×
Ad

ಮಾ. 5ರಂದು ಭೂಮಿಯ ಅತ್ಯಂತ ಸಮೀಪಕ್ಕೆ ಕ್ಷುದ್ರಗ್ರಹ

Update: 2016-02-06 23:47 IST

ವಾಶಿಂಗ್ಟನ್, ಫೆ. 6: ಸಣ್ಣ ಕ್ಷುದ್ರಗ್ರಹವೊಂದು ಮಾರ್ಚ್ 5ರಂದು ಭೂಮಿಯ ಅತ್ಯಂತ ಸಮೀಪಕ್ಕೆ ಬರುವ ನಿರೀಕ್ಷೆಯಿದೆ. ಆದಾಗ್ಯೂ, ಅದು ಭೂಮಿಗೆ ಯಾವುದೇ ತೊಂದರೆ ಮಾಡದೆ, 9,000ದಿಂದ 17,000 ಕಿ.ಮೀ. ದೂರದಿಂದ ತೆರಳಲಿದೆ.
‘2013 ಟಿಎಕ್ಸ್68’ ಎಂಬ ಹೆಸರಿನ ಕ್ಷುದ್ರಗ್ರಹ ತನ್ನ ದಾರಿಯಲ್ಲಿ ನಿಯಮಿತವಾಗಿಭೂಮಿಯ ಸಮೀಪದಲ್ಲಿ ಹಾದು ಹೋಗುತ್ತಾ ಇರುತ್ತದೆ ಹಾಗೂ ಕಳವಳ ಪಡಲು ಯಾವುದೇ ಕಾರಣವಿಲ್ಲ ಎಂದು ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬರೇಟರಿ (ಜೆಪಿಎಲ್) ಹೇಳಿದೆ.
 ಒಂದೇ ಒಂದು ಗಮನಾರ್ಹ ಸಂಗತಿ ಎಂದರೆ, ಈ ಕ್ಷುದ್ರ ಗ್ರಹವು ಚಂದ್ರನಿಗಿಂತಲೂ ಹೆಚ್ಚು ಭೂಮಿಯ ಸಮೀಪಕ್ಕೆ ಬರುತ್ತದೆ.
ಸುಮಾರು 100 ಅಡಿ ವ್ಯಾಸ ಹೊಂದಿರುವ ಈ ಆಕಾಶಕಾಯವು 2017ರ ಸೆಪ್ಟಂಬರ್‌ನಲ್ಲಿ ಮತ್ತೊಮ್ಮೆ ಭೂಮಿಯ ಸಮೀಪಕ್ಕೆ ಬರುತ್ತದೆ. ಅದು 2046 ಮತ್ತು 2097ರಲ್ಲಿಯೂ ಭೂಮಿಯ ಸಮೀಪದಿಂದ ಹಾದುಹೋಗುತ್ತದೆ. ಆದರೆ, ಈ ಎಲ್ಲ ಸಂದರ್ಭಗಳಲ್ಲಿ ಅದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ತೀರಾ ಕಡಿಮೆ.

2013ರಲ್ಲಿ, ಸುಮಾರು 65 ಅಡಿ ವ್ಯಾಸದ ಕ್ಷುದ್ರಗ್ರಹವೊಂದು ರಶ್ಯದ ಪಟ್ಟಣ ಚೆಲ್ಯಬಿನ್‌ಸ್ಕ್‌ನ ಆಕಾಶದ ವಾತಾವರಣದಲ್ಲಿ ಸಿಡಿದ ಘಟನೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಘಟನೆಯಲ್ಲಿ ಸೊತ್ತುಗಳಿಗೆ ನಷ್ಟವಾಗಿತ್ತು ಹಾಗೂ 1,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News