ಸಿರಿಯ: ಲಕ್ಷಾಂತರ ನಾಗರಿಕರು ಹಸಿವಿನಿಂದ ಸಾಯುವ ಅಪಾಯದಲ್ಲಿ - ವಿಶ್ವಸಂಸ್ಥೆ ಎಚ್ಚರಿಕೆ

Update: 2016-02-09 18:17 GMT

ಜಿನೇವ, ಫೆ. 9: ಸಿರಿಯದ ಸರಕಾರಿ ಪಡೆಗಳು ಬಂಡುಕೋರರ ನಿಯಂತ್ರಣದಲ್ಲಿರುವ ಅಲೆಪ್ಪೊ ನಗರವನ್ನು ಸುತ್ತುವರಿದರೆ ಲಕ್ಷಾಂತರ ನಾಗರಿಕರು ಆಹಾರ ಸಾಮಗ್ರಿಗಳ ಪೂರೈಕೆಯಿಂದ ವಂಚಿತರಾಗುತ್ತಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ಎಚ್ಚರಿಸಿದೆ.

ರಶ್ಯದ ವಾಯು ದಾಳಿಗಳು ಮತ್ತು ಇರಾನ್ ಮತ್ತು ಲೆಬನಾನ್‌ನ ಹಿಝ್ಬುಲ್ಲಾ ಹೋರಾಟಗಾರರ ಬೆಂಬಲದೊಂದಿಗೆ ಅಲೆಪ್ಪೊದ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸಿರಿಯದ ಸರಕಾರಿ ಪಡೆಗಳು ಬೃಹತ್ ಹೋರಾಟ ಆರಂಭಿಸಿವೆ. ಇಲ್ಲಿನ ಕೆಲವು ಪ್ರದೇಶಗಳು ಸರಕಾರಿ ಪಡೆಗಳ ನಿಯಂತ್ರಣದಲ್ಲಿದ್ದರೆ, ಇನ್ನು ಹಲವು ಪ್ರದೇಶಗಳು ಹಲವು ವರ್ಷಗಳಿಂದ ಬಂಡುಕೋರರ ನಿಯಂತ್ರಣದಲ್ಲಿವೆ.

ಐದು ವರ್ಷಗಳ ಆಂತರಿಕ ಯುದ್ಧದಲ್ಲಿ ಈಗಾಗಲೇ 2.5 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 1.1 ಕೋಟಿ ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಅಲೆಪ್ಪೊ ಯುದ್ಧವು ಐದು ವರ್ಷಗಳ ಆಂತರಿಕ ಸಂಘರ್ಷದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೈಲುಗಲ್ಲಾಗಿದೆ.

 ಅಲೆಪ್ಪೊ ನಗರವನ್ನು ಸರಕಾರಿ ಪಡೆಗಳು ಸುತ್ತುವರಿದರೆ, ನಗರದ ಬಂಡುಕೋರರ ನಿಯಂತ್ರಣದ ಭಾಗಗಳಲ್ಲಿರುವ ನಾಗರಿಕರು ತಾವು ಹೊಂದಿರುವ ಕೊನೆಯ ಬಾಹ್ಯ ಜಗತ್ತಿನ ಕೊಂಡಿಯನ್ನು ಕಳೆದುಕೊಳ್ಳಲಿದ್ದಾರೆ ಎಂಬ ಆತಂಕವನ್ನು ವಿಶ್ವಸಂಸ್ಥೆ ವ್ಯಕ್ತಪಡಿಸಿದೆ. ನಗರದ ಬಂಡುಕೋರ ನಿಯಂತ್ರಣದ ಭಾಗಗಳು ಟರ್ಕಿಯೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಅಲ್ಲಿನ ಗಡಿದಾಟು ಈ ಭಾಗಗಳಿಗೆ ಹೊರ ಜಗತ್ತಿನ ಸಂಪರ್ಕವನ್ನು ಕಲ್ಪಿಸಿದೆ.

ಒಂದು ಕಾಲದಲ್ಲಿ ಅಲೆಪ್ಪೊದಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News