ಒಬ್ಬ ಕಕ್ಷಿದಾರರ ಅನಿಸಿಕೆ
ಇದು ಮೂರು ವರ್ಷಗಳ ಹಿಂದಿನ ಮಾತು. ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಗಿ ಅನಂತರ ಡಿಸ್‌ಚಾರ್ಜ್ ಆದ ಮೇಲೆ ಆರೋಗ್ಯ ಸುಧಾರಿಸಲು ಮಂಗಳೂರಿನ ನಂತೂರು ಬಳಿ ಇರುವ ಬಜ್ಜೋಡಿಯ ಆಶ್ರಯ ಪುನರ್ವಸತಿ ಕೇಂದ್ರಕ್ಕೆ ಕೆಲವು ದಿನಗಳ ಮಟ್ಟಿಗೆ ನಮ್ಮ ಸಂಬಂಧಿಯೊಬ್ಬರನ್ನು ಸೇರಿಸಿದ್ದೆ. ಎಲ್ಲ ವಯೋಮಾನದವರು ಸೇರಿದಂತೆ ಸುಮಾರು 40-50ರಷ್ಟು ಮಂದಿ ಅಲ್ಲಿ ವಾಸಿಸುತ್ತಿದ್ದರು. ತಾನು ಮುಂಬೈಯ ನರ್ಸಿಂಗ್ ಕಾಲೇಜೊಂದರಲ್ಲಿ ನಿವೃತ್ತ ಪ್ರಾಂಶುಪಾಲನಾಗಿದ್ದು ಆಶ್ರಯ ಕೇಂದ್ರದಲ್ಲಿನ ಅಸ್ವಸ್ಥರ ಆರೈಕೆ ಮಾಡುವುದರಲ್ಲಿ ತನಗೆ ಪರಿಣಿತಿ ಇದೆಯೆಂದು ಆ ಕೇಂದ್ರದ ಸ್ಥಾಪಕ ಬಿಂಬಿಸಿಕೊಳ್ಳುತ್ತಿದ್ದ ಕಾರಣ ಎಲ್ಲರಿಗೂ ಆತನ ಮೇಲೆ ಸಂಪೂರ್ಣ ಭರವಸೆಯಿತ್ತು. ಆ ಕೇಂದ್ರದ ಸ್ಥಾಪನೆಯ ಹಿಂದೆ ಬರೇ ದುಡ್ಡು ಗಳಿಕೆಯ ಉದ್ದೇಶವಿತ್ತೆಂದು ಎಲ್ಲರಿಗೂ ತಿಳಿಯುವಂತಾದದ್ದು ಆತನ ಕಿರುಕುಳ ತಡೆಯಲಾರದೇ ರಾತ್ರೋರಾತ್ರಿ ಯಾರಿಗೂ ಕಾಣದಂತೆ ಅಲ್ಲಿದ ಒಬ್ಬ ಹುಡುಗಿ ಕಂಪೌಂಡ್ ಗೋಡೆ ಹಾರಿ ಅಲ್ಲಿಂದ ತಪ್ಪಿಸಿಕೊಂಡ ಮೇಲೆ. ನಂತರ ಈ ಕುರಿತು ನೆರೆಹೊರೆಯವರಿಂದ ಸಮಾಜ ಕಲ್ಯಾಣ ಇಲಾಖೆಯ ಗಮನಕ್ಕೆ ಬಂದು ಇಲಾಖೆ ಅಲ್ಲಿನ ನಿವಾಸಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೇಂದ್ರವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತು. ಆಗ ನಾನು ಆ ಕೇಂದ್ರದ ಸ್ಥಾಪಕನನ್ನು ಸಂಪರ್ಕಿಸಿ ನಮ್ಮ ಸಂಬಂಧಿಯನ್ನು ಅಲ್ಲಿ ಸೇರ್ಪಡೆಗೊಳಿಸಲು ನೀಡಿದ ಮುಂಗಡ ಹಣ ರೂಪಾಯಿ ಐವತ್ತು ಸಾವಿರದಲ್ಲಿ ನಮ್ಮ ಸಂಬಂಧಿ ವಾಸ್ತವ್ಯಕ್ಕಿದ್ದ ಆರು ದಿನಗಳ ವೆಚ್ಚ ಕಳೆದು ಉಳಿದ ಹಣ ವಾಪಾಸು ನೀಡಲು ಕೇಳಿದೆ. ಆರು ದಿನಗಳಿಗೆ ಏಳು ಸಾವಿರ ರೂಪಾಯಿಗಳ ವೆಚ್ಚವನ್ನು ತೋರಿಸಿ ಉಳಿದ ನಾಲ್ವತ್ಮೂರು ಸಾವಿರ ರೂಪಾಯಿಗಳಿಗೆ ಬ್ಯಾಂಕ್ ಚೆಕ್ ಆತ ನೀಡಿದ. ಆದನ್ನು ಬ್ಯಾಂಕಿಗೆ ನೀಡಿದಾಗ ಅದು ಮೂರು ಬಾರಿಯೂ ಬೌನ್ಸ್ ಆದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಕೋರ್ಟ್ ಮೂಲಕ ಪ್ರಕರಣ ಶೀಘ್ರ ವಿಲೇವಾರಿ ಆಗುವುದೆಂದು ಪೊಲೀಸರು ತಿಳಿಸಿದಂತೆ ಪರಿಚಯದ ವಕೀಲರೊಬ್ಬರನ್ನು ಸಂಪರ್ಕಿಸಿದೆ. ಆ ವಕೀಲರು ಹಣದ ಪಾವತಿಗಾಗಿ ಆತನಿಗೆ ನೋಟಿಸ್ ಕಳುಹಿಸಿದರು. ಅದಾಗಲೇ ಬಹುಶಃ ಆತ ವಿಳಾಸ ಬದಲಿಸಿದ ಕಾರಣ ನೋಟಿಸ್ ವಾಪಾಸು ಬಂತು. ಆನಂತರ ವಕೀಲರು ಕೋರ್ಟ್‌ನಲ್ಲಿ ಆತನ ವಿರುದ್ಧ ದಾವೆ ದಾಖಲಿಸಿ ಕೋರ್ಟ್ ನೋಟಿಸ್ ಕಳುಹಿಸಿದರು. ಆದು ಕೂಡಾ ವಾಪಾಸ್ ಬಂತು. ಈ ಮೂರು ವರ್ಷಗಳ ಅವಧಿಯಲ್ಲಿ ಕೋರ್ಟ್ ಹಿಯರಿಂಗ್ ನಡೆದದು ಬರೀ ಮೂರು ನಾಲ್ಕು ಬಾರಿ ಮಾತ್ರ. ಕೇಂದ್ರದ ಸ್ಥಾಪಕ ಆರೋಪಿಗೆ ಲಾಯರ್ ನೋಟಿಸ್ ಕೊಡಲು ಒಮ್ಮೆ ಮತ್ತು ಕೋರ್ಟ್ ಕೇಸು ದಾಖಲಿಸಲೆಂದು ಎರಡು ಬಾರಿ ಪೂರ್ತಿ ಶುಲ್ಕವನ್ನು ನನ್ನಿಂದ ಪಡೆಯಲಾಗಿದೆ. ಈಗ ಆ ವಕೀಲರ ಧೋರಣೆ ಬೇರೆಯಾಗಿದೆ. ಆರೋಪಿಯ ಸರಿಯಾದ ವಿಳಾಸ ಹುಡುಕಿ ತಂದರೆ ಮಾತ್ರ ಕೋರ್ಟ್ ಕೇಸು ನಿಲ್ಲುತ್ತದೆ. ಇಲ್ಲವಾದಲ್ಲಿ ಕೇಸು ಬಿದ್ದು ಹೋಗುತ್ತದೆ ಎಂದು ಹೇಳಿ ಆರೋಪಿಯನ್ನು ಪತ್ತೆ ಹಚ್ಚುವ ಕೆಲಸಕ್ಕೆ ಅವರು ನನ್ನನ್ನೇ ಹೊಣೆ ಮಾಡುತ್ತಾರೆ. ಆರೋಪಿ ಸ್ಥಾನದಲ್ಲಿರುವವರು ಯಾವಾಗಲೂ ವಿಳಾಸ ಬದಲಿಸುತ್ತಲೇ ಇರಿತ್ತಾರೆ. ಅವರನ್ನು ಪತ್ತೆ ಹಚ್ಚುವುದು ಪೊಲೀಸರ ಕೆಲಸವೆಂಬುದು ಸಾಮಾನ್ಯ ಜ್ಞಾನ. ಹೀಗಿರುವಾಗ ಆರೋಪಿಯ ಸರಿಯಾದ ವಿಳಾಸ ಹುಡುಕಲು ನನ್ನನ್ನೇ ಹೊಣೆ ಮಾಡುವ ಈ ವಕೀಲರ ಧೋರಣೆ ಅರ್ಥವಾಗುವುದಿಲ್ಲ. ಇದರಲ್ಲಿ ಸಂತ್ರಸ್ತರ ಕುರಿತು ಮಾನವೀಯತೆ ಕಾಳಜಿಯ ಬದಲು ಅವರ ನಿರ್ಲಕ್ಷ ಎದ್ದು ಕಾಣುತ್ತದೆ ಎಂದು ನನ್ನ ಗ್ರಹಿಕೆ.