×
Ad

ಗೋಹತ್ಯೆ ನಿಷೇಧ ಕಾಯ್ದೆ:ಬಿಜೆಪಿಯೊಳಗಿನ ಗೊಂದಲ

Update: 2016-02-11 23:17 IST

ಗೋಹತ್ಯೆ ನಿಷೇಧ ಕಾಯ್ದೆ ಮತ್ತೆ ಮತ್ತೆ ಚರ್ಚೆಯಾಗುತ್ತಿದೆ. ಈ ದೇಶದ ಬಹುಸಂಖ್ಯಾತರ ಆಹಾರವಾಗಿರುವ ಗೋಮಾಂಸ ನಿಷೇಧದ ಕುರಿತಂತೆ ಸ್ವತಃ ನಿಷೇಧ ಮಾಡಿದವರಲ್ಲಿ ಉಂಟಾಗಿರುವ ಗೊಂದಲಗಳು, ಈ ಕಾಯ್ದೆ ನಿಜಕ್ಕೂ ವಾಸ್ತವಕ್ಕೆ ಒಂದಿಷ್ಟಾದರೂ ಹತ್ತಿರವಿದೆಯೇ? ಎನ್ನುವ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿಕೊಳ್ಳುವಂತೆ ಮಾಡಿದೆ. ಭಾವನಾತ್ಮಕ ನಿರ್ಧಾರಗಳು ಹೇಗೆ ವಾಸ್ತವ ಬದುಕನ್ನು ಭಗ್ನಗೊಳಿಸಬಹುದು ಎನ್ನುವುದಕ್ಕೆ ಗೋ ಹತ್ಯೆ ನಿಷೇಧ ಕಾನೂನು ಅತ್ಯುತ್ತಮ ಉದಾಹರಣೆಯಾಗಿದೆ. ನರೇಂದ ಮೋದಿಯವರ ಮೇಕ್ ಇನ್ ಇಂಡಿಯಾ, ಅಭಿವೃದ್ಧಿ, ಸ್ಮಾರ್ಟ್ ಸಿಟಿ ಇತ್ಯಾದಿ ಪರಿಕಲ್ಪನೆಗಳ ಜೊತೆಗೆ ಈ ಕಾಯ್ದೆ ಈಗಾಗಲೇ ಸಂಘರ್ಷಕ್ಕೆ ತೊಡಗಿದೆ. ಸ್ವತಃ ಬಿಜೆಪಿ ನೇತೃತ್ವದ ರಾಜ್ಯ ಸರಕಾರಗಳೇ ಈ ಕಾಯ್ದೆಯ ಉರುಳಲ್ಲಿ ಸಿಕ್ಕಿಕೊಂಡು ಒದ್ದಾಡುವಂತಾಗಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಹರ್ಯಾಣ. ಈ ರಾಜ್ಯದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮ ಪ್ರಾಬಲ್ಯವನ್ನು ಹೊಂದಿದ್ದು, ಪರಿಣಾಮವಾಗಿ ಇಲ್ಲಿ ಗೋಹತ್ಯೆ ಕಾನೂನು ಜಾರಿಗೆ ಬಂದಿದೆ.

ಆದರೆ ಈ ಕಾನೂನನ್ನು ಜೀರ್ಣಿಸಿಕೊಳ್ಳುವುದಕ್ಕೆ ಸ್ವತಃ ಅಲ್ಲಿನ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆ ಕಾರಣದಿಂದಲೇ ಎರಡು ದಿನಗಳ ಹಿಂದೆ ಅಲ್ಲಿನ ಮುಖ್ಯಮಂತ್ರಿ ‘ವಿದೇಶಿಯರಿಗೆ ಮಾತ್ರ ಗೋಮಾಂಸ ತಿನ್ನಲು ಅನುಮತಿ ನೀಡಲು’ ಗೋಹತ್ಯೆ ಕಾನೂನನ್ನು ಸಡಿಲಗೊಳಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಈ ಪ್ರಸ್ತಾಪ ಮುಂದಿಟ್ಟ ಬೆನ್ನಿಗೇ, ಅದೇ ಸರಕಾರದ ಕೆಲವು ಮುಖಂಡರು ಮುಖ್ಯಮಂತ್ರಿಯ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಹರ್ಯಾಣ ಮುಖ್ಯಮಂತ್ರಿಯ ಮಾತಿನಲ್ಲಿರುವ ವಿರೋಧಭಾಸ ಎದ್ದು ಕಾಣುತ್ತದೆ. ವಿದೇಶಿಯರು ಗೋಮಾಂಸ ತಿನ್ನಬಹುದಾಗಿದ್ದರೆ, ಗೋಮಾಂಸವನ್ನು ಆಹಾರವಾಗಿ ಸ್ವೀಕರಿಸಿರುವ ಭಾರತೀಯರು ಯಾಕೆ ತಿನ್ನಬಾರದು? ಗೋಮಾಂಸ ಪೌಷ್ಟಿಕ ಆಹಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಗೋಮಾಂಸದಿಂದ ಯಾವುದೇ ದುಷ್ಪರಿಣಾಮವಿಲ್ಲ. ಅದರಲ್ಲಿ ಅತ್ಯಧಿಕ ಪ್ರೊಟೀನ್ ಇದೆ ಎನ್ನುವುದನ್ನು ವೈದ್ಯರು ಹೇಳುತ್ತಾರೆ. ಭಾರತವು ಅತ್ಯಧಿಕ ಅಪೌಷ್ಟಿಕತೆಯಿಂದ ನರಳುತ್ತಿರುವ ದೇಶ. ಈ ಸಂದರ್ಭದಲ್ಲಿ ಒಂದು ಪ್ರೊಟೀನ್ ಯುಕ್ತ ಮಾಂಸವನ್ನು ನಿಷೇಧಿಸಿರುವುದು ಭಾರತದ ಶೇ.50ರಷ್ಟಿರುವ ಬಡವರಿಗೆ ಮಾಡಿದ ಅನ್ಯಾಯವಲ್ಲವೇ? ಇದೇ ಸಂದರ್ಭದಲ್ಲಿ ವಿದೇಶಿಯರು ಗೋಮಾಂಸವನ್ನು ತಿಂದರೆ, ಗೋವಿನೊಳಗಿರುವ ದೇವತೆಗಳಿಗೆ ಖುಷಿಯಾಗುತ್ತದೆಯೇ? ಸರಕಾರದ ಉದ್ದೇಶ ಸ್ಪಷ್ಟ. ಗೋಮಾಂಸ ನಿಷೇಧದಿಂದ, ಅಲ್ಲಿನ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದೆ. ಆದುದರಿಂದ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಹಿನ್ನೆಲೆಯಲ್ಲಿ ಅದು ಮತ್ತೆ ನಿಷೇಧ ಕಾಯ್ದೆಯನ್ನು ಸಡಿಲಿಸಲು ಯತ್ನಿಸುತ್ತಿದೆ.

ಆದರೆ ಹರ್ಯಾಣ ಸರಕಾರದ ಆರೋಗ್ಯ ಸಚಿವ ಅನಿಲ್ ವಿಜ್ ಅವರು ‘‘ಬೀಫ್ ತಿನ್ನದೆ ಬದುಕಲು ಯಾರಿಗೆ ಸಾಧ್ಯವಿಲ್ಲವೋ ಅಂಥವರು ಹರ್ಯಾಣಕ್ಕೆ ಕಾಲಿಡಬೇಡಿ’’ ಎಂದಿದ್ದಾರೆ. ಒಬ್ಬ ಆರೋಗ್ಯ ಸಚಿವನಾಗಿ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ ಅವರು. ಹಾಗಾದರೆ ಬೀಫ್ ತಿನ್ನುವ ನಾಡಿಗೆ ನರೇಂದ್ರ ಮೋದಿಯವರು ಪದೇ ಪದೇ ಭೇಟಿ ನೀಡುತ್ತಿದ್ದಾರಲ್ಲಾ? ಇದರ ಉದ್ದೇಶವೇನು? ಬೀಫ್ ತಿನ್ನುವವರ ಬಂಡವಾಳ, ಉದ್ದಿಮೆಗಳನ್ನು ಆಹ್ವಾನಿಸುತ್ತಿದ್ದಾರಲ್ಲ? ಇದನ್ನು ಹೇಗೆ ಈ ಸಚಿವರು ಸಮರ್ಥಿಸಿಕೊಳ್ಳುತ್ತಾರೆ? ‘‘ಕೆಲವು ದೇಶಗಳಿಗೆ ನಾವು ಹೋಗಲು ಇಷ್ಟಪಡುವುದಿಲ್ಲ. ಯಾಕೆಂದರೆ ಅಲ್ಲಿನ ಆಹಾರ ಪದ್ಧತಿ ನಮಗೆ ಹಿಡಿಸುವುದಿಲ್ಲ. ಅದೇ ರೀತಿ, ಯಾರಿಗೆ ಬೀಫ್ ತಿನ್ನದೇ ಇರಲು ಅಸಾಧ್ಯವೋ, ಅಂಥವರು ಇಲ್ಲಿಗೆ ಬರಬೇಡಿ’’ ಎಂದೂ ಈ ಸಚಿವ ಕರೆ ನೀಡಿದ್ದಾರೆ. ಇದೊಂದು ರೀತಿಯಲ್ಲಿ ಇನ್ನೊಬ್ಬರ ಆಹಾರ ಸಂಸ್ಕೃತಿಯನ್ನು ಅಗೌರವಿಸಿ, ನಾವು ನಮ್ಮ ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಕತ್ತಲ ಕೋಣೆಯಲ್ಲಿ ಕೂತ ಹಾಗೆ. ಇದರಿಂದ ನಷ್ಟ ಯಾರಿಗೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಇನ್ನೊಂದೆಡೆ ಗೋವಾದಲ್ಲಿ ಬಿಜೆಪಿ ಸರಕಾರ ಗೋಮಾಂಸದ ಕುರಿತಂತೇ ಭಿನ್ನ ನಿಲುವು ತಾಳಿದೆ. ಗೋವಾ ಸರಕಾರದ ಅಸ್ತಿತ್ವವಿರುವುದೇ ಪ್ರವಾಸೋದ್ಯಮದಲ್ಲಿ. ಅಲ್ಲಿಯ ಬದುಕು ಗೋಮಾಂಸದ ಜೊತೆಗೆ ಅವಿನಾಭಾವವಾಗಿ ಬೆಸೆದಿದೆ. ಈ ಹಿನ್ನೆಲೆಯಲ್ಲೇ ಅದು ಗೋಮಾಂಸ ನಿಷೇಧಕ್ಕೆ ಹಿಂಜರಿಯುತ್ತಿದೆ. ಗೋಮಾಂಸ ನಿಷೇಧ ಮಾಡಿದರೆ ಗೋವಾದ ಆರ್ಥವ್ಯವಸ್ಥೆ ನೆಲಕಚ್ಚುತ್ತದೆ. ಇದೇ ಸಂದರ್ಭದಲ್ಲಿ ಕೇರಳದಲ್ಲಿ ‘‘ಗೋಮಾಂಸ ನಿಷೇಧಕ್ಕೆ ಬೆಂಬಲ ಇಲ್ಲ’’ ಎಂದು ಬಿಜೆಪಿಯ ರಾಜ್ಯಾಧ್ಯಕ್ಷರೇ ಹೇಳಿಕೆ ನೀಡಿದ್ದಾರೆ. ಯಾಕೆಂದರೆ ಕೇರಳದ ಶೇ.90ರಷ್ಟು ಹಿಂದೂಗಳು ಗೋಮಾಂಸವನ್ನು ಸೇವಿಸುತ್ತಾರೆ. ಅವರ ಬದುಕಿನ ಮುಖ್ಯ ಆಹಾರ ಅದು. ಅಲ್ಲಿ ಗೋಮಾಂಸವನ್ನು ನಿಷೇಧಿಸಿದರೆ, ಬಹುಸಂಖ್ಯಾತ ಮತದಾರರನ್ನು ಬಿಜೆಪಿ ಕಳೆದುಕೊಳ್ಳಬೇಕಾಗುತ್ತದೆ. ಆದುದರಿಂದಲೇ ಕೇರಳದಲ್ಲಿ ಬಿಜೆಪಿ ಗೋಮಾಂಸದ ವಿಷಯದಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿದೆ. ಇನ್ನು ಮುಂಬೈಯಲ್ಲಿ, ಮಾಂಸಾಹಾರದಲ್ಲಿ ರಾಜಕಾರಣವನ್ನು ಮಾಡಲು ಹೋಗಿ ಬಿಜೆಪಿ ಸರಕಾರ ಈಗಾಗಲೇ ಸಾಕಷ್ಟು ಅನಾಹುತ ಮಾಡಿಕೊಂಡಿದೆ. ಅಲ್ಲಿಯ ಉದ್ಯಮಗಳ ಮೇಲೆ ನೇರ ಪರಿಣಾಮ ಬಿದ್ದಿದೆ. ಇಷ್ಟೇ ಯಾಕೆ, ಇಂದು ಮಾಂಸಾಹಾರ ರಫ್ತಿನಂತಹ ಉದ್ದಿಮೆಯಲ್ಲಿ ಬಿಜೆಪಿಯ ಮುಖಂಡರೇ ನೇರವಾಗಿ ಪಾಲುದಾರರಾಗಿದ್ದಾರೆ. ಭಾವನೆಗಳಿಗೆ ಧಕ್ಕೆ ತರುತ್ತದೆ ಎನ್ನುವ ಕಾರಣಕ್ಕಾಗಿ ಭಾರತದಲ್ಲಿ ನಿಷೇಧವಾದ ಆಹಾರವನ್ನು ವಿದೇಶಕ್ಕೆ ರಫ್ತು ಮಾಡಿ, ಹಣ ಮಾಡುವುದು ಎಷ್ಟು ಸರಿ?
ಭಾರತ ಹೊರಜಗತ್ತಿಗೆ ಹೆಚ್ಚು ಹೆಚ್ಚು ತೆರೆದುಕೊಳ್ಳುವ ದಿನಗಳು ಇವು. ಆರ್ಥಿಕ ವಿಷಯದಲ್ಲಿ ಹೆಚ್ಚು ಹೆಚ್ಚು ಕೊಡುಕೊಳ್ಳುವಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಆಹಾರ ಮತ್ತು ಉದ್ದಿಮೆಯ ಭಾಗವಾಗಿರುವ ಗೋಮಾಂಸಕ್ಕೆ ನಿಷೇಧವೆನ್ನುವುದೇ ಅರ್ಥಹೀನವಾದುದು. ಗೋವನ್ನು ದೇವತೆ ಎನ್ನುವುದರ ವಿಷಯದಲ್ಲಿ ಸ್ವತಃ ಆರೆಸ್ಸೆಸ್‌ನ ನಾಯಕ ಸಾವರ್ಕರ್ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಿರುವಾಗ, ಸಂಘಪರಿವಾರ ಇನ್ನಾದರೂ ವಾಸ್ತವಕ್ಕೆ ಮುಖಾಮುಖಿಯಾಗಬೇಕು.

ಗೋ ಉದ್ಯಮ ಭಾರತದ ಅರ್ಥವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿರುವುದರಿಂದ, ಸಂಘಪರಿವಾರ ಗೋವಿನ ಹೆಸರಿನಲ್ಲಿ ನಡೆಸುತ್ತಿರುವ ರಾಜಕೀಯ ಈ ದೇಶದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ಗೋವು ಅರ್ಥಶಾಸ್ತ್ರದ ಒಂದು ಭಾಗವೇ ಹೊರತು, ಧರ್ಮ ಶಾಸ್ತ್ರದ ಭಾಗ ಅಲ್ಲ ಎನ್ನುವುದನ್ನು ಬಿಜೆಪಿ ನಾಯಕರು ಇನ್ನಾದರೂ ಒಪ್ಪಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News