸಿಕೊಂಡು ಮಗುವನ್ನು ಭ್ರೂಣ ಸಹಿತ ಇಲ್ಲವಾಗಿಸುವ ಸಾಹಸಕ್ಕೆ ಇಳಿಯುವ ಅಪಾಯವಿದೆ. ನಮ್ಮ ವೈದ್ಯಕೀಯ ರಂಗ ಅದೆಷ್ಟು ಭ್ರಷ್ಟವಾಗಿದೆ ಎನ್ನುವುದನ್ನು ಇಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಸಾಮೂಹಿಕ ಲಿಂಗ ತಪಾಸಣೆ ಅಂತಿಮವಾಗಿ ಸಾಮೂಹಿಕ ಭ್ರೂಣ ಹತ್ಯಾಕಾಂಡದಲ್ಲೇ ಮುಗಿಯುತ್ತದೆ. ಅದು ಸಾಮಾಜಿಕವಾಗಿ, ಕೌಟುಂಬಿಕವಾಗಿ ಬೀರುವ ಪರಿಣಾಮ ಅತ್ಯಂತ ಭೀಕರವಾದದ್ದಾಗಿದೆ. ಅಂತಿಮವಾಗಿ ಇದರ ಬಲಿಪಶು ತಾಯಂದಿರೇ ಆಗಿದ್ದಾರೆ. ಆದುದರಿಂದ ಲಿಂಗ ತಪಾಸಣೆ ಮಾಡುವುದನ್ನು ಅಪರಾಧವಾಗಿಸುವುದು ಮಾತ್ರವಲ್ಲ, ವಿಶೇಷ ಅಧಿಕಾರಿಗಳನ್ನು ಬಳಸಿಕೊಂಡು ಈಗಾಗಲೇ ಅಕ್ರಮವಾಗಿ ಲಿಂಗ ತಪಾಸಣೆ ಮಾಡುತ್ತಿರುವ, ಭ್ರೂಣ ಹತ್ಯೆ ಮಾಡುತ್ತಿರುವ ಕೇಂದ್ರಗಳ ಮೇಲೆ ಇನ್ನಷ್ಟು ತೀವ್ರ ದಾಳಿ ನಡೆಯಬೇಕು. ಹೆಣ್ಣಿನ ವಿದ್ಯಾಭ್ಯಾಸಕ್ಕೆ ಇನ್ನಷ್ಟು ಅನುಕೂಲಗಳನ್ನು ಮಾಡಿಕೊಡಬೇಕು. ಮೇನಕಾ ಗಾಂಧಿಯವರು ಸಚಿವ ಸ್ಥಾನದಲ್ಲಿ ಕುಳಿತುಕೊಂಡು ಕುಟುಂಬ ಕಲ್ಯಾಣ ಮಾಡದಿದ್ದರೂ ಪರವಾಗಿಲ್ಲ, ಕುಟುಂಬ ಹಂತಕರಾಗುವುದಕ್ಕೆ ಹೊರಡಬಾರದು. ಒಂದು ವೇಳೆ, ಅವರಿಗೆ ಈ ಖಾತೆಯನ್ನು ನಿಭಾಯಿಸಲು ಸಾಧ್ಯವಿಲ್ಲದೇ ಇದ್ದರೆ, ಇನ್ನಾವುದೋ ಪ್ರಾಣಿ ಕಲ್ಯಾಣ ಖಾತೆಯನ್ನು ತೆರೆದು ಅದಕ್ಕೆ ಅವರನ್ನು ಸಚಿವರನ್ನಾಗಿಸುವುದು ಒಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News