×
Ad

ಪಠಾಣ್‌ಕೋಟ್‌ನಲ್ಲಿ ಸತ್ತ ಉಗ್ರರು ಎಷ್ಟು?

Update: 2016-02-08 23:58 IST

ಇನ್ನೂ ನಿವಾರಣೆಯಾಗದ ಗೊಂದಲ

ಹೊಸದಿಲ್ಲಿ,ಫೆ.8: ಪಠಾಣ್ ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿಯ ವೇಳೆ ಎನ್‌ಎಸ್‌ಜಿ ನಡೆಸಿದ ಕಾರ್ಯಾಚರಣೆಯಲ್ಲಿ ಸತ್ತ ಉಗ್ರರು ಎಷ್ಟು ?ನಾಲ್ಕು ಅಥವಾ ಆರು ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇನ್ನೂ ಈ ಗೊಂದಲವನ್ನು ನಿವಾರಿಸಿಲ್ಲ.
 ಎನ್‌ಐಎ ಸತ್ತ ಉಗ್ರರ ಸಂಖ್ಯೆಯ ಬಗ್ಗೆ ಅನುಮಾನದಿಂದ ನೋಡುವಂತಾಗಿದೆ.ಮೊದಲ ಹಂತದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಎರಡನೆ ಹಂತದ ಕಾರ್ಯಾಚರಣೆಯ ವೇಳೆ ಇನ್ನಿಬ್ಬರು ಉಗ್ರರನ್ನು ಕೊಲ್ಲಲಾಯಿತು ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹರ್ಶಿ ಮತ್ತು ಏರ್ ಮಾರ್ಷಲ್ ಅನಿಲ್ ಖೋಸ್ಲಾ ಮಾಹಿತಿ ನೀಡಿದ್ದರು. ಆದರೆ ನಾಲ್ವರು ಉಗ್ರರನ್ನು ಕೊಂದಿರುವ ಬಗ್ಗೆ ಸಾಕ್ಷ್ಯಾಧಾರಗಳಿವೆ.ಎರಡನೆ ಹಂತದ ಕಾರ್ಯಾಚರಣೆ ನಡೆದ ವಾಯುನೆಲೆಯ ಕಟ್ಟಡದ ನೆಲಅಂತಸ್ತಿನಲ್ಲಿ ಕೇವಲ ಬೂದಿ ಸಿಕ್ಕಿದೆ.ಇದು ಸುಟ್ಟು ಹೋದ ಉಗ್ರರ ದೇಹದ ಬೂದಿ ಇರಬಹುದು ಎಂಬ ಗುಮಾನಿಯ ಮೇರೆಗೆ ಬೂದಿಯನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಡಿಎನ್‌ಎ ಪರೀಕ್ಷೆಯ ವರದಿಯನ್ನು ತನಿಖಾಧಿಕಾರಿಗಳು ಎದುರು ನೋಡುತ್ತಿದ್ದಾರೆ.
  ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿರುವ ಪಂಜಾಬ್‌ನ ಪೊಲೀಸ್ ಅಧಿಕಾರಿ ಸಲ್ವಿಂದರ್ ಸಿಂಗ್, ಅವರ ಸ್ನೇಹಿತ ರಾಜೇಶ್ ವರ್ಮ ,ಬಾಣಸಿಗ ಮದನ್ ಗೋಪಾಲ್ ಹೊಸ ವರ್ಷದ ಮುನ್ನಾದಿನ ನಾಲ್ವರು ಉಗ್ರರು ಅಡ್ಡಗಟ್ಟಿ ವಾಹನದ ಸಮೇತ ಅಪಹರಿಸಿದ್ದರು ಎಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು.ಈ ಕಾರಣದಿಂದಾಗಿ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿದ ತಂಡದಲ್ಲಿ ಕೇವಲ ನಾಲ್ವರು ಉಗ್ರರಿದ್ದರು.ಆರು ಉಗ್ರರು ಇದ್ದರು ಎನ್ನುವುದಕ್ಕೆ ಪುರಾವೆ ಇಲ್ಲ.

ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಈ ವರೆಗೆ ಕಲೆ ಹಾಕಿರುವ ಸಾಕ್ಷ್ಯಾಧಾರಗಳನ್ನು ಮರು ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ ಯೋಚಿಸಿದ್ದು,ಲಭ್ಯ ಮಾಹಿತಿಯ ಪ್ರಕಾರ ಪಟಾಣ್‌ಕೋಟ್‌ನಲ್ಲಿ ಕೇವಲ ನಾಲ್ವರು ಉಗ್ರರನ್ನು ಕೊಲ್ಲಲಾಗಿದೆ ಎಂದು ಎನ್‌ಐಎ ಅಂತಿಮ ನಿರ್ಧಾರಕ್ಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News