×
Ad

ಜೆಎನ್‌ಯು: ಯಾರು ನಿಜವಾದ ಭಯೋತ್ಪಾದಕರು?

Update: 2016-02-15 23:24 IST

ನ್ನನ್ನು ವಿರೋಧಿಸುವವರೆಲ್ಲರನ್ನೂ ‘ಉಗ್ರಗಾಮಿಗಳು’ ಎಂದು ಘೋಷಿಸುವ ಹಂತದಲ್ಲಿದೆ ಕೇಂದ್ರ ಸರಕಾರ. ಈ ಮೂಲಕ ಸರಕಾರದ ವಿರುದ್ಧ ಮುಖ್ಯವಾಗಿ ಸಂಘಪರಿವಾರ ಚಿಂತನೆಗಳ ವಿರುದ್ಧ ಇರುವ ಭಿನ್ನಾಭಿಪ್ರಾಯಗಳ ಧ್ವನಿಯನ್ನು ದಮನಿಸುವ ಹೊಸ ಪ್ರಯೋಗಕ್ಕೆ ಸರಕಾರ ಇಳಿದಿದೆ. ಅದರ ಭಾಗವಾಗಿಯೇ, ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಲಷ್ಕರೆ ತಯ್ಯಿಬಾ ಸಂಘಟನೆಯ ಮುಖ್ಯಸ್ಥ ಹಫೀಝ್ ಸಯೀದ್ ಬೆಂಬಲವಿದೆ ಎಂದು ಹೇಳಿಕೆ ನೀಡಿದ್ದಾರೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್. ಅವರು ಸಾಮಾನ್ಯ ಸಂಘಪರಿವಾರದ ಕಾರ್ಯಕರ್ತರಾಗಿಯೋ, ಅದರ ನಾಯಕರಾಗಿಯೋ ಈ ಹೇಳಿಕೆಯನ್ನು ನೀಡಿದ್ದಿದ್ದರೆ ಅದನ್ನು ನಿರ್ಲಕ್ಷಿಸಬಹುದಿತ್ತೇನೋ. ಯಾಕೆಂದರೆ, ತಮ್ಮ ಚಿಂತನೆಯ ವಿರುದ್ಧ ಮಾತನಾಡಿದವರನ್ನೆಲ್ಲ ದೇಶದ್ರೋಹಿಗಳು ಎಂದು ಸಂಘಪರಿವಾರ ಕರೆಯುತ್ತಿರುವುದು ಇಂದು ನಿನ್ನೆಯಲ್ಲ. ಈ ಸಂಘಪರಿವಾರದ ಕಾರಣದಿಂದಲೇ ಇಂದು ‘ದೇಶದ್ರೋಹಿ’ಗಳಿಗೆ ಒಂದು ಘನತೆ ಬಂದು ಬಿಟ್ಟಿದೆ. ಇಂದು ಈ ದೇಶವನ್ನು ಪ್ರಾಮಾಣಿಕವಾಗಿ ಪ್ರೀತಿಸುವವರೆಲ್ಲ ಸಂಘಪರಿವಾರದಿಂದ ‘ದೇಶದ್ರೋಹಿ’ ಸರ್ಟಿಫಿಕೇಟ್ ಪಡೆಯುತ್ತಿರುವುದರಿಂದ, ದೇಶದ್ರೋಹಿ ಎಂಬ ಪದದ ವ್ಯಾಖ್ಯಾನ ಬದಲಾಗುತ್ತಿದೆ. ಸಂಘಪರಿವಾರ ಮತ್ತು ಅವರ ಬಳಗದಿಂದ ದೇಶದ್ರೋಹಿಯೆಂದು ಗುರುತಿಸಲ್ಪಡುವುದಾದರೆ ಅದಕ್ಕಾಗಿ ಹೆಮ್ಮೆ ಪಟ್ಟುಕೊಳ್ಳುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ವಿರುದ್ಧ ಉಗ್ರಗಾಮಿ ಬಾಣವನ್ನು ಬಳಸಿದ್ದಾರೆ. ಆ ಮೂಲಕ ಅವರು ಒಂದು ಪ್ರಸಿದ್ಧ ವಿಶ್ವವಿದ್ಯಾನಿಲಯಕ್ಕೆ ಕಳಂಕ ತರುವ ಹೇಳಿಕೆಯನ್ನು ನೀಡಿದ್ದಾರೆ. ತನ್ನದೇ ನೆಲದ ವಿದ್ಯಾರ್ಥಿಗಳನ್ನು ಬಲಿಪಶು ಮಾಡುವುದಕ್ಕಾಗಿ ರಾಜನಾಥ್ ಸಿಂಗ್ ಅವರು ವಿದೇಶಿ ಉಗ್ರರ ನೆರವನ್ನು ಬಳಸಿಕೊಂಡಿರುವುದು ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ತಾನು ಮಾಡಿರುವ ಆರೋಪಕ್ಕೆ ಸಾಕ್ಷಗಳನ್ನು ನೀಡುವ ಹೊಣೆಗಾರಿಕೆ ಸಿಂಗ್ ಹೆಗಲ ಮೇಲೆ ಬಿದ್ದಿದೆ. ಪೊಲೀಸ್ ಇಲಾಖೆ ಸಿಂಗ್ ಆರೋಪವನ್ನು ತಳ್ಳಿ ಹಾಕಿದೆಯಾದುದರಿಂದ, ಯಾವ ಆಧಾರಗಳನ್ನು ಬಳಸಿ ಈ ಆರೋಪವನ್ನು ಮಾಡಿದ್ದೇನೆ ಎನ್ನುವುದದನ್ನು ಸ್ವತಃ ಗೃಹಸಚಿವರೇ ದೇಶಕ್ಕೆ ತಿಳಿಸಬೇಕು.


