"ಮರದ ಮನುಷ್ಯನಿಗೆ " ಬಾಂಗ್ಲಾ ಸರಕಾರದಿಂದ ಚಿಕಿತ್ಸೆ
ಡಾಕಾ, ಫೆ ೫ : ಮೈಚರ್ಮ ಮರದ ರೆಂಬೆಗಳಂತೆ ಬೆಳೆಯುವ ವಿಚಿತ್ರ ರೋಗದಿಂದ ನರಳುತ್ತಿರುವ ಅಬುಲ್ ಬಜಂದರ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬಾಂಗ್ಲಾ ಸರಕಾರ ಭರಿಸಲಿದೆ. ಅಬುಲ್ ರನ್ನು ಇಂದು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಆರೋಗ್ಯ ಸಚಿವ ಮೊಹಮ್ಮದ್ ನಸೀಮ್ ಈ ವಿಷಯವನ್ನು ಪ್ರಕಟಿಸಿದರು. ಅಬುಲ್ ಅವರಿಗೆ ವಂಶವಾಹಿನಿಯ ವಿಚಿತ್ರ ರೋಗವಿದ್ದು ಇದರಲ್ಲಿ ಅವರ ಚರ್ಮ ಮರದ ಕೊರಡಿನಂತೆ ಬೆಳೆಯುತ್ತಾ ಹೋಗುತ್ತದೆ. ಇದನ್ನು ಸಾಮಾನ್ಯವಾಗಿ " ಮರದ ಮನುಷ್ಯ ಕಾಯಿಲೆ " ಎಂದು ಹೇಳುತ್ತಾರೆ. ಅಬುಲ್ ಕಳೆದ ೧೦ ವರ್ಷಗಳಿಂದ ಈ ಕಾಯಿಲೆಯಿಂದ ನರಳುತ್ತಿದ್ದಾರೆ.
ಅಬುಲ್ ಕಳೆದ ವರ್ಷ ಭಾರತಕ್ಕೆ ಚಿಕಿತ್ಸೆಗಾಗಿ ಬಂದಿದ್ದರೂ ಹಣದ ವ್ಯವಸ್ಥೆಯಾಗದೆ ಚಿಕಿತ್ಸೆ ಮಾಡಿಸಲು ಸಾಧ್ಯವಾಗಿರಲಿಲ್ಲ.
"ಅವರ ರಕ್ತ ಹಾಗು ಚರ್ಮದ ಅಂಶಗಳನ್ನು ಪರೀಕ್ಷೆಗಾಗಿ ಅಮೆರಿಕಕ್ಕೆ ಕಳಿಸಿದ್ದೇವೆ. ವರದಿಯ ಆಧಾರದಲ್ಲಿ ಬಾಂಗ್ಲಾದಲ್ಲೇ ಅವರಿಗೆ ಚಿಕಿತ್ಸೆ ನೀಡುತ್ತೇವೆ " ಎಂದು ಪ್ಲಾಸ್ಟಿಕ್ ಸರ್ಜನ್ ಪ್ರೊ. ಅಬುಲ್ ಕಲಾಮ್ ಅವರು ಹೇಳಿದ್ದಾರೆ.
ಈ ರೀತಿಯ ಕಾಯಿಲೆ ಅಬುಲ್ ಬಜಂದರ್ ಸಹಿತ ಇಡೀ ಜಗತ್ತಿನಲ್ಲಿ ಕೇವಲ ಮೂವರಿಗೆ ಇದೆ ಎಂದು ತಿಳಿದು ಬಂದಿದೆ.