ದಕ್ಷಿಣ ಧ್ರುವದಿಂ...ಉತ್ತರ ಧ್ರುವಕೆ: ತಂಬಿ ಯೋಧರ ಯಶೋಗಾಥೆ

Update: 2016-02-11 18:56 GMT

ಹತ್ತು ಮಂದಿ ಸೈನಿಕರ ಹಿಮಸಮಾಧಿಗೆ ಕಾರಣವಾದ ಸಿಯಾಚಿನ್ ದುರಂತ ತಂಬಿಗಳನ್ನು ಮುಖ್ಯವಾಹಿನಿಗೆ ತಂದಿದೆ. ಮದ್ರಾಸ್ ರೆಜಿಮೆಂಟ್‌ನ ಯೋಧರನ್ನು ಪ್ರೀತಿಯಿಂದ ತಂಬಿ ಎಂದು ಕರೆಯಲಾಗುತ್ತದೆ.
ಫೆಬ್ರವರಿ 3ರಂದು ಸಿಯಾಚಿನ್ ಪ್ರದೇಶದ ಹಿಮಕಣಿವೆಯಲ್ಲಿ ಸಂಭವಿಸಿದ ಭೀಕರ ಹಿಮಪಾತ ಒಂಬತ್ತು ಮಂದಿಯನ್ನು ಸ್ಥಳದಲ್ಲೇ ಬಲಿ ತೆಗೆದುಕೊಂಡಿದ್ದರೆ, ಒಂದು ವಾರ ಕಾಲ ಸಾವು- ಬದುಕಿನ ನಡುವೆ ಹೋರಾಡಿದ ಕನ್ನಡಿಗ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಗುರುವಾರ ಮಧ್ಯಾಹ್ನ ದಿಲ್ಲಿ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರೆಲ್ಲರೂ ಮದ್ರಾಸ್ ರೆಜಿಮೆಂಟ್‌ನ 19ನೆ ಬೆಟಾಲಿಯನ್ ಯೋಧರು.
 ಮದ್ರಾಸ್ ರೆಜಿಮೆಂಟ್‌ಗೆ ಬಹುತೇಕ ದಕ್ಷಿಣ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಿಂದ ಯೋಧರನ್ನು ಆಯ್ಕೆ ಮಾಡಲಾಗುತ್ತದೆ. ಬಹುತೇಕ ಈ ಭಾಗದ ಜನರಿಗೆ ಪರ್ವತಾರೋಹಣದ ಅನುಭವ ಸೇನೆಯನ್ನು ಸೇರಿದ ಬಳಿಕವೇ ಆಗುತ್ತದೆ. ಇಷ್ಟಾಗಿಯೂ ಈ ಯೋಧರು, ಧೈರ್ಯ, ಸಾಹಸದ ಭವ್ಯ ಯಶೋಗಾಥೆ ಬರೆದಿದ್ದಾರೆ. ವಿಶ್ವದ ಅತ್ಯಂತ ಶೀತ ಪ್ರದೇಶ ಹಾಗೂ ಅತಿ ಎತ್ತರದ ಯುದ್ಧಕ್ಷೇತ್ರದಲ್ಲಿ ನಿಯೋಜನೆಗೊಂಡಾಗ ದಿಟ್ಟತನದಿಂದ ದೇಶಸೇವೆಗೆ ಮುಂದಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ಹೇಳುತ್ತಾರೆ.

ತಂಬಿಗಳು ತಮ್ಮ ಪಾಲಿಗೆ ಕರ್ತವ್ಯ ನಿರ್ವಹಿಸುವ, ಅತ್ಯಂತ ವಿಶ್ವಾಸಾರ್ಹ ಸೈನಿಕರು. ವಹಿಸಿದ ಕಾರ್ಯವನ್ನು ಶ್ರದ್ಧೆಯಿಂದ ಪೂರೈಸುವ ಜಾಯಮಾನ. ಇತರ ವಿಶಿಷ್ಟ ಗುಣಲಕ್ಷಣಗಳೆಂದರೆ, ಮಾನಸಿಕವಾಗಿ ತೀರಾ ಬಲಿಷ್ಠರು; ದೈಹಿಕವಾಗಿ ಶ್ರಮಜೀವಿಗಳು ಹಾಗೂ ಎಂಥ ಪರಿಸ್ಥಿತಿಗೂ ಹೊಂದಿಕೊಳ್ಳುವಂಥವರು ಎಂದು ಮದ್ರಾಸ್ ರೆಜಿಮೆಂಟ್‌ನ ನಿವೃತ್ತ ಲೆಫ್ಟಿನೆಂಟ್ ಜನರಲ್ ಸುಬ್ರತೊ ಮಿತ್ರಾ ವಿವರಿಸುತ್ತಾರೆ. ಹನುಮಂತಪ್ಪ ಕೊಪ್ಪದ ಅವರ 19ನೆ ಮದ್ರಾಸ್ ಬೆಟಾಲಿಯನ್ ಮಿತ್ರಾ ಅವರ ಬ್ರಿಗೇಟ್ ಕಮಾಂಡ್‌ನಲ್ಲಿ ಒಳಗೊಂಡಿತ್ತು. 2004-05ರಲ್ಲಿ ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡಿತ್ತು. ಆ ಅಭೂತಪೂರ್ವ ದೈಹಿಕ ಕಸರತ್ತು, ತತ್ವಬದ್ಧತೆ ಹಾಗೂ ಯಶಸ್ಸು ಗಳಿಸುವ ವಿಚಾರದಲ್ಲಿನ ಬದ್ಧತೆಯನ್ನು ಜನರಲ್ ಮಿತ್ರಾ ನೆನಪಿಸಿಕೊಳ್ಳುತ್ತಾರೆ. ಕಳೆದ ಹಲವು ವರ್ಷಗಳಲ್ಲಿ ತಂಬಿಗಳು ಕೆಲ ಪ್ರಮುಖ ಹೊಣೆಗಳನ್ನು ನಿಭಾಯಿಸಿದ್ದಾರೆ. ಹಿಮಕಣಿವೆಯಲ್ಲಿ ಹೆಲಿಪ್ಯಾಡ್ ನಿರ್ಮಾಣ, ಹೊಸ ದಾರಿಗಳ ನಿರ್ಮಾಣ ಹಾಗೂ ಇಂಧನ ಪೈಪ್‌ಲೈನ್ ನಿರ್ಮಾಣ ಇವುಗಳಲ್ಲಿ ಕೆಲವು.
ಸಿಯಾಚಿನ್‌ನಲ್ಲಿ ತಂಬಿ ಯೋಧರ ಸಾಹಸಕ್ಕೆ ಕನ್ನಡಿ ಹಿಡಿಯುವ ಹಿಮಕಣಿವೆಯ ಕೆಲ ನಿದರ್ಶನಗಳನ್ನು ನೋಡೋಣ.
3 ಮದ್ರಾಸ್: ಮದ್ರಾಸ್ ರೆಜಿಮೆಂಟ್‌ನ 3ನೆ ಬೆಟಾಲಿಯನ್ 1988ರಲ್ಲಿ ಸಿಯಾಚಿನ್ ತಂಡಕ್ಕೆ ಆಯ್ಕೆಯಾಯಿತು. ಈ ಮೂಲಕ ರೆಜಿಮೆಂಟ್‌ನಿಂದ ಆಯ್ಕೆಯಾದ ಮೊದಲ ಬೆಟಾಲಿಯನ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಒಂದು ಘಟಕವನ್ನು ಸಿಯಾಚಿನ್‌ಗೆ ಕಳುಹಿಸಲು ಕೈಗೊಂಡ ನಿರ್ಧಾರ, ನಾಲಿಗೆ ಹೇಗೆ ಬೇಕೋ ಹಾಗೆ ಹರಿದಾಡಲು ಕಾರಣವಾಯಿತು. ಅಂಥ ವಿಪರೀತ ಪರಿಸ್ಥಿತಿಯಲ್ಲಿ ತಂಬಿ ಯೋಧರು ಉಳಿಯುವ ಸಾಮರ್ಥ್ಯದ ಬಗ್ಗೆಯೇ ಕೆಲವರು ಸಿನಿಕತೆಯಿಂದ ಮಾತನಾಡಿದರು ಎಂದು ಹಿರಿಯ ಯೋಧರು ಸ್ಮರಿಸಿಕೊಳ್ಳುತ್ತಾರೆ. ಆದರೆ ಈ ಬೆಟಾಲಿಯನ್ ಅದ್ಭುತವಾಗಿ ಅಲ್ಲಿ ಕಾರ್ಯ ನಿರ್ವಹಿಸಿತು. ಈ ಅವಧಿಯಲ್ಲಿ 15 ಶತ್ರು ಸೈನಿಕರನ್ನು ಹತ್ಯೆ ಮಾಡಿ, 10 ಮಂದಿಯ ಬಲಿದಾನಕ್ಕೆ ಕಾರಣವಾಯಿತು. ಇತರ ಘಟಕಗಳಿಗೆ ಹೋಲಿಸಿದರೆ, ಈ ಬೆಟಾಲಿಯನ್‌ಗೆ ಆಗಿರುವ ಸಾವಿನ ಪ್ರಮಾಣ ತೀರಾ ಕಡಿಮೆ. ತೀರಾ ಅಪರೂಪಕ್ಕೆ ಸಿಗುವ ಅವಕಾಶ ಈ ಬೆಟಾಲಿನ್‌ಗೆ ಸಿಕ್ಕಿ, 2005ರಲ್ಲಿ ಎರಡನೆ ಅವಧಿಗೆ ನೇಮಕಗೊಂಡಿತು. ಇದುವರೆಗೆ ದಾರಿಯೇ ಇಲ್ಲದ ಸೋನಂ ಪೋಸ್ಟ್‌ಗೆ ದಾರಿ ನಿರ್ಮಿಸಿದ ಕೀರ್ತಿ ಈ ಬೆಟಾಲಿಯನ್‌ಗೆ ಸಲ್ಲುತ್ತದೆ. ಇದೇ ಸೋನಂ ಪೋಸ್ಟ್ ನಲ್ಲಿ ಹನುಮಂತಪ್ಪ ಹಾಗೂ ಸಹೋದ್ಯೋಗಿಗಳನ್ನು ನಿಯೋಜಿಸಲಾಗಿತ್ತು.
ಮದ್ರಾಸ್ 2ನೆ ಬೆಟಾಲಿಯನ್: ಮದ್ರಾಸ್ ರೆಜಿಮೆಂಟ್‌ನ ಎರಡನೆ ಬೆಟಾಲಿಯನ್ 1993ರಲ್ಲಿ ಸಿಯಾಚಿನ್‌ಗೆ ನಿಯೋಜಿಸಲ್ಪಟ್ಟಿತು. ಈ ಬೆಟಾಲಿಯನ್ ತಮ್ಮ ಸೇವಾ ಅವಧಿಯಲ್ಲಿ, ತಂಬಿ ಯೋಧರು ಯಾವ ಸಾಹಸದ ಕೆಲಸವನ್ನಾದರೂ ಯಶಸ್ವಿಯಾಗಿ ಮಾಡಬಲ್ಲರು ಎನ್ನುವುದನ್ನು ನಿರೂಪಿಸಿತು ಎಂದು ಹಿರಿಯ ಅಧಿಕಾರಿ ಹೇಳುತ್ತಾರೆ.
9ನೆ ಬೆಟಾಲಿಯನ್: ಮದ್ರಾಸ್ ರೆಜಿಮೆಂಟ್‌ನ ಮೂರನೆ ಬೆಟಾಲಿಯನ್ ಆಗಿ 2001ರಲ್ಲಿ ಈ ಬೆಟಾಲಿಯನ್ ಸಿಯಾಚಿನ್‌ಗೆ ನಿಯೋಜನೆಗೊಂಡಿತು. 2003ರ ನವೆಂಬರ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಯುದ್ಧವಿರಾಮಕ್ಕೆ ಸಹಿ ಮಡುವ ಮುನ್ನ, ತೀರಾ ವ್ಯತಿರಿಕ್ತ ಪರಿಸ್ಥಿತಿ ಇದ್ದುದು ಮಾತ್ರವಲ್ಲದೇ, ವಿರೋಧಿ ಸೈನಿಕರ ಗುಂಡಿನ ದಾಳಿಗೆ ಹಲವರು ಜೀವ ತೆತ್ತರು. ಆದರೆ ಈ ಬೆಟಾಲಿಯನ್ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಯಿತು.
ಮದ್ರಾಸ್ 11: 
ಇದು ಸಿಯಾಚಿನ್ ಪ್ರದೇಶಕ್ಕೆ ನಿಯುಕ್ತಿಗೊಂಡ ಮದ್ರಾಸ್ ರೆಜಿಮೆಂಟ್‌ನ ನಾಲ್ಕನೆ ಬೆಟಾಲಿಯನ್. ಈ ಅವಧಿಯಲ್ಲಿ ಮದ್ರಾಸ್ ತುಕಡಿ ವಿರೋಧಿ ನೆಲೆಗಳ ಮೇಲೆ ಭೀಕರ ದಾಳಿಗಳನ್ನು ನಡೆಸಿತು. ಅದು ಎಷ್ಟರಮಟ್ಟಿಗೆ ತೀವ್ರವಾಗಿತ್ತೆಂದರೆ ವಿರೋಧಿಗಳ ನಿರ್ವಹಣೆ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಯಿತು. 2003ರಲ್ಲಿ ಯುದ್ಧವಿರಾಮ ಒಪ್ಪಂದ ಘೋಷಣೆಯಾಗುವವರೆಗೂ ಈ ಪರಿಸ್ಥಿತಿ ಇತ್ತು. ಇಲ್ಲಿ ತಂಬಿ ಯೋಧರ ಪ್ರಮುಖ ಹಾಗೂ ಉಲ್ಲೇಖಾರ್ಹ ಸಾಧನೆಯೆಂದರೆ ಸಿಯಾಚಿನ್ ಮೂಲ ಶಿಬಿರದಿಂದ ಇತರ ಮುಂದಿನ ಶಿಬಿರಗಳಿಗೆ ಕೆರೋಸಿನ್ ಪೈಪ್‌ಲೈನ್ ಅಳವಡಿಸಿದ್ದು.
 ಮದ್ರಾಸ್ 17: ಈ ತುಕಡಿಯ ತಂಬಿಗಳು ತಮ್ಮನ್ನು ಖತ್ರಾಗಳು ಅಥವಾ ಅಪಾಯಕಾರಿಗಳೆಂದು ಕರೆದುಕೊಂಡರು. ಇವರನ್ನು 2007ರಲ್ಲಿ ಹಿಮಕಣಿವೆಗೆ ನಿಯೋಜಿಸಲಾಯಿತು. ತಮ್ಮ ಪೂರ್ವದಲ್ಲಿ ಕಾರ್ಯನಿರ್ವಹಿಸಿದ್ದ ತುಕಡಿಗಳಂತೆ, ಈ ಖತ್ರಾ ತಂಬಿಗಳು ಕೂಡಾ ತಮ್ಮ ಮೇಲಿನ ನಿರೀಕ್ಷೆ ಹುಸಿಗೊಳಿಸಲಿಲ್ಲ. ಸುಮಾರು 21 ಸಾವಿರ ಅಡಿ ಎತ್ತರದ ಶಿಬಿರಗಳಲ್ಲಿ, ಮೈನಸ್ 50 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶದಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿ, ಸಾಹಸ ಮೆರೆದರು.
ಮದ್ರಾಸ್ 25ನೆ ತುಕಡಿ: ಈ ಬೆಟಾಲಿಯನ್‌ಗೆ 2014ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ವಾಸ್ತವ ಮೈದಾನ ನಿಯಂತ್ರಣ ರೇಖೆಯ ಮುಂಭಾಗವನ್ನು ರಕ್ಷಿಸಿಕೊಳ್ಳುವ ಹೊಣೆಗಾರಿಕೆಯನ್ನು ಈ ತುಕಡಿಗೆ ವಹಿಸಲಾಯಿತು. ಈ ನಿಯೋಜನೆ ಬಗ್ಗೆ ಮಾಹಿತಿ ಇರುವ ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ, ಈ ತುಕಡಿಯು ಆಡಳಿತಾತ್ಮಕ ಹಾಗೂ ಕಾರ್ಯನಿರ್ವಹಣಾತ್ಮಕ ಅಂಶಗಳ ಸುಧಾರಣೆಯಲ್ಲಿ ಗಣನೀಯ ಸೇವೆ ಸಲ್ಲಿಸಿತು. ಕೊರಕಲುಗಳಿಗೆ ಸೇತುವೆಗಳನ್ನು ನಿರ್ಮಿಸಿ, ಹೊಸ ಮಾರ್ಗಗಳ ನಿರ್ಮಾಣ, ಹೆಲಿಪ್ಯಾಡ್‌ಗಳ ನಿರ್ಮಾಣದ ಮೂಲಕ ಸಂಕೀರ್ಣಗಳ ನಡುವಿನ ಚಲನೆ ಸುಲಲಿತವಾಗಲು ಅವಕಾಶ ಮಾಡಿಕೊಟ್ಟಿತು.
12ನೇ ತುಕಡಿ: ಈ ತುಕಡಿ 2014ರಲ್ಲಿ ಸಿಯಾಚಿನ್‌ಗೆ ತೆರಳಿತು. ಹಳೆಯ ಶಸ್ತ್ರಾಸ್ತ್ರಗಳನ್ನು ತೆರವುಗೊಳಿಸಿ, ದುರಸ್ತಿಗೊಳಿಸಿ ಮರು ನಿಯೋಜಿಸುವಲ್ಲಿ ಈ ತುಕಡಿ ಪ್ರಮುಖ ಪಾತ್ರ ನಿರ್ವಹಿಸಿತು. 20 ವರ್ಷ ಹಿಂದೆ ಹಿಮಕಣಿವೆಯಲ್ಲಿ ಮೃತಪಟ್ಟ ಇಬ್ಬರು ಯೋಧರ ಕಳೇಬರವನ್ನು ಪತ್ತೆ ಮಾಡುವಲ್ಲೂ ತಂಬಿ ಯೋಧರು ಯಶಸ್ವಿಯಾದರು. ಅತ್ಯಂತ ಸಮಾಧಾನಕರ ಸಾಧನೆಯೆಂದರೆ ಈ ಯೋಧರ ಕುಟುಂಬಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಕಾಣಿಸಿದ್ದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
19ನೇ ತುಕಡಿ: ಕೊಪ್ಪದ ನೇತೃತ್ವದ ಈ ತುಕಡಿ ಹಿಮಕಣಿವೆಯಲ್ಲಿ ನಿಯೋಜನೆಗೊಂಡು 90 ದಿನಗಳನ್ನು ಸಮೀಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News