 ಜೆಎನ್‌ಯು ಪ್ರತಿಭಟನೆಯ ಹಿಂದೆ ಲಷ್ಕರೆ ತಯ್ಯಿಬಾದ ಕುಮ್ಮಕ್ಕಿದೆ ಎಂದು ಹೇಳುವ ರಾಜನಾಥ್ ಸಿಂಗ್ ಅವರು ಒಂದನ್ನು ಗಮನದಲ್ಲಿಟ್ಟುಕೊಳ್ಳ ಬೇಕಾಗಿದೆ. ಜೆಎನ್‌ಯು ಇರುವುದು ಪಾಕಿಸ್ತಾನದಲ್ಲಲ್ಲ, ಭಾರತದಲ್ಲಿ. ತಮ್ಮ ಸರಕಾರ ಅಧಿಕಾರದಲ್ಲಿರುವಾಗ, ಲಷ್ಕರೆ ತಯ್ಯಿಬಾ ಬಹಿರಂಗವಾಗಿ ಒಂದು ವಿಶ್ವವಿದ್ಯಾ ನಿಲಯದಲ್ಲಿ ಪ್ರತಿಭಟನೆಯನ್ನು ಪ್ರಾಯೋಜಿಸುತ್ತದೆ ಎಂದರೆ, ಅದು ನಿಮ್ಮ ಸರಕಾರದ ದೌರ್ಬಲ್ಯ. ಈ ದೇಶದ ಗೃಹ ಸಚಿವರ ಸ್ಥಿತಿ ನೋಡಿ ಸ್ವತಃ ಲಷ್ಕರ್ ಮುಖಂಡನೇ ನಗುವಂತಹ ಸನ್ನಿವೇಶವನ್ನು ಅವರು ಸೃಷ್ಟಿಸಿದ್ದಾರೆ. ಕೇಂದ್ರ ಸರಕಾರ ನಿಜಕ್ಕೂ ಭಯೋತ್ಪಾ ದನೆಯನ್ನು ಎಷ್ಟು ಲಘುವಾಗಿ ತೆಗೆದುಕೊಂಡಿದೆ ಮತ್ತು ಅದನ್ನು ಹೇಗೆ ತನ್ನ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎನ್ನುವುದಕ್ಕೆ ರಾಜನಾಥ್ ಸಿಂಗ್ ಅವರ ಹೇಳಿಕೆ ಉದಾಹರಣೆಯಾಗಿದೆ.
ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ನಿಜವೆಂದು ಬಿಂಬಿಸಲು ಲಷ್ಕರೆ ತಯ್ಯಿಬಾ ನಾಯಕರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯನ್ನು ತೆರೆದು, ಆ ಮೂಲಕ ದೇಶದ ಜನರನ್ನು ಪ್ರಚೋದಿಸುವ ಸಂಘಪರಿವಾರದ ಕೆಲಸವೂ ವಿಫಲಗೊಂಡಿದೆ. ಟ್ಟಿಟರ್ ಖಾತೆ ಲಷ್ಕರ್ ನಾಯಕನದ್ದಲ್ಲ ಎನ್ನುವುದು ಬೆಳಕಿಗೆ ಬಂದಿದೆ.ಹಾಗಾದರೆ ನಕಲಿ ಟ್ವಿಟರ್ ಖಾತೆ ತೆರೆದು, ದೇಶದಲ್ಲಿ ಅರಾಜಕತೆ ಸೃಷ್ಟಿಸುವುದಕ್ಕೆ ಯತ್ನಿಸಿದವರು ಯಾರು? ಮೇಲ್ನೋಟಕ್ಕೆ ಇದು ಸಂಘಪರಿವಾರ ಕೃತ್ಯವಾಗಿದೆ ಎನ್ನುವುದನ್ನು ದೇಶ ಊಹಿಸಬಹುದಾಗಿದೆ. ಜೆಎನ್‌ಯುವಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದವರು ಎಬಿವಿಪಿ ವಿದ್ಯಾರ್ಥಿಗಳು ಎನ್ನುವ ವೀಡಿಯೊ ಹರಿದಾಡುತ್ತಿರುವ ಬೆನ್ನಿಗೇ ಉಗ್ರನ ಟ್ವಿಟರ್‌ನ ಅಸಲಿತನವೂ ಹೊರ ಬಿದ್ದಿರುವುದರಿಂದ, ನಿಜಕ್ಕೂ ದೇಶದ್ರೋಹದ ಕೆಲಸ ಮಾಡುತ್ತಿರುವವರು ಯಾರು ಎನ್ನುವುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ಈ ಹಿಂದೆ ಕರ್ನಾಟಕದ ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ, ಅದನ್ನು ಮುಸ್ಲಿಮರ ತಲೆಯ ಮೇಲೆ ಕಟ್ಟಲು ಯತ್ನಿಸಿದ ದೇಶದ್ರೋಹಿಗಳೇ ಜೆಎನ್‌ಯುನಲ್ಲೂ ಕೆಲಸ ಮಾಡಿದ್ದಾರೆ. ಆ ದೇಶದ್ರೋಹಿಗಳನ್ನು ರಕ್ಷಿಸುವುದಕ್ಕೆ ರಾಜನಾಥ್ ಸಿಂಗ್ ಹವಣಿಸುತ್ತಿದ್ದಾರೆ ಎನ್ನುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ.
ಇದರ ಬೆನ್ನಿಗೇ ದಿಲ್ಲಿಯ ಪಾಟಿಯಾಲ ನ್ಯಾಯಾಲಯದ ಆವರಣದಲ್ಲೇ ಜೆಎನ್‌ಯು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪತ್ರಕರ್ತರ ಮೇಲೆ ಸಂಘಪರಿವಾರದ ದುಷ್ಕರ್ಮಿಗಳು ಬರ್ಬರ ಹಲ್ಲೆ ನಡೆಸಿದ್ದಾರೆ. ಪೊಲೀಸರೂ ಈ ಹಲ್ಲೆಗೆ ಕುಮ್ಮಕ್ಕು ನೀಡಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಯಾವ ಕ್ರಮವೂ ತೆಗೆದುಕೊಂಡಿಲ್ಲ. ಈ ಎಲ್ಲ ಬೆಳವಣಿಗೆಗಳಲ್ಲಿ ಸಂಘಪರಿವಾರವೇ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳುತ್ತವೆಯೇ ಹೊರತು, ಜೆಎನ್‌ಯು ವಿದ್ಯಾರ್ಥಿಗಳಲ್ಲ. ಅವರ ಎಲ್ಲ ನಡೆಗಳೂ ಸಂವಿಧಾನ ಬದ್ಧವಾಗಿಯೇ ಇವೆ. ಹೀಗಿರುವಾಗ, ಇಡೀ ಘಟನೆಯ ಹಿಂದಿರುವ ನಿಜವಾದ ದೇಶದ್ರೋಹಿಗಳು ಯಾರು ಎನ್ನುವುದು ಪ್ರಾಮಾಣಿಕ ತನಿಖೆಯಿಂದಷ್ಟೇ ಹೊರಬರಬಹುದು.

  
 ದಿಲ್ಲಿಯ ರಾಜಕಾರಣವೂ ಸೇರಿದಂತೆ ದೇಶದ ರಾಜಕಾರಣದ ಮೇಲೆ ಜೆಎನ್‌ಯು ಒಂದಲ್ಲ ಒಂದು ರೀತಿ ತನ್ನ ಪರಿಣಾಮವನ್ನು ಬೀರಿದೆ. ಸಂಘಪರಿವಾರ ಚಿಂತನೆಗಳಿಗೆ ಜೆಎನ್‌ಯು ಪ್ರಬಲ ಪ್ರತಿರೋಧವನ್ನು ತೋರಿಸುತ್ತಿದೆ. ದೇಶಾದ್ಯಂತ ವಿಶ್ವವಿದ್ಯಾನಿಲಯಗಳಿಗೆ ಸುಲಭದಲ್ಲಿ ಕನ್ನ ಕೊರೆದಂತೆ ಈ ವಿಶ್ವವಿದ್ಯಾನಿಲಯಕ್ಕೆ ಕನ್ನ ಕೊರೆಯಲು ಆರೆಸ್ಸೆಸ್ ಮತ್ತು ಅದರ ಬಳಗಕ್ಕೆ ಸಾಧ್ಯವಾಗಿಲ್ಲ. ಆ ಒಂದು ಕಾರಣಕ್ಕಾಗಿ, ಇಡೀ ವಿಶ್ವವಿದ್ಯಾನಿಲಯದ ಕುರಿತಂತೆ ‘ಅವಿಶ್ವಾಸ’ವನ್ನು ಮೂಡಿಸುವುದಕ್ಕೆ ಸರಕಾರ ಹವಣಿಸುತ್ತಿದೆ. ರಾಜನಾಥ್ ಸಿಂಗ್ ಅವರ ಭಯೋತ್ಪಾದನೆ ಆರೋಪ ಈ ಹಿನ್ನೆಲೆಯಿಂದಲೇ ಬಂದಿದೆ. ತನ್ನ ರಾಜಕೀಯ ಕಾರಣಗಳಿಗಾಗಿ ತನ್ನದೇ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಭಯೋತ್ಪಾದಕರನ್ನಾಗಿಸಲು ಹಿಂಜರಿಯದ ಸರಕಾರ ದೇಶದ ಬೌದ್ಧಿಕ, ನೈತಿಕ ಘನತೆಗೆ ಕುತ್ತು ತಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಸ್ವತಃ ಸಚಿವರೇ ಕಳಂಕವೆಸಗಿದ್ದಾರೆ. ಅಷ್ಟೇ ಅಲ್ಲ, ರಾಜನಾಥ್ ಸಿಂಗ್ ಅವರ ಹೇಳಿಕೆ ಪಾಕಿಸ್ತಾನದ ಉಗ್ರರಿಗೂ, ದೇಶೀಯ ಸಂಘಪರಿವಾರ ಉಗ್ರರಿಗೂ ಏಕಕಾಲದಲ್ಲಿ ನೆರವನ್ನು ನೀಡಿದೆ.ಇದೀಗ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮುಂದಿರುವುದು ಎರಡೇ ದಾರಿ. ಒಂದು, ಜೆಎನ್‌ಯು ವಿರುದ್ಧ ತಾವು ಮಾಡಿದ ಆರೋಪಗಳಿಗೆ ಸಾಕ್ಷವನ್ನು ಒದಗಿಸಬೇಕು. ಅದನ್ನು ಸಾಬೀತು ಮಾಡಬೇಕು. ಇಲ್ಲವಾದರೆ, ಒಂದು ಪ್ರತಿಷ್ಠಿತ ವಿಶ್ವವಿದ್ಯಾನಿಲಯಕ್ಕೆ ಲಷ್ಕರ್ ನಂಟನ್ನು ಕಟ್ಟಿದ ತಪ್ಪಿಗೆ ದೇಶದ ಕ್ಷಮೆಯಾಚಿಸಬೇಕು. ಇದೇ ಸಂದರ್ಭದಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕೇಂದ್ರ ಸರಕಾರ ಮತ್ತು ಸಂಘಪರಿವಾರ ಜತೆ ಸೇರಿ ನಡೆಸುತ್ತಿರುವ ಅನಾಹುತಗಳನ್ನು ದೇಶದ ಜನರು ಒಕ್ಕೊರಲಲ್ಲಿ ಪ್ರತಿಭಟಿಸಬೇಕಾಗಿದೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಎಬಿವಿಪಿ, ಸಂಘಪರಿವಾರ, ಬಿಜೆಪಿಯ ವಿರುದ್ಧ ಮಾತನಾಡಿದವರನ್ನೆಲ್ಲ ದೇಶದ್ರೋಹದ ಹೆಸರಲ್ಲಿ ಜೈಲಿಗೆ ತಳ್ಳುವ ವಾತಾವರಣ ನಿರ್ಮಾಣವಾಗಬಹುದು. ಈಗಾಗಲೇ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಸರಕಾರಕ್ಕೆ, ತನ್ನನ್ನು ಪ್ರಶ್ನಿಸಿದ ಜನರನ್ನು ಜೈಲಿಗೆ ತಳ್ಳುವುದಕ್ಕಿಂತ ಹೊರತಾದ ಬೇರೆ ದಾರಿಯೇ ಇಲ್ಲವಾಗಿರುವುದರಿಂದ, ದೇಶ ಜಾಗೃತಗೊಂಡು ಎದ್ದು ನಿಲ್ಲಬೇಕಾದ ಸಮಯ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News