ಉತ್ತರ ಕೊರಿಯದಲ್ಲಿರುವ ಕೈಗಾರಿಕಾ ವಸಾಹತನ್ನು ಮುಚ್ಚಿದ ದಕ್ಷಿಣ
‘‘ಪ್ರಚೋದನಾತ್ಮಕ’’ ಪರಮಾಣು, ರಾಕೆಟ್ ಪರೀಕ್ಷೆಗಳಿಗೆ ಪ್ರತೀಕಾರ
ಸಿಯೋಲ್, ಫೆ. 11: ಉತ್ತರ ಕೊರಿಯದ ಗಡಿಯ ಕೊಂಚ ಒಳಗಿರುವ ತನ್ನ ಕೈಗಾರಿಕಾ ವಸಾಹತೊಂದನ್ನು ದಕ್ಷಿಣ ಕೊರಿಯ ಬುಧವಾರ ಒಮ್ಮೆಲೆ ಮುಚ್ಚಿದೆ. ‘‘ಅತ್ಯಂತ ಪ್ರಚೋದನಾತ್ಮಕ’’ ಪರಮಾಣು ಮತ್ತು ರಾಕೆಟ್ ಪರೀಕ್ಷೆಗಳ ಮೂಲಕ ಬೆದರಿಕೆಯೊಡ್ಡುತ್ತಿರುವ ಉತ್ತರ ಕೊರಿಯಕ್ಕೆ ‘‘ಪಾಠ ಕಲಿಸುವುದಕ್ಕಾಗಿ’’ ಅದು ಈ ಕ್ರಮ ತೆಗೆದುಕೊಂಡಿದೆ. ಈ ಮೂಲಕ ಉತ್ತರ ಕೊರಿಯದ ಪ್ರಮುಖ ಆದಾಯ ಮೂಲವೊಂದಕ್ಕೆ ಕಡಿತ ಬಿದ್ದಿದೆ.
ಎರಡು ಕೊರಿಯಗಳ ಭಾಗಿಯಾಗಿರುವ ಯೋಜನೆಗಳಿಂದ ಬರುವ ಹಣವನ್ನು ಉತ್ತರ ಕೊರಿಯ ತನ್ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗಾಗಿ ಬಳಸುತ್ತಿದೆ ಎಂಬುದಾಗಿ ಕಠಿಣ ಪದಗಳನ್ನೊಳಗೊಂಡ ಹೇಳಿಕೆಯೊಂದರಲ್ಲಿ ದಕ್ಷಿಣ ಕೊರಿಯ ಆರೋಪಿಸಿದೆ.
ಕೈಸಾಂಗ್ ಕೈಗಾರಿಕಾ ವಸಾಹತಿನಿಂದ ಉತ್ತರ ಕೊರಿಯಕ್ಕೆ ಕಳೆದ ವರ್ಷವೊಂದರಲ್ಲೇ ಸುಮಾರು 120 ಮಿಲಿಯ ಡಾಲರ್ (ಸುಮಾರು 815 ಕೋಟಿ ರೂಪಾಯಿ) ಹರಿದು ಹೋಗಿದೆ ಎಂದು ದಕ್ಷಿಣ ಕೊರಿಯದ ಏಕೀಕರಣ ಸಚಿವಾಲಯ ಹೇಳಿದೆ. 12 ವರ್ಷಗಳ ಹಿಂದೆ ಈ ಕೈಗಾರಿಕಾ ವಸಾಹುತು ಆರಂಭಗೊಂಡಂದಿನಿಂದ ಉತ್ತರ ಕೊರಿಯ ಒಟ್ಟು ಸುಮಾರು 560 ಮಿಲಿಯ ಡಾಲರ್ (ಸುಮಾರು 3,800 ಕೋಟಿ ರೂಪಾಯಿ) ಸಂಪಾದಿಸಿದೆ.
ಈ ಕೈಗಾರಿಕಾ ವಸಾಹತಿನಲ್ಲಿ ದಕ್ಷಿಣ ಕೊರಿಯದವರ ಮಾಲಕತ್ವದ ಕಾರ್ಖಾನೆಗಳಲ್ಲಿ ಉತ್ತರ ಕೊರಿಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಎರಡು ದೇಶಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದ ಸಮಯದಲ್ಲಿ ಉತ್ತರ ಕೊರಿಯದ ಆರ್ಥಿಕತೆಯನ್ನು ಸುಧಾರಿಸುವ ದೃಷ್ಟಿಯಿಂದ ಈ ಕೈಗಾರಿಕಾ ವಸಾಹತನ್ನು ಸ್ಥಾಪಿಸಲಾಗಿತ್ತು.
ಅಂತಾರಾಷ್ಟ್ರೀಯ ಸಮುದಾಯ ಭಾವಿಸಿದಂತೆ, ಈ ಹಣವನ್ನು ಶಾಂತಿ ಸ್ಥಾಪನೆಯ ಉದ್ದೇಶಗಳಿಗಾಗಿ ಬಳಸಲಾಗಿಲ್ಲ. ಬದಲಿಗೆ, ತನ್ನ ಪರಮಾಣು ಅಸ್ತ್ರಗಳು ಮತ್ತು ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಬಳಸಲಾಗಿದೆ.-ಸಚಿವಾಲಯ
ಇನ್ನು ಕೈಗಾರಿಕ ವಸಾಹತು ನಿಯಂತ್ರಣ ವಲಯ
ಇದು ಯುದ್ಧ ಘೋಷಣೆಗೆ ಸಮ: ಉತ್ತರ ಕೊರಿಯ
ಉತ್ತರ ಕೊರಿಯದಲ್ಲಿರುವ ತನ್ನ ಕೈಗಾರಿಕಾ ವಸಾಹತನ್ನು ಮುಚ್ಚುವ ದಕ್ಷಿಣ ಕೊರಿಯದ ನಿರ್ಧಾರವನ್ನು ‘‘ಯುದ್ಧ ಘೋಷಣೆ’’ ಎಂಬುದಾಗಿ ಉತ್ತರ ಕೊರಿಯ ಬಣ್ಣಿಸಿದೆ. ಕೈಸಾಂಗ್ ಕೈಗಾರಿಕಾ ವಸಾಹತಿನಲ್ಲಿರುವ ಎಲ್ಲ ದಕ್ಷಿಣ ಕೊರಿಯನ್ನರನ್ನು ಹೊರದಬ್ಬುವುದಾಗಿ ಹೇಳಿರುವ ಅದು, ಕೈಗಾರಿಕಾ ವಸಾಹತನ್ನು ಸೇನಾ ನಿಯಂತ್ರಣ ವಲಯವನ್ನಾಗಿ ಪರಿವರ್ತಿಸುವುದಾಗಿ ಘೋಷಿಸಿದೆ.
‘‘ಉತ್ತರ ಕೊರಿಯದ ಹೈಡ್ರೋಜನ್ ಬಾಂಬ್ ಪರೀಕ್ಷೆ ಮತ್ತು ಕ್ಷಿಪಣಿ ಪರೀಕ್ಷೆಯನ್ನು ಆಕ್ಷೇಪಿಸಿ, ಕೈಗಾರಿಕಾ ವಸಾಹತನ್ನು ಸಂಪೂರ್ಣವಾಗಿ ಮುಚ್ಚುವ ನಿರ್ಧಾರ ಅಕ್ಷಮ್ಯ’’ ಎಂದು ‘ಕೊರಿಯದ ಶಾಂತಿಯುತ ಏಕೀಕರಣಕ್ಕಾಗಿನ ಉತ್ತರ ಕೊರಿಯದ ಸಮಿತಿ’ ಹೇಳಿದೆ.
ಕೈಗಾರಿಕಾ ವಸಾಹತಿನಿಂದ ಹೊರಹೋಗು ವಂತೆ ಉತ್ತರ ಕೊರಿಯ ದಕ್ಷಿಣ ಕೊರಿಯನ್ನರಿಗೆ ಗುರುವಾರ ಮಧ್ಯಾಹ್ನದ ವೇಳೆಗೆ ಆದೇಶಿಸಿದೆ. ವೈಯಕ್ತಿಕ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಒಯ್ಯದಂತೆ ಅದು ಅವರಿಗೆ ಸೂಚಿಸಿದೆ.