ಎಬಿವಿಪಿ ವಿರುದ್ಧ ಪಾಕ್ ಪರ ಘೋಷಣೆಯ ಆರೋಪ
ಜೆಎನ್‌ಯು ಪ್ರಕರಣ: ಹೀಗೊಂದು ವೀಡಿಯೊ ಬಹಿರಂಗ
ಇತರ ವಿದ್ಯಾರ್ಥಿ ಸಂಘಟನೆಗಳ ಹೆಸರಿಗೆ ಮಸಿ ಬಳಿಯುವ ಸಂಚು
ಹೊಸದಿಲ್ಲಿ,ಫೆ.13: ದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯ ಆವರಣದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರೆನ್ನಲಾದವರು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರೆನ್ನಲಾದ ವಿವಾದಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಂಸತ್ ದಾಳಿ ಪ್ರಕರಣದ ಆರೋಪಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ, ಮಂಗಳವಾರ ಜೆಎನ್‌ಯು ಆವರಣದಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು ‘ಪಾಕಿಸ್ತಾನ್ ಜಿಂದಾಬಾದ್’ ಹಾಗೂ ‘ಕಾಶ್ಮೀರ್ ಹಮಾರಾ ಹೈ ’ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಯೂಟ್ಯೂಬ್‌ನಲ್ಲಿ ಪ್ರಸಾರವಾಗುತ್ತಿದ್ದು, ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಎಬಿವಿಪಿಯೇತರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವಂತೆ ಮಾಡಲು ಎಬಿವಿಪಿ ಕಾರ್ಯಕರ್ತರು ಈ ಸಂಚನ್ನು ರೂಪಿಸಿದ್ದರೆಂಬುದನ್ನು ವೀಡಿಯೊ ಬಹಿರಂಗಪಡಿಸಿದೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಸಂಸತ್ ದಾಳಿ ಪ್ರಕರಣದ ದೋಷಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿರುವ ದಿನ ಫೆಬ್ರವರಿ 9ರಂದು ಕೆಲವು ವಿದ್ಯಾರ್ಥಿಗಳು ಜೆಎನ್‌ಯು ಆವರಣದಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ(ಎಐಎಸ್‌ಎಫ್)ದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು ಹಾಗೂ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.
ಇದೀಗ ಎಬಿವಿಪಿ ಸಂಘಟನೆಗೆ ಸೇರಿದವರೆನ್ನಲಾದ ಕೆಲವರು ದೇಶದ್ರೋಹಿ ಘೋಷಣೆಗಳನ್ನು ಕೂಗುವ ವೀಡಿಯೊ ದೃಶ್ಯಾವಳಿಗಳು ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಝೀನ್ಯೂಸ್ ಸೇರಿದಂತೆ ವಿವಿಧ ಸುದ್ದಿವಾಹಿನಿಗಳೂ ಕೂಡ ಈ ವೀಡಿಯೊವನ್ನು ಪ್ರಸಾರ ಮಾಡಿವೆ. ಆದರೆ, ವೀಡಿಯೊದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲವೆಂದು ವರದಿಗಳು ತಿಳಿಸಿವೆ.