ಅಮೆರಿಕ, ದ. ಕೊರಿಯ, ಜಪಾನ್ ನಡುವೆ ಮಾಹಿತಿ ಹಂಚಿಕೆ ಒಪ್ಪಂದ
ವಾಶಿಂಗ್ಟನ್, ಫೆ. 11: ಉತ್ತರ ಕೊರಿಯದ ಹೆಚ್ಚುತ್ತಿರುವ ಪರಮಾಣು ಮತ್ತು ಕ್ಷಿಪಣಿ ಬೆದರಿಕೆಗಳ ಹಿನ್ನೆಲೆಯಲ್ಲಿ, ತಮ್ಮ ನಡುವಿನ ಮಾಹಿತಿ ಹಂಚಿಕೆ ಮತ್ತು ಭದ್ರತಾ ಸಹಕಾರವನ್ನು ಹೆಚ್ಚಿಸಲು ಅಮೆರಿಕ, ದಕ್ಷಿಣ ಕೊರಿಯ ಮತ್ತು ಜಪಾನ್‌ಗಳ ಉನ್ನತ ಸೇನಾ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಬುಧವಾರ ಇಲ್ಲಿ ನಡೆದ ಸಭೆಯ ಬಳಿಕ, ಮೂರು ದೇಶಗಳ ರಕ್ಷಣಾ ಮುಖ್ಯಸ್ಥರು ಸಂಯುಕ್ತ ಹೇಳಿಕೆಯೊಂದನ್ನು ಹೊರಡಿಸಿ, ಉತ್ತರ ಕೊರಿಯದ ಬೆದರಿಕೆಗೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ನೀಡುವ ಒಪ್ಪಂದಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.
ತ್ರಿಪಕ್ಷೀಯ ಮಾಹಿತಿ ಹಂಚಿಕೆಯ ಮೂಲಕ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸುವ ಮೂಲಕ ಉತ್ತರ ಕೊರಿಯದ ಪ್ರಚೋದನೆಗಳಿಗೆ ಪ್ರತಿಕ್ರಿಯಿಸಲು ನಿರ್ಧರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಅಮೆರಿಕದ ಮರೀನ್ ಕಾರ್ಪ್ಸ್‌ನ ಜನರಲ್ ಜೋಸೆಫ್ ಡನ್‌ಫೋರ್ಡ್ ಮತ್ತು ಜಪಾನ್‌ನ ಸ್ವರಕ್ಷಣಾ ಪಡೆಗಳ ಮುಖ್ಯಸ್ಥ ಅಡ್ಮಿರಲ್ ಕಟ್ಸುಟೊಶಿ ಕವಾನೊ ಅಮೆರಿಕದ ಹವಾಯಿಯ ಪರ್ಲ್ ಹಾರ್ಬರ್‌ನಲ್ಲಿ ಭೇಟಿಯಾದರು. ದಕ್ಷಿಣ ಕೊರಿಯದ ಜಂಟಿ ಸೇನಾ ಮುಖ್ಯಸ್ಥ ಜನರಲ್ ಲೀ ಸುನ್-ಜಿನ್ ವೀಡಿಯೊ ಟೆಲಿಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದರು.
ಇದು ಈ ಮೂರು ಸೇನೆಗಳ ಮುಖ್ಯಸ್ಥರ ನಡುವೆ ನಡೆದ ಎರಡನೆ ಸಭೆಯಾಗಿದೆ. ಮೊದಲ ಸಭೆ 2014 ಜುಲೈಯಲ್ಲಿ ನಡೆದಿತ್ತು.
ಉತ್ತರ ಕೊರಿಯ ಜನವರಿ 6ರಂದು ನಡೆಸಿದ ನಾಲ್ಕನೆ ಪರಮಾಣು ಪರೀಕ್ಷೆ ಮತ್ತು ಕಳೆದ ರವಿವಾರ ಅದು ನಡೆಸಿದ ದೀರ್ಘ ವ್ಯಾಪ್ತಿಯ ಕ್ಷಿಪಣಿ ಉಡಾವಣೆ ವಿಶ್ವಸಂಸ್ಥೆಯ ನಿರ್ಣಯಗಳ ಉಲ್ಲಂಘನೆಯಾಗಿದೆ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಒಡ್ಡಿದ ಗಂಭೀರ ಪ್ರಚೋದನೆಯಾಗಿದೆ ಎಂದು ಸಂಯುಕ್ತ ಹೇಳಿಕೆಯಲ್ಲಿ ಮೂರು ದೇಶಗಳ ಸೇನಾಧಿಕಾರಿಗಳು ಹೇಳಿದ್ದಾರೆ.