ಸ್ವಾರ್ಥಕ್ಕಾಗಿ ಮನುಸ್ಮೃತಿ ಸೃಷ್ಟಿಸಿದ ಜಾತಿಗಳು

Update: 2016-02-11 18:00 GMT

ಭಾರತ ಜಾತಿವ್ಯವಸ್ಥೆಯ ನಾಡು. ಜಾತಿ ನಿರಾಕರಿಸುತ್ತಲೇ ಜಾತೀಯತೆಯನ್ನು ಪ್ರಬಲವಾಗಿ ಆಚರಿಸುವ ಬೀಡು. 6,000ಕ್ಕೂ ಮಿಕ್ಕಿ ಜಾತಿಗಳು ತಮ್ಮ ಅಸ್ತಿತ್ವ ಹೊಂದಿವೆ. ಕೆಲವರಿಗೆ ಇದು ಸ್ಟೇಟಸ್ ತಂದುಕೊಟ್ಟರೆ ಕೆಲವರಿಗೆ ಇದು ಸ್ಟೇಟಸ್ ಕಿತ್ತುಕೊಳ್ಳುವ ಮೂಲ. ಅಪಮಾನ, ಅವಮಾನ, ಬಹುಮಾನ, ಮಾನ-ಮರ್ಯಾದೆ ಎಲ್ಲ ಇಲ್ಲಿ ಜಾತಿ ಆಧರಿತ ಎಂಬ ಸತ್ಯ ಅಭಾದಿತ. ಈ ಹಿನ್ನೆಲೆಯಲ್ಲಿ ಈ ಸತ್ಯದ ಶೋಧನೆ ಇದರ ಹುಟ್ಟು, ಅವಸಾನ(ಸದ್ಯಕ್ಕಿಲ್ಲ) ಸಮಾಜ ಸ್ವಾಸ್ಥ್ಯದ ದೃಷ್ಟಿಯಿಂದ ಚರ್ಚಾರ್ಹ. ಅಂತಹ ಚರ್ಚೆಗೆ ಯೋಗ್ಯ ಪರಿಕರ ದೊರಕುವುದು ಜಾತೀಯತೆ ವಿರುದ್ಧ ತಮ್ಮದೇ ಶೈಲಿಯಲ್ಲಿ ಅವಿರತ ಹೋರಾಟ ನಡೆಸಿದ ಅಂಬೇಡ್ಕರ್‌ರ ಬರಹಗಳಲ್ಲಿ. ಧನಿ ಎತ್ತಿ ಕೂಗಿದ ಅವರ ಗಟ್ಟಿ ಭಾಷಣಗಳಲ್ಲಿ. ಅಂಬೇಡ್ಕರರ ಪ್ರಕಾರ ಜಾತಿವ್ಯವಸ್ಥೆಯ ಬೇರು ಎಲ್ಲಿದೆ? ಅವರ ಸ್ಪಷ್ಟ ಉತ್ತರ ವರ್ಣಾಶ್ರಮಧರ್ಮದಲ್ಲಿ. ಹೌದು, ವರ್ಣಾಶ್ರಮದ ಜಟಿಲ ಕಾನೂನುಗಳಲ್ಲಿ, ಅದನ್ನು ಸಮರ್ಥಿಸಿದ ಧರ್ಮಸೂತ್ರಗಳಲ್ಲಿ, ಶೃತಿಗಳಲ್ಲಿ, ಸ್ಮತಿಗಳಲ್ಲಿ ಜಾತಿವ್ಯವಸ್ಥೆಯ ಮೂಲ ಅಥವಾ ಬೀಜ ನಿಚ್ಚಳವಾಗಿ ಕಾಣುತ್ತದೆ. ಯಾಕೆಂದರೆ ಜಾತಿವ್ಯವಸ್ಥೆ ಅದರ ಮೂಲ ಲಕ್ಷಣ ಅಸಮಾನತೆ. ಅಂತಹ ಅಸಮಾನತೆಯ ಬೇರನ್ನು, ಅದು ಮೊಳಕೆಯೊಡೆದ ಬೀಜವನ್ನು ಅಂಬೇಡ್ಕರರು ಉಲ್ಲೇಖಿಸಿರುವ ಆ ಧರ್ಮ ಸೂತ್ರಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಈ ಹಿನ್ನೆಲೆಯಲ್ಲಿ ಅಂತಹ ಒಂದು ಸೂತ್ರವನ್ನು ಉಲ್ಲೇಖಿಸುವುದಾದರೆ, ಅಪಸ್ತಂಭ ಧರ್ಮಸೂತ್ರ ಹೇಳುತ್ತದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹೀಗೆ ಒಟ್ಟಾರೆ ನಾಲ್ಕು ಜಾತಿಗಳಿವೆ ಮತ್ತು ಈ ಜಾತಿಗಳ ಪಟ್ಟಿಯಲ್ಲಿ ಮೊದಲು ಬರುವ ಜಾತಿಯು ನಂತರ ಬರುವ ಜಾತಿಗಿಂತ ಹುಟ್ಟಿನ ಆಧಾರದಲ್ಲಿ ಶ್ರೇಷ್ಠತೆಯನ್ನು ಹೊಂದಿದೆ. ಕುಕೃತ್ಯಗಳನ್ನು ಮಾಡಿದವರನ್ನು, ಶೂದ್ರರನ್ನು ಹೊರತು ಪಡಿಸಿ ಉಳಿದವರೆಲ್ಲರಿಗೂ ಉಪನಯನ (ಪವಿತ್ರವಾದ ದಾರ ಹಾಕಿಸಿಕೊಳ್ಳುವ) ಸ್ವೀಕರಿಸುವ, ವೇದಗಳನ್ನು ಓದುವ, ಪವಿತ್ರವಾದ ಅಗ್ನಿಯನ್ನು ಹಚ್ಚುವ, ದೀಕ್ಷೆ ಸ್ವೀಕರಿಸುವ ಹಕ್ಕಿದೆ. ಭೇದಭಾವ ಹೇಗೆ ಧರ್ಮದ ಆಧಾರದಲ್ಲೇ ಮೊಳಕೆಯೊಡೆದಿದೆ ಎಂಬುದು ಮೇಲಿನ ಧರ್ಮಸೂತ್ರದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಇದಕ್ಕೆ ಅಂದರೆ ಇಂತಹ ಭೇದಭಾವಕ್ಕೆ ಬರೇ ಅಪಸ್ತಂಭವೊಂದೇ ಅಲ್ಲ, ತದನಂತರ ಬಂದ ಎಲ್ಲ ಸೂತ್ರಗಳು, ಸ್ಮತಿಗಳು ಮುದ್ರೆಯೊತ್ತುತ್ತಾ ನಡೆದವು. ಅಂತಹ ಮತ್ತೊಂದು ಉದಾಹರಣೆಯಾಗಿ ವಸಿಷ್ಠ ಧರ್ಮ ಸೂತ್ರವನ್ನು ಹೇಳುವುದಾದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹೀಗೆ ನಾಲ್ಕು ಜಾತಿಗಳಿವೆ. ಇವುಗಳಲ್ಲಿ ಮೂರು ಜಾತಿಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರನ್ನು ಎರಡು ಬಾರಿ ಜನಿಸಿದವರೆಂದು ಕರೆಯಲಾಗುತ್ತದೆ (ಶೂದ್ರ ಮಾತ್ರ ಒಂದು ಬಾರಿ ಜನಿಸಿದವನು!) ಮತ್ತು ಈ ನಾಲ್ಕು ಜಾತಿಗಳನ್ನು ನಿರ್ದಿಷ್ಟ ಉಪಕರ್ಮದ ಮೂಲ ಮತ್ತು ಆಚರಣೆ ಆಧಾರದ ಮೇಲೆ ಗುರುತಿಸಲಾಗುತ್ತದೆ. ಅಂದಹಾಗೆ ಶೂದ್ರ ಯಾವುದೇ ರೀತಿಯ ಸಂಸ್ಕಾರ ಸ್ವೀಕರಿಸುವಂತಿಲ್ಲ. ಇನ್ನು ಇಂತಹ ಅಸಮಾನತೆ ಆಚರಣೆಗೆ ವೇದ ಒತ್ತಿದ ಮುದ್ರೆ ಸುಪ್ರಸಿದ್ಧ ಪುರುಷಸೂಕ್ತ ಶ್ಲೋಕವಾಗಿದೆ. ಪುರುಷ ಸೂಕ್ತವೆಂದು ಕರೆಯಲಾಗುವ ಋಗ್ವೇದದ 10ನೆ ಮಂಡಲದ 19ನೆ ಶ್ಲೋಕ ಹೇಳುವುದೇನೆಂದರೆ ಬ್ರಾಹ್ಮಣ(ಪುರುಷನ) ಬಾಯಿಯಿಂದ, ಕ್ಷತ್ರಿಯ ಅವನ ತೋಳಿನಿಂದ, ವೈಶ್ಯ ಆತನ ತೊಡೆಗಳಿಂದ ಮತ್ತು ಶೂದ್ರ ಹುಟ್ಟಿದ್ದು ಆತನ ಪಾದಗಳಿಂದ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.7, ಪು.24). ಅಸಮಾನತೆ ಹೇಗೆ ಸೃಷ್ಟಿಯಾಗಿದೆ ಗಮನಿಸಿ. ಎಲ್ಲರೂ ಪುರುಷನ ಬಾಯಿಯಿಂದ ಅಂದಿದ್ದರೂ ಅಲ್ಲಿ ಸಮಾನತೆ ಬರುತ್ತಿತ್ತು. ಅಥವಾ ಎಲ್ಲರೂ ತೋಳಿನಿಂದ ಅಂದಿದ್ದರೂ ಅಲ್ಲಿ ಸಮಾನತೆ ಬರುತ್ತಿತ್ತು. ಅಥವಾ ಎಲ್ಲರೂ ತೊಡೆಯಿಂದ ಎಂದಿದ್ದರೂ ಅಲ್ಲಿ ಸಮಾನತೆ ಬರುತ್ತಿತ್ತು.; ಬೇಡ, ಎಲ್ಲರೂ ಪಾದದಿಂದ ಎಂದಿದ್ದರೂ ಅಲ್ಲಿ ಸಮಾನತೆ ಬರುತ್ತಿತ್ತು. ಆದರೆ ಮೇಲಿನಿಂದ ಕೆಳಕ್ಕೆ ಇಳಿಕೆ ಕ್ರಮದಲ್ಲಿ ಒಬ್ಬೊಬ್ಬರು ಒಂದೊಂದು ಮೂಲದಿಂದ ಬಂದವರು ಎಂದರೆ, ಅದೂ ಶೂದ್ರ ಪಾದದಿಂದ ಬಂದ ಎಂದರೆ ಅದು ಸಮಾನತೆ ಹೇಗೆ ಆಗುತ್ತದೆ? ಮತ್ತು ಪಾದದಿಂದ ಎಂದರೆ ಶೂದ್ರ ಸಮುದಾಯಕ್ಕೆ ಸೃಷ್ಟಿ ಕತೆಯಲ್ಲಿ ಮರ್ಯಾದೆಯಾದರೂ ಹೇಗೆ ಸಿಗುತ್ತದೆ? ಒಟ್ಟಾರೆ ಇದು ಸೃಷ್ಟಿಯ ಅಸಮಾನತೆಯ ಸಿದ್ಧಾಂತಕ್ಕೆ ಸ್ಪಷ್ಟ ನಿದರ್ಶನ. ಅಂದಹಾಗೆ ಇದು ಕೇವಲ ಅಪಸ್ತಂಭ ಮತ್ತು ವಶಿಷ್ಠ ಧರ್ಮಸೂತ್ರಗಳಲ್ಲಷ್ಟೇ ನಡೆಯಿತು ಎಂದಲ್ಲ. ಅಂಬೇಡ್ಕರರು ಹೇಳುತ್ತಾರೆ ಎಲ್ಲ ಕಾನೂನು ನಿರ್ಮಾಪಕರು ಪುರುಷ ಸೂಕ್ತದ ಈ ಸಾರಾಂಶವನ್ನು ಮತ್ತದರ ಪಾವಿತ್ರವನ್ನು ಗಿಳಿಪಾಠದಂತೆ ಒಪ್ಪಿಸಿದರು. ಹಾಗಿದ್ದರೆ ಇದರ ವಿರುದ್ಧ ಯಾರೂ ದನಿ ಎತ್ತಲಿಲ್ಲವೇ? ಅಂಬೇಡ್ಕರರು ಹೇಳುವಂತೆ ದನಿ ಎತ್ತಿದರು. ಆದರೆ ಹಾಗೆ ದನಿ ಎತ್ತಿದವರನ್ನು ಹಿಂದೂ ಸಮಾಜದ ಶಿಲ್ಪಿಯಾದ ಮನು ಅಂತಿಮವಾಗಿ ಕ್ಷುದ್ರ ಮಟ್ಟಕ್ಕೆ ಇಳಿಸಿದ. ಈ ಹಿನ್ನೆಲೆಯಲ್ಲಿ ಮನು ಮಾಡಿದ್ದು ಎರಡು ಕೆಲಸ. ಪ್ರಪ್ರಥಮವಾಗಿ ಆತ ಮಾಡಿದ್ದೆಂದರೆ ಪುರುಷ ಸೂಕ್ತದ ಆದರ್ಶವನ್ನು ಮತ್ತೆ ಹೊಸದಾಗಿ ಪ್ರತಿಪಾದಿಸಿ ಅದನ್ನು ದೈವತ್ವದ ಮಟ್ಟಕ್ಕೆ ಏರಿಸಿದ. ಮನು ಹೇಳುತ್ತಾನೆ ಪ್ರಪಂಚದ ಯೋಗಕ್ಷೇಮಕ್ಕಾಗಿ ಆತ (ಸೃಷ್ಟಿಕರ್ತ) ತನ್ನ ಬಾಯಿಯಿಂದ, ತೋಳಿನಿಂದ, ತೊಡೆಯಿಂದ ಮತ್ತು ಪಾದದಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರನ್ನು ಸೃಷ್ಟಿಸಿದ. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಈ ಮೂವರು ಎರಡು ಬಾರಿ ಹುಟ್ಟಿದವರ ಗುಂಪಿಗೆ ಸೇರುತ್ತಾರೆ. ಆದರೆ ನಾಲ್ಕನೆಯವನಾದ ಶೂದ್ರ ಕೇವಲ ಒಂದೇ ಬಾರಿ ಜನಿಸಿದವ. ಇಲ್ಲಿ ಮನು ಹೇಳುವ ಪ್ರಪಂಚದ ಯೋಗಕ್ಷೇಮಕ್ಕಾಗಿ ಎಂಬ ಪದ ಗಮನಿಸಬೇಕು. ತಮ್ಮ ಸ್ವಾರ್ಥಕ್ಕಾಗಿ ಪ್ರಪಂಚದ ಕ್ಷೇಮ, ದೇಶಪ್ರೇಮ, ರಾಷ್ಟ್ರ ಪ್ರೇಮ ಬಳಸಿಕೊಳ್ಳುವ ಚಾಳಿ, ವಿರೋಧಿಗಳನ್ನು ದೇಶದ್ರೋಹಿಗಳೆನ್ನುವ ಚಾಳಿ ಇದರ ಬೀಜವನ್ನು ನಾವು ಮನುಸ್ಮತಿಯಲ್ಲೇ ಕಾಣಬಹುದು! ಹಾಗೆಯೇ ಇತರ ಕಾನೂನು ನಿರ್ಮಾಪಕರಿಗಿಂತ ಒಂದು ಹೆಜ್ಜೆ ಮುಂದೆ ಇರಿಸಿದ ಮನು ಮಾಡಿದ್ದೆಂದರೆ ಇಂತಹ ಅಸಮಾನತೆಯ ಸೃಷ್ಟಿಗೆ ಧರ್ಮದ ಚೌಕಟ್ಟು ಒದಗಿಸಿದ್ದು. ಅಂದರೆ ಮನು ಹೇಳುತ್ತಾನೆ ಧರ್ಮದ ಅಂತಿಮ ಮತ್ತು ಏಕೈಕ ದೃಢೀಕರಣವೆಂದರೆ ಅದು ವೇದ. ಈ ನಿಟ್ಟಿನಲ್ಲಿ ಪುರುಷಸೂಕ್ತ ವೇದದ ಒಂದು ಭಾಗವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಪುರುಷಸೂಕ್ತದಲ್ಲಿರುವ ಚಾತುವರ್ಣದ ಸಾಮಾಜಿಕ ಆದರ್ಶವನ್ನು ಹಿಂದೆಲ್ಲಿಯೂ ಇಲ್ಲದಂತೆ ದೋಷಾತೀತವೆನ್ನುವಂತೆ, ದೈವತ್ವದ ಆಧಾರ ಎನ್ನುವಂತೆ ಮನು ಸಮಾಜದಲ್ಲಿ ತುರುಕಿದ. ಒಟ್ಟಾರೆ ಜಾತಿ ಧರ್ಮಶಾಸ್ತ್ರಗಳ ಸೃಷ್ಟಿ. ವೇದ ಅದಕ್ಕೊಂದು ಚೌಕಟ್ಟನ್ನು ಒದಗಿಸಿದರೆ ಮನಸ್ಮತಿಯ ಮೂಲಕ ಮನು ಅದನ್ನು ಕಾನೂನುಬದ್ಧಗೊಳಿಸಿದ. ಯಾರೂ ಪ್ರಶ್ನಿಸದಿರಲಿ ಎಂಬಂತೆ ಆತ ಅದನ್ನು ದೈವ ಸೃಷ್ಟಿ ಎಂದ, ಪ್ರಪಂಚದ ಕ್ಷೇಮ ಎಂದ, ದೋಷಾತೀತ ಎಂದ! ಹಾಗೆ ಇಲ್ಲಿ ನಾವು ಪ್ರಶ್ನಿಸಬೇಕಾಗುತ್ತದೆ, ಅದು ಯಾರ ಪ್ರಪಂಚ? ಯಾರ ದೈವ ಸೃಷ್ಟಿ? ಅಂದರೆ ಮನು ತನ್ನ ಸಮುದಾಯದ ಸ್ವಾರ್ಥಕ್ಕಾಗಿ ದೈವ ಸೃಷ್ಟಿ, ತನ್ನವರ ಹಿತಕ್ಕಾಗಿ ಪ್ರಪಂಚದ ಕ್ಷೇಮ ಎಲ್ಲವನ್ನೂ ಬಳಸಿಕೊಂಡಿದ್ದಾನಲ್ಲವೇ? ಅದಕ್ಕಾಗಿ ಬ್ರಹ್ಮನ ಅರ್ಥಾತ್ ಸೃಷ್ಟಿಕರ್ತನ ತಲೆ, ತೋಳು, ತೊಡೆ, ಪಾದ ಇವ್ಯಾವುದನ್ನೂ ಆತ ಬಿಟ್ಟಿಲ್ಲ! ಈ ಹಿನ್ನೆಲೆಯಲ್ಲಿ ಸ್ವಾರ್ಥಗಳ ಇಂತಹ ಮೋಸದ ತಂತ್ರದಿಂದಾಗಿ ಇಲ್ಲಿ 4 ದೊಡ್ಡ ಜಾತಿಗಳು ಅರ್ಥಾತ್ ವರ್ಣಗಳು ಸೃಷ್ಟಿಯಾಗಿವೆ. ಹಾಗೆಯೇ ಮುಂದೆ ಅವೇ ಒಡೆದು ಒಡೆದು ಸಹಸ್ರಾರು ಗುಂಪುಗಳಾಗಿ ಸೃಷ್ಟಿಕರ್ತ ನೀಡಿದ(?) ಮೇಲುಕೀಳುಗಳನ್ನು ಹಾಗೇ ಉಳಿಸಿಕೊಂಡು(!) 6,000ಕ್ಕೂ ಮಿಕ್ಕಿ ಜಾತಿಗಳಾಗಿ, ಉಪಜಾತಿಗಳಾಗಿ ಚಿಂದಿ ಚಿತ್ರಾನ್ನವಾಗಿದೆ. ಜಾತಿಪದ್ಧತಿ ಭಾರತದ ಉದ್ದಗಲಕ್ಕೂ ಹಾಸುಹೊದ್ದು ಮಲಗಿದೆ ಅಸಮಾನತೆಯ ಜೊತೆಗೆ. 

Writer - ರಘೋತ್ತಮ ಹೊ.ಬ.

contributor

Editor - ರಘೋತ್ತಮ ಹೊ.ಬ.

contributor

Similar News