×
Ad

ದುರ್ಗಮ ಪ್ರದೇಶಗಳಲ್ಲೂ ವೇಗದ ಇಂಟರ್ನೆಟ್ ಒದಗಿಸುವ ಗೂಗಲ್ ಬಲೂನ್

Update: 2016-02-16 23:48 IST

ನ್ಯೂಯಾರ್ಕ್, ಫೆ. 16: ಆಕಾಶದಲ್ಲಿ ಹಾರುವ ಬಲೂನುಗಳ ಮೂಲಕ ಜಗತ್ತಿನ ದುರ್ಗಮ ಪ್ರದೇಶಗಳನ್ನೂ ಇಂಟರ್ನೆಟ್ ವ್ಯಾಪ್ತಿಗೆ ತರುವ ಗೂಗಲ್‌ನ ಮಹತ್ವಾಕಾಂಕ್ಷೆಯ ಯೋಜನೆ ಮಹತ್ವದ ಅಭಿವೃದ್ಧಿ ಹಂತವನ್ನು ದಾಟಿ ಬಂದಿದೆ. ಈ ವರ್ಷದ ಉತ್ತರಾರ್ಧದಲ್ಲಿ ಯೋಜನೆಯು ಪರೀಕ್ಷೆಗೆ ಒಳಪಡಲಿದೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ. ‘ಪ್ರಾಜೆಕ್ಟ್ ಲೂನ್’ ಎಂಬ ಹೆಸರಿನ ಈ ಯೋಜನೆಯನ್ನು ಅಭಿವೃದ್ಧಿಪಡಿಸುವಲ್ಲಿ ಗೂಗಲ್ ಆರಂಭದಲ್ಲಿ ಹಿನ್ನಡೆ ಅನುಭವಿಸಿತ್ತು. ದುಬಾರಿಯಲ್ಲದ ಮತ್ತು ಬಾಳಿಕೆ ಬರುವ ಹಾಗೂ ತೇಲುವುದು ಮಾತ್ರವಲ್ಲದೆ ವಾತಾವರಣದ ಸ್ಟ್ರಾಟಸ್ಫಿಯರ್ ವಲಯದಲ್ಲಿ (ಭೂಮಿಯಿಂದ ಸುಮಾರು 50 ಕಿ.ಮೀ. ಎತ್ತರದಲ್ಲಿ) ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸಬಲ್ಲ ಬಲೂನಿನ ವಿನ್ಯಾಸವನ್ನು ರೂಪಿಸುವುದು ಸವಾಲಿನ ಕೆಲಸವಾಗಿತ್ತು ಎಂದು ತಂತ್ರಜ್ಞಾನದ ವೆಬ್‌ಸೈಟ್ ‘ರೀ/ಕೋಡ್’ ವರದಿ ಮಾಡಿದೆ.
‘‘ನಾವು ತುಂಬಾ ಬಲೂನುಗಳನ್ನು ಒಡೆದೆವು’’ ಎಂದು ‘ಆಲ್ಫಾಬೆಟ್’ ಕಂಪೆನಿಯ ಎಕ್ಸ್ ಯೂನಿಟ್‌ನ ಮುಖ್ಯಸ್ಥ ಆ್ಯಸ್ಟ್ರೋ ಟೆಲ್ಲರ್ ಹೇಳಿರುವುದಾಗಿ ಅದು ಹೇಳಿದೆ.
ಕೆನಡದ ವ್ಯಾಂಕೋವರ್‌ನಲ್ಲಿ ಸೋಮವಾರ ಆರಂಭವಾದ ತಂತ್ರಜ್ಞಾನ, ಮನರಂಜನೆ, ವಿನ್ಯಾಸ ಕುರಿತ ವಾರ್ಷಿಕ ಸಮ್ಮೇಳನದಲ್ಲಿ ಟೆಲ್ಲರ್ ಕೆಲವು ವಿನ್ಯಾಸಗಳನ್ನೂ ಪ್ರದರ್ಶಿಸಿದರು.
‘‘ಈಗ ನಮ್ಮ ಯೋಜನೆ ಮುಂದೆ ಸಾಗುತ್ತಾ ಇದೆ’’ ಎಂದು ಅವರು ತಿಳಿಸಿದರು. ಕಳೆದ ವರ್ಷ ಬಲೂನು 187 ದಿನಗಳ ಅವಧಿಯಲ್ಲಿ 19 ಸಲ ಜಗತ್ತಿನ ಸುತ್ತ ಪ್ರಯಾಣಿಸಿತ್ತು ಎಂದರು.
ಸೆಕೆಂಡ್‌ಗೆ 15 ಮೆಗಾಬಿಟ್ ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಕೊಡುವಷ್ಟು ಮಟ್ಟಕ್ಕೆ ಈಗ ಸಂಪರ್ಕ ತಂತ್ರಜ್ಞಾನ ಮುಂದುವರಿದಿದೆ ಎಂದು ಅವರು ಹೇಳಿದರು.
ಗೂಗಲ್ ಈ ತಂತ್ರಜ್ಞಾನವನ್ನು ಶ್ರೀಲಂಕಾ ಮತ್ತು ಇಂಡೋನೇಶ್ಯಗಳಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News