ಯಮನ್‌ನಿಂದ ಹೊರ ಹೋಗುವಂತೆ ವಿಶ್ವಸಂಸ್ಥೆಗೆ ಸೌದಿ ಎಚ್ಚರಿಕೆ
ವಿಶ್ವಸಂಸ್ಥೆ, ಫೆ. 12: ಯಮನ್‌ನ ಹೌದಿ ಬಂಡುಕೋರರ ವಶದಲ್ಲಿರುವ ಪ್ರದೇಶಗಳಿಂದ ಸಿಬ್ಬಂದಿಯನ್ನು ಹಿಂದಕ್ಕೆ ಪಡೆದು ಅವರ ಸುರಕ್ಷತೆಯನ್ನು ಖಾತರಿಪಡಿಸುವಂತೆ ಸೌದಿ ಅರೇಬಿಯ ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ನೆರವು ಸಂಘಟನೆಗಳಿಗೆ ಸೂಚನೆ ನೀಡಿದೆ.
ನೆರೆಯ ದೇಶದಲ್ಲಿರುವ ಬಂಡುಕೋರರ ನೆಲೆಗಳ ಮೇಲೆ ಸೌದಿ ಅರೇಬಿಯ ನೇತೃತ್ವದ ಮಿತ್ರ ಪಡೆಗಳು ವಾಯು ದಾಳಿ ನಡೆಸುತ್ತಿವೆ. ಮಿತ್ರ ಪಡೆಗಳ ಸಂಭಾವ್ಯ ವಾಯು ದಾಳಿಯಿಂದ ಅಂತಾರಾಷ್ಟ್ರೀಯ ಸಂಘಟನೆಗಳ ಸಿಬ್ಬಂದಿಯನ್ನು ರಕ್ಷಿಸುವುದು ಈ ಎಚ್ಚರಿಕೆಯ ಹಿಂದಿನ ಉದ್ದೇಶವಾಗಿದೆ ಎಂದು ಲಂಡನ್‌ನಲ್ಲಿರುವ ಸೌದಿ ರಾಯಭಾರ ಕಚೇರಿ ಶುಕ್ರವಾರ ಕಳುಹಿಸಿದ ಸಂದೇಶವೊಂದು ಹೇಳಿದೆ.
27 ಬೊಕೊ ಹರಾಮ್ ಉಗ್ರರನ್ನು ಕೊಂದ ಕ್ಯಾಮರೂನ್ ಸೈನಿಕರು
ಯಾವುಂಡೆ (ಕ್ಯಾಮರೂನ್), ಫೆ. 12: ನೈಜೀರಿಯದ ಗಡಿಯೊಳಗೆ ನುಗ್ಗಿ ಕಾರ್ಯಾಚರಣೆ ನಡೆಸಿದ ಕ್ಯಾಮರೂನ್ ಸೈನಿಕರು ಕನಿಷ್ಠ 27 ಬೊಕೊ ಹರಾಮ್ ಉಗ್ರರನ್ನು ಕೊಂದಿದ್ದಾರೆ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಓರ್ವ ಸೈನಿಕನೂ ಮೃತಪಟ್ಟಿದ್ದು, ಏಳು ಸೈನಿಕರು ಗಾಯಗೊಂಡಿದ್ದಾರೆ ಎಂದು ಜನರಲ್ ಜಾಕೋಬ್ ಕೊಡ್ಜಿ ಹೇಳಿದರು.
ನೈಜೀರಿಯದ ಉಗ್ರ ಸಂಘಟನೆ ಬೊಕೊ ಹರಾಮ್ ಈ ವಾರದಲ್ಲಿ ಕ್ಯಾಮರೂನ್‌ನಲ್ಲಿ ಹಲವು ದಾಳಿಗಳನ್ನು ನಡೆಸಿತ್ತು.