×
Ad

‘ಸ್ತನ ತೆರಿಗೆ’ ವಿರುದ್ಧ ಬಂಡೆದ್ದ ನಂಗೆಲಿ

Update: 2016-02-09 23:18 IST

19ನೆ ಶತಮಾನದಲ್ಲಿ ತಿರುವನಂತಪುರದಲ್ಲಿ ಮಹಿಳೆಯರನ್ನು ನಿಕೃಷ್ಟವಾಗಿ ಕಾಣುವ ಅನಾಗರಿಕ ಮತ್ತು ಕ್ರೂರ ಕಾನೂನೊಂದಿತ್ತು. ಮುಲಕ್ಕರಮ್ ಅಥವಾ ‘ಸ್ತನ ತೆರಿಗೆ’ ಎಂದು ಕರೆಯಲ್ಪಡುತ್ತಿದ್ದ ತೆರಿಗೆಯಲ್ಲಿ ತಿರುವನಂತಪುರದ ದಲಿತ ಮಹಿಳೆಯರು ತಮ್ಮ ಸ್ತನಗಳ ಗಾತ್ರಕ್ಕನುಗುಣವಾಗಿ ತೆರಿಗೆ ಪಾವತಿಸಬೇಕಿತ್ತು. ಈ ಕಾನೂನಿನಲ್ಲಿ ದಲಿತ ಮಹಿಳೆಯರು ತಮ್ಮ ಸ್ತನಗಳನ್ನು ಮುಚ್ಚಲು ನಿಷೇಧವಿದ್ದ ಕಾರಣ ಅತ್ಯಂತ ಹೀನಾಯ ರೀತಿಯಲ್ಲಿ ಅವರನ್ನು ಗುರುತಿಸುವಂತೆ ಮಾಡುವ ಮೂಲಕ ಅವರ ನೋವಿಗೆ ಮತ್ತಷ್ಟು ಬರೆಯೆಳೆಯಲಾಗಿತ್ತು. ಮಹಿಳೆಯರು ಆಭರಣ ಧರಿಸುವ ಹಕ್ಕು ಮತ್ತು ಪುರುಷರು ಮೀಸೆ ಬೆಳೆಸುವ ಹಕ್ಕಿನಂತಹ ಕ್ಷುಲ್ಲಕ ವಿಷಯಗಳ ಮೇಲೂ ತೆರಿಗೆ ವಿಧಿಸುವ ಮತ್ತು ಅನಾಗರಿಕ ಕಾನೂನುಗಳನ್ನು ತರುವ ಮೂಲಕ ಕೆಳಜಾತಿಯವರು ಸದಾ ಸಾಲದಲ್ಲೇ ಉಳಿಯುವಂತೆ ಮಾಡಿ ಮೇಲ್ದರ್ಜೆಯ ಆಡಳಿತವು ಅವರನ್ನು ನಿಯಂತ್ರಿಸುತ್ತಿತ್ತು. ಇಂತಹ ದಿಕ್ಕುತೋಚದ ಸಮಯದಲ್ಲಿ ನಂಗೆಲಿ ಎಂಬ ಓರ್ವ ಮಹಿಳೆ ಒಡ್ಡಿದ ಬಹಿರಂಗ ಸವಾಲು, ಸರಳ ಆದರೂ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಮೂಲಕ ಸ್ತನ ತೆರಿಗೆಯನ್ನು ತೊಡೆದುಹಾಕುವಲ್ಲಿ ನೆರವಾಯಿತು. ಚೆರ್ತಾಲದಲ್ಲಿ ವಾಸಿಸುತ್ತಿದ್ದ ಏಳವ ಸಮುದಾಯಕ್ಕೆ ಸೇರಿದ್ದ ನಂಗೆಲಿಯ ಕುಟುಂಬಕ್ಕೆ ವಿಧಿಸಲಾಗಿದ್ದ ತೆರಿಗೆಯನ್ನು ಪಾವತಿಸುವ ಶಕ್ತಿಯಿರಲಿಲ್ಲ.


ಬಂಡಾಯದ ಮೊದಲ ಹಂತವೆಂಬಂತೆ ನಂಗೆಲಿ, ಕೇಳಿದಾಗಲೆಲ್ಲಾ ತನ್ನ ಸ್ತನವನ್ನು ತೋರಿಸುವ ಪ್ರಕ್ರಿಯೆಗೆ ನಿರಾಕರಿಸಿದಳು. ತೆರಿಗೆ ಸಂಗ್ರಾಹಕರು ತಮ್ಮ ಬಾಕಿ ಮೊತ್ತವನ್ನು ಪಡೆಯಲು ಆಕೆಯ ಮನೆಯ ಬಳಿಗೆ ಬಂದಾಗ ನಂಗೆಲಿ ಧೈರ್ಯದಿಂದ ಅವರಿಗೆ ತನ್ನ ಕೊನೆಯ ಏಟನ್ನು ನೀಡಿದಳು. ತನ್ನ ಸ್ತನವನ್ನೇ ಕತ್ತರಿಸಿದ ಆಕೆ ಯಾವುದೇ ಅಳುಕಿಲ್ಲದೆ ಅದನ್ನು ಬಾಳೆಯ ಎಲೆಯಲ್ಲಿಟ್ಟು ತೆರಿಗೆ ಸಂಗ್ರಹಕಾರರ ಮುಂದಿಟ್ಟಳು. ನಂಗೆಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ತೆರಿಗೆ ಸಂಗ್ರಾಹಕರು ಭಯದಿಂದ ಅಲ್ಲಿಂದ ಓಟ ಕಿತ್ತಿದ್ದರು. ಸುದ್ದಿ ಇಡೀ ರಾಜ್ಯದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಇನ್ನೊಂದೆಡೆ ಪ್ರತಿಭಟನೆಯ ಮುಂದುವರಿದ ಭಾಗವೆಂಬಂತೆ ಆಕೆಯ ಗಂಡ ಹೊತ್ತಿ ಉರಿಯುತ್ತಿದ್ದ ಆಕೆಯ ಚಿತೆಗೆ ಹಾರಿ ಆತ್ಮಾಹುತಿ ಮಾಡಿಕೊಂಡ. ಇದು ಮಹಿಳೆಯ ಬದಲಾಗಿ ಪುರುಷನೊಬ್ಬ ಸತಿ ಸಹಗಮನ ಪದ್ಧತಿಗೆ ಒಳಗಾದ ಮೊದಲ ದಾಖಲಾದ ಪ್ರಕರಣವಾಗಿದೆ. ಪಣಕ್ಕೆ ಬಿದ್ದು ತನ್ನ ಸ್ವಂತ ದೇಹದ ಭಾಗವನ್ನೇ ತುಂಡರಿಸಿದ ನಂಗೆಲಿಯ ಸಾವಿನ ಪರಿಣಾಮವಾಗಿ ತಿರುವನಂತಪುರ ಆಡಳಿತ ಸ್ತನ ತೆರಿಗೆಯನ್ನು ರದ್ದು ಮಾಡಿತು. ಆಕೆಯ ಗೌರವಾರ್ಥವಾಗಿ ಆಕೆ ಜೀವಿಸಿದ್ದ ಊರಿಗೆ ಮುಲಚಿಪರಂಬು (ಸ್ತನಗಳುಳ್ಳ ಮಹಿಳೆಯ ಭೂಮಿ) ಎಂದು ಹೆಸರಿಡಲಾಯಿತು.

Writer - ಆರುಶಿ ಕಪೂರ್

contributor

Editor - ಆರುಶಿ ಕಪೂರ್

contributor

Similar News