ಸಿರಿಯದಲ್ಲಿ ‘ಸಂಘರ್ಷ ನಿಲ್ಲಿಸಲು’ ಶಕ್ತ ದೇಶಗಳ ಒಪ್ಪಿಗೆ
ಮ್ಯೂನಿಕ್ (ಜರ್ಮನಿ), ಫೆ. 12: ಸಿರಿಯದಲ್ಲಿ ಸಂಘರ್ಷ ನಿಲ್ಲಿಸಲು ಹಾಗೂ ಮುತ್ತಿಗೆಗೊಳಗಾದ ಸಿರಿಯದ ಪಟ್ಟಣಗಳಿಗೆ ತುರ್ತು ಮಾನವೀಯ ನೆರವು ತಲುಪಲು ಅವಕಾಶ ನೀಡಲು ಶಕ್ತ ದೇಶಗಳು ಶುಕ್ರವಾರ ಒಪ್ಪಿಕೊಂಡಿವೆ. ಆದರೆ, ಪೂರ್ಣ ಪ್ರಮಾಣದ ಯುದ್ಧ ವಿರಾಮವನ್ನು ಹೊಂದಲು ಅಥವಾ ರಶ್ಯದ ಬಾಂಬ್ ದಾಳಿಯನ್ನು ನಿಲ್ಲಿಸಲು ಅವು ವಿಫಲವಾಗಿವೆ.
ಕಳೆದ ವಾರ ಮುರಿದು ಬಿದ್ದ ಶಾಂತಿ ಮಾತುಕತೆಗೆ ಮತ್ತೆ ಜೀವ ತುಂಬುವ ಸಲುವಾಗಿ ಮ್ಯೂನಿಕ್‌ನಲ್ಲಿ ವಿಶ್ವ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಅಮೆರಿಕ, ರಶ್ಯ ಮತ್ತು ಇತರ 12ಕ್ಕೂ ಹೆಚ್ಚಿನ ದೇಶಗಳು ಭಾಗವಹಿಸಿದವು.
ದೇಶದ ಪರಿಸ್ಥಿತಿಯಲ್ಲಿ ಸುಧಾರಣೆಯಾದ ಬಳಿಕ ರಾಜಕೀಯ ಪರಿವರ್ತನೆಯನ್ನು ತರುವ ತಮ್ಮ ಬದ್ಧತೆಯನ್ನು ಈ ದೇಶಗಳು ಸುದೀರ್ಘ ಮಾತುಕತೆಯ ಬಳಿಕ ಪುನರುಚ್ಚರಿಸಿದವು.
ಆದಾಗ್ಯೂ, ಮ್ಯೂನಿಕ್ ಸಭೆಯ ಬದ್ಧತೆಗಳು ಕಾಗದದಲ್ಲಿ ಮಾತ್ರ ಉಳಿದಿವೆ ಎಂಬುದನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಸುದ್ದಿಗೋಷ್ಠಿಯಲ್ಲಿ ಒಪ್ಪಿಕೊಂಡರು.
‘‘ಮುಂದಿನ ಕೆಲವು ದಿನಗಳಲ್ಲಿ ಸಭೆಯ ನಿರ್ಣಯಗಳು ವಾಸ್ತವಿಕವಾಗಿ ಅನುಷ್ಠಾನಗೊಳ್ಳುವುದನ್ನು ನಾವು ನೋಡ ಬಯಸುತ್ತೇವೆ’’ ಎಂದರು. ‘‘ರಾಜಕೀಯ ಪರಿವರ್ತನೆಯಾಗದೆ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